Wednesday, October 28, 2009

ನೀನು ತೊರೆದು ಹೋದ ದಿನವೇ ನಾನು ಬರಡಾಗುತ್ತಿದ್ದೆ

’ಮರೆತು’ಹೋದವಳೇ


ಎದೆಯಾಳದ ನೆನಪುಗಳ ಮರೆಯುವೆಯಾ ಗೆಳತಿ

ಒಣಮರದ ಮೇಲೆ ನಿ೦ತ ಹಸಿರೆಲೆಯಲ್ಲವೇ ಅದು

ಹೌದು ಗೆಳತಿ ನನಗೀಗಿರುವುದೊ೦ದೇ ಹಸಿರೆಲೆ.ಅದನ್ನೇ ಮತ್ತೆ ಮತ್ತೆ ನೋಡಿ ಕಣ್ತು೦ಬಿಕೊಳ್ಳುತ್ತಾ ಇದ್ದೇನೆ.ಪೂರ್ತಿ ಒಣಮರವಾಗಿಬಿಟ್ಟಿದ್ದೇನೆ. ಇತ್ತ ಸಾಯಲೂ ಆಗದೆ, ಅತ್ತ ಮತ್ತೆ ಚಿಗುರಲೂ ಆಗದೆ ಒದ್ದಾಡುತ್ತಿದ್ದೇನೆ.ನನ್ನಲ್ಲಿನೆಲ್ಲಾ ಪ್ರೀತಿಯನ್ನು ಹೀರಿಕೊ೦ಡು ನೀನು ಬೆಳೆದೆಯಲ್ಲವೇ? ನನಗೂ ನೀನು, ನಿನ್ನ ಪ್ರೀತಿಯಮೃತವನ್ನು ಎರೆದು ಪೋಷಿಸುತ್ತಿರುವೆ ಅ೦ದುಕೊ೦ಡಿದ್ದೆ,ಆದರೆ ಅದು ಅಮೃತವೋ ವಿಷವೋ ತಿಳಿಯದೆ ಈಗ ಕ೦ಗಾಲಾಗಿದ್ದೇನೆ.ಅನಾಮತ್ತು ನನ್ನ ಪ್ರೀತಿಯ ಬೇರುಗಳಿಗೆ ಕೊಡಲಿಯೇಟು ಹಾಕಿ ಹೋಗಿಬಿಟ್ಟಯಲ್ಲ ಹುಡುಗಿ,.ಬೆಳೆಯಲಿ ಹೇಗೆ, ನಾನು? ಬೇರಿಲ್ಲದ ಮರ ಉಳಿವುದೇನು?.ನಿನ್ನೊಡನೆ ಕೈಹಿಡಿದು ನಡೆದಾಗಲೆಲ್ಲಾ ನಾನೇ ಹೆದರಿಕೆಯಿ೦ದ ಹಿ೦ದೆ ಸರಿಯುತ್ತಿದ್ದೆ."ಹರಿ ಪ್ಲೀಸ್ ಕೈ ಹಿಡ್ಕೋ ಐ ಫೀಲ್ ಸೆಕ್ಯೂರ್ಡ್" ಅನ್ನುತ್ತಿದ್ದವಳು ಈಗ ಕೈ ಕೊಡವಿ ಹೋದೆಯಲ್ಲ. ಅದೇ ಗುಲ್ಮೊಹರ್ ಮರದಡಿಯಲ್ಲಿ ನಡೆಯುವಾಗ,ಏಕಾ೦ಗಿ ನನ್ನನ್ನು ನೋಡಿ ಆ ಮರಗಳೂ ಕಣ್ಣೀರಾಗಿ ಬಿಸಿಯುಸಿರು ಬಿಡುತ್ತಿವೆ.ನಿನಗೆ ಉಸಿರು ತಾಕದು ಬಿಡು ಗೆಳತಿ.ನೀನು ಆ ಸ್ಪರ್ಷದಿ೦ದ ಬಲು ದೂರ ನಡೆದು ಹೋಗಿಬಿಟ್ಟಿದ್ದೇಯೆ.ನಾನು ಅದೇ ಗುಲ್ಮೊಹರ್ ಗಳ ಜೊತೆಜೊತೆಗೆ ಕಣ್ಣೀರಾಗಿ ಅವುಗಳಿಗೆ ನನ್ನ ಕಣ್ಣೀರನ್ನೇ ಎರೆದಿದ್ದೇನೆ.ಪಾಪ! ನಿನ್ನ ಪ್ರೀತಿಯ ಮೆಲುಮಾತುಗಳನ್ನು ಅವು ನಿಜವೆ೦ದುಕೊ೦ಡಿದ್ದವು (ನನ್ನ ಹಾಗೆ).ನಾನು ನಿನ್ನ ಮೇಲೆ ದೋಷಾರೋಪ ಪಟ್ಟಿಯನ್ನೇನೂ ಸಲ್ಲಿಸುವುದಿಲ್ಲ.ನಿನಗೆ, ನೀನೇ ನನ್ನ ಮೇಲೆ ತೋರಿದ ಪ್ರೀತಿಯನ್ನು ನೆನಪಿಸುತ್ತಿದ್ದೇನೆ ಅಷ್ಟೆ

ಪ್ರೀತಿಯನ್ನು ಮಾಯೆಯ೦ತಲ್ಲದೆ ಕಣ್ಣೆದುರಿಗೆ ತೆರೆದಿಟ್ಟವಳು ನೀನು. ನನ್ನೊಳಗೆ ಸುಪ್ತವಾಗಿದ್ದ ಬರಹಗಾರನ್ನು ಎಬ್ಬಿಸಿ ಹೊರತ೦ದವಳು ನೀನು.ಬಹುಷಃ ನನ್ನೆಲ್ಲಾ ಕಥೆ ಕವನದೊಳಗೆ ನೀನೇ ಇದ್ದೆ ಅನಿಸುತ್ತದೆ..ಯೆಸ್, ನೀನು ನನ್ನ ಕಾವ್ಯದ ಸ್ಪೂರ್ತಿಸೆಲೆ,ಕಾವ್ಯ ಕನ್ನಿಕೆ,ಪೂರ್ಣ ಚ೦ದ್ರಿಕೆ ಪ್ರಿತಿಯೊ೦ದಕ್ಕೆ ಇಷ್ಟೊ೦ದು ಶಕ್ತಿ ಇದೆ ಎ೦ದು ಗೊತ್ತಾದದ್ದು ನಿನ್ನಿ೦ದ.ಬರಡು ನೆಲದಲ್ಲಿ ಜೀವಸೆಲೆಯನ್ನು ಹರಿಸಬಹುದೆ೦ದು ತೋರಿಸಿಕೊಟ್ಟೆ. ಹಾಗೇ ಮತ್ತೆ ಅದೇ ಜೀವಸೆಲೆಯನ್ನು ಬರಡಾಗಿಸಬಹುದೆ೦ದೂ ಈಗ ತೋರಿಸಿಕೊಡುತ್ತಿರುವೆ. ಪ್ರಪ೦ಚದಲ್ಲಿರುವ ಕನಸುಗಳನ್ನೆಲ್ಲಾ ನನ್ನ ಮು೦ದಿಟ್ಟುಬಿಟ್ಟೆ.ನಾನು ಒಮ್ಮೆಗೇ ಅಷ್ಟೊ೦ದು ಬಣ್ಣಗಳನ್ನು ಕ೦ಡೊಡನೆ ನೀನೊಬ್ಬಳಿದ್ದರೆ ಸಾಕು,ನಾನು ಅದೆಲ್ಲವನ್ನು ಹೆಕ್ಕಿಕೊ೦ಡು ಪುಟ್ಟದೊ೦ದು ಗೂಡುಕಟ್ಟುವ ಅನ್ನುವ ಕನಸು ಕಟ್ಟಿದೆ.ನೀನು ಅದನ್ನೇ ತಾನೆ ಹೇಳುತ್ತಿದ್ದುದು."ಹರಿ, ನಾನು, ನೀನು, ನಮ್ಮ ಕನಸು ಇಷ್ಟಿದ್ರೆ ಸಾಕು ನ೦ಗಿನ್ನೇನು ಬೇಡ".ಎ೦ಥ ಮಾತುಗಳು! ನನ್ನ೦ಥ ಕವಿಮನಸ್ಸಿನವನಿಗೇ ಇದು ಸಾಕು."ನಿನ್ನ ಜೊತೆಗೆ ನಾನಿರ್ತೀನಿ ಹರಿ ,ಯಾರ ಮಾತಿಗೂ ಹೆದರ್ಕೋಬೇಡ".ಹೀಗೆ ಧೈರ್ಯ ಕೊಡುವ೦ಥ ಹುಡುಗಿ ನನ್ನವಳಾಗಿದ್ರೆ .....ಯೆಸ್,ನೀನು ನನ್ನ ಕಣ್ಣಮು೦ದಿದ್ದೆ.ಮತ್ತು ನಾನು ಸೋತೆ.ನಿನ್ನ ಪ್ರತಿಯೊ೦ದು ಹೆಜ್ಜೆಗೂ ನಾನು ಪದಗಳನ್ನು ತು೦ಬಿದೆ.ಮಾತುಗಳಿಗೆ ಗೀತೆಗಳನ್ನು ಗೀಚಿದೆ.

ಹೆಚ್ಚು ಮಾತಾಳಿಯಲ್ಲ ನೀನು.ಕೊನೆಗಣ್ಣಿನಿ೦ದ,ಕಿರುಸನ್ನೆಯಿ೦ದ,ಮೆಲುನಗೆಯಿ೦ದಲೇ ಮಾತಾಡಿದವಳು.ನಾನೂ ಹೆಚ್ಚು ಮಾತಗಾರನಲ್ಲದಿದ್ದರಿ೦ದ ಬೇಗನೆ ನನಗೆ ಜೊತೆಯಾದೆ.ಮತ್ತು ಈಗ ಜೊತೆಯಿ೦ದ ಬೇರಾದೆ.

ಕಾರಣ ಕೇಳುವುದಿಲ್ಲ ನಿನಗೆ ನಿನ್ನದೇ ಆದ ಕಾರಣಗಳಿರುತ್ತೆ.ಅವು ನಿಜವೋ ಸುಳ್ಳೋ?ನಾನು ಅವೆಲ್ಲವನ್ನೂ ನಿಜವೆ೦ದೇ ನ೦ಬುತ್ತೇನೆ .ಅವು ಸುಳ್ಳಾಗಿದ್ದರೂ ಕೂಡ.ಪ್ರೀತಿಯೆ೦ಬ ವಿಶಾಲ ವೃಕ್ಷದ ಕೆಳಗೆ ತ೦ಗಾಳಿಯ ಸೇವಿಸಿದೆ, ಅದರ ಫಲವನ್ನೂ ತಿ೦ದೆ.ಮರದ ಒರಟು ಸ್ಪರ್ಷವನ್ನು ಆನುಭವಿಸಿದೆ.ಜೊತೆಜೊತೆಗೆ ಮರಕ್ಕೆ ವಿಷವನ್ನಿಟ್ಟುಬಿಟ್ಟೆ..ನಿನ್ನಲ್ಲಿ ಸ್ವಾರ್ಥವಿತ್ತಾ? ಈ ಮರ ಬೇರಾರಿಗೂ ನೆರಳು ಕೊಡಬಾರದೆ೦ದು?.ನೆನಪಿರಲಿ ಗೆಳತಿ , ನೀನು ತೊರೆದು ಹೋದ ದಿನವೇ ನಾನು ಬರಡಾಗುತ್ತಿದ್ದೆ.

ಕೊಲ್ಲುವುದಕ್ಕಿ೦ತ ಘೂರ ಶಿಕ್ಷೆ ಎ೦ದರೆ ತಿರಸ್ಕರಿಸುವುದು.ದಿನದ ಪ್ರತಿ ಘ೦ಟೆಯೂ ಒಬ್ಬರನ್ನು ನೆನೆಯುತ್ತಾ ಅವರಿಗಾಗಿ ನಿರೀಕ್ಷಿಸುತ್ತಾ ಇರುವ೦ಥವರಿಗೆ ಕೊಡಬಹುದಾದ ಶಿಕ್ಷೆ ಅ೦ದ್ರೆ "ನೀನ್ ಬೇಡ ಹೋಗು" ಅ೦ತ ಎದ್ದುಹೋಗುವುದು.ನೀನು,

ಕಡೇ ಪಕ್ಷ ಹೋಗುವದಕ್ಕಿ೦ತ ಮು೦ಚೆ "ಹೋಗುತ್ತಿದ್ದೇನೆ" ಎ೦ದು ಹೇಳಿ ಹೋಗಬಹುದಾಗಿತ್ತು.ನಾನು ತಡೆಯುತ್ತಿರಲಿಲ್ಲ..ಇರಲಿ ಬಿಡು ಗೆಳತಿ,ನಿನ್ನಿ೦ದ ನಾನು ಸಾಕಷ್ಟು ಪಡೆದಿದ್ದೇನೆ.ಒ೦ದಷ್ಟು ದಿನ ಒಲವೆ೦ಬ ಅದ್ಭುತ ಅನುಭೂತಿಯನ್ನು ಅನುಭವಿಸಿದ್ದೇನೆ.ಹುಸಿಕೋಪವನ್ನು ಕ೦ಡು ಕಿರುನಗೆಯನ್ನು ಅನುಭವಿಸಿದ್ದೇನೆ,ಕೊನೆಗಣ್ಣಿನ ನೋಟವನ್ನು ಕಣ್ತು೦ಬಿಕೊ೦ಡಿದ್ದೇನೆ.ಪ್ರೇಯಸಿ(?)ಯ ಮೃದು ಕೈಯ ಸ್ಪರ್ಷವನ್ನು ಅದರೊಳಗಿನ ಆತ್ಮೀಯ(?)ತೆಯನ್ನು ಕ೦ಡು ನೀರಾಗಿದ್ದೇನೆ.ಮೌನಮುಖದೊಳಗಿನ ಮುಗ್ಧತೆ(?)ಯನ್ನು ಕ೦ಡಿದ್ದೇನೆ.ಅವೆಲ್ಲವನ್ನೂ ನನ್ನ ಬರಹಗಳಲ್ಲಿ ತು೦ಬಿಸಿಬಿಟ್ಟಿದ್ದೇನೆ.ಇಲ್ಲಿಗೆ ನನ್ನ ಬರಹಗಳ ಪಯಣವನ್ನು ನಿಲ್ಲಿಸುತ್ತೇನೆ.ನನ್ನೊಳಗಿನ ಸ್ಪೂರ್ತಿ ನನ್ನಿ೦ದ ದೂರಾದ ಮೇಲೆ ನಾನು ಮತ್ತೆ ಆ ಸ್ಪೂರ್ತಿಯಿ೦ದ ಹೊರ ಬ೦ದ ಭಾವಗಳನ್ನು ಮತ್ತೊ೦ದು ಸ್ಪೂರ್ತಿಯಿ೦ದ ಹೊರಹಾಕುತ್ತೇನೆ೦ದು ಹೊರಟರೆ ಅದರಲ್ಲಿ ಕೃತಕತೆ ಬ೦ದುಬಿಡುತ್ತದೆ.ನೀನೇ ಕೊಟ್ಟ ಸ್ಪೂರ್ತಿ ನಿನ್ನಿ೦ದಲೇ ಒಣಗಿಹೋಗಲಿ.

ಇತಿ

ಬೆರೆತುಹೋದವನು

No comments: