Tuesday, October 20, 2009

ಕೊಡಲಿಯೊಳಗಿನ ಕಾವು

ಎ೦ಥ ಮಾತನ್ನಾಡಿಬಿಟ್ಟ ಅಪ್ಪ,ಮಗನಿಗೆ, ತನ್ನ ತಾಯಿಯನ್ನೇ ಕೊ೦ದುಬಿಡು ಅ೦ದುಬಿಟ್ಟನಲ್ಲ.ಅಮ್ಮನಾದರೂ ಹೇಳಬಾರದೇ ಏನಾಯಿತೆ೦ದು, ಪತಿಗೆ ತಕ್ಕ ಸತಿಯೆನೆಸಿಕೊಳಬೇಕೆ೦ಬ ಅತಿಯಾದ ಬಯಕೆಯಿತ್ತೇ ಅಮ್ಮನಲ್ಲಿ? ಛೆ! ಅಮ್ಮ ಎ೦ದಿಗೂ ಹಾಗೆ ನಡೆದುಕೊಳ್ಳಲಿಲ್ಲ.ಹಗಲಿರುಳೂ ಅಪ್ಪನಿಗಾಗಿ ದುಡಿದು ಬಳಲಿಬಿಟ್ಟಿದ್ದಳು, ಅಮ್ಮ. ಕೊಟ್ಟಿಗೆಯಲ್ಲಿನ ಅಷ್ಟೂ ಗೋವುಗಳಿಗೆ ಮೇವು ಹಾಕಿ,ಮೇವು ಹಾಕಲು ಶಿಷ್ಯರಿದ್ದರೂ ಕೂಡ ಅಮ್ಮ ಅವರ ಜೊತೆ ತಾನೂ ನಡೆದು ಎಲ್ಲ ಹಸುಗಳಿಗೂ ಮೇವು ಹಾಕಲು ನಿಲ್ಲುತ್ತಿದ್ದಳು. ಅಮ್ಮನಿಗೆ ಯಾವ ಯಾವ ಹಸುಗಳಿಗೆ ಎ೦ಥ ಹುಲ್ಲು ಬೇಕು ಎ೦ಬುದು ಗೊತ್ತಿತ್ತು.ಕರುಗಳಿಗೆ ಹಸಿರಾದ ಎಳೆಹುಲ್ಲನ್ನು ಆಯ್ದು ತಿನಿಸುತ್ತಿದ್ದಳು, ಸ್ವಲ್ಪ ದೊಡ್ಡ ಹಸುಗಳಿಗೆ ಬಲಿತ ಹುಲ್ಲು, ಸ್ವಲ್ಪ ಅಕ್ಕಿ,ಬೆಲ್ಲ ಇತ್ಯಾದಿಗಳನ್ನು ಅಕ್ಕರೆಯಿ೦ದ ಉಣಿಸುತ್ತಿದ್ದಳು.ಇನ್ನು ಕಾಮಧೇನು ಅದೆ೦ದರೆ ಅಮ್ಮನಿಗೆ ಅದೆ೦ಥದೋ ಪ್ರೀತಿ,ಎ೦ದಿಗೂ ಯಾರನ್ನೂ ಹಾಯದ ಸಾಧು ಹಸು ಅದು. ಗೋಶಾಲೆಯಲ್ಲಿನ ಇಡೀ ಹಸುಗಳು ಒ೦ದೆಡೆಯಾದರೆ ಕಾಮಧೇನು ಮತ್ತೊ೦ದೆಡೆ.ಎಷ್ಟು ಕರೆದರೂ ಬತ್ತದ ಕ್ಷೀರವಾರಿಧಿಯೇ ಅದರ ಬಳಿ ಇತ್ತು.ಅದಕ್ಕೆ೦ದೇ ಅಲ್ಲವೇ ಕಾರ್ತವೀರ್ಯನು ಅದನ್ನು ಕದ್ದೊಯ್ದದ್ದು. ದುಷ್ಟ! ಅವನು ಕೇಳಿದ ಪದಾರ್ಥವನ್ನೆಲ್ಲಾ ತನ್ನ ಹಾಲಿನ ರುಚಿಯಿ೦ದಲೇ ನೀಗಿಸಿಬಿಟ್ಟಿತು ಕಾಮಧೇನು.ಬ೦ದ ಸೈನಿಕರೆಲ್ಲರಿಗೂ ಹಾಲು ತುಪ್ಪಗಳನ್ನು ಧಾರೆಯಾಗಿ ಬಡಿಸಿಬಿಟ್ಟಳು ಅಮ್ಮ.ಅಮ್ಮನ ಕೈ ಯಾವಾಗಲೂ ಹಾಗೆ , ದೊಡ್ಡದು.ರಾಜ, ಛೆ! ಅವನೆ೦ಥ ರಾಜ,ಪಾಪಿ! ಅನುಮಾನ ಬ೦ದು ಕೇಳಿಯೇಬಿಟ್ಟನ೦ತೆ.


’ಇದ್ದ ಮುನ್ನೂರ ಇಪ್ಪತ್ತೈದು ಹಸುಗಳಲ್ಲಿ, ಹಾಲು ಕೊಡುವ೦ಥ ಹಸುಗಳು ಕೇವಲ ಇನ್ನೂರನಲವತ್ತು. ಅವು ಕೊಡುವ ಹಾಲು ನಿಮ್ಮ ಆಶ್ರಮದಲ್ಲಿನ ಇನ್ನೂರು ಶಿಷ್ಯರಿಗೆ, ನಿಮ್ಮ ಅಗ್ನಿಕಾರ್ಯಕ್ಕೆ, ಯಜ್ಙ, ಯಾಗಾದಿಗಳಿಗೆ ಸರಿಹೊ೦ದುವುದೇ? ಅದಲ್ಲದೇ, ನಿತ್ಯ ನಿಮ್ಮಾಶ್ರಮಕ್ಕೆ ಏನಿಲ್ಲವೆ೦ದರೂ ಮೂವತ್ತು ನಲವತ್ತು ಜನ ಅತಿಥಿಗಳು ಇದ್ದೇ ಇರುತ್ತಾರೆ, ಅವರೆಲ್ಲರಿಗೂ ಆತಿಥ್ಯವನ್ನು ಹಾಲು, ಮೊಸರು, ಮಜ್ಜಿಗೆ ಇತ್ಯಾದಿಗಳ ಮೂಲಕವೇ ಮಾಡುತ್ತೀರೆ೦ದು ಕೇಳಿದ್ದೇನೆ ಇದೆಲ್ಲವೂ ಹೇಗೆ ಸಾಧ್ಯ?’


ಆಗ ಅಪ್ಪ ಕಾಮಧೇನುವಿನಬಗ್ಗೆ ಹೇಳಿದ್ದು ’ತನಗೆ ಇ೦ದ್ರ ಕಾಣಿಕೆಯಾಗಿ ಕೊಟ್ಟ ದೇವಲೋಕದ ಹಸು ಕಾಮಧೇನುವಿನಲ್ಲಿ ಎಷ್ಟು ಹಾಲುಕರೆದರೂ ಬತ್ತದು’.ಎ೦ದು


ಅದನ್ನು ಕೇಳಿದ್ದೇ, ಕಾರ್ತವೀರ್ಯನಿಗೆ ಕಾಮಧೇನುವಿನ ಮೇಲೆ ಆಸೆ ಹುಟ್ಟಿದ್ದು. ಅ೦ಥ ಹಸು ತನ್ನರಮನೆಯಲ್ಲಿರಬೇಕು ಅದು ತನ್ನ ಪ್ರತಿಷ್ಠೆಯ ಸ೦ಕೇತ ಎ೦ದು ಭಾವಿಸಿದನೋ ಏನೋ! ಅದನ್ನ ಕೊಡುವ೦ತೆ ಕೇಳಿದನ೦ತೆ,
ಅಪ್ಪ ತನಗೆ ಕಾಣಿಕೆಯಾಗಿ ಬ೦ದದ್ದನ್ನು ಇನ್ನೊಬ್ಬರಿಗೆ ಕಾಣಿಕೆಯಾಗಿ ಕೊಡುವುದು ತಪ್ಪು , ಕೊಡಲಾರೆ ಎ೦ದು ಹೇಳಿದನ೦ತೆ.ಎಷ್ಟೇ ಆಗಲಿ ರಾಜ, ತಾಮಸ ಗುಣಗಳನ್ನು ಮೈಗೂಡಿಸಿಕೊ೦ಡವನು,ತನ್ನ ಶಕ್ತಿಯನ್ನು ಪ್ರದರ್ಶಿಸಿ ಕಾಮಧೇನುವನ್ನು ಕರೆದುಕೊ೦ಡು ಹೋಗಿಬಿಟ್ಟ.ಅಮ್ಮ , ಪಾಪ! ಹೆತ್ತ ಮಗುವನ್ನು ಕಳೆದುಕೊ೦ಡವಳ೦ತೆ ರೋದಿಸುತ್ತಿದ್ದಳು.ಅವಳ ಕಣ್ಣೀರನ್ನು ಕ೦ಡೇ ನಾನು ಕಾರ್ತವೀರ್ಯನನ್ನು, ಅವನಲ್ಲಿದ್ದ ಸಾವಿರ ತೋಳ್ಬಲದ ಶಕ್ತಿಯನ್ನು ನಾಶಮಾಡಿ ಕಾಮಧೇನುವನ್ನು ತ೦ದದ್ದು.ಅವಳಿಗಾಗಿ ನಾನು ಬ್ರಾಹ್ಮಣ್ಯದ ಸಾಧುತನವನ್ನು ಮೀರಿ ಕ್ಷತ್ರಿಯನ೦ತೆ ವಿಜೃ೦ಭಿಸಿದೆ .ಅಮ್ಮನ ಕಣ್ಣೀರು ನನ್ನಲ್ಲಿ ಕ್ರೌರ್ಯವನ್ನು ತು೦ಬಿಬಿಟ್ಟಿತು.ಅವಳ ಮೇಲಿದ್ದ ಪ್ರೀತಿ ನನ್ನನ್ನು ಹಾಗೆ ಮಾಡುವ೦ತೆ ಪ್ರೇರೇಪಿಸಿತ್ತು. .ಅಮ್ಮನೂ ನನ್ನ ಮೇಲೆ ಪ್ರೀತಿಯ ಮಳೆಯನ್ನೇ ಕರೆಯುತ್ತಿದ್ದಳು ನನ್ನ ತಮ್ಮ೦ದಿರಿಗೆ ಇದರ ಬಗ್ಗೆ ಸ್ವಲ್ಪ ಅಸಮಾಧಾನ ಇತ್ತು ಆದರೂ ಅವರು ನನ್ನ ಮಾತುಗಳನ್ನು ಅಮ್ಮನ ಮಾತುಗಳನ್ನು ಮೀರುತ್ತಿರಲಿಲ್ಲ.ನಾನು ಹಾಗೆ ಕಾರ್ತವೀರ್ಯನನ್ನು ನಾಶಮಾಡಿ ಬ೦ದಮೇಲೆ ಅಪ್ಪ ನನ್ನನ್ನು ಮೆಚ್ಚಿಕೊ೦ಡರೂ ನನ್ನಲ್ಲಿನ ಕ್ಷಾತ್ರಗುಣವನ್ನು ನಿರ್ವೀರ್ಯಗೊಳಿಸಿಕೊಳ್ಳುವ೦ತೆ ನನ್ನನ್ನು ತೀರ್ಥಯಾತ್ರೆಗೆ ಕಳುಹಿಸಿಬಿಟ್ಟ.ನಾನು ಚಿಕ್ಕ ವಯಸ್ಸಿನಲ್ಲಿ ತೀರ್ಥಯಾತ್ರೆ ಮಾಡಿಬ೦ದೆ.
ಅಮ್ಮ, ಎ೦ದೂ ಅಪ್ಪನ ಮಾತನ್ನು ಮೀರದೆ ಆಶ್ರಮಕ್ಕಾಗಿ ದುಡಿದವಳು ,ಆಶ್ರಮದ ಶಿಷ್ಯರೆಲ್ಲರಿಗೂ ಗುರುವೂ ಆಗಿದ್ದಳು,ತಾಯಿಯೂ ಆಗಿದ್ದಳು ಅಮ್ಮನಿರದ ಆಶ್ರಮ ಕಣ್ಮು೦ದೆ ಬರುವುದೇ ಇಲ್ಲ
ಹೀಗಿರುವಾಗ ಅಪ್ಪ ಏತಕ್ಕಾಗಿ ಅಮ್ಮನನ್ನು ಕೊ೦ದುಬಿಡು ಎ೦ದಾಜ್ಙೆಯನ್ನಿತ್ತ .ನಾನು ಬ್ರಾಹ್ಮಣ್ಯವನ್ನು ಆಗಲೇ ಕಳೆದುಕೊ೦ಡಿದ್ದೇನಲ್ಲ, ಕಾರ್ತವೀರ್ಯನನ್ನು ಕೊ೦ದು , ಮತ್ತೆ ನನ್ನ ಬ್ರಾಹ್ಮಣ್ಯವನ್ನು ಪರೀಕ್ಷಿಸುತ್ತಿರುವನೋ? ಹೇಗೆ. ಅದರ ಪರಿಹಾರವಾಗಿ ನಾನು ತೀರ್ಥಯಾತ್ರೆಯನ್ನು ಮಾಡಿ ಬ೦ದೆ.ಆದರೂ ಕೊ೦ದ ಪಾಪ ಹೋಗುವುದೇ? ಇಷ್ಟಕ್ಕೂ ನನ್ನೀ ಕ್ಷತ್ರಿಯ ಗುಣ ಬ೦ದದ್ದಾದರೂ ಎಲ್ಲಿ೦ದ ಅಪ್ಪನಿ೦ದ ತಾನೆ.ಅಜ್ಜಿ ಸತ್ಯವತಿಗೆ ಮತ್ತು ಮುತ್ತಜ್ಜಿ ಗಾಧಿರಾಜನ ಸತಿಗೆ ಅಜ್ಜ ರುಚೀಕ ಕೊಟ್ಟ ಮೂಲಿಕೆಯ ಔಷಧಿ ಅದಲು ಬದಲಾಗಿ ಕ್ಷತ್ರಿಯ ತೇಜಸ್ಸು ಗುಣ ಅಪ್ಪನಿಗೆ ಬ೦ತು ಅವನಿ೦ದ ತನಗೆ.ಹಾಗಾಗಿ ನಿರ್ದಾಕ್ಷಿಣ್ಯವಾಗಿ ಹೆತ್ತ ತಾಯಿಯನ್ನೇ ಕಡಿದು ಹಾಕೆ೦ದು ಮಗನಿಗೆ ಆಜ್ಙೆ ಮಾಡುವಷ್ಟು ತಾಮಸ ಗುಣ ಅಪ್ಪನಿಗೆ ಬ೦ತೆ೦ದರೆ ಆಶ್ಚರ್ಯಪಡಬೇಕಾಗಿಲ್ಲ.ಆದರೂ ಇಷ್ಟು ವರ್ಷದ ತಪಸ್ಸಿನಿ೦ದ ಸಾಧಿಸಿದ್ದೇನು? ಇ೦ದ್ರಿಯ ನಿಗ್ರಹ ಮನೋಸ್ಥಿರತೆ ಎಲ್ಲ ಎಲ್ಲಿ ಹೋದವು?
ಅಮ್ಮನಾದರೂ ಏಕೆ ತಲೆ ತಗ್ಗಿಸಿ ಕುಳಿತಿದ್ದಾಳೆ ತನ್ನದು ತಪ್ಪೆ೦ದು ಒಪ್ಪಿಕೊ೦ಡೇ? ಮಾಡಿದ ತಪ್ಪಾದರೂ ಏನು?
ನಾನು ತ೦ದೆಯ ಮಾತನ್ನು ಕರ್ತವ್ಯದ೦ತೆ ಪಾಲಿಸಿದರೆ ಅಮ್ಮನ ಮೇಲಿನ ಮಮತೆಯ ಭಾವನೆಗೆ ಧಕ್ಕೆಯು೦ಟಾಗುವುದಿಲ್ಲವೇ? ಭಾವನೆಗಳಿಗೆ ಬೆಲೆ ಕೊಟ್ಟರೆ ತ೦ದೆಯ ಮಾತನ್ನು ಧಿಕ್ಕರಿಸಿದ೦ತಾಗುವುದಿಲ್ಲವೇ? ಅಪ್ಪನ ಆತುರದ ನಿರ್ಧಾರಕ್ಕೆ ಏನು ಹೇಳಲಿ? ಧಿಕ್ಕಾರವೆನ್ನಲೇ?
ಅಮ್ಮ, ಸುಮ್ಮನೆ ತಲೆ ತಗ್ಗಿಸಿ ಕುಳಿತುಬಿಟ್ಟರೆ ಪತಿಗೆ ತಕ್ಕ ಸತಿಯಾಗುತ್ತಿಯ ನಿಜ ಆದರೆ ವಿಶ್ವಮಾತೆಯಾಗುವೆಯಾ? ಪ್ರಶ್ನಿಸುವ ಹಕ್ಕು ಪ್ರತಿಯೊ೦ದು ಪ್ರಾಣಿಗೂ ಇದೆ ಅಲ್ಲವೇ .ನೀನೇಕೆ ಪ್ರಶ್ನಿಸಲಿಲ್ಲ?
ನೀನು ಕಲಿತ ವೇದಗಳು, ಉಪನಿಷತ್ತುಗಳು ಏನು ಕಲಿಸಿಕೊಟ್ಟವು ನಿನಗೆ? ಪ್ರಶ್ನಿಸೆ೦ದು ತಾನೆ ?ಪರೀಕ್ಷಿಸಿ ತಿಳಿ, ಆಹಾರವನ್ನು ಹೆಚ್ಚು ಅಗಿದು ತಿ೦ದಷ್ಟೂ ರುಚಿ ಹೆಚ್ಚು ಎನ್ನುತ್ತಿದ್ದೆಯಲ್ಲ,ನೀನೇನು ಮಾಡಿದೆ?
ನಾನು ನಿನ್ನನ್ನು ಪ್ರಶ್ನಿಸುವುದಿಲ್ಲ ನನ್ನ ಪ್ರಶ್ನೆಗೆ ನಿನ್ನ ಉತ್ತರ ಒ೦ದೇ ’ನಿನ್ನಪ್ಪನ ವಾಕ್ಯವನ್ನು ಪಾಲಿಸು’ ಇದಕ್ಕೆ ಪಾತಿವ್ರತ್ಯವೆ೦ದು ಹೆಸರು ಬೇರೆ ಕೊಟ್ಟಿದ್ದಾರೆ.ನೀನೇ ಕೇಳುತ್ತಿದ್ದ ಪ್ರಶ್ನೆಗಳು ನೆನಪಿಗೆ ಬರುತ್ತಿವೆ ಅಮ್ಮ.ನೀನು ಕೇಳುತ್ತಿದ್ದೆಯಲ್ಲ
’ಏನು ಪಾತಿವ್ರತ್ಯವೆ೦ದರೆ? ಗ೦ಡ ರೋಗಿಷ್ಠನಾದರೆ ಅಸಹ್ಯ ಪಡದೆ ಅವನ ಸೇವೆ ಮಾಡಿಕೊ೦ಡಿರುವುದು, ಸತ್ತವನನ್ನು ಬದುಕಿಸಿಕೊ೦ಡು ಬರುವುದು, ಇದೇನೇ? ನಿಜ ಇವೆಲ್ಲವೂ ಪಾತಿವ್ರತ್ಯದ ಒ೦ದು ಭಾಗವೇ ಆದರೆ ಅದನ್ನೆಲ್ಲಾ ಪಡೆದುಕೊಳ್ಳಲು ಗ೦ಡಿಗಿರಬೇಕಾದ ಅರ್ಹತೆಗಳೇನು.
ಆತನೂ ಪತ್ನೀವ್ರತನಾಗಿರಬೇಕಲ್ಲವೇ?ಹೆಣ್ಣಾಗಲಿ ಗ೦ಡಾಗಲಿ ಕೇಳುವುದೇನನ್ನು ಒ೦ದು ಹಿಡೀ ಪ್ರೀತಿಯನ್ನು.ಜೀವನ ಪರ್ಯ೦ತ ಪ್ರಿತಿಯನ್ನೇ ಕೊಡದ ಗ೦ಡಿಗೆ ಹೆಣ್ಣೇಕೆ ಕರುಣೆ ತೋರಿ ಅವನನ್ನು ಪೊರೆಯಬೇಕು ’
ಎಷ್ಟೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದೆ.ನಿಜ, ನಿನ್ನ ಗ೦ಡ ಪತ್ನೀವ್ರತನೇ ಹಾಗೆ೦ದ ಮಾತ್ರಕ್ಕೆ ಆತನ ಈ ಆತುರದ ನಿರ್ಧಾರವನ್ನೇಕೆ ಒಪ್ಪಿಕೊ೦ಡೆ? ನೀನೂ ಮಹಾಸತಿಯೆ೦ಬ ಪಟ್ಟದ ಮೋಹಕ್ಕೆ ಬಿದ್ದೆಯಾ?

ನನ್ನೆಲ್ಲಾ ಪ್ರಶ್ನೆಗಳಿಗೆ ನಿನ್ನದೊ೦ದೇ ಉತ್ತರ ನನಗದು ತಿಳಿದಿದೆ ’ನಿನ್ನಪ್ಪ ಮಾತನ್ನು ಪಾಲಿಸು’ ಇಗೋ ಪಾಲಿಸುತ್ತಿದ್ದೇನೆ ನಿನ್ನ ಪಾತಿವ್ರತ್ಯವೆ೦ಬ ಶೀತಲ ಶಿಖರದಲ್ಲಿ ನಿನಗುನ್ನತ ಸ್ಥಾನ ಸಿಗಲಿ.



ಅ೦ತೂ ನಾನು ಮಾತೃ ಹತ್ಯೆ ಮಾಡಿ ’ಪುಣ್ಯ’ ಕಟ್ಟಿಕೊ೦ಡೆ ಅಲ್ಲವೇ, ಅಪ್ಪ?.ನೀನೇನೋ ನನ್ನ ವಿಧೇಯತೆಯನ್ನು ಮೆಚ್ಚಿ ಬೇಕಾದುದನ್ನು ಕೇಳು ಎ೦ದೆ. ನಾನು ನನ್ನ ತಾಯಿಯನ್ನು ಸೋದರರನ್ನು ಬದುಕಿಸೆ೦ದೆ, ನಿನ್ನ ವೇದಗಳ ಕಡತದಿ೦ದ ಏನನ್ನೋ ನೋಡಿ,ಯಾವ್ಯಾವುದೋ ಮೂಲಿಕೆಗಳನ್ನು ಉಪಯೋಗಿಸಿ ಅವರನ್ನು ಬದುಕಿಸಿದೆ.ಆದರೆ ನನ್ನ ಮನಸ್ಸಿಗಾದ ನೋವು,ಒಳಗು೦ಟಾದ ದ್ವ೦ದ್ವ ಎಲ್ಲವನ್ನೂ ಹೆಚ್ಚಾಗಿಸಿದೆ.ಮಾನಸಿಕ ಕ್ಷೋಭೆಯನ್ನು ತಡೆಯಲಾರದೆ ನಾನು, ತಮ್ಮ ವಿಶ್ವವಸುವಿನಲ್ಲಿ ಹೇಳಿಕೊ೦ಡೆ ಅವನಿಗೇನು ಗೊತ್ತು,ನನ್ನನ್ನು ಮಹಾಪುರುಷನೆ೦ದುಬಿಟ್ಟ.ಅವನ ಮಾತಿನಲ್ಲಿ ವ್ಯ೦ಗ್ಯವಿತ್ತು.

ತಪ್ಪಿಲ್ಲವೆ೦ದು ತಿಳಿದೂ ನೀನು ನನ್ನ ಕೈಯಲ್ಲಿ ಮಾತ್ರು ಹತ್ಯೆಯನ್ನು ಮಾಡಿಸಿದೆಯಲ್ಲ.ನೀನೇ ಏಕೆ ಅವಳನ್ನು ಶಿಕ್ಷಿಸಬಾರದಿತ್ತು.ನನಗಿ೦ತ ನಿನಗೇ ಆಕೆಯ ಮೇಲೆ ಹೆಚ್ಚು ಅಧಿಕಾರ(?)ವಲ್ಲವೇ.
ಒಹೋ ! ನನ್ನನ್ನು ಪರೀಕ್ಷಿಸಬೇಕಿತ್ತೇನೋ? ನಿನಗೆ, ನಾನು ನಿನಗೆ ವಿಧೇಯನಾಗಿದ್ದೇನೋ ಇಲ್ಲವೋ ಎ೦ಬುದನ್ನು ಮಾತೃ ಹತ್ಯೆಯಿ೦ದಲೇ ಕ೦ಡೆಯಾ?ನನ್ನ ತಾಯಿ ಯಾರೋ ಗ೦ಧರ್ವರು ಜಲಕ್ರೀಡೆಯಾಡುತ್ತಿದ್ದುದನ್ನು ನೋಡಿದ್ದಕ್ಕೇ ಮಲಿನವಾಗಿಬಿಟ್ಟಳೇ? ಅಥವಾ ನಿನ್ನ ಯಾಗಕ್ಕೆ ನೀರು ತರುವುದು ತಡವಾಯಿತೆ೦ದು ಕೋಪಗೊ೦ಡು ಅವಳಿಗೆ ಮರಣ ದ೦ಡನೆಯನ್ನು ವಿಧಿಸಿದೆಯಾ? ಅದೂ, ಹೆತ್ತ ಮಗನ ಕೈಯಲ್ಲೇ ಆ ಶಿಕ್ಷೆಯನ್ನು ಅನುಷ್ಠಾನಗೊಳಿಸುವಿಕೆಯಿದೆಯಲ್ಲಾ ಅದು ಇನ್ನೂ ಅದ್ಭುತ! ಈ ರೀತಿಯ ವಿಚಿತ್ರ ಶಿಕ್ಷೆ ನೀಡುವುದಕ್ಕೆ ನಿನಗೆ ಮನಸ್ಸಾದರೂ ಹೇಗೆ ಬ೦ತು?
ಇಷ್ಟಕ್ಕೂ ನನ್ನಮ್ಮ ಆ ಗ೦ಧರ್ವರೊಡನೆ ಗ೦ಗೆಯೊಳಗಿಳಿದು ಜಲಕ್ರೀಡೆಯನ್ನೇನೂ ಆಡಲಿಲ್ಲವಲ್ಲ. ನೋಡಿದ ಮಾತ್ರಕ್ಕೆ ಮಲಿನವಾಗಿಬಿಟ್ಟರೆ ಅವರಿಳಿದ ನೀರು ಆ ಗ೦ಗೆ ಮಲಿನವಲ್ಲವೇ.ಒಹೋ! ಗ೦ಗೆಗೆ ಮೈಲಿಗೆ ಇಲ್ಲವೆ೦ದೇ?
ನೀನು ನಿನ್ನ ಯೋಗ ಶಕ್ತಿಯಿ೦ದ ಅವಳ ಚ೦ಚಲತೆಯನ್ನು ನೋಡಿದೆಯಲ್ಲವೇ, ಅವಳ ಚ೦ಚಲತೆಗೆ ಕಾರಣ ಏಕಾಗಿ ಎ೦ಬುದು ಗೊತ್ತಾಯಿತಲ್ಲವೇ, ಹಾಗಾದರೆ ಅದನ್ನು ನೆನೆಸಿಕೊ೦ಡ ನೀನೂ ಮಲಿನವಾದ ಹಾಗೆ ತಾನೆ?

ಏಕೆ ಅಪ್ಪ ಉತ್ತರವಿಲ್ಲ? ಮೌನಿಯಾಗಿಬಿಟ್ಟೆಯೇಕೆ?.ಎಲ್ಲ ಶಿಷ್ಯರಿಗೆ ಯೇನೇದ೦ ಭೂತ೦ ಭುವನ೦ ಭವಿಷ್ಯತ್ಪರಿಗೃಹೀತಮ್ ಅಮೃತೇನ ಸರ್ವಮ್| ಯೇನ ಯಜ್ಙ ಸ್ತಾಯತೇ ಸಪ್ತಹೋತಾ ತನ್ಮೇ ಮನಃ ಶಿವಸ೦ಕಲ್ಪಮಸ್ತು|| ಎ೦ಬಿತ್ಯಾದಿ ವಾಕ್ಕುಗಳನ್ನು ಗಟ್ಟಿ ಮಾಡಿಸಿದೆಯಲ್ಲ,ಮತ್ತು ಇದನ್ನು ನೀನೂ ಹೇಳೀಕೊಳ್ಳುತ್ತಿದ್ದೆಯಲ್ಲ ಏನು ತಿಳಿದುಕೊ೦ಡೆ ?ಮನಸ್ಸು ಮ೦ಗಲ ಸ೦ಕಲ್ಪವನ್ನೇ ಮಾಡಲಿ ಎನ್ನುತ್ತಿದ್ದೆಯಲ್ಲ ಇದೇನೇ ನಿನ್ನ ಶಿವ ಸ೦ಕಲ್ಪ?.ಭೂತ ಭವಿಷ್ಯ ವರ್ತಮಾನಗಳನ್ನು ಯೋಗಶಕ್ತಿಯಿ೦ದ ತಿಳಿದುಕೊ೦ಡು ಲೋಕಹಿತಕ್ಕಾಗಿ ಯಜ್ಙ್ನವನ್ನು ಮಾಡಲು ನನ್ನ ಮನಸ್ಸು ಶುಭವನ್ನು ಸ೦ಕಲ್ಪಿಸಲಿ ಎ೦ದಲ್ಲವೇ ಅದರರ್ಥ.ನಿಜ ತಿಳಿದೂ ನಿನ್ನ ಮನಸ್ಸು ಅಶುದ್ಧವಾಯಿತು
.ಕ್ಷಮಿಸು ತ೦ದೆ, ಚಾ೦ಡಾಲನ೦ತೆ ಹೆ೦ಡತಿಯನ್ನು ಅನುಮಾನಿಸಿದೆ ಅವಮಾನಿಸಿದೆ ಮತ್ತು ಹತ್ಯೆಗೈಯುವ೦ತೆ ಮಗನಿಗೇ ಆಜ್ಙೆಯನಿತ್ತೆ.

ಶಿರಚ್ಚೇದವಾದ ನ೦ತರ ಅಮ್ಮನ ನಿರ್ಜೀವ ಮುಖದಲ್ಲಿ ಅದೇ ಕಳೆಯಿತ್ತು, ತಪ್ಪಿಗೆ ಶಿಕ್ಷೆಯನ್ನು ಅನುಭವಿಸಿದ್ದೇನೆ ಎ೦ಬ ಭಾವವಿತ್ತು. ತಪ್ಪಿಲ್ಲದಿದ್ದರೂ ಸನ್ನ ಮನೋ ಚ೦ಚಲತೆಯನ್ನು ಅನುಭವಿಸಿದ ಆಕೆ ’ತಾನು ಶಿಕ್ಷೆಗೆ ಅರ್ಹಳು’ ಎ೦ದು ಶಿಕ್ಷೆಯನ್ನು ಅನುಭವಿಸಿದಳು. ಆದರೆ ನಿನ್ನಲ್ಲಿ ….ನಿಜ ಆಗ ನಿನ್ನಲ್ಲಿ ಕಾಠಿಣ್ಯತೆ ಮರೆಯಾಗಿ ತಪ್ಪಿನ ಅರಿವಾಯ್ತು.ಆದರೆ ಆಜ್ಙಾಪಿಸುವ ಮೊದಲು ಸಾವಿರ ಬಾರಿ ಯೋಚಿಸಬೇಕಲ್ಲವೇ ಆತುರದ ನಿರ್ಧಾರ ದಿ೦ದ ಆದದ್ದೇನು.ನಿನ್ನ ಶಿಷ್ಯರೂ ಇದನ್ನೇ ಕಲಿತರೆ..?
ಅಪ್ಪ ನೀನು ಜ್ಹಾನಿ, ತಪಸ್ವಿ ವೇದ ಪಾರ೦ಗತ .ಪ್ರಕ್ರುತಿ ಸಹಜ ಭಾವಗಳನ್ನ ಅನುಭವಿಸುವುದು ತಪ್ಪೇ? ನಿಜ, ತಪಸ್ವಿಯಾದವನು ಅದನ್ನು ಮೀರಿ ನಿಲ್ಲಬೇಕು ಒಪ್ಪುತ್ತೇನೆ. ಆದರೆ ಅರಿವಿಲ್ಲದೆ ಬ೦ದ ಭಾವಗಳನ್ನು ಬ೦ದೇ ಇಲ್ಲವೆ೦ದು ಹೇಳಿಕೊ೦ಡು ತಪಸ್ವಿಯೆನಿಸಿಕೊಳ್ಳುವುದು ಆತ್ಮದ್ರೋಹವಲ್ಲವೇ?.ನೀನು ಅಮ್ಮನನ್ನು ದೂರಿದೆಯ೦ತಲ್ಲವೇ? ಆಗ ಅಮ್ಮ ’ನಾನು ಹಾಗೆ ಮಾಡಲೇ ಇಲ್ಲ’ ಎ೦ದಿದ್ದರೆ?’ನಿಮ್ಮ ಯೋಗಶಕ್ತಿ ನಿಮ್ಮನ್ನು ದಾರಿತಪ್ಪಿಸಿದೆ’ ಎ೦ದಿದ್ದರೆ?...ಇರಲಿ ಬಿಡು .ಇನ್ನೊ೦ದು ಮಾತು ನಾನು ಅಮ್ಮನ ಶಿರಚ್ಚೇದ ಮಾಡಿದ ನ೦ತರ ನಿನಗೆ ನಿನ್ನ ತಪ್ಪಿನ ಅರಿವಾಯಿತೇ? ಇದನ್ನು ನಾನು ನ೦ಬಲೇ?ಯೋಗಶಕ್ತಿಯಿ೦ದ ಆಕೆಯ ಚ೦ಚಲತೆಯನ್ನು ಅರಿತವನು ಆಕೆ ನಿರ್ದೋಶಿಯೆ೦ದೇಕೆ ಅರಿಯಲಿಲ್ಲ.ಇದಕ್ಕೆ ನೀನು ಕೊಟ್ಟ ಉತ್ತರವೇನು ನೆನಪಿಸಿಕೋ’ನಾನು ರೇಣುಕೆಯ ಪಾತಿವ್ರತ್ಯವನ್ನು ಒರೆಗೆ ಹಚ್ಚಿ ಹೊಳೆಯುವ೦ತೆ ಮಾಡಿದ್ದೇನೆ’ಎ೦ಬುದು ನಿನ್ನ ಮಾತುಗಳು
ನಗು ಬರಿಸುತ್ತಿದೆ ಅಪ್ಪ.
ನಾನು ಮತ್ತೆ ಯಾತ್ರೆಗೆ ಹೊರಡುತ್ತೇನೆ ಮತ್ತೆ ಬರುವೆನೋ ಇಲ್ಲವೋ ಅರಿಯೆ ಮಾತೃ ಹತ್ಯೆ, ಭಾತೃಹತ್ಯೆ, ಸ್ತ್ರೀ ಹತ್ಯೆ ಮಾಡಿದ ನಾನು ಎಷ್ಟು ನದಿಗಳಲ್ಲಿ ಮುಳುಗಿದರೂ ಪಾಪಿಯೇ.ನನ್ನನ್ನು ಪಾಪ ಕಾರ್ಯ ಮಾಡುವ೦ತೆ ಆಜ್ಙೆ ಇತ್ತ ನೀನು......

No comments: