Monday, September 14, 2009

ನೋಟ (ಕ೦ಡದ್ದು ಕಾಣದ್ದು)

ಅರ್ಥವಾಗದ ಪದಗಳಲಿ
ನೂರಾರು ಭಾವ
ಚದುರಿಹೋದ ಗೆರೆಗಳಲಿ
ಸು೦ದರ ಚಿತ್ರ
ಕಲಸಿ ಹೋದ ಬಣ್ಣದೊಳಗೆ
ಚ೦ದನೆಯ ರೂಪ
ಗಡ್ಡೆಕಟ್ಟಿದ ಕನಸಿನೊಳಗೆ
ಚಿನ್ನದ ನೆನಪು
ಸವೆದ ಹಾದಿಗು೦ಟ
ಹೆಜ್ಜೆ ಗುರುತುಗಳು
ಮಣ್ಣಿನೊಳಗೆ ಹೂತಿಟ್ಟ
ಒಣ ಬೀಜಗಳು
ಒಣ ಕೊ೦ಬೆಯಿ೦ದ
ಹೊರಬ೦ದ ಚಿಗುರು
ಬಿಚ್ಚುಗತ್ತಿಯ ತುದಿಯಿ೦ದ
ಇಳಿಯುವ ಹಸಿನೆತ್ತರು
ಸುಟ್ಟ ಮುಖದೊಳಗೆ
ನಕ್ಕ ಕ೦ಗಳು
ಸತ್ತ ದೇಹದೆದುರಿಗೆ
ನೆನಪ ವಾಸನೆ
ಉದುರಿಬಿದ್ದ ಹೂವಿನೊಳಗೆ
ಗುಡಿಗಟ್ಟಿದ ಚೆಲುವು
ನಿಟ್ಟುಸಿರಿನ ಒಳಗೆ
ಗೆಲುವಿನ ಬೆವರು
ಇವೆಲ್ಲಾ ಬರಿ ಮಾತು
ಯಾರಿಗೂ ಬೇಡದ್ದು
ಕೊ೦ಚ ಕು೦ಚವ ಹಿಡಿ
ಉಳಿದದ್ದು ಕಿಡಿ ಕಿಡಿ
ಸತ್ತ ಸೂರ್ಯನ ಸುತ್ತ
ಕೆನ್ನೀರು,ಸೂರ್ಯನ
ಶವ ಸ೦ಸ್ಕಾರ ಸೋಜಿಗ
ಕೆ೦ಜ್ವಾಲೆಯಲಿ ಶವ ಧಗ ಧಗ
ಉರಿಯೆ ಅಯ್ಯೋ! ಎ೦ದಿತು ಜಗ
ಮಳೆ ನೀರು ಉಪ್ಪು ಉಪ್ಪು
ಕರಗಿತು ಕಣ್ಣ ಕಪ್ಪು
ಚಿತೆಯಿ೦ದ ಕೆ೦ಡದು೦ಡೆಯೊ೦ದು
ಮೈಮೇಲೆ ಬಿದ್ದ೦ತಾಗಿ
ಧಿಗ್ಗನೆದ್ದು ಕುಳಿತೆ
ಸೂರ್ಯ ಪೂರ್ವದಲಿ ಕೆ೦ಪಗೆ ನಗುತ್ತಿದ್ದ

No comments: