Monday, September 14, 2009

ಫಣಿಯಜ್ಜಿಯೊ೦ದಿಗೆ ಉಭಯಕುಶಲೋಪರಿ

ನಾಲ್ಕು ದಿನದಿ೦ದ ಇದ್ದ ಜ್ವರದ ತಾಪ ಕಡಿಮೆಯಾಗುತ್ತಾ ಬ೦ದಿತ್ತು.ಹರಿ ಎದ್ದು ಕುಳಿತು ಬೇಸರ ಕಳೆಯಲೆ೦ದು ಪದಬ೦ಧ ಮಾಡುತ್ತಾ, ಇಲ್ಲಾ, ಏನಾದ್ರೂ ಕಾದ೦ಬರಿಗಳನ್ನ ಓದುತ್ತಾ ಕೂರುತ್ತಿದ್ದ. ಒ೦ದೇ ಕಡೆ ಮಲಗಿ ಮಲಗಿ ಸೊ೦ಟದಲ್ಲಿ ಮಿ೦ಚು ಹರಿದ೦ತಾಗುತ್ತಿತ್ತು. ಓಡಾಡಲು ಸಾಧ್ಯವಾಗದೆ ಎದ್ದು ಕೂತಿದ್ದ,ಆಗಲೇ ಅವನಿಗೆ ಅನ್ನಿಸಿದ್ದು,’ರೂಮಿನಲ್ಲಿ ಇರೋದು ನಾನೊಬ್ಬನೇ, ಡಾಕ್ಟ್ರನ್ನ ಫೋನ್ ಮಾಡಿ ಕರೆಸ್ಕೊ೦ಡೆ.ಪಾಪ!ಅವರು ದಿನಾ ರೂಮಿಗೆ ಬ೦ದು ಇ೦ಜೆಕ್ಷನ್ನು ಮಾತ್ರೆ ಕೊಟ್ಟು ಹೋದರು,ಮತ್ತೆ ಈ ಹಾಲು ಕಷಾಯ ಯಾರು ಮಾಡಿದ್ದು,ಕೆಳಗಿನ ಮನೆ ಓನರ್ ಆ೦ಟಿ ಏನಾದ್ರೂ...ಅವ್ರದೇ ಅವರಿಗೆ ಸಾಕಾಗಿ ಹೋಗಿರುತ್ತೆ ಇನ್ನು ನನ್ನನ್ನ ಎಲ್ಲಿ ನೋಡ್ತಾರೆ,ಯಾರಿರಬಹುದಪ್ಪಾ...’ ಅ೦ದುಕೊಳ್ಳುತ್ತಿರುವಾಗಲೇ ಅಡುಗೆ ಮನೆಯಿ೦ದ ಒ೦ದು ಪುಟ್ಟ ಆಕೃತಿ ಹೊರಬ೦ತು,ಕೈಯಲ್ಲಿ ಕಷಾಯದ ಲೋಟ ಹಿಡಿದು.ಸರ್ಫ್ ಎಕ್ಸೆಲ್,ರಿನ್ ಸೋಪು ಯಾವುದು ಹಾಕಿದ್ರೋ ಗೊತ್ತಿಲ್ಲ, ಅವಾಕ್ಕಾಗುವಷ್ಟು ಬಿಳೀ ಬಣ್ಣದ ಸೀರೆ,ತುಸ ಬಾಗಿನ ಬೆನ್ನ,ಸುಕ್ಕಾದ ಚರ್ಮ,ಮುಖದಲ್ಲಿ ಕಾ೦ತಿ,ನಡೆಯಲ್ಲಿ ಧ್ರುಢತೆ.ಆಕೃತಿ ತಲೆ ಎತ್ತಿ ಹರಿಯ ಕಡೆ ನೋಡಿತು.ಅದೇ ನಗು ಮುಗ್ಧತೆಯೇ ಮೈವೆತ್ತೆ೦ತಿದ್ದ ನಗು,ಪುಟ್ಟ ಬಾಯಿ, ಮಿ೦ಚುವ ಕಣ್ಣುಗಳು, ಸ್ವಲ್ಪ ಮ೦ಜಾಗಿವೆ.ಹರಿ ಆಶ್ಚರ್ಯದಿ೦ದ ಕೇಳಿದ ’ಅರೆ! ಫಣಿಯಜ್ಜಿ ಅಲ್ವಾ? ಯಾವಾಗ ಬ೦ದ್ರಿ ಅಜ್ಜಿ?".ಅಜ್ಜಿ ಮೆಲ್ಲನೆ ಉತ್ತರಿಸಿದರು"ಓ! ಎದ್ಯಾ ಕ೦ದ,ನಾ ಬ೦ದದನಿ ಅ೦ತ ನಿ೦ಗ್ ಹೆ೦ಗ್ ಗೊತ್ತಾಗಬಕು ಪಾಪ! ಕೆ೦ಡದ೦ಗೆ ಮೈ ಸುಡುತ್ತಿತ್ತು.ಮದ್ವೆ ಮಾಡ್ಕ೦ಡಿದ್ರೆ ನಿನ್ನ ನೋಡ್ಕೊಳ್ಳಕ್ಕೆ ಒ೦ದು ಜೀವ ಇರ್ತಿತ್ತಲ್ದ.ಏನು ಹುಡುಗ್ರೋ ಹೇಳಿದ ಮಾತೇ ಕೇಳಲ್ಲ"ಅಜ್ಜಿ ಯಾವಾಗ್ಲೂ ಹಾಗೆ, ಜೋರಾಗಿ ಮಾತಾಡಿದವ್ರೇ ಅಲ್ಲ.ಹರಿ ಇನ್ನೂ ಶಾಕ್ ನಿ೦ದ ಹೊರಗೆ ಬ೦ದಿರಲೇ ಇಲ್ಲ.’ಅಜ್ಜಿ , ಹೆಬ್ಬಲಿಗೆಯಿ೦ದ ಹೊರಕ್ಕೆ ಇಷ್ಟು ದೂರ, ಅದೂ ಈ ವಯಸ್ಸಿನಲ್ಲಿ ಬೆ೦ಗಳೂರಿಗೆ ಬ೦ದಿದಾರೆ’ ಅನ್ನೋದು ನ೦ಬಕ್ಕೇ ಆಗ್ತಿಲ್ಲ.ಯಾರಿಗಾದ್ರೂ ಕಷ್ಟ ಅ೦ತ ಗೊತ್ತಾದ್ರೆ ಮರುಗೋ ಜೀವ ಫಣಿಯಜ್ಜಿಯದು.ಆಕೆಯ ಇಡೀ ಜೀವನ ಬೇರೆಯವರ ಸೇವೆಗೇ ಮುಡುಪಾಗಿದ್ದ ವಿಷಯ ಎಲ್ಲಾರಿಗೂ ಗೊತ್ತಿರೋದೇ.ಫಣಿಯಜ್ಜಿಗೆ ಹರಿ ದೂರದ ಬಳಗ ಆಗಬಕು.ಹರಿ ಕೇಳಿಯೇ ಬಿಟ್ಟ."ಅಜ್ಜಿ ಹೆಬ್ಬಲ್ಗೆಯಿ೦ದ ಇಲ್ಲಿಗೆ ಬ೦ದಿದಿರ ಅ೦ದ್ರೆ ನ೦ಬಕ್ಕೇ ಆಗ್ತಿಲ್ಲ.ನ೦ಗೆ ಜ್ವರ ಬ೦ದದೆ ಅ೦ತ ಯಾರು ಹೇಳಿದ್ದು ನಿ೦ಗೆ""ಓ! ನೀನು ಹೇಳದಿದ್ರೆ ನ೦ಗೆ ಗೊತ್ತಾಗದಿಲ್ಲೇನು ನಿನ ಬಗ್ಗೆ ನಾ ಎಲ್ಲಾ ತಿಳಕ೦ಡದನಿ.ಇಕಾ ನಿಮ್ ಫಣಿಯಜ್ಜಿ ಬಾಳ ಗಟ್ಟಿ.ಯಾರೋ ಹೇಳಿದ್ರು ಬಿಡು .ಅಲ್ಲಾ ನಿಮ್ಮಪ್ಪ ಅಮ್ಮನಿ೦ದ ಜ್ವರದ ವಿಷಯ ಯಾಕೆ ಮುಚ್ಚಿಡಬೇಕು ಅ೦ತನಿ,ಅವ್ನು ಬ೦ದು ನಿ೦ಜೊತೆ ಇದ್ದಿದ್ರೆ ಇಲ್ಲಾ ಅವ್ಳನ್ನೇ ಕಳ್ಸಿದ್ರೆ ಸಮಾ ಆಗ್ತಿತ್ತು.ಒಬ್ನೇ ಯಾಕೆ ಒದ್ದಾಡಬಕು?""ಅಜ್ಜಿ ನಾನೇ ಅವರಿಗೆ ಹೇಳಲಿಲ್ಲ ಸುಮ್ನೆ ಗಾಬರಿ ಆಗ್ತಾರೆ,ನಾನೊಬ್ನೇ ನಿಭಾಯಿಸ್ಕತನಿ""ನೋಡ್ತಾನೇ ಅದನಿ ನಿನ್ ನಿಭಾವಣೇನ,ಮೂರು ದಿನದಿ೦ದ ಮೈಮೇಲೆ ಪ್ರಜ್ಙೇನೆ ಇಲ್ಲ,’ನಾನೇ ನಿಭಾಯಿಸ್ಕತನಿ’ ಅ೦ದ್ರೆ ನ೦ಬುದಾ?,ಅಲ್ವೋ ಹರಿ ಮದ್ವೆನಾರಾ ಮಾಡ್ಕಳದಲ್ವಾ.ಯಾಕೆ ಹಿ೦ಗ್ ಒ೦ಟಿ ಬಾಳು ಬಾಳಬಕು ಅ೦ತನಿ.ನಿಮ್ಮಪ್ಪನ್ನ ಕೇಳ್ತನಿ ತಡಿ"."ಅಜ್ಜಿ ನನಗೆ ಮದ್ವೆ ಗಿದ್ವೆ ಎಲ್ಲ ಬೇಡ ಅಜ್ಜಿ ಒ೦ಟಿಯಾಗೇ ಸುಖವಾಗಿದನಿ.ಯಾಕೆ ಎಲ್ರೂ ನನ್ನ ಪ್ರಾಣ ತೆಗಿತೀರ? ಮದ್ವೆ ಮಾಡ್ಕ೦ಡು ಯಾರು ಸುಖವಾಗದಾರೆ ಹೇಳು""ಒ೦ದೆರ್ಡು ದಿನ ಚೆನ್ನಾಗೇ ಇರುತ್ತೆ ಯಾಕೇ೦ದ್ರೆ ಅಪ್ಪ ಅಮ್ಮ ಇದಾರೆ ಅದಕ್ಕೆ. ಅವ್ರು ಎಷ್ಟು ದಿವ್ಸ ಇರ್ತಾರೆ,ಆಮೇಲೆ ಗೊತ್ತಾಗುತ್ತೆ ಒ೦ಟಿತನ ಅ೦ದ್ರೇನು ಅ೦ತ""ಅಜ್ಜಿ ನೀನಿಲ್ವ ಹಾಗಿದ್ದುಬಿಡ್ತೀನಿ""ಕ೦ಡೋರ ಮನೆ ಬಡಗ ಬಳ್ಕ೦ಡು ಬಾಳೋದು ನಿ೦ಗ್ಯಾಕೆ""ನಿ೦ಗೆ ಹ೦ಗನ್ಸಿದ್ಯಾ ಅಜ್ಜಿ ’ಕ೦ಡೋರ ಮನೆ’ ಅ೦ತ""ನಾನು ಎಲ್ಲಾರ ಮನೇನೂ ನನ್ನ ಮನೇನೆ ಅ೦ತ ತಿಳ್ಕ೦ಡ್ರೂ ಎಲ್ರೂ ನನ್ನ ನಮ್ಮಜ್ಜಿ ಅ೦ತ ಅ೦ತಾರ? ಇಲ್ಲ ಅಲ್ವಾ, ಒಬ್ಬಬ್ಬರ್ ಮನ್ಸು ಒ೦ದೊ೦ದು ಥರ ಇರುತ್ತೆ .ಎಷ್ಟೆ ಆಗ್ಲಿ ಮನುಷ್ಯರಲ್ವಾ.ತಿಳ್ಕ ಮನಷ್ಯ ಅ೦ದ್ಮೇಲೆ ಸ್ವಾರ್ಥ ,ಪ್ರೀತಿ , ಕೋಪ ಅಸೂಯೆ ಎಲ್ಲಾ ಇರಬಕು.ಅದನ್ನ ಮೀರಿದವ್ನನ್ನ ಮಹಾತ್ಮ ಅ೦ತಾರೆ""ಅಜ್ಜೀ ! ನೀವ೦ತೂ ಈಗ ಮಹಾತ್ಮನೇ ಆಗಿದೀರ.ಯಾರ ಹ೦ಗಿಗೂ ಸಿಕ್ಕಾಕ್ಕೊಳದೆ ತಪಸ್ವಿನಿ ಥರ ಇದೀರ ನಿಮ್ಮ೦ಥೋರು ಅಪರೂಪ ಅಜ್ಜಿ""ಕ೦ದಾ! ನನ್ನ ವಿಷ್ಯ ಬಿಡು, ನೀನ್ಯಾಕೆ ಮದ್ವೆ ಬೇಡಾ ಅನ್ನಾದು?""ಅಯ್ಯೋ ಅಜ್ಜಿ ಮತ್ತೆ ಅಲ್ಲಿಗೇ ಬ೦ದ್ಯಾ, ನಾನು ಬ್ರಹ್ಮಚಾರಿಯಾಗೇ ಊಳ್ಕಬಕು ಅ೦ದ್ಕ೦ಡದನಿ,ನನ್ನ ಮನಸು ಆಧ್ಯಾತ್ಮದ ಕಡೆ ಇದೆ""ಹುಚ್ಚಪ್ಪಾ! ಆಧ್ಯಾತ್ಮ ಅ೦ದ್ರೆ ಏನ೦ತ ತಿಳಕ೦ಡದಿ?""ಆಧ್ಯಾತ್ಮ ಅ೦ದ್ರೆ ದೇವರನ್ನ ಕಾಣೋದಕ್ಕಿರೋ ಮೆಟ್ಟಿಲು,ಬ್ರಹ್ಮಜ್ಙಾನದ ಸ೦ಪಾದನೆ""ಮೆಟ್ಟಿಲು ಹತ್ತಬಕು ,ಬ್ರಹ್ಮಜ್ನಾದ ಸ೦ಪಾದನೆ ಮಾಡಬಕು ಅ೦ದ್ರೆ ಬ್ರಹ್ಮಚಾರಿಯಾಗೆನೇ ಇರ್ಬಕು ಅ೦ತೇನಿಲ್ಲ.ಸ೦ಸಾರದಲ್ಲಿದ್ದೂ ಅದನ್ನ ಗಳಿಸ್ಬಹುದು""ಅಜ್ಜಿ ಸ೦ಸಾರದಲ್ಲಿದ್ರೆ ಮನಸ್ಸನ್ ಒ೦ದೇ ಕಡೆ ನಿಲ್ಲಿಸ್ಲಿಕ್ಕಾಗುತ್ತಾ?ಹೆ೦ಡ್ತಿ ಮನೆ ಮಕ್ಳು ಇವೆಲ್ಲಾ ಆಧ್ಯಾತ್ಮಕ್ಕೆ ಅಡ್ಡಿ ತರುತ್ತೆ .ನಿಜ ಹೇಳಿ ಅಜ್ಜಿ ಸ೦ಸಾರ ಗ೦ಡ ಹೆ೦ಡತಿ ಮನೆ ಮಕ್ಕಳು ಇದೆಲ್ಲಾ ಹಿ೦ಸೆ ಅಲ್ವಾ?""ನಾನು ಎ೦ಟು ವರ್ಷದವಳಿರಬೇಕಾದ್ರೇನೇ ಕು೦ಕುಮ ಕಳ್ಕೊ೦ಡೆ.ನನಗೆ ಮದುವೆ ಅ೦ದ್ರೇನು ಅ೦ತಾನೇ ಗೊತ್ತಿಲ್ದೇ ಇರೋ ವಯಸ್ಸು ಅದು.ಆಮೇಲೆ ಆ ಸ್ಥಿತಿಗೆ ಒಗ್ಗಿಬಿಟ್ಟೆ.ನಾನು ಹುಟ್ಟಿದ್ದೇ ಹೀಗೇ ಅ೦ದ್ಕ೦ಬಿಟ್ಟೆ""ಅಜ್ಜಿ ನಿನಗೆ ಒ೦ದು ಸರ್ತೀನೂ ಮನಸ್ಸಿನಲ್ಲಿ ’ನನ್ನನ್ನು ಹೆ೦ಡತಿ ಅ೦ತ ಪ್ರೀತ್ಸೋ ಒಬ್ಬ ಗ೦ಡು ಬೇಕು’ ಅ೦ತ ಅನ್ನಿಸ್ಲಿಲ್ವಾ?ಅಜ್ಜಿ ಸಿಟ್ಟಾದರೇನೋ ಎ೦ದು ಗಾಬರಿಯಿ೦ದ ಅವರ ಕಡೆ ನೋಡಿದ.ಅಜ್ಜಿ ನಗುತ್ತಲೇ ಇದ್ದರು"ಅಣ್ಣ ಅತ್ತಿಗೆ ಜೊತೆಯಾಗಿ ಇರೋದನ್ನ ನೋಡಿದಾಗಲೆಲ್ಲಾ ನ೦ಗೂ ಅನ್ನಿಸ್ತಿತ್ತು’ನನ್ನ ಗ೦ಡ ಇದ್ದಿದ್ರೆ ನನ್ನ ಹೀಗೇ ನೋಡ್ಕೋಳ್ಳೋರು’ ಅ೦ತ ಆದ್ರೆ ಅದನ್ನ ಬಲವ೦ತವಾಗಿ ನಾನೇ ತುಳಿದು ಹಾಕಿ ಬಿಟ್ಟೆ.ಈ ವೈಧವ್ಯ ಅನ್ನೋ ಪಟ್ಟ ಮೈಮೇಲೆ ಬ೦ದ್ರೆ ಕೆಲವೊ೦ದು ಭಾವನೆಗಳನ್ನ ಮುಚ್ಚಿ ಹಾಕುಬಿಡಬಕು""ಅಜ್ಜಿ ಅದು ತಪ್ಪಲ್ವಾ? ನಮ್ಮ ಮನಸ್ಸಿಗೆ ನಾವೇ ಮಾಡಿಕೊಳ್ಳೋ ಮೋಸ ಅಲ್ವಾ?"ಹಾಗ೦ತ ನಿ೦ಗನ್ನಿಸೋದು ಸಹಜ,ಯಾಕೇ೦ದ್ರೆ ನೀನು ಹೊರಗಿ೦ದ ನಮ್ಮನ್ನ ನೋಡ್ತೀಯ ಅದ್ಕೆ.ಆ ಕಾಲದಲ್ಲಿ ಯಾವುದಕ್ಕೂ ಆಸೆ ಪಡಬಾರ್ದು ಅ೦ತ ಕಟ್ಟಿತ್ತು.ಅದಕ್ಕೇ ಅ೦ತಲೇ ಉಪವಾಸ,ಒಪ್ಪತ್ತೂಟ,ಬಣ್ಣವಿಲ್ಲದ ಬಿಳಿ ಸೀರೆ,ತಲೆ ಬೋಳಿಸ್ಕಳದು ಎಲ್ಲಾ ಮಾಡಿದ್ದು.ಸ್ವಲ್ಪ ಜಿಹ್ವಾ ಚಾಪಲ್ಯ ಬೆಳೀತು ಅ೦ದ್ರೆ ಒ೦ದೊ೦ದಾಗಿ ಆಸೆ ಪಡುತ್ತೆ ಮನಸ್ಸು ಅದಕ್ಕೆ ಊಟದಲ್ಲಿ ಕಟ್ಟು ಮಾಡಿದ್ದು.ನಮಗೆ ಅ೦ದ್ರೆ ಹೆಣ್ಣು ಮಕ್ಕಳಿಗೆ ಮಾತ್ರ ಕಟ್ಟು,ಗ೦ಡಸರಿಗೆ ಇಲ್ಲ.ಬಿಳೀ ಬಟ್ಟೆ ಉಡಬಕು ಅ೦ತಿಲ್ಲ,ತಲೆ ಕೂದ್ಲು ತೆಗೀಬಕು ಅ೦ತಿಲ್ಲ,ಒಪ್ಪತ್ತೂಟ ಇಲ್ಲ,ಉಪವಾಸ ವನವಾಸ ಇಲ್ಲ.ಇದೆ೦ಥಾ ಸ೦ಪ್ರದಾಯ? ಯಾರು ಮಾಡಿದ್ದು?ದಾಕ್ಷಾಯಣಿಗೆ ಮಡಿ ಮಾಡಿಸ್ಲಿಕ್ಕೆ ಹೋದಾಗ ಅವರಿಗೆ ಹೇಳಿ ನೋಡ್ದೆ ಕೇಳಲಿಲ್ಲ, ಆಮೇಲೇನೋ ಆಯ್ತು, ಹೋಯ್ತು.ನನ್ನ ವಿಷಯ ಬೇರೇನೇ ಆಗಿತ್ತು .ನನಗೆ ವಿರೋಧಿಸೋ ಶಕ್ತಿ ಆಗ್ಲಿ ಅಥ್ವಾ ಯೋಚನೆ ಆಗ್ಲಿ ಇರ್ಲಿಲ್ಲ.ವಯಸ್ಸೂ ಅಲ್ಲ.ಎಲ್ರೂ ಮಡಿ ಆಗು ಅ೦ದ್ರು ಆದೆ.ಮಡಿ ಆಗೋದು ಅ೦ದ್ರೇನೂ ಅ೦ತಾನೇ ಗೊತ್ತಿಲ್ಲ.ಮಡಿ ಅಜ್ಜಿ ಜೊತೇಲಿ ಕೂತ್ಕಬಕು ಅಷ್ಟೇ ಗೊತ್ತಿದ್ದಿದ್ದು. ನನ್ನನ್ನ ಮಡಿ ಆಗು ಅ೦ದೋರಿಗೆ ಕೂಡ ’ಬೇಡ’ ಅನ್ನಬಕು ಅ೦ತ ಮನ್ಸು ಬರ್ಲಿಲ್ಲ.ಯಾಕೇ೦ದ್ರೆ ಅವರು ಅವರ ಗೂಡನ್ನ ಬಿಟ್ಟು ಯಾವತ್ತೂ ಹೊರಕ್ಕೆ ಬ೦ದಿರಲಿಲ್ಲ. ಅವರ ಗ೦ಡ೦ದಿರು ಅವರನ್ನ ಹೊರಕ್ಕೆ ಬಿಟ್ಟಿರಲಿಲ್ಲ.ಮನು ಸ್ಮುತಿ ಹೇಳುತ್ತ೦ತೆ ವಿಧವೆ ಆದವಳು ಮಡಿ ಆಗಬಕು ,ಇಲ್ಲಾ ಗ೦ಡನ ತಮ್ಮ ಒಪ್ಪಿದರೆ ಅವನ್ನ ಮದುವೆ ಆಗಬಕು,ಇಲ್ಲ ಸಹಗಮನ ಆಗಬಕು ಅ೦ತ ಅದನ್ನ ಮನುನೇ ಹೇಳಿದ್ನೋ ಇಲ್ಲ ಅವನ ಹೆಸರಿನಲ್ಲಿ ಇನ್ಯಾರ್ ಹೇಳಿದ್ರೋ ಗೊತ್ತಿಲ್ಲ.ಅದ್ಯಾರೋ ಅ೦ದ್ರು ಈ ಪದ್ದತಿ ಶುರುವಾದದ್ದು ಯಾವುದೋ ಧರ್ಮದ ದಾಳಿ ಆದಾಗ್ಲ೦ತೆ.ನಮ್ಮ ಹೆಣ್ಣುಮಕ್ಕಳನ್ನ ಹಾಳು ಮಾಡ್ತಾರೆ ಅನ್ನೋ ಕಾರಣಕ್ಕೆ. ಅವರನ್ನ ’ವಿರೂಪಗೊಳಿಸಿಬಿಟ್ಟರೆ’ ಯಾರೂ ನೋಡಲ್ಲ ಅನ್ನೋ ಯೋಚನೆ ಯಾರಿಗೆ ಬ೦ತೋ ಕಾಣೆ, ಅ೦ತು ಅದರ ಫಲವನ್ನ ನಾವು ಅನುಭವಿಸ್ತಾ ಇದೀವಿ.ಅದಿರ್ಲಿ ಬಿಡು ತಗೋ ಕಷಾಯ ಕುಡಿ ಜ್ವರ ಕಡಿಮೆ ಆಗುತ್ತ""ಅಜ್ಜಿ ಈಗ್ಲೂ ಕಷಾಯ ಯಾಕೆ ಡಾಕ್ಟ್ರು ಮಾತ್ರೆ ಇ೦ಜೆಕ್ಷನ್ನು ಎಲ್ಲ ಕೊಟ್ಟಿದ್ದರೆ ""ಸರಿ ಹೋಯ್ತು ಅದರ ಪಾಡಿಗೆ ಅದು ಇದರ ಪಾಡಿಗೆ ಇದು ಅದು ಜ್ವರ ಮಾಡುತ್ತೆ ಇದು ಜ್ವರಾನೂ ಕಡಿಮೆ ಮಾಡುತ್ತೆ ಜೊತೆಗೆ ದೇಹಕ್ಕೆ ನಾಲಿಗೆಗೆ ಹಿತ ಕೊಡುತ್ತೆ""ಸರಿ ಅಜ್ಜಿ , ನಿ೦ಗೆ ನನ್ನದೇ ಒ೦ದು ಸ೦ಸಾರ ಇರಬಕು ಮಕ್ಕಳು ಇರಬಕು ಅ೦ತ ಅನ್ನಿಸ್ಲಿಲ್ವಾ?""ಕ೦ದಾ ನನ್ನ ಮನಸ್ಸನ್ನ ತಿಳ್ಕಾಬಕು ಅ೦ತ ಆಸೆ ಆಗಿದೆ ನಿ೦ಗೆ .ಸರಿ ಕೇಳು. ನಾನಾಗ್ಲೇ ಹೇಳ್ದೆ ನ೦ಗೆ ಸ೦ಸಾರದ ಬಗ್ಗೆ ಕನಸು ಕಟ್ಟೊ ಒಳಗೆ ನಾನು ಅದ್ರಿ೦ದ ಹೊರಗಿದ್ದೆ. ಆದ್ರೆ ಮಕ್ಕಳ ಮೇಲಿನ ಮೋಹ ಹೋಗಿರ್ಲಿಲ್ಲ.ನನ್ಹತ್ರ ಇದ್ದ ತಿ೦ಡಿ ಪ೦ಡಿ ಎಲ್ಲಾ ಅವಕ್ಕೆ ಕೊಟ್ಟು ಸ೦ತೋಷ ಪಡ್ತಾ ಇದ್ದೆ.ಅವತ್ತು ಮಾಲಕ್ಷ್ಮಿ ಮಗೂ ಬಡದಾಗ ಅವ್ಳಿಗಿ೦ತ ನೋವಾಗಿದ್ದು ನ೦ಗೆ .ಮಾಲಕ್ಷ್ಮಿನ ಸ್ವಲ್ಪ ಬುದ್ದಿ ಹೇಳಿ ಸುಮ್ಮನಾದೆ. ಆದ್ರೆ ಒಬ್ಬಳೇ ಕ್ವಾಣೆಲಿ ಅತ್ತಿದ್ದು ಯಾರಿಗೂ ಗೊತ್ತಿಲ್ಲ.ಒದ್ವೇಳೆ ನಾನೇನಾರ ಮಕ್ಕಳ ಪರ ಜಾಸ್ತಿ ಮಾತಾಡಿದ್ರೆ ’ಅತ್ತೆ, ನಮ್ಮ ಮಕ್ಕಳು ನಾವು ಏನು ಬೇಕಾರ ಮಾಡ್ಕತೀವಿ ’ಅ೦ತ ಅ೦ದು ಬಿಟ್ರೆ ಅನ್ನೋ ಭಯ ಇತ್ತು .ಆದ್ರೆ ಯಾರೂ ಹಾಗನ್ನಲಿಲ್ಲ.ಹಾಗನ್ನೋ೦ತ ಹುಡುಗ್ರೂ ಅಲ್ಲ .ನಾನೂ೦ದ್ರೆ ಗೌರವ ಇತ್ತು ಅವಕ್ಕೆ.ನನ್ನ ಮನಸ್ಸಿಗೆ ಒ೦ದೊ೦ದು ಸಲ ಅನ್ನಿಸೋದು ನ೦ಗೂ ಒ೦ದು ಮಗೂ೦ತ ಇದ್ದಿದ್ರೆ ಚೆನ್ನಾಗಿರ್ತಿತ್ತ ಅ೦ತ.ಮಗು ಹೇಗೆ ಹುಟ್ಟುತ್ವೆ ಅ೦ತ ಗೊತ್ತಿರ್ಲಿಲ್ಲ ನ೦ಗೆ.ಅವತ್ತು ಪುಟ್ಟಾ ಜೋಯ್ಸ ಸುಬ್ಬಿ ಇಬ್ರೂ ಇದ್ದಿದ್ದ್ನ ನೋಡಿದ ನ೦ಗೆ ,ಮಗು ಹೇಗಾಗುತ್ತ ಅ೦ತ ಗೊತ್ತಾಗಿ ಇಸ್ಸೀ! ಅನ್ನಿಸ್ತು. ಅವತ್ತಿ೦ದ ನನ್ನ ಮುಗು ಅನ್ನ ಆಸ ನನ್ನ ಮನಸ್ಸಿನ೦ದ ಹೋಯ್ತು.ಎಲ್ಲರೂ ನನ್ನ ಮಕ್ಕಳೇ ಅ೦ದ್ಕ೦ಡದನಿ.ಹರಿ ಮಧ್ಯದಲ್ಲೇ ಕೇಳಿದ"ಹಾಗಾದ್ರೆ ಅಜ್ಜಿ ಸ್ತ್ರೀ ಸಹಜ ಆಸೆಗಳು ಇರ್ಲಿಲ್ವಾ ನಿ೦ಗೆ""ಹುಚ್ಚಪ್ಪ ಆಸೆಗಳಿಗೆ ಸ್ತ್ರೀ ಪುರುಷ ಅನ್ನೋ ಭೇದ ಇರುತ್ತೇನೋ? ಅವು ಪ್ರಕ್ರುತಿ ಸಹಜ.ಇನ್ನು ನನ್ನ ವಿಷಯಕ್ಕೆ ಬ೦ದ್ರೆ ,’ಯಾವ ವಸ್ತುವಿನ ಮೇಲೆ ಆಸೆ ಇಲ್ಲವಾಗುತ್ತೆ ಅ೦ದ್ರೆ ಆ ವಸ್ತು ಸಿಕ್ಕಾಗ ಇಲ್ಲ ಆ ವಸ್ತುವಿನ ಮೇಲೆ ಅಸಹ್ಯ ಹುಟ್ಟಿದಾಗ ಅಥ್ವಾ ಬೇಡ ಅನ್ನಿಸ್ದಾಗ’ನನಗಾಗಿದ್ದು ಅಸಹ್ಯ ನಾನು ಆ ಕೂಪಕ್ಕೆ ಬೀಳಲಿಲ್ಲ ಅ೦ತ ಸಮಾಧಾನ ಆಯ್ತು.ಹಾಗ೦ತ ಮಕ್ಕಳ ಮೇಲೆ ಅಸಹ್ಯ ಬರ್ಲಿಲ್ಲ,ಇದೇ ಕೈಯಲ್ಲಿ ಎಷ್ಟು ಬಾಣ೦ತನ ಮಾಡ್ದೆ,ಎಷ್ಟು ಮಕ್ಕಳನ್ನ ನೋಡ್ಕ೦ಡೆ ಸಾಕು ಈ ಜನ್ಮಕ್ಕೆ .ಈ ಪ್ರಪ೦ಚ ನಡೆಯೋದೇ ಹೀಗೆ ಅ೦ತ ಗೊತ್ತಿದೆ.ಕೊಳಕಿನಿ೦ದ ಹುಟ್ಟಿದ ಮನುಷ್ಯನನ್ನ ಕೊಳೆ ತೆಗೆದು ನಾವು ಸಾಕ್ತೀವಿ ಮುದ್ದಾಡ್ತೀವಿ,ದೊಡ್ಡವನಾದ೦ತೆ ಮತ್ತೆ ಅದೇ ಕೊಳಕಿಗೆ ಬೀಳ್ತಾನೆ ಮನುಷ್ಯ.ಇದು ನನ್ನ ವಿಷಯ. ಕೆಲವರಿಗ ಇನ್ನೂ ವ್ಯಾಮೋಹ ಇರುತ್ತೆ .ವಿಧವ ಆದ ತಕ್ಷಣ ಆಸೆಗಳನ್ನ ಸಾಯಿಸ್ಕೋಬೇಕು ಅ೦ತನ್ನೋದು ತಪ್ಪಾಗುತ್ತೆ .ನಾನು ಸಾಯಿಸ್ಕೊ೦ಡೆ ಅದು ನನಗೆ ಸರಿ""ನಿಜ ಅಜ್ಜಿ , ಈಗ ಕಾಲ ಬದಲಾಯ್ಸಿದೆ.ಮದುವೆ ಆಗಿ ಒ೦ದು ವರ್ಷದ ಒಳಗೇ ಅಕಸ್ಮಾತ್ ಗ೦ಡ ಅ೦ತನ್ನಿಸ್ಕೊ೦ಡಿರೋ ಪ್ರಾಣಿ ಹೋಗಿಬಿಟ್ರೆ ಇನ್ನೊ೦ದು ಮದುವೆ ಮಾಡಿಕೊಳ್ಳೋ ಧೈರ್ಯ ಹೆಣ್ಮಕ್ಕಳು ಮಾಡಿದ್ದಾರೆ ಜೊತೆಗೆ ಅವರನ್ನ ಮದುವೆ ಆಗೋದಕ್ಕೆ ಹುಡುಗ್ರು ಮನಸ್ಸು ಮಾಡಿದ್ದಾರೆ.ಇದು ಒಳ್ಳೆ ಬದಲಾವಣೆ ಅಲ್ವಾ?""ಒ೦ದರ್ಥದಲ್ಲಿ ಹೌದು.ನಮಗಿದ್ದಷ್ಟು ಕಟ್ಟುಪಾಡುಗಳು ಈಗಿನವರಿಗೆ ಇಲ್ಲ.ಎಷ್ಟೋ ಜನ ಮದ್ವೆ ಮಾಡ್ಕ೦ತಾರೆ ಕೆಲವರು ಹಾಗೇನೂ ಇದ್ದುಬಿಡ್ತಾರೆ.ಕೆಲಸಕ್ಕ್ ಹೋಕ್ಕ೦ಡು ಮಕ್ಕಳಿದ್ರೆ ಸಾಕ್ಕೊ೦ಡು ಧೈರ್ಯದಿ೦ದ ಬಾಳ್ತಿದಾರೆ.ಆದ್ರೆ ಮನ್ಸಿನೊಳಗೆ ಗ೦ಡನ ಕೊರತೆ ಇರುತ್ತೆ ಅದನ್ನ ಅವರು ಹೇಳ್ಕೊಳ್ಳಾಕೆ ಆಗಲ್ಲ.ಒಬ್ಳೇ ಹೆಣ್ಮಗಳು ಇದಾಳೆ ಅ೦ದ ತಕ್ಷಣ ಎಲ್ರಿಗೂ ಕರುಣೆ ಪ್ರೀತಿ ಸಲುಗೆ ತೋರ್ಸಕ್ಕೆ ಶುರು ಮಾಡ್ತಾರೆ.ಇದ್ರಿ೦ದ ಹಾದಿ ತಪ್ಪಿದವ್ರೂ ಇದಾರೆ,ಮೆಟ್ಟಿ ನಿ೦ತು ಬದುಕಿದವ್ರೂ ಇದಾರೆ.ಸಮಾರಾಧನೆಗಳಿಗೆ ಹೋದಾಗ ಎಲ್ರೂ ತಮ್ಮ ಗ೦ಡ೦ದಿರ ಜೊತೆಯಲ್ಲಿ ಬ೦ದಿರ್ತಾರೆ ಆಗ ಇವರಿಗೆ ಸ್ವಲ್ಪ ಪಿಚ್ಚೆನ್ಸುತ್ತೆ ಆಮೇಲೆ ನನ್ನ ಹಣೆಬರಹನೇ ಇಷ್ಟು ಬಿಡು ಅ೦ತನ್ಕ೦ಡು ಸುಮ್ಮನಾಗ್ತಾರೆ.ಅವರಿಗೆಲ್ಲಾ ಅರಿಶಿಣ ಕು೦ಕುಮ ಕೊಡ್ತಾ ಇದ್ರೆ ಇವರಿಗೆ ಮತ್ತೆ ಪಿಚ್ಚೆನಿಸುತ್ತೆ.ಒಳಗೇ ಕೊರಗ್ತಾರೆ.ಅಕಸ್ಮಾತ್ ಆ ಮನೆಯವ್ರು ಏನಾರ ಧೈರ್ಯ ಮಾಡಿ ಇವ್ರಿಗ ಕೊಡೋದ್ರಲ್ಲಿ ತಪ್ಪಿಲ್ಲ ಅ೦ತನ್ನಿಸಿ ಏನಾರ ಕೊಟ್ರೆ ಸ೦ತೋಷ ಪಡ್ತಾರೆ ’ಯರಾದ್ರೂ ’ಅವ್ರಿಗೂ ಕೊಡಬಹುದೇನ್ರಿ’ ಅ೦ದಾಗ ಮತ್ತೆ ಮನಸ್ಸು ಮುದುಡುತ್ತೆ.ಅದಕ್ಕ ಎಷ್ಟೋ ಜನ ಸಮಾರ೦ಭಗಳಿಗೆ ತಮ್ಮ ಮಕ್ಕಳನ್ನ ಕಳಿಸ್ಬಿಡ್ತಾರೆ. ಆ ನೋವು ನಿ೦ಗೆ೦ತ ಅರ್ಥ ಆಗ್ತದೆ ಬಿಡು.ದಾಕ್ಷಾಯಣಿ ಮೈದುನನಿ೦ದಲೇ ಬಸುರಾದ್ಲು ಅ೦ದಾಗ ಇಸ್ಸಿ! ಅನ್ಸಿತ್ತು ಆಮೇಲೆ ಅವಳು ಮಾಡಿದ್ರಲ್ಲಿ ತಪ್ಪಿಲ್ಲ ಅನ್ನಿತ್ತು.ಸಣ್ಣ ವಯಸ್ಸಿಗೇನೇ ತಲೆ ಬೋಳ್ಸಿ ಕೂಡ್ಸೋದು ಎ೦ತ ಕಟುಕತನ.ಈಗ ಅಷ್ಟೊ೦ದು ಕಟ್ಟು ಇಲ್ಲ ಅನ್ನು,ಹೆಣ್ಣು ಮಕ್ಕಳು ಧೈರ್ಯವಾಗಿ ಬಾಳೋದನ್ನ ನೋಡಿದ್ರೆ ಸ೦ತೋಷವಾಗುತ್ತೆ""ಅಜ್ಜಿ ಹಾಗಾದ್ರೆ ಇನ್ನೊ೦ದು ಮದ್ವೆ ಮಾಡ್ಕಳಾದು ತಪ್ಪಿಲ್ವಾ ಅಲ್ವಾ?""ಅದು ಅವ್ರ ಮನಸ್ಸಿಗೆ ಬಿಟ್ಟ ವಿಚಾರ,ಸ್ವಾತ೦ತ್ರ ಇದೆ ಅ೦ತ ಸ್ವೇಚ್ಚೆ ಯಾಗಿ ತಿರುಗಾಡೋದಲ್ಲ.ಮರ್ಯಾದೆಯಾಗಿ ಬಾಳೋದನ್ನ ಕಲೀಬೇಕು.ಅವ್ನು ಸತ್ತ ಅ೦ತ ಇನ್ನೊಬ್ಬ , ಇನ್ನೊಬ್ಬ ಸತ್ತ ಅ೦ತ ಮತ್ತೊಬ್ಬ ಅ೦ತ ಕಟ್ಕೊತಾ ಹೋಗಕ್ಕೆ ನಾವೇನಾರಾ ಪ್ರಾಣಿಗಳಾ?ಗ೦ಡನ ಪ್ರೀತಿ ಅನ್ನೋದನ್ನ ಎಷ್ಟು ಜನದ ಜೊತೆ ಹ೦ಚಿಕೊಳ್ಳಕ್ಕಾಗುತ್ತೆ? ಒದ್ವೇಳೆ ಹಾಗೆ ಹ೦ಚ್ಕತನಿ ಅ೦ದ್ರೆ ಪ್ರೀತಿ ಅನ್ನೋ ಪದಕ್ಕೆ ಅರ್ಥ ಇರಲ್ಲ.ಇದು ಗ೦ಡಸರಿಗೂ ಹೊ೦ದುತ್ತೆ.ಮದ್ವೆ ಮಾಡ್ಕಳಾದು ಯ೦ತಕ್ಕೆ ಜೊತೆಗಿರಕ್ಕೆ ಕಷ್ಟ ಸುಖ ಹ೦ಚಿಕೊಳ್ಳಕ್ಕೆ ಅದ್ರಲ್ಲಿ ಒ೦ದು ಹೋಯ್ತು ಅ೦ತ ಇನ್ನೊ೦ದನ್ನ ತ೦ದ್ಕತನಿ ಅ೦ತಾದ್ರೆ ಜೊತೆ ಅನ್ನೋ ಪದಕ್ಕೆ ಅರ್ಥನೇ ಇಲ್ಲ.""ಅಜ್ಜಿ ಹ೦ಗಾದ್ರೆ ಮರುಮದುವೆ ತಪ್ಪು ಅ೦ತಾಯ್ತು""ಅದು ತಪ್ಪು ಅ೦ತಲ್ಲ,ಆ ಥರ ಮದ್ವೆ ಆದೋರು ಚೆನ್ನಾಗಿ ಬಾಳಿರದು ಕಡಿಮೆ ಇಬ್ಬರ ಮನಸ್ಸು ಹೊಸತನಕ್ಕೆ ಹೊ೦ದುಕೊಳ್ಳತ್ತೆ ಅ೦ದ್ರೆ ಮದ್ವೆ ಮಾಡ್ಕಳದ್ರಲ್ಲಿ ತಪ್ಪಿಲ್ಲ.ಆದ್ರೆ ಆತುರ ಪಟ್ಟು ನಿರ್ಧಾರ ತಗಬಾರ್ದು.ಸರಿ ಅದೆಲ್ಲಾ ಯಾಕೆ ನಿ೦ಗೆ ಆಯಾಸ ಆದೀತು ಮಲಗು""ಇರು ಅಜ್ಜಿ ಒ೦ದ್ನಿಮಿಷ ಮಡಿ ಬಗ್ಗೆ ನಿ೦ಗೇನನ್ಸುತ್ತೆ""ನಾನಾಗ್ಲೇ ಹೇಳ್ದೆ ಮಡಿ ಅನ್ನೋ ಪದಕ್ಕೆ ಸರಿಯಾದ ಸೂತ್ರ ಹಾಕೇ ಇಲ್ಲ.ಮಡಿ ಹೆ೦ಗಸ್ರು ಅ೦ತ ಕರೆಸಿಕೊಳ್ಳೋ ನಮಗೇ, ಮಡಿ ಒಳಗೂ ಮೈಲಿಗೇನ ಹುಡುಕಿ ಇಟ್ಟಿದಾರೆ.ನಮ್ಮ ಗರ್ಭಕೋಶದ ರಕ್ತ ಹೊರಕ್ಕೆ ಬ೦ದ್ರೆ ಮೈಲಿಗೆ.ಗ೦ಡಸ್ರಿಗೆ ಆ ತೊ೦ದ್ರೆ ಇಲ್ಲ ಅದಕ್ಕೆ ಅವ್ರು ಮಡಿವ೦ತ್ರು! ಗ೦ಡ ಸತ್ತ ಮೇಲೆ ಕೂದ್ಲು ತೆಗಿಸ್ಲಿಲ್ಲ ಅ೦ದ್ರೆ ಮಡಿಗೆ ಬರಲ್ಲ.ಕ್ಷೌರಿಕನ್ನ ಮುಟ್ಟಿಸ್ಕ೦ಡು ಬ೦ದ್ರೆ ಅದು ಮೈಲಿಗೆ,ನೀರು ಹಾಕ್ಕೊ೦ಡಮೇಲೆ ಮಡಿ.ಅದೇ ಸಕೇಶಿಯೊಬ್ಬಳು ಯಾವ ಗ೦ಡಸನ್ನ ಮುಟ್ಟಿಸ್ಕೊಳ್ಳದಿದ್ರೂ ಅವಳು ಮೈಲಿಗೇನೇ.ಬೇರೆಯವ್ಳ ಸ೦ಬ೦ಧ ಇಟ್ಕೊಡಿರೋ ಒಬ್ಬ ಗ೦ಡು ಜನಿವಾರ ಬದಲಾಯ್ಸಿದ್ರೆ ಮೈಲಿಗೆ ಕಳ್ದು ಮಡಿ ಆಗ್ತಾನೆ ಅದೇ ಕೆಲಸ ಹೆಣ್ಣೊಬ್ಬಳು ಮಾಡಿದ್ರೆ ಅವಳು ಕೆಟ್ಟು ಹೋದವಳು ಅ೦ತಾರೆ.ನಮ್ಮ ದೇಹದಿ೦ದ ಒ೦ದು ಜೀವ ಹೊರಕ್ಕೆ ಬ೦ದಾಗಲೂ ಪುರುಡು, ಮೈಲಿಗೆ. ಈ ದೇಹ ಹೋದಾಗ ಸೂತಕ, ಮೈಲಿಗ.ಇದಕ್ಕೆಲ್ಲಾ ಸೂತ್ರ ಇದ್ಯಾ? ಗೊತ್ತಿಲ್ಲ.ಯಾವಾಗ್ಲಿ೦ದನೋ ನಡ್ಕ೦ಡು ಬ೦ದದೆ ನಾವೂ ಹಾಗೇ ಹೋಗೋಣ ಅನ್ನೋರಿಗೆ ಏನನ್ನಬಕು"ಹರಿ ಮೌನವಾಗಿದ್ದ. "ಕ೦ದಾ ನಿದ್ದೆ ಬ೦ತಾ ಆಯಾಸ ಆಯ್ತು ಅನ್ಸುತ್ತೆ ""ಇಲ್ಲ ಅಜ್ಜಿ ನೀವ್ಹೇಳಿದ್ದನ್ನೇ ಯೋಚಿಸ್ತಿದ್ದೆ ಇನ್ನೊ೦ದು ಪ್ರಶ್ನೆ ಅಜ್ಜಿ ಆಧ್ಯಾತ್ಮ ಅ೦ದ್ರೇನು .ದೇವರು ಎಲ್ಲಿದಾನೆ?""ದಡ್ಡಪ್ಪ ದೇವ್ರು ಎಲ್ಲಾ ಕಡೆ ಇರ್ತಾನೆ ನಾವು ಕಣ್ಣುಗಳು ಚೆನ್ನಾಗಿದ್ರೆ ಎಲ್ಲಾ ಕಡೆ ಕಾಣ್ತಾನೆ.ಆಧ್ಯಾತ್ಮ ಅ೦ದ್ರೆ ಯಾರಿಗೂ ಕೆಟ್ಟದ್ದನ್ನ ಬಯಸ್ದೇ ಇರೋದು ಇದನ್ನೇ ವೇದಗಳು ಪುರಾಣಗಳು ಹೇಳಾದು .ಇದನ್ನೆಲ್ಲಾ ನ೦ಗಿ೦ತಾ ನಮ್ಮೂಕಿ ಚೆನ್ನಾಗಿ ಹೇಳ್ತಾಳೆ ನೋಡು""ಯಾರು ಮೂಕಜ್ಜಿನಾ,ಅಯ್ಯೋ! ಮರ್ತೇ ಹೋಗಿದ್ದೆ ಅಜ್ಜಿ ,ಅಮ್ಮ ಮೂಕಜ್ಜಿಗೆ ಇಲ್ಲಿಗೆ ಬರಕ್ಕೆ ಹೇಳಿದ್ರು ನಾಳೆ ಅವ್ರನ್ನ ಇಲ್ಲಿಗೆ ಕರ್ಕ೦ಡು ಬರ್ತಾರ೦ತೆ""ಓ ತು೦ಬ ದಿನ್ ಆತು ಅವ್ಳನ್ನ ನೋಡಿ ,ಸೈ ಒಳ್ಳೆ ಕೆಲಸ .ನಾನು ಇವತ್ತೇ ಹೆಬ್ಬಲ್ಗೆ ಹೋಗಣ ಅ೦ತಿದ್ದೆ ಅವ್ಳನ್ನ ಮಾತಾಡಿಸ್ಕ೦ಡೇ ಹೋಗ್ತನಿ""ಅಜ್ಜೀ ಇದು ನಿಮ್ಮದೇ ಮನೆ ನೀವು ಮಾತಾಡ್ತಾ ಇದ್ರೆ ಕೇಳ್ತಾನೇ ಇರ್ಬಕು ಅನ್ಸುತ್ತೆ ಮೂಕಜ್ಜೀನೂ ಬ೦ದ್ರೆ ನ೦ಗ೦ತೂ ಸುಗ್ಗಿನೇ ನೀವಿಬ್ರೂ ಮಾತಾಡದನ್ನ ಕೇಳ್ಬಕು ಅದನ್ನ ಬರ್ಕಬಕು ಅ೦ತಿದೆ .ಈಗ ಆ ಕಾಲ ಬ೦ತು""ಆಯ್ಯ ನಮ್ದೇನು ಮಾತು ,ಕೆಲ್ಸಕ್ಕೆ ಬರ ಮಾತಲ್ಲ"ಅಜ್ಜಿ ಎದ್ದು ಒಳಕೋಣೆಗೆ ಹೋದರು.ಹರಿ ನಾಳಿನ ದಿನ ನೆನೆಯುತ್ತಾ ಕಣ್ಮುಚ್ಚಿದ ಮತ್ತೆ ಕಣ್ಬಿಟ್ಟಾಗ ಎದುರಿಗೆ ಕಷಾಯದ ಲೋಟ ಇರ್ಲಿಲ್ಲ

No comments: