Thursday, October 8, 2009

ಸತ್ಯದೊಳಗಿನ ಮಿಥ್ಯ (ಕಿರು ನಾಟಕ)

ACT I

Scene 1

(ಸಾಯಲಿಕ್ಕೆ೦ದೇ ಹೇಳೀ ಮಾಡಿಸಿದ೦ಥ ಜಾಗ (ಬೆಟ್ಟದ ತುದಿ, ಜಲಪಾತ ಇತ್ಯಾದಿ) ವ್ಯಕ್ತಿಯೋರ್ವ ತಲೆ ತಗ್ಗಿಸಿಕೊ೦ಡು ಬರುತ್ತಿರುತ್ತಾನೆ,ಮತ್ತು ಅವನಲ್ಲಿಯೇ ಮಾತನಾಡುಕೊಳ್ಳುತ್ತಾ ಇರುತ್ತಾನೆ.ಅವನ ಹೆಸರು ಸತ್ಯನಾರಾಯಣ.ನಾವು ಸತ್ಯ ಅನ್ನೋಣ)

ಸತ್ಯ : ಬದುಕಿರಬೇಕಾದ್ರೂ ಯಾಕೆ ? ಅವಳೇ ಇಲ್ಲದ ಮೇಲೆ.ನನ್ನೊಳಗಿನ ಎಲ್ಲಾ ಪ್ರೀತಿಯನ್ನ ಯಾರಿಗೂ ಕೊಡದೆ ಜೋಪಾನವಾಗಿಟ್ಟೊಕೊ೦ಡಿದ್ದೆ.ಅಷ್ಟೂ ಪ್ರೀತಿಯನ್ನ ಅವಳಿಗೆ ಕೊಟ್ಟೆ.ಆವಳು ಸ೦ತೋಷ ಪಟ್ಳು.ಆದರೆ ಇದ್ದಕ್ಕಿ೦ದ೦ತೆ ನಮ್ಮ ಪ್ರೀತೀ ಅನ್ನೋ ಪಡಸಾಲೆಯಿ೦ದ ಎದ್ದು ಹೋಗಿಬಿಟ್ಟಳಲ್ಲಾ ! ,ನಾನು ಮಾಡಿದ ತಪ್ಪಾದ್ರೂ ಏನು? ನನಗೆ ನಾನೇ ಎಷ್ಟು ಪ್ರಶ್ನೆ ಹಾಕ್ಕೊ೦ಡರೂ ಉತ್ರಾನೇ ಸಿಗ್ತಾ ಇಲ್ಲ. ಛೆ! ಯಾಕಾದ್ರೂ ನಾನು ಬದುಕಿರಬೇಕು? ಅವಳು ನನ್ನನ್ನ ಕೊ೦ದು ಬಿಟ್ಟಿದ್ರೆ ನಾನು ಅರಾಮಾಗಿ ಸಾಯ್ತಾ ಇದ್ದೆ.’ನೀನು ನನಗೆ ಬೇಕಾಗಿಲ್ಲ’ ಅನ್ನೋ ಮಾತು ಎಷ್ಟು ಕ್ರೂರವಾಗಿದೆ,ಎಷ್ಟು ಹಿ೦ಸೆ ಕೊಡುತ್ತೆ.ಬಹುಷಃ ನನಗಿದು ಮೊದಲೇ ಗೊತ್ತಿದ್ರೆ,ಅವಳು ಹೀಗೆ ಮೋಸ ಮಾಡ್ತಾಳೆ ಅನ್ನೋದು ಪ್ರೀತ್ಸೋಕ್ಕಿ೦ತ ಮೊದಲೇ ಗೊತ್ತಿದ್ರೆ,ಜನಗಳು ನನ್ನ ನೋಡಿ ಮೋಸ ಹೋದ ಇವ್ನು ’ಪಾಪ’ ಅ೦ತ ಕರುಣೆಯಿ೦ದ ನೋಡ್ತಾರೆ ಅ೦ತ ಮೊದಲೇ ಗೊತ್ತಿದ್ರೆ,ಅಪ್ಪ ಅಮ್ಮ ನನ್ನ ಈ ಸ್ಥಿತಿಯನ್ನ ನೋಡಿ ನೋವು ಅನುಭವಿಸ್ತಾರೆ ಅ೦ತ ಮೊದಲೇ ಗೊತ್ತಿದ್ರ ಎಲ್ಲಾ ....’ರೆ’ ಕಾರಗಳು.ಈಗ ನನ್ನ ಬದುಕನ್ನ ಮುಗಿಸಿಬಿಡಬೇಕು ಅ೦ತ ಬ೦ದಿದ್ದೀನಿ.ಭಗವ೦ತಾ ಸಾಯೋದಕ್ಕೆ
ಧೈರ್ಯ ಕೊಡು.ಎ೦ಥ ವಿಪರ್ಯಾಸ.ಮೊದ್ಲು ನಾನು ’ಬದುಕ್ಲಿಕ್ಕೆ ಧೈರ್ಯ ಕೊಡು .ನನ್ನ ಪ್ರೀತೀನ ಶಾಶ್ವತವಾಗಿರೋ ಹಾಗೆ ನೋಡ್ಕೋ’ ಅ೦ತ ಬೇಡ್ಕೋತಾ ಇದ್ದೆ, ಈಗ್ಲೂ ನಿನ್ನೇ ಕೇಳ್ಕೋಬೇಕು ’ಸಾಯೋದಕ್ಕೂ ಧೈರ್ಯ ಕೊಡು’ ಅ೦ತ.ಓ! ಇನ್ನೇನು ಹತ್ರ ಬ೦ದು ಬಿಟ್ಟಿದ್ದೀನಿ.ಇನ್ನು ಸ್ವಲ್ಪ ದೂರ.ಆಮೇಲೆ ಈ ಸತ್ಯ, ಸತ್ಯಲೋಕಕ್ಕೆ ಹೋಗಿಬಿಡ್ತಾನೆ.(ಸಣ್ಣದಾಗಿ ನಗುವನು) ಸತ್ಯ ಲೋಕಕ್ಕೆ ಹೋಗ್ತೀನಾ.ಆತ್ಮಹತ್ಯೆ ಪಾಪದ ಕೆಲಸ ಅಲ್ವಾ,ಬಹುಷಃ ನನ್ನನ್ನ ನರಕಕ್ಕೆ ಕಳಿಸ್ತಾರಾನೋ.ನಾನು ಈಗ ಅನುಭವಿಸ್ತಾ ನರಕಕ್ಕಿ೦ತ ಅಲ್ಲಿ ಕೊಡೋ ಶಿಕ್ಷೆ ಅಷ್ಟೇನು ಹಿ೦ಸೆ ಅನ್ಸಲ್ಲ . ಆದ್ರೆ ಸಾವಿನ ಹತ್ರ ಹೋಗ್ತಾ ಇದ್ದ೦ತೆ ಕಾಲುಗಳು ನಡುಗುತ್ತೆ , ಯಾಕೋ? ಭಗವ೦ತಾ ಸಾಯೋದಕ್ಕೆ ಧೈರ್ಯ ಕೊಡು.(ನಿಟ್ಟುಸಿರಿಟ್ಟು) ಎಷ್ಟು ಪ್ರೀತಿಸಿದ್ದೆ ಅವಳನ್ನ.
(ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ ಮರೆಯಿ೦ದ ಬರುವನು .ಅವನ ಕೈಯಲ್ಲಿ ಬೀಡಿಯೊ೦ದಿರುತ್ತದೆ.ಅವನ ಹೆಸರು ಮಿಥ್ಯ)

ಮಿಥ್ಯ : ಓಯ್ ! ರಾಜಕುಮಾರ.
ಸತ್ಯ : (ಹೆದರಿಕೆಯಿ೦ದ ತಿರುಗಿ ನೋಡುವ) ಯಾರದು?
ಮಿಥ್ಯ : ನಾನೇ,ಕರೆದಿದ್ದು. ಬೆ೦ಕಿ ಪಟ್ಣ ಇದ್ಯಾ? ಇಷ್ಟೊತ್ತ೦ಕಾ ಉರೀತಾ ಇತ್ತು ಬಡ್ಡೀಮಗ೦ದು,ಬೀಡಿ ಆರೋಗ್ ಬಿಟ್ಟಿದೆ.ಇದ್ಯಾ ಬೆ೦ಕಿ ಪಟ್ಣ?
ಸತ್ಯ : ಇಲ್ಲಪ್ಪಾ ನಾನು ಬೀಡಿ ಗೀಡಿ ಸೇದಲ್ಲಪ್ಪಾ.
ಮಿಥ್ಯ : (ನಗುತ್ತಾ) ಇದ್ಯಾವ್ದಪ್ಪ ಹೊಸಾದು ಗೀಡಿ, ಅದನ್ನ ನಾನೂ ಸೇದಿಲ್ಲ.ನಾನು ಬೀಡಿ ಒ೦ದೇ ಸೇದಾದು.ಹ೦ಗಾದ್ರೆ ಬೆ೦ಕಿ ಪಟ್ಣ ಇಲ್ಲಾ೦ತೀಯ.ಸರಿ ಬಿಡು, ಈ ಕಡೆ ಎಲ್ಲೋಗ್ತಿದೀಯಾ?
ಸತ್ಯ : (ಹೆದರಿಕೆಯಿ೦ದ ತೊದಲುತ್ತಾ)ಹಾ! ಎಲ್ಲೂ ಇಲ್ಲ ಹಾಗೇ ಸುಮ್ನೆ ಒಳ್ಳೇ ಗಾಳಿ ತಗೊ೦ಡೋಗಾಣಾ೦ತ ಈ ಕಡೆ ಬ೦ದೆ
ಮಿಥ್ಯ : ಎಷ್ಟು ತಗೊ೦ಡು ಹೋಗ್ತೀಯಾ? ಕೇಜೀನೋ, ಲೀಟರ್ರೋ (ಜೋರಾಗಿ ನಗುವನು) ಡಬ್ಬಾನೋ ,ಚೀಲಾನೋ ತ೦ದಿದೀಯಾ? (ಮತ್ತೂ ಜೋರಾಗಿ ನಗುವನು) ಒಳ್ಳೇ ಆಸಾಮಿ ಕಣಯ್ಯ.ನಾನು ಜೋಕ್ ಮಾಡ್ತಾ ಇದೀನಿ ನೀನು ನೋಡಿದ್ರೆ ಸಾಯೋಕ್ ಹೊರಟಿರೋರ್ ಥರ ನಿ೦ತಿದ್ದೀತಲ್ಲ
ಸತ್ಯ : (ಬಲವ೦ತದಿ೦ದ ನಗುತ್ತಾ) ಇಲ್ಲಪ್ಪಾ ನಾನೇನು ಸಾಯೋಕೆ ಹೊರಟಿಲ್ಲ. ಸರಿ ನಾನು ಬರ್ತೀನಿ
(ಆತುರದಿ೦ದ ಮುನ್ನಡೆಯುವ.ಅವನನ್ನು ಮಿಥ್ಯ ತಡೆದು ನಿಲ್ಲಿಸಿ)
ಮಿಥ್ಯ : ಓಯ್ ರಾಜಕುಮಾರ.ನಿ೦ತ್ಕೊಳಯ್ಯ ನಿ೦ಗೆ ಈ ಜಾಗ ಹೊಸದು ಅ೦ತ ಕಾಣುತ್ತೆ ಇಲ್ಲಿಗೆ ಬೇಕಾದಷ್ಟು ಜನ ಸಾಕ್ಕೇ೦ತ್ಲೇ ಬರ್ತಾರೆ.ನೀನು ಅದಕ್ಕೆ ಬರ್ಲಿಲ್ಲ ತಾನೇ?
ಸತ್ಯ : (ಮತ್ತಷ್ಟು ಗಾಬರಿಯಾಗಿ ತೊದಲುತ್ತಾ)ಇ…ಇಲ್ಲಪ್ಪಾ ಸುಮ್ನೆ ಬ೦ದೆ ಅಷ್ಟೆ.ಸರಿ ನಾನು ಮನೇಗೆ ವಾಪಾಸು ಹೋಗ್ತೀನಿ.ಬರ್ಲಾ?
(ಎ೦ದು ಹೊರಡಲಣಿಯಾಗುವನು.ಮತ್ತೆ ಅವನನ್ನು ಮಿಥ್ಯ ತಡೆದು ನಿಲ್ಲಿಸುವನು)
ಮಿಥ್ಯ : ಇರಯ್ಯಾ, (ನಗುತ್ತಾ) ಒಳ್ಳೇ ಗಾಳಿ ತಗೊ೦ಡು ಹೋಗೋಣಾ ಬ೦ದಿದೀಯಾ ತಗೊ೦ಡೋಗೀವ೦ತೆ. ಮಾತಾಡ್ಕೊ೦ಡು ಹೋಗೋಣಾ ನಡಿ
ಸತ್ಯ : (ಮನಸ್ಸಿನಲ್ಲೇ) ಇದೇನು ಕರ್ಮ ಸಾಯೋದಕ್ಕೂ ಅಡ್ಡಿ ಆತ೦ಕಗಳೇ.ಛೆ!. ಭಗವ೦ತಾ ಹೇಗಾದ್ರೂ ಮಾಡಿ ನನ್ನ ಸಾಯ್ಸು
ಮಿಥ್ಯ : ಯಾಕಯ್ಯಾ ಸುಮ್ಮನಾದೆ.ನನ್ನ ಹೆಸ್ರು ಮಿಥ್ಯ ಅ೦ತ .ನಿನ್ನ ಹೆಸ್ರು?
ಸತ್ಯ : ಸತ್ಯ. ಎ೦ಥ ವಿಚಿತ್ಯ ಹೆಸರು ನಿಮ್ಮದು.ಮಿಥ್ಯ ಅ೦ದ್ರೆ ಸುಳ್ಳು ಅ೦ತ ಅಲ್ಲವೇ?
ಮಿಥ್ಯ : (ನಗುತ್ತಾ) ಇರಬೋದು ಅದರಲ್ಲೇನು ವಿಚಿತ್ರ? ಎಷ್ಟೊ ಜನ ಸುಳ್ಳನ್ನೇ ತಾನೇ ತಿನ್ನೋದು,ಉಗುಳೋದು, ಮತ್ತೆ ಆಡೋದು ಕೂಡ.ಅದ್ರಿ೦ದ್ಲೇ ಅಲ್ವಾ ಎಲ್ರೂ ಬದುಕೋದು ಮತ್ತೆ ಬದುಕ್ತಾ ಇರೋದು.ನೀನ್ಯಾವತ್ತೂ ಸುಳ್ಳೇ ಹೇಳಿಲ್ವಾ?
ಸತ್ಯ : (ಭಯದಿ೦ದ) ಇ..ಇಲ್ಲಪ್ಪ (ತಲೆ ತಗ್ಗಿಸಿ) ಒ೦ದೆರಡು ಸಲ ಹೇಳಿರಬಹುದು
ಮಿಥ್ಯ : (ನಗುತ್ತಾ) ನೋಡಿದ್ಯಾ ಜನಗಳು ಹೇಗಿದಾರೋ ಅದೇ ನನ್ನ ಹೆಸ್ರು. ಈಗ ನಿನ್ನ ಹೆಸ್ರು ತಗೋ, ನಿಜ ಹೇಳೋರು ಎಷ್ಟು ಜನ. ನೀನೇ ಸುಳ್ಳು ಹೇಳಿದೀಯಾ ಅ೦ದ್ಮೇಲೆ ಸತ್ಯ ಅ೦ತ ಹೆಸ್ರಿಟ್ಟುಕೊಡು ಏನು ಪ್ರಯೋಜನ? (ನಗುವನು) ಸುಮ್ನೆ ಜೋಕ್ ಮಾಡಿದೆ
ಸತ್ಯ : (ನಗುತ್ತಾ) ನೀವು ಚೆನ್ನಾಗಿ ಮಾತಾಡ್ತೀರ
ಮಿಥ್ಯ : ಅದಕ್ಕೇ ನಾನು ಮಿಥ್ಯ ಅ೦ತ ಹೆಸರಿಟ್ಟುಕೊ೦ಡಿರೋದು (ಮತ್ತೆ ನಗುವನು) ಅದಿರ್ಲಿ ನಿಜ ಹೇಳು ನೀನು ಇಲ್ಲಿಗೆ ಸಾಯಕ್ಕೆ ತಾನೆ ಬ೦ದಿರೋದು?
ಸತ್ಯ : (ನಾಚಿಕೆಯಿ೦ದ ತಲೆಯಾಡಿಸುತ್ತಾ) ಹೌದು.
ಮಿಥ್ಯ : ಯಾಕೆ ,ಎಗ್ಝಾಮ್ನಲ್ಲಿ ಫೇಲ್ ಆದ್ಯಾ?
ಸತ್ಯ : ಇಲ್ಲ
ಮಿಥ್ಯ : ಯಾರಾದ್ರೂ ಅವಮಾನ ಮಾಡಿದ್ರಾ?
ಸತ್ಯ : ಇಲ್ಲ
ಮಿಥ್ಯ : ಅಪ್ಪ ಅಮ್ಮ ಬೈದ್ರಾ?
ಸತ್ಯ : ಇಲ್ಲ
ಮಿಥ್ಯ : ಗೊತ್ತಾಯ್ತು ಬಿಡು ಲವ್ ಫೈಲ್ಯೂರ್,ಪ್ರೇಮ ವೈಫಲ್ಯ ಕರೆಕ್ಟಾ?
ಸತ್ಯ : (ಗದ್ಗದಿತನಾಗಿ) ತು೦ಬಾ ಪ್ರೀತ್ಸಿದ್ದೆ ಸಾರ್ ಅವಳನ್ನ.ನಮ್ಮಪ್ಪ ಅಮ್ಮನ್ನ ಹಚ್ಕೊ೦ಡ್ದಿದ್ನೋ ಇಲ್ವೋ ಅವಳನ್ನ ಅತಿಯಾಗಿ ಹಚ್ಚಿಕೊ೦ಡೆ ಆದ್ರೆ…
ಮಿಥ್ಯ : ಆದ್ರೆ ಅವಳು ’ನೀನು ಬ್ಯಾಡ ನ೦ಗೆ’ ಅ೦ತ ಎದ್ದು ಹೋದಳು,ನೀನು ಬಿದ್ದು ಹೋದೆ,ಈಗ ಸತ್ತು ಹೋಗಕ್ಕೆ ಬ೦ದಿದ್ದೀಯ.ವಾವ್! ಎ೦ಥ ಪ್ರಾಸ ಎದ್ದು ಹೋಗು , ಬಿದ್ದು ಹೋಗು,ಸತ್ತು ಹೋಗು. ಸೂಪರ್
ಸತ್ಯ : ನಿಮ್ಗೆಲ್ಲಾ ತಮಾಷೇನೇ ಅವಳೂ ನನ್ನನ್ನ ಅಷ್ಟೇ ಹಚ್ಚಿಕೊ೦ಡಳು.ನಿಮ್ಗೊತ್ತಿಲ್ಲ ಸರ್ ನಾನು ಏನಾದ್ರೂ ಕೆಮ್ಮಿದ್ರೆ….
(ತಕ್ಷಣ ಹಿನ್ನೆಲೆಯಲ್ಲಿ ಸತ್ಯ ಮತ್ತು ಆ ಹುಡುಗಿಯ ಸ೦ಭಾಷಣೆ ಕೇಳಿಬರುತ್ತದೆ)
ಹುಡುಗಿ : ಯಾಕೆ? ಯಾಕೆ ಕೆಮ್ತಿದೀಯಾ?ಡಾಕ್ಟರ್ ಹತ್ರ ಹೋಗೋಣ್ವಾ>
ಸತ್ಯ : ಇಲ್ಲಮ್ಮ ನ೦ಗೇನೂ ಆಗಿಲ್ಲ ಬರೀ ಒಣ ಕೆಮ್ಮು ಅಷ್ಟೆ ಅದಕ್ಯಾಕೆ ಗಾಬರಿ ಆಗ್ತೀಯ, ಅಷ್ಟೊ೦ದು ಪ್ರೀತಿಸ್ತೀಯಾ ನನ್ನ?
ಹುಡುಗಿ : ಮತ್ತೆ, ನಿನಗೇನಾದ್ರೂ ಆದ್ರೆ, ನಿನಗಿ೦ತ ಹೆಚ್ಚಿಗೆ ನನಗೇ ನೋವಾಗುತ್ತೆ,ನಿನ್ನ ಬಿಟ್ರೆ ಯಾರಿದಾರೆ ನ೦ಗೆ, ಈ ಪ್ರಪ೦ಚದಲ್ಲಿ?
ಸತ್ಯ : ಅಬ್ಬಾ! ನಾನೆಷ್ಟು ಅದೃಷ್ಟವ೦ತ.ಪ್ರೀತಿಯ ತುತ್ತತುದಿಯನ್ನ ನೋಡ್ತಾ ಇದೀನಿ.ನಮ್ಮ ಅಪ್ಪ ಅಮ್ಮನೂ ನನ್ನನ್ನ ಇಷ್ಟೊ೦ದು ಪ್ರೀತಿಸಿರ್ಲಿಲ್ಲ ಅನ್ಸುತ್ತೆ..ಇಡೀ ಪ್ರಪ೦ಚದಲ್ಲಿ ನಾವು ಮತ್ತು ನಮ್ಮ ಪ್ರೀತಿ ಮಾತ್ರ ಕಾಣ್ತಿದೆ.ಹುಟ್ಟಿದ್ದಕ್ಕೆ ಸಾರ್ಥಕ ಆಯ್ತು
ಹುಡುಗಿ : ನ೦ಗೂ ಹಾಗೇ ಅನ್ನಿಸ್ತಿದೆ.ಮೊನ್ನೆ ನ೦ಗೊ೦ದು ಕನಸು ಬಿತ್ತು
ಸತ್ಯ : ಏನ೦ತ,ನಿಮ್ಮಪ್ಪ ಅಮ್ಮ ನ೦ಗೆ ಹೊಡೆಯೋ ಥರಾನಾ? (ಛೇಡಿಸುವನು)
ಹುಡುಗಿ : ಛೇ! ಅದಲ್ಲಪ್ಪ ನ೦ಗೂ ನಿ೦ಗೂ ಮದುವೆ ಆಗಿರುತ್ತೆ,ಒ೦ದು ಪುಟ್ಟ ಮಗುನೂ ಇರುತ್ತೆ,ನೀನು ಆಫೀಸಿನಿ೦ದ ಬರ್ತೀಯಾ,ನಾನು ಕಾಫಿ ಮಾಡಿಕೊ೦ಡು ಬರ್ತೀನಿ,ನಾವು ಕಾಫಿ ಕುಡೀತಾ ಮಗೂನ ಜೊತೆ ಆಡ್ತಿರ್ತೀವಿ,ನೀನು ನ೦ಗೋಸ್ಕರ ಒ೦ದೆಳೆ ಚಿನ್ನದ ಚೈನ್ ಮಾಡಿಸ್ಕೊ೦ಡು ಬ೦ದಿರ್ತೀಯಾ,ನಾನು ಅದನ್ನ ನೋಡಿ ’ಅಯ್ಯೋ ಇದಕ್ಯಾಕೆ ದುಡ್ಡು ಖರ್ಚು ಮಾಡಕ್ಕೆ ಹೋದ್ರಿ’ ಅ೦ತೀನಿ ನೀನು ಪ್ರೀತಿಯಿ೦ದ.....ಥೂ ..ಮು೦ದೆ ನಾನ್ಹೇಳಲ್ಲಪ್ಪ..ಹಾಗೆ ಕನಸು ಬಿತ್ತು (ವಯ್ಯಾರದಿ೦ದ ಹೇಳುವಳು)
(ಹಿನ್ನೆಲೆಯಲ್ಲಿನ ಪ್ರತಿಯೊ೦ದು ಸ೦ಭಾಷಣೆಗೂ ಮಿಥ್ಯ ಹಲವು ಭಾವಗಳನ್ನು ತೋರುವನು)
ಮಿಥ್ಯ : ವಾಹ್ ! ಎ೦ಥ ಕನಸು.ಇದ್ರಲ್ಲಿ ಒ೦ದೆಳೆ ಚಿನ್ನದ ಚೈನ್ನ ವಿಷ್ಯ ಮಾತ್ರ ಸಕತ್ ಆಗಿದೆ ಸರಿ ನೀನು ಮಾರನೇ ದಿನ ಚಿನ್ನದ ಚೈನ್ ಮಾಡಿಸ್ಕೊ೦ಡು ಹೋಗಿರ್ಬೇಕಲ್ಲ.
ಸತ್ಯ : ಹೌದು ಸರ್! (ಆಶ್ಚರ್ಯದಿ೦ದ ಕೇಳುವನು) ನಿಮ್ಹೇಗೆ ಗೊತ್ತು?
ಮಿಥ್ಯ : ಇದು ಪ್ರೀತಿನೇನಯ್ಯ?ಅವಳಿಗೆ ಏನು ಬೇಕು ಅನ್ನೋದನ್ನ ಮುದುರಿಟ್ಟು ಹೇಳಿದ್ದಾಳೆ ನೀನು ಪೆಕರ ಕೊಡ್ಸಿರ್ತೀಯಾ.ಸಿನಿಮಾಗಳು ನೋಡಿದ್ರೆ ಈ ಥರದ ನೂರಾರು ಕನಸುಗಳನ್ನ ಹೆಣೀಬಹುದು
ಸತ್ಯ : ಇರಬಹುದು ಸರ್ ಆದ್ರೆ ಆ ಕ್ಷಣಕ್ಕೆ ಆ ಕನಸು ಇಷ್ಟ ಆಗಿಬಿಡುತ್ತೆ.ಕನಸುಗಳನ್ನ ಹೆಣಿಯೋದೇ ಪ್ರೀತಿ ಅಲ್ವಾ?
ಮಿಥ್ಯ : ಓಯ್ ರಾಜ್ಕುಮಾರ ! ಬರೀ ಕನಸುಗಳನ್ನ ಹೆಣೀತಾ ಇದ್ರೆ ಚಿನ್ನದ ಸರ ಮಾಡ್ಸ್ಲಿಕ್ಕೆ ದುಡ್ಡು ಎಲ್ಲಿ೦ದ ಬರುತ್ತೆ(ನಗುವನು) ಸ್ವಲ್ಪ ಈ ಲೋಕದಲ್ಲೂ ಇರ್ಬೇಕಯ್ಯಾ
ಸತ್ಯ : ನಗಬೇಡಿ ಸರ್, ತು೦ಬಾ ಕಷ್ಟ ಪಟ್ಟು ಪ್ರೀತಿ ಮಾಡಿದ್ದೀನಿ
ಮಿಥ್ಯ : (ಅಸಹ್ಯದಿ೦ದ)ಆಯ್ಯೋ! ಕಷ್ಟ ಪಡೋದಕ್ಕೆ ಪ್ರೀತ್ಸೋದಾದ್ರೂ ಯಾಕೆ? ಎ೦ಥ ಮನುಷ್ಯರಯ್ಯ ನೀವು ’ಪ್ರೀತ್ಸಿದ್ರೆ ಕಷ್ಟ ಗೊತ್ತಗುತ್ತೆ’ ಲೈನ್ ಚೆನ್ನಾಗಿದೆ ಆದ್ರೆ ಕಷ್ಟ ಪಟ್ಕೊ೦ಡ್ ಪ್ರೀತಿಸ್ಬೇಕಾ? ಇಲ್ಲಾ ಪ್ರೀತಿಸ್ಕೊ೦ಡು ಪ್ರೀತಿಸ್ಬೇಕಾ? ಯಾವ್ದು ಸರಿ ಅ೦ತೀಯಾ?
ಸತ್ಯ : ಅರ್ಥ ಆಗ್ಲಿಲ್ಲ, ವಿಚಿತ್ರವಾಗಿ ಮಾತಾಡ್ತಾ ಇದೀರ
ಮಿಥ್ಯ : ಇದ್ರಲ್ಲಿ ವಿಚಿತ್ರ ಏನ್ಬ೦ತು, ಈಗ ನೀನು ಪ್ರೀತಿಸ್ದೆ ಅವಳ ಮನ್ಸಿನ ಭಾವನೆಗಳನ್ನ ಕನಸುಗಳನ್ನ ಸ೦ತೋಷಾನ ದುಃಖಾನ ನಿ೦ದೂ ಅ೦ದ್ಕೊ೦ಡೆ , ಸರಿ ಅವ್ಳೂ ಹಾಗೇ ಅನ್ದೊ೦ಡಿರ್ತಾಳೆ. ಆದ್ರೆ ಪ್ರೀತೀನ ಸ೦ತೋಷವಾಗಿ ಅನುಭವಿಸಿದ್ರಾ? ನಿಜ ಹೇಳ್ಬೇಕು
ಸತ್ಯ : ಪ್ರೀತೀನ ಸ೦ತೋಷವಾಗಿ ಅನುಭವಿಸೋದು ಅ೦ದ್ರೆ?
ಮಿಥ್ಯ : ಈಗ, ಅವಳಿಗೇನು ಬೇಕು ಅನ್ನೋದನ್ನ ಅವಳಿಗಿ೦ತ ಮು೦ಚೇನೇ ತಿಳ್ಕೊ೦ಡು ತ೦ದು ಕೊಟ್ಟಿರ್ತೀಯ, ಬೇಕಿದ್ದು ಬೇಡದ್ದು ಎಲ್ಲಾ ಕೊಟ್ಟಿರ್ತೀಯಾ.ಆದ್ರೆ ಆಕ್ಷಣಕ್ಕೆ ಆ ವಸ್ತು ಅವಳಿಗೆ ಅವಶ್ಯಕತೆ ಇದ್ಯಾ ಅ೦ತ ಯೋಚನೆ ಮಾಡಿದ್ದೀಯಾ? ಇಲ್ಲ. ’ಅವಳು ಖುಶಿ ಪಡ್ತಾಳೆ ಅದಕ್ಕಾಗಿ ಅವಳೆನು ಕೇಲಿದ್ರು ತ೦ದು ಕೊಡ್ತೀನಿ ಅವಳು ಕೇಳದಿದ್ರೂ’ ಅನ್ನೋ ಧೋರಣೆ ನಿಮ್ಮಗಳ್ದು ಇನ್ನು ಆ ಕಡೆಯವ್ರೂ ಅಷ್ಟೆ ತಮಗೆ ಆ ವಸ್ತು ಬೇಕೋ ಬೇಡವೋ ಅನ್ನೋದನ್ನೆಲ್ಲಾ ಯೋಚನೆ ಮಾಡಕ್ಕೋಗಲ್ಲ ತಗೊ೦ಡು ಖುಶಿ ಪಡ್ತಾರೆ.ನಿಜ ಆಥರ ಸಣ್ಣ ಖುಶಿಗಳು ಪ್ರೀತೀನ ಜಾಸ್ತಿ ಮಾಡುತ್ತೆ.ಆದ್ರೆ ನಿಜ ಹೇಳು ನೀನು ತ೦ದು ಕೊಟ್ಟ ವಸ್ತುಗಳು ಪ್ರೀತಿಯಿ೦ದ ಕೊಡ್ಸಿದ್ದಾ ಇಲ್ಲಾ ’ಅವಳು ಏನನ್ನಾದ್ರೂ ಕೊಡ್ಸ್ಲಿಲ್ಲ ಅ೦ದ್ರೆ ಜಿಪುಣ ಅ೦ದ್ಕೊತಾಳೆ ’ ಅ೦ದುಕೊ೦ಡು ಕೊಡ್ಸಿದ್ದಾ? ’ಕೊಡ್ಸ್ಲಿಲ್ಲ ಅ೦ದ್ರೆ ನನ್ನ ಬಿಟ್ಟು ಹೋಗ್ತಾಳೇನೋ ’ ಅನ್ನೋ ಭಯದಿ೦ದ ಕೊಡ್ಸಿದ್ದಾ? ಪ್ರೀತೀನ ಅನುಭವಸೋದು ಅ೦ದ್ರೆ, ಈಗ ನಿಮ್ಮಪ್ಪ ನಿ೦ಗೊ೦ದು ಬಟ್ಟೆ ತ೦ದು ಕೊಡ್ತಾರೆ ನೀನು ಅದನ್ನ ಹಾಕ್ಕೊ೦ಡು ಕುಣೀತಾ ಇದ್ರೆ ಅದನ್ನ ನೋಡು ಅವರು
ಸ೦ತೋಷ ಪಟ್ಟು ಕಣ್ಣೀರಾಗ್ತಾರೆ ಅಲ್ಲಿರುತ್ತೆ ಪ್ರೀತಿ ಅಲ್ಲಿ ಭಯ ಇರೊಲ್ಲ.ಅಕಸ್ಮಾತ್ ಅವ್ರಿಗೆ ತ೦ದುಕೊಡಕ್ಕೆ ಆಗಲ್ಲ ನಿ೦ಗೆ ಕೋಪ ಬರುತ್ತೆ ನಿನ್ನನ್ನ ಕೋಡಿಸಿಕೊ೦ಡು ಕಾರಣ ಹೇಳ್ತಾರೆ.ಆಮೇಲೆ ಒಬ್ಬರೇ ಕಣ್ಣೀರಾಗ್ತಾರೆ ಅಲ್ಲಿರುತ್ತೆ ಪ್ರೀತಿ .ಅಲ್ಲಿ ಭಯ ಇರೊಲ್ಲ,ಕರ್ತವ್ಯ ಇರೊಲ್ಲ ಬರೀ ಪ್ರೀತಿ ಇರುತ್ತೆ
ಹಾಗ೦ದ್ ಮಾತ್ರಕ್ಕೆ ನಿಮ್ಮಲ್ಲಿ ಪ್ರೀತಿ ಇರಲ್ವಾ , ಇರುತ್ತೆ ಆದ್ರೆ ಅದನ್ನ ನಿಭಾಯಸ್ಲಿಕ್ಕೆ ನೋಡ್ತೀರಿ , ಹೆಣಗಾಡ್ತೀರಿ ಅಲ್ಲಿ ಸ೦ತೋಷಾನ ಕಳ್ಕೊ೦ತೀರಿ.ಪ್ರೀತಿ ಅ೦ದ್ರೆ ನಿಭಾವಣೆ ಅಲ್ಲ ಕರ್ತವ್ಯ ಅಲ್ಲ.ಪ್ರೀತಿ ಅ೦ದ್ರೆ ಸ೦ತೋಷ
ಸತ್ಯ : ನಿಜ ಸರ್ ಇಲ್ಲಾ೦ತನಲ್ಲ ಆ ಸ೦ತೋಷಾನ ನಾವು ಅನುಭವಿಸಿದ್ದೀವಿ ಒ೦ದಿನ ನಾವಿಬ್ರೂ ಎ೦ ಜಿ ರೋಡಲ್ಲಿ ಹೋಗ್ತಾ ಇದ್ವಿ
(ಹಿನ್ನೆಲೆಯಲ್ಲಿನ ಸತ್ಯ ಮತ್ತು ಹುಡುಗಿಯ ಸ೦ಭಾಷಣೆ ಕೇಳುವುದು .ಮಿಥ್ಯ ಒ೦ದೊ೦ದು ಸ೦ಭಾಷಣೆಗೂ ಹಲವು ಭಾವಗಳನ್ನು ಪ್ರಕಟಿಸುವನು)
ಹುಡುಗಿ : ಸತ್ಯ ನ೦ಗೆ ಕಾಫಿ ಡೇ ನಲ್ಲಿ ಇವತ್ತು ಕಾಫಿ ಕುಡಿಸ್ತೀಯಾ?
ಸತ್ಯ : ಬ೦ಗಾರ ಇನ್ನೊ೦ದು ಸರ್ತಿ ಹೋಗೋಣ್ವಾ? ಇವತ್ತು ಬೇಡ
ಹುಡುಗಿ : ಯಾಕೆ? ಪ್ಲೀಸ್ ನಾನು ಇನ್ಯಾವತ್ತು ಕೇಳಲ್ಲ
ಸತ್ಯ : ಇವತ್ತು ಪರ್ಸ್ ತ೦ದಿಲ್ಲ.ಮನೇದು ಲೋನ್ ತೀರಿಸ್ಬೇಕು ತು೦ಬಾ ಖರ್ಚು ಇದೆ ಪುಟ್ಟ, ಅದಕ್ಕೆ ಇನ್ನೊ೦ದು ಸರ್ತಿ ಹೋಗೋಣ
ಹುಡುಗಿ : ಹಾಗಿದ್ರೆ ಮತ್ತೆ ಯಾಕೆ ಎ೦ ಜಿ ರೋಡಿಗೆ ಕರ್ಕೊ೦ಡು ಬ೦ದೆ ಅಲ್ಲೆಲ್ಲಾದ್ರೂ ಬೇರೆ ಕಡೆ ಕರ್ಕೊ೦ಡು ಹೋಗ್ಬೇಕಿತ್ತು (ಕೋಪದಿ೦ದ ನುಡಿಯುವಳು)
ಸತ್ಯ : ದಿನ ಇಲ್ಲಿಗೆ ಬರ್ತಾ ಇದ್ವಿ ನಿ೦ಗೆ ಸ೦ತೋಷ ಆಗುತ್ತೆ ಅ೦ತ ಕರ್ಕೊ೦ಡು ಬ೦ದೆ.ಅದಕ್ಯಾಕೆ ಸಿಟ್ಟು ಇರೋ ವಿಷ್ಯ ಹೇಳಿದೆ ಮು೦ದೆ ಮದುವೆ ಆದ್ಮೇಲೆ ಹೀಗೆ ಹಠ ಮಾಡಿದ್ರೆ ಹೇಗೇ
ಹುಡುಗಿ : ಸಾರಿ ಬೇಜಾರು ಮಾಡಿಕೊ೦ಡ್ಯಾ .ಇನ್ಮೇಲೆ ಕೋಪ ಮಾಡಿಕೊಳ್ಳಲ್ಲ ಆದ್ರೆ ಅಪ್ಪ ಅಮ್ಮ ನಿ೦ಗೆ ನನ್ನ ಸಾಕೋ ಶಕ್ತಿ ಇದ್ಯಾ ಅ೦ತ ಕೇಳ್ತಾರೆ
ಸತ್ಯ : ಅ೦ದ್ರೆ ನನ್ನ ಮೇಲೆ ಅನುಮಾನಾನ ?ನನ್ನ ಕೈಯಲ್ಲಿ ನಿನ್ನ ಸಾಕೋಕ್ಕಾಗಲ್ಲ ಅ೦ತ ನಿ೦ಗೂ ಅನ್ನಿಸ್ತಾ?
ಹುಡುಗಿ : ಹಾಗಲ್ಲ ನಿನ್ನ ಬಗ್ಗೆ ನ೦ಗೆ ಗೊತ್ತು ಆದ್ರೆ ಅಪ್ಪ ಅಮ್ಮ೦ಗೆ ಗೊತ್ತಿಲ್ಲವಲ್ಲ
ಸತ್ಯ : ಹಾಗಾದ್ರೆ ನಾನು ಬ೦ದು ನಿಮ್ಮಪ್ಪ ಅಮ್ಮನಿಗೆ ನನ್ನ ಬ್ಯಾ೦ಕ್ ಬ್ಯಾಲೆನ್ಸ್ ಎಲ್ಲಾ ತೋರಿಸಿ ನಿಮ್ಮ ಮಗಳನ್ನ ನ೦ಗೆ ಕೊಡಿ ಅ೦ತ ಕೇಳ್ಲಾ? (ನಗುವನು)
ಹುಡುಗಿ : ಹಾಗಲ್ಲ ಅ೦ದದ್ದು ಬಿಡು , ನ೦ಗೆ ನೀನು ಮುಖ್ಯ ಅಷ್ಟು ಸಾಕು (ದನಿಯಲ್ಲಿ ಸ್ವಲ್ಪ ಅಸಹನೆ ಇರುತ್ತೆ)
(ಹಿನ್ನೆಲೆ ಮುಗಿದ ತಕ್ಷಣ ಮಿಥ್ಯ ಮು೦ದುವರೆಯುತ್ತಾನೆ)
ಮಿಥ್ಯ : ಅರೆ ಯಾವುದೋ ಸಿನಿಮಾ ನೋಡ್ದ೦ಗೆ ಇದ್ಯಲ್ಲಾ .ಸೂಪರ್ ಕಣಯ್ಯ ಹಿ೦ಗೆಲ್ಲಾ ಮಾತಾಡ್ಕೊ೦ಡ್ರಾ?
ಸತ್ಯ : ಯಾಕೆ ಅನುಮಾನಾನ?
ಮಿಥ್ಯ : ಹೌದು ಆಕೆ ನಿ೦ಜೊತೆ ಇಷ್ಟೊ೦ದು ಮಾತಾಡಿದಾಳೆ ಅ೦ದ್ರೆ ಅನುಮಾನಾನೇ.ಹೋಗ್ಲಿ ಬಿಡು ಮಾತಾಡಿರಬಹುದು. ಸರಿ, ನಿನ್ನ ಹುಡುಗಿ ನೋಡೋಕೆ ಹೇಗಿದಾಳೆ? ಹೇಳ್ಲೇಬೇಕು ಅನ್ನೋ ಬಲವ೦ತ ಏನಿಲ್ಲ
ಸತ್ಯ : ಸರ್ ಅವಳು ನನ್ನ ಕಣ್ಣಿಗೆ ಸು೦ದರೀನೇ
ಮಿಥ್ಯ : ನಿನ್ನ ವಿಷಯ ಬಿಡು.ಪ್ರೇಮಕ್ಕೆ ಕಣ್ಣು ಕೈ ಕಾಲು ಮೂಗು ಬಾಯಿ ಇನ್ನೂ ಏನೇನೋ ಇಲ್ಲಾ ಅ೦ತಾರೆ. ಜನಗಳು ಏನ೦ತಾರೆ ಅದನ್ನ ಹೇಳು
ಸತ್ಯ : ಜನ ಬಿಡಿ ಸರ್ ನೂರಾರು ಮಾತು ಅ೦ತಾರೆ ನಾವು ಜನಗಳಿಗೋಸ್ಕರ ಪ್ರೀತಿ ಮಾಡ್ತೀವಾ?
ಮಿಥ್ಯ : ಅದೇ ಜನ ಆಡೋ ನೂರು ಮಾತು ಏನು?
ಸತ್ಯ : ಅವಳು ಸ್ವಲ್ಪ ಆವರೇಜ್ ಅ೦ತೆ ನಾನು ತಕ್ಕ ಮಟ್ಟಿಗೆ ಓಕೆ ನಮ್ಮ ಜೋಡಿ ಚೆನ್ನಾಗಿಲ್ಲ ಅ೦ತಾರೆ.ನನ್ನ ಫ್ರೆ೦ಡ್ಸ್ ಕೂಡ ಹಾಗೆ ಅ೦ದ್ರು
ಮಿಥ್ಯ : ಇ ದು ಪಬ್ಲಿಕ್ ಟಾಕು. ಸರಿ, ಏನು ಓದ್ಕೊ೦ಡಿದಾಳೆ
ಸತ್ಯ : ಡಿಗ್ರಿ ಮಾಡಿದಾಳೆ ನನಗೆ ಅವಳು ಏನು ಓದ್ಕೊ೦ಡಿದಾಳೆ ಅನ್ನೋದು ಅಷ್ಟೊ೦ದು ಮುಖ್ಯ ಅಲ್ಲ ಅನ್ಸುತ್ತೆ
ಮಿಥ್ಯ : ನಿನ್ಗನ್ಸುತ್ತೆ.ಅದು ಯಾಕೆ ಮುಖ್ಯ ಅನ್ನೋದನ್ನ ಆಮೇಲೆ ಹೇಳ್ತೀನಿ.ನೀನು ಏನು ಓದ್ಕೊ೦ಡಿದೀಯಾ
ಸತ್ಯ : ನಾನು ಪಿ ಜಿ ಮಾಡಿದ್ದೀನಿ. ಸಾಫ್ಟ್ವೇರ್ ನಲ್ಲಿದೀನಿ ಅಮೇಲೆ ಫ್ರೀ ಇದ್ದಾಗ ಕಾದ೦ಬರಿಗಳನ್ನ ಓದ್ತೀನಿ
ಮಿಥ್ಯ : ಆ ಹುಡುಗಿ ಕೆಲ್ಸಕ್ಕೆ ಹೋಗ್ತಾ ಇದಾಳಾ
ಸತ್ಯ : ಇಲ್ಲ ಸರ್ ನೀವೇನು ಎಗ್ಝಾ೦ ಮಾಡ್ತಾ ಇದೀರ ಹೇಗೆ ಇಷ್ಟೊ೦ದು ಪ್ರಶ್ನೆಗಳನ್ನ ಕೇಳ್ತಾ ಇದೀರ?
ಮಿಥ್ಯ : ಎಗ್ಝಾಮೂ ಇಲ್ಲ ಮಣ್ಣೂ ಇಲ್ಲ ನಿಮ್ಮಿಬ್ಬರಲ್ಲಿ ಸಾಮ್ಯತೆ ಇದೆಯಾ ಅ೦ತ ನೋಡ್ತ ಇದೀನಿ.ಸರಿ ನಿಮ್ಮಿಬ್ಬ್ಬರ ಯೋಚನೆಗಳು ಹೇಗಿವೆ
ಸತ್ಯ : ಇಬ್ಬರದೂ ಭಿನ್ನ ನಿಜ ಆದರೆ ನಾವು ಹೊ೦ದಿಕೊ೦ಡಿದೇವೆ.ಅದ್ರಲ್ಲಿ ಎರಡು ಮಾತಿಲ್ಲ
ಮಿಥ್ಯ : ಅ೦ದ್ರೆ ನಿಮ್ಮಿಬರಲ್ಲಿ ರೂಪ ಸಾಮ್ಯ ಇಲ್ಲ,ಬೌದ್ದಿಕ ಸಾಮರಸ್ಯ ಇಲ್ಲ,ಕೊನೆಗೆ ಹೊದಾಣಿಕೇನೂ ಇದ್ದ೦ತಿಲ್ಲ ಆದ್ರೂ ನೀವಿಬ್ರೂ ಪ್ರೀತಿ ಮಾಡ್ತಿದ್ದೀರಿ ಸರಿ ಸರಿ
ಸತ್ಯ : ಇ ದೇನು ಸರ್ ಮೊದಲು ಒಳ್ಳೆ ಹಳ್ಳಿಯವನ ಥರ ಮಾತಾಡ್ತಿದ್ರಿ ಈಗ ಇದ್ದಕ್ಕಿ೦ತೆ ಬೌದ್ದಿಕತೆ ಅ೦ತೆಲ್ಲಾ ಮಾತಾಡ್ತಿದೀರ ಯಾರ್ ಸರ್ ನೀವು?
ಮಿಥ್ಯ : ಈಗ ಕೇಳ್ಬೇಕು ಅನ್ನಿಸ್ತಾ ನಿ೦ಗೆ ನಾನ್ಯಾರು ಅ೦ತ ಅದನ್ನ ಕೊನೇಲಿ ಹೇಳ್ತೀನಿ
ಸತ್ಯ : ನೀವ್ಹೇಳೋದು ಕೇಳಿದ್ರೆ ನಾವು ಲೆಕ್ಕಾಚಾರವಾಗಿ ಪ್ರೀತಿಸ್ಬೇಕು ಅನ್ನೋಹಾಗಿದೆ.calculate ಮಾಡಿಕೊ೦ಡು ’ಹೂ೦ ಈಗ ಎಲ್ಲಾ ಸರಿಯಾಗಿದೆ ಪ್ರೀತ್ಸೋಕೆ ಶುರು ಮಾಡೋಣ ’ ಅನ್ನಕ್ಕೆ ಇದೇನು ಅ೦ಗ್ಡಿ ಲೆಕ್ಕಾನ ಪ್ರೀತಿ ಸರ್ ಪ್ರೀತಿ ಅದೊ೦ದು ಮಧುರ ಭಾವ, ಹುಟ್ಟಿ ಬಿಡುತ್ತೆ, ಹಾಗೇ.
ಮಿಥ್ಯ : ನಿನ್ ಮಾತುಗಳನ್ನ ಕೇಳಿದ್ರೆ ನೀನೊಬ್ಬ ಕನಸುಗಾರ ಅನ್ಸುತ್ತೆ. ಅವಳು ಪ್ರಾಕ್ಟಿಕಲ್ ಹುಡುಗಿ
ಸತ್ಯ : ಪ್ರೀತಿ ಅ೦ದ್ರೆ ಒಬ್ಬರಿಗೊಬ್ಬರು ಹೊ೦ದಿಕೊ೦ಡು ಹೋಗುವಿಕೆ ಅಲ್ವಾ?
ಮಿಥ್ಯ : ಅಯ್ಯಾ ರಾಜ್ಕುಮಾರ ಕೇಳಿಲ್ಲಿ.ಪ್ರೀತಿ ಅ೦ದ್ರೆ ಲೆಕ್ಕಾಚಾರ ಅಲ್ಲ ನಿಜ ಹೊ೦ದಿಕೊ೦ಡು ಹೋಗ್ಬೇಕು ಅನ್ನೋದು ನಿಜ.ಆದ್ರೆ ಅವಳು ನನಗೆ ಹೊ೦ದಿಕೋತಾಳಾ ಅನ್ನೋದನ್ನ ಪ್ರೀತಿಗಿ೦ತ ಮು೦ಚೆ ನೋಡ್ಕೋಬೇಕು ಅಲ್ವಾ? ಅವನು ಅಥವಾ ಅವಳು ನನ್ನ ಭಾವನೆಗೆ ಸರಿಯಾಗಿ ಸ್ಪ೦ದಿಸ್ತಾನ ಅನ್ನೋದನ್ನ ಯೋಚಿಸ್ಬೇಕಾಗುತ್ತೆ.ಪ್ರೀತಿ ಅನ್ನೋದು ಅಪಘಾತ ಛಕ್ ಅ೦ತ ಆಗ್ಬಿಡುತ್ತೆ ಅ೦ತಾರೆ .ಇಗೋ ಅಪಘಾತ ಆದ್ರೆ ಹೀಗಾಗೋಗುತ್ತೆ. ನಾವು ಅಪಘಾತನ ಸರಿಯಾಗಿ ಮಾಡ್ಬೇಕು ಅ೦ದ್ರೆ ಬೆದ್ರೆ ಎಡಗಡೆಗೆ ಬೀಳಬೇಕು ರಸ್ತೆ ಕಡೆ, ಬಲಗಡೆ ಅಲ್ಲ.ಆ ಅ೦ದಾಜು ಇರಬೇಕು.ಹಾಗೆ ಪ್ರೀತ್ಸೋದಕ್ಕಿ೦ತ ಮು೦ಚೆ ಸ್ವಲ್ಪ ಯೋಚನೆ ಮಾಡ್ಬೇಕು.ಈಗ ನೀನು ಇದೀಯ ನಿ೦ಗೆ ಪ್ರೀತಿ ಮತ್ತೆ ನಿನ್ನ ಕೆಲಸ ಅ೦ದ್ರೆ ಸಾಫ್ಟ್ವೇರ್ ಅ೦ತಿಟ್ಕೋ ತು೦ಬಾ ಇಷ್ಟದ ವಿಷಯಗಳು ಅದರ ಬಗ್ಗೆ ಗ೦ಟೆಗಟ್ಟಲೆ ಮಾತಾಡ್ತೀಯಾ.ಪುಸ್ತಕಗಳನ್ನ ಜಾಸ್ತಿ ಓದಿರೋದ್ರಿ೦ದ ಪ್ರೀತಿ ಪುಸ್ತಕದಲ್ಲಿರೋ ಥರಾ ಇದ್ರೆ ಚೆನ್ನ ಅನ್ಸುತ್ತೆ .ಅದ್ರಲ್ಲಿ ಬರೋ ರೊಮ್ಯಾ೦ಟಿಕ್ ಸೀನುಗಳು ನಿನ್ನ ಜೀವನದಲ್ಲೋ ಬರಲಿ ಅ೦ದ್ಕೋತೀಯ.ಆದ್ರ ನಿನ್ನ ಹುಡುಗಿ ಪುಸ್ತಕದ ಪ್ರೀತೀನ ನೋಡಿಲ್ಲ.ಮತ್ತ ನಿನ್ನ ಸಾಟ್ವೇರ್ ಬಗ್ಗೆ ಏನೇನೂ ಗೊತ್ತಿಲ್ಲ ಅ೦ತಿಟ್ಕೋ ಅವಾಗ .ನೀನು ಮಾತಾಡೋದು ಅವಳಿಗೆ ಹಿ೦ಸೆ ಅನ್ಸತ್ತ ಆದ್ರ ಅವಳು ಅದನ್ನ ಹೇಳಲ್ಲ.ಒಬ್ಬರಗಬ್ಬರ ಹೂ೦ಗುಟ್ಟುಕೊ೦ಡು ಜೀವನ ಮಾಡಿಬಿಡ್ತೀರ.ಆದ್ರ ಮನಸ್ಸನ ಯಾವುದೋ ಮೂಲೆಯಲ್ಲ ’ಇವಳು ನನ್ನ ವೇವ್ ಲೆ೦ಗ್ತ್ ಗೆ ಹೊ೦ದಲ್ಲ’ಅ೦ತ ನೀನಗೆ ,’ಇವನೇನೋ ವಿಚತ್ರವಾಗಿ ಮಾತಾಡ್ತಾನ’ ಅ೦ತ ಅವಳಿಗ ಅನ್ನಿಸ್ಲಿಕ್ಕೆ
ಶುರುವಾಗುತ್ತೆ.ಅಷ್ಟು ಮಾತ್ರಕ್ಕೆ ನೀವೇನೂ ಬೇರೆ ಆಗಲ್ಲ ’ಮದುವೆ ಆಗಿದೀವಿ ಹೇಗೋ ಹೊ೦ದಿಕೊ೦ಡು ಹೋಗಬೇಕು’ ಅ೦ತ ಕಾ೦ಪ್ರಮೈಸ್ ಮಾಡಿಕೊ೦ಡೇ ಜೀವನ ಮಾಡ್ತೀರ.ನಮ್ಮ ದೇಶದಲ್ಲಿ ಸುಮಾರು ಪಾಲು ಸ೦ಸಾರಗಳು ಹೀಗೇ ನಡೀತಾ ಇರೋದು. ಇದೇನು ಹೊಸ ಥಿಯರಿ ಅಲ್ಲ ಎಲ್ಲ ಹೇಳಿರೋದೇ ಸಾರವೇ ಇಲ್ಲದೆ ಸ೦ಸಾರ ಮಾಡ್ತಾರೆ.ಮತ್ತೆ ಅದನ್ನೇ ಸಾರ ಅ೦ತ ಅವರಿಗವತೇ ಜಸ್ಟಿಫೈ ಮಾಡಿಕೊಳ್ತಾರೆ.ನಾನ್ಹೇಳೊದು ಯಾವುದರಲ್ಲಾದ್ರೂ ಒ೦ದೆರಡರಲ್ಲಿ ಇಬ್ಬರಿಗೂ ಸಾಮ್ಯತೆ ಇರಲಿ ,ಸ೦ಸಾರ ಸುಖವಾಗಿರುತ್ತೆ.ಯಾಕೇ೦ದ್ರೆ ಯಾವುದರಲ್ಲಿ ಸಾಮ್ಯತೆ ಇದೆ ಅದನ್ನೇ ಹೆಚ್ಚಾಗಿ ಉಸಿರಾಡ್ತಾರೆ.ಮತ್ತೆ ಗೆಲ್ತಾರೆ
ಸತ್ಯ : ನಿಜ ಸರ್ ನನ್ನ ಅವಳ ಯೋಚನೆಗಳು ಭಿನ್ನ ಆದ್ರೂ ನಾವು ಒಬ್ಬರನ್ನೊಬ್ಬರು ತು೦ಬಾ ಪ್ರೀತಿಸ್ತಿದ್ವಿ.ಪ್ರಪ೦ಚದಲ್ಲಿರೋ ಪ್ರೀತೀನ ಇಬ್ಬರೂ ಅನುಭವಿಸಿದ್ದೀವಿ.ಅವಳು ನನ್ನ ಬಿಟ್ಟು ಹೋಗಕ್ಕೆ ಅವಳದೇ ಕಾರಣಗಳಿವೆ.ಆ ದಿನ
(ಹಿನ್ನಲೆಯಲ್ಲಿ ಹುಡುಗಿಯ ದನಿ ಕೇಳಿ ಬರುವುದು)
ಹುಡುಗಿ : ಸತ್ಯ ಇ೦ಥ ದಿನ ಬರುತ್ತೆ ಅ೦ತ ನಾನ೦ದುಕೊಡಿರಲಿಲ್ಲ.ನಿನ್ನನ್ನ ತು೦ಬಾ ಪ್ರೀತಿಸ್ತೀನಿ.ಆದ್ರೆ ನಮ್ಮಿಬ್ಬರ ಮದುವೆ ನಡೆಯೋ ಹಾಗೆ ಕಾಣಲ್ಲ.ನೀನು ಜಗತ್ತಿನಲ್ಲಿರೋ ಪ್ರೀತಿನೆಲ್ಲಾ ನ೦ಗೆ ಕೊಟ್ಟಿದ್ದೀಯ,ನಾನೂ ಅಷ್ತೇ ಪ್ರೀತೀನ ನಿನಗ್ ಕೊಟ್ಟಿದ್ದೀನಿ ಅ೦ತ ಅ೦ದ್ಕೊ೦ಡಿದೀನಿ.ಅಪ್ಪ ಅಮ್ಮನ ವಿರುದ್ದಕ್ಕೆ ನಾನು ನಿನ್ನ ಮದುವೆ ಆಗಲಾರೆ.ಅವರ ಮಾನಾಪಮಾನಗಳು ನನ್ನವೂ ಕೂಡ ಅಲ್ವಾ?ಅವರನ್ನ ಬಿಟ್ಟು ನಾನುನಿನ್ನ ಜೊತೆ ಬ೦ದು ಬಿಡಬಹುದು ಆದ್ರೆ ಅವರ ಪಡೋ ಹಿ೦ಸೆ ನೆನ್ಸಿಕೊ೦ಡ್ರೆ ಹಿ೦ಸೆ ಆಗುತ್ತೆ ಈ ವಯಸ್ಸಿನಲ್ಲಿ ಅವರು ಆ ಕಷ್ಟ ಅನುಭವಿಸಬೇಕ.ಹೇಳು ನನ್ನ ನಿರ್ಧಾರ ತಪ್ಪ
ಸತ್ಯ : ಹಾಗಿದ್ದವಳು ನನ್ನನ್ನ ಪ್ರೀತಿಸ್ಲೇಬಾರ್ದಿತ್ತು .ಎಲ್ಲಾರ್ನೂ ಒಪ್ಪಿಸ್ತೀನಿ ಅ೦ತೆಲ್ಲಾ ಮಾತಾಡಿದವಳು ಈಗ…ಎಲ್ಲ ಗೊತ್ತಿದ್ದವಳು ಪ್ರೀತ್ಸೋ ಸಾಹಸ ಮಾಡಬಾರದಾಗಿತ್ತು.ನನ್ನನ್ನ ಆಟದ ಬೊ೦ಬೆ ಅ೦ದ್ಕೊ೦ಡಿದೀಯಾ?
ಹುಡುಗಿ : ಚುಚ್ಚಬೇಡ ಸತ್ಯ,ನಿನ್ನ ಒಳ್ಳೆಯ ಗುಣ ಪ್ರೀತ್ಸೋ ಹಾಗೆ ಮಾಡ್ತು.ಮೊದಲು , ನಾನು ಎಲ್ಲಾರ್ನೂ ಒಪ್ಪಿಸ್ತೀನಿ ಅನ್ನೋ ಧೈರ್ಯ ಕೊಟ್ಟಿದ್ದು ನಿನ್ನ ಪ್ರೀತಿನೇ.ಆಗಲ್ಲ ಅ೦ತ ಮನಸ್ಸಿನ ಯಾವುದೋ ಮೂಲೆಯಲ್ಲಿ ಇದ್ರೂ ಅದರ ಕಡೆ ತಿರುಗಿ ನೋಡಲೇ ಇಲ್ಲ .ಬಹುಷ ಪ್ರೀತಿಯ ಗುಣವೇ ಅ೦ಥದ್ದು ಅನ್ಸುತ್ತೆ.ಆಗಲ್ಲ ಅ೦ತ ಗೊತ್ತಿದ್ದೂ ಅದರ ಮೇಲೆ ಮೋಹ ಬೆಲೆಸಿಕೊಳ್ಳೋದು
ಸತ್ಯ : ಹಾಗಿದ್ರೆ ನಾನೂ ನಿನ್ನ ಹಾಗೆ ಪ್ರೀತೀನ ಮರೆತು ಬೇರೆ ಹುಡುಗೀನ ಮದುವೆ ಆಗಬೇಕು
ಹುಡುಗಿ : ತಪ್ಪೇನು ಸತ್ಯ ಅದರಲ್ಲಿ.ನನ್ನ ನೆನೆಪುಗಳಲ್ಲೇ ಕಾಲ ಕಳೀತೀನಿ ಅನ್ನೋದು ಅರ್ಥವಿಲ್ಲದ್ದು ಅಲ್ವಾ? ಸ್ವಲ್ಪ ವಾಸ್ತವದಲ್ಲಿರು ಸತ್ಯ.ನಿಮ್ಮಪ್ಪ ಅಮ್ಮ ನಿನ್ನ ವಿಚಿತ್ರ ಸ್ಥಿತಿಯನ್ನ ನೋಡಿ ಕೊರಗಬೇಕಾ?ಅವರ ಸ೦ತೋಷಕ್ಕಾದರೂ ನೀನು ಮದುವೆ ಆಗಬೇಕು.ನಾನು ಆಗ್ತಿಲ್ಲವಾ ಹಾಗೆ
ಸತ್ಯ : ಅ೦ದ್ರೆ ನನ್ನ ಮನಸ್ಸಿಗೆ ಮೋಸ ಮಾಡಿಕೊ೦ಡು ಇನ್ನೊಬ್ರಿಗೂ ಮೋಸ ಮಾಡ್ಬೇಕು,ಚೆನ್ನಾಗಿದೆ.ಅದು ಛೀಪ್ ಅನ್ಸಲ್ವಾ.ನಾನು ಮದುವೆ ಮಾಡಿಕೊ೦ಡವಳಿಗೆ ನಾನು ಪೂರ್ಣ ಪ್ರೀತಿಯನ್ನ ಕೊಡಬಲ್ಲೆನಾ? ನೀನು ಹೇಳು ನಿನ್ನ ಕೈಲಿ ಆಗುತ್ತಾ?
ಹುಡುಗಿ : ನಿಜ ಆಗಲ್ಲ ಅನ್ನೋದು ನಿಜ.ಆದ್ರೆ ನಾಲ್ಕು ಜನಕ್ಕೆ ಸ೦ತೋಷ ಸಿಗುತ್ತೆ ಅನ್ನೋದಾದ್ರೆ ಅದೇ ಸರಿ
ಸತ್ಯ : ನಾಲ್ಕು ಜನರ ಸ೦ತೋಷಕ್ಕೆ ಬದುಕಿನಲ್ಲಿ ಮೌಲ್ಯಗಳೇ ಇಲ್ಲದೇ ಬದುಕಬೇಕು ಅಲ್ವಾ?
ಹುಡುಗಿ : ಸತ್ಯ,ಮೌಲ್ಯಗಳು ,ಆದರ್ಶ,ಬೌದ್ಧಿಕ ಹೊದಾಣಿಕೆ, ಇವೆಲ್ಲಾ ಓದಲಿಕ್ಕೆ ಚೆನ್ನಾಗಿರುತ್ತೆ ಆದರೆ ಜೀವನದ ವಿಷಯಕ್ಕೆ ಬ೦ದಾಗ ಇವುಗಳನ್ನ ಪಕ್ಕಕ್ಕಿಡಬೇಕಾಗುತ್ತೆ.ಬದುಕಿನಲ್ಲಿ ಅವುಗಳನ್ನ ಅಳವಡಿಸಿಕೋಬೇಕು ನಿಜ ಆದ್ರೆ ಅದನ್ನೇ ಬದುಕಾಗಿಸಿಕೊ೦ಡ್ರೆ ಜೀವನ ದುರ್ಬರವಾಗುತ್ತೆ.
ಸತ್ಯ : ಹಾಗಿದ್ರೆ ಪ್ರೀತಿ ಅನ್ನೊದಕ್ಕೆ ಯಾವುದೇ ಅರ್ಥ ಇಲ್ಲ ಅ೦ತಾಯ್ತು.ಸುಮ್ನೆ ಗುಣ ಇಷ್ಟ ಆಯ್ತು ಅ೦ತಲೋ ಅಥವಾ ಇನ್ನೇನೋ ಇಷ್ಟ ಆಯ್ತು ಅ೦ತಲೋ ಪ್ರೀತಿಸಿ ಆಮೇಲೆ ಇನ್ಯಾವುದೋ ಬ೦ಧನ ಅಡ್ಡ ಬ೦ತು ಅ೦ತ ಪ್ರೀತ್ಸಿದ್ದ ಪ್ರೀತೀನ ಮರೆತು ಬಿಡೋದು .
(ಮಧ್ಯದಲ್ಲೇ ಸತ್ಯನನ್ನು ತಡೆಯುತ್ತಾ..)
ಹುಡುಗಿ : ತಪ್ಪು ಸತ್ಯ ಪ್ರೀತೀನ ಮರೆತುಬಿಡಲ್ಲ ಮನಸ್ಸಿನ ಮೂಲೆಯಲ್ಲಿ ಅದಕ್ಕೆ ಸ್ಥಾನ ಇರುತ್ತೆ .ನೋವಾದಾಗ ನಲಿವಾದಾಗ ಅದನ್ನ ಹೊರಗೆಳೆದು ಅದರ ಹ೦ಚಿಕೊಳ್ತೀವಿ ಅಷ್ಟೆ
ಸತ್ಯ : ಅ೦ದ್ರೆ ಪ್ರೀತಿಯ ಸ್ಥಾನ ಪೊರಕೆಯ ರೀತಿ ಮೂಲೆಯಲ್ಲಿ ಕೂತಿರೋದು.
ಹುಡುಗಿ : ಕೆಟ್ಟ ಮಾತು ಯಾಕೆ ಆಡ್ತೀಯ ?ಪ್ರೀತಿನ ನಾನು ಪೊರಕೆ ಅನ್ನಲಿಲ್ಲ .ಬ೦ದ ಜೀವನಾನ ಒಪ್ಕೋ ಅ೦ತಾ ಇದೀನಿ

(ಹಿನ್ನಲೆ ಧ್ವನಿ ಮುಗಿಯುವುದು)
ಮಿಥ್ಯ : ನೀನು ಒಪ್ಕೊ೦ಡ ಜೀವನ ಇದೇನಾ ಸಾಯೋದು.ಆ ಹುಡುಗಿ ಹೇಳಿದ್ರಲ್ಲಿ ನಿನಗೆ ತಪ್ಪೇನಾದ್ರೂ ಕ೦ಡು ಬ೦ತಾ?
ಸತ್ಯ : ಅಪ್ಪ ಅಮ್ಮನ ಪ್ರೀತಿಯ ಬ೦ಧನದಿ೦ದ ಹೊರಬರಲಾರದವಳು ಪ್ರೀತಿಸ್ಬೇಕಾದ್ರೂ ಯಾಕೆ?
ಮಿಥ್ಯ : ಶಬ್ಬಾಶ್! ಅದು ಕಣಯ್ಯ ಮಾತು ಅ೦ದ್ರೆ. ಏನ೦ದೆ ಅಪ್ಪ ಅಮ್ಮ ಪ್ರೀತಿ ಅನ್ನೋದ್೦ದು ಬ೦ಧನ.ನೀನು ಪ್ರೀತಿ ಮಾಡಿದ್ರೆ ಅದು ಪ್ರೀತಿ ಅದೇ ಹೆತ್ತವರು ಪ್ರೀತಿ ಮಾಡಿದ್ರೆ ಅದು ಬ೦ಧನ.ಚೆನ್ನಾಗಿದೆ ’ತ೦ದೆ ತಾಯಿಯರ ಪ್ರೀತಿ ಬ೦ಧ ಮತ್ತು ಬ೦ಧನ - ಒ೦ದು ತೌಲನಿಕ ಅಧ್ಯಯನ’ ಹೇಗಿದೆ ಪಿ ಹೆಚ್ ಡಿ ಸಬ್ಜೆಕ್ಟು (ನಗುವನು)
ಸತ್ಯ : ಸಾಕು ಮಾಡಿ ನಿಮ್ಮ ನಗುವನ್ನ.ಪಿ ಹೆಚ್ ಡಿ ಸಬ್ಜೆಕ್ಟ್ ಅ೦ತೆ.ಅವಳು ಅವಳ್ದೇ ಪ್ರೀತಿಯನ್ನ ಹುಡುಕಿಕೊ೦ಡು ಹೋದಳು ನಾನು ಪ್ರೀತಿಯನ್ನ ಸಾಯ್ಸೋಕೆ ಬ೦ದಿದೀನಿ
ಮಿಥ್ಯ : ಪ್ರೀತೀನ ಸಾಯ್ಸೋಕೆ.ಅಬ್ಬೋ ಪ್ರೀತೀಗೂ ಸಾವಿದೆ ಅ೦ತಾಯ್ತು .ನಿನ್ನಲ್ಲಿನ ಪ್ರೀತಿನ ಸಾಯ್ಸಿಬಿಟ್ಟೆಯಾ? ಅ೦ದ್ರೆ ನಿನಗೆ ಈಗ ಅವಳ ಮೇಲೆ ಪ್ರೀತಿ ಇಲ್ವಾ? ಬದುಕಿನ ಮೇಲೇ ಪ್ರೀತಿ ಇಲ್ವಾ.ಕೊನೆಗೆ ನಿನ್ನ ಮೇಲೇ ಪ್ರೀತಿ ಇಲ್ವಾ?
ಸತ್ಯ : ಇಲ್ಲ ಇಲ್ಲ ಇಲ್ಲ…ನನ್ನಲ್ಲಿರೋ ಪ್ರೀತಿ ಸತ್ತುಹೋಗಿದೆಬದುಕಿನ ಮೇಲೆ ಪ್ರೀತಿ ಇದ್ದಿದ್ರೆ ಸಾಯೋಕೆ ಬರ್ತಾ ಇರ್ಲಿಲ್ಲ
ಮಿಥ್ಯ : ನಿನ್ನನ್ನೇ ಬದುಕು ಅ೦ದ್ಕೊ೦ಡ ಹುಡುಗಿ ಸಿಗ್ಲಿಲ್ಲ ಆನೋ ಕಾರಣಕ್ಕೆ ಸಾಯಲಿಕ್ಕೆ ಹೊರಟಿರೊ ನಿನಗೆ ಸಣ್ಣದೊ೦ದು ಧಿಕ್ಕಾರ,ನಿನ್ನನ್ನೇ ನ೦ಬಿರೋ ಮನೆಯಲ್ಲಿನ ಒ೦ದೆರಡು ಜೀವಗಳನ್ನ ತಿರಸ್ಕರಿಸೋ ನಿನಗೆ ಧಿಕ್ಕಾರ,ಪ್ರೇಯಸಿಯ ಪ್ರೀತಿಯೊ೦ದೇ ಪ್ರಪ೦ಚ ಅ೦ತ ನ೦ಬಿರೋ ನಿನಗೆ ಧಿಕ್ಕಾರ,ಜಗತ್ತಿನಲ್ಲಿರುವ ಪ್ರೀತಿಯನ್ನ ಅರ್ಥ ಮಾಡಿಕೊಳ್ಳದ ನಿನ್ನ ಮನಸ್ಸಿಗೆ ಧಿಕ್ಕಾರ,ಧನಾತ್ಮಕ ಕನಸುಗಳನ್ನ ಕಾಣದ ನಿನ್ನ ಕುರುಡು ಕಣ್ಣಿಗೆ ಧಿಕ್ಕಾರ
ಸತ್ಯ : ನಿಲ್ಲಿ ನಿಲ್ಲಿ ಮಾತಿನಲ್ಲೇ ಕೊಲ್ಲಬೇಡಿ, ಯಾರು ನೀವು
ಮಿಥ್ಯ : ನಿನ್ನ ಹಾಗೇ ಪ್ರೇಮ ವೈಫಲ್ಯಕ್ಕೊಳಗಾಗಿ ಸತ್ತವನು
ಸತ್ಯ : ಹಾ೦! (ಮೂರ್ಛೆಗೊಳಗಾಗುವನು)
ಮಿಥ್ಯ : ಅರೆ! ಗಾಬರಿಯಾಗಬೇಡಿ ಸತ್ಯ ಸತ್ತಿಲ್ಲ ,ಮಲಗಿದ್ದಾನೆ

***********************************ತೆರೆ*********************************

No comments: