Thursday, October 8, 2009

ನೆನಪುಗಳೇ ಹೀಗೆ

ನೆನಪುಗಳೇ ಹೀಗೆ

ಹುಣಸೆ ಚಿಗುರಿನ ಹಾಗೆ

ಹುಳಿಯಾದರೂ ರುಚಿ

ಬಿಡಲಾದೀತೇ ಅಭಿರುಚಿ

ಎಳೆಯ ದಿನಗಳು

ಮಳೆಯ ಹನಿಗಳು

ಮಣ್ಣ ವಾಸನೆ

ಮರಳಿನರಮನೆ

ನೆನಪಾಯಿತೇ ಗೆಳತಿ



ನೆನಪುಗಳೇ ಹೀಗೆ

ಹುಣಸೆ ಹೂವಿನಹಾಗೆ

ಚಿಕ್ಕದಾದರೂ ಚೆ೦ದ

ಮರೆಯಾದೀತೇ ಕಣ್ಣಿ೦ದ

ನೋವು ನಲಿವುಗಳು

ಸೋಲು ಗೆಲುವುಗಳು

ಬಣ್ಣ ಭಾವನೆ

ಕಣ್ಣ ಸೂಚನೆ

ನೆನಪಾಯಿತೇ ಗೆಳತಿ



ನೆನಪುಗಳೇ ಹೀಗೆ

ಹುಣಸೆ ಕಾಯಿಯ ಹಾಗೆ

ಹುಳಿಯಾಗಿದ್ದರೂ ಕಾಯಿ

ಬೇಡವೆನ್ನುವುದೇ ಬಾಯಿ

ಬೆಳೆದ ಜೀವಗಳು

ಮಿಡಿವ ಮನಗಳು

ಜೀವದೋರಣ

ಪ್ರೇಮ ಹೂರಣ

ನೆನಪಾಯಿತೇ ಗೆಳತಿ



ನೆನಪುಗಳೇ ಹೀಗೆ

ಹುಣಸೆ ಮರದ ಹಾಗೆ

ಸಾಯುವ ಮು೦ಚೆಯೂ ಚೆನ್ನ

ಸತ್ತ ಮೇಲೂ ಚೆನ್ನ

ನನ್ನವಳ ಪ್ರೀತಿ

ಬದುಕುಳಿದ ರೀತಿ

ಸತ್ಯದ ನಿಜರೂಪ

ಆತ್ಮೀಯ ಭಾವ ರೂಪ

ನೆನಪಾಯಿತೇ ಗೆಳತಿ

No comments: