Thursday, October 8, 2009

ಆಪರಿಚಿತ ಚಲುವೆಗೊ೦ದು ಪತ್ರ

ಅಪರಿಚಿತ ಸ್ಪೂರ್ತಿಯೇ


ಶಿವಮೊಗ್ಗೆಯ ಬೆಳಗನ್ನು ಮಂಜು ಆವರಿಸಿತ್ತು .ಆ ದಿನ ನೀನು ತಿಳಿ ಹಸಿರು ಬಣ್ಣದ ಚೂಡಿ ಧರಿಸಿದ್ದೆ ಅದರ
ಮೇಲೆ ತಿಳಿಗೆಂಪು ಬಣ್ಣದ ಸ್ವೆಟರ್ ,ಎಡ ಭುಜದ ಮೇಲಿಂದ ಮಲ್ಲಿಗೆಯ ದಂಡೆಯೊಂದು ನಿನ್ನ
ನಗುವಿನ ಮುಂದೆ ಸೋಲುತ್ತಿತ್ತು .ಅಷ್ಟು ಜನ ಗೆಳತಿಯರಲ್ಲಿ ನಿನ್ನೊಬ್ಬಳ ಮುಖ ಚಂದ್ರ ಚಂದ್ರಿಕೆಯನ್ನೇ ಸುರಿಸುತ್ತಿದೆ ಎನಿಸುತ್ತಿತ್ತು .
ನಾನು ಮದುವೆಗೆ ಅಂತ ನಾಕು ದಿವಸ ಮುಂಚಿತವಾಗಿಯೇ ಭದ್ರಾವತಿಗೆ ಬಂದಿದ್ದೆ .ಭದ್ರಾವತಿಯಿಂದ
ಶಿವಮೊಗ್ಗೆಗೆ ಏನೋ ತರಲು ಬಸ್ಸಿನಲ್ಲಿ ಹೋಗುತ್ತಿದ್ದಾಗ ನೀನು 'ಹರಿಗೆ' ಅನ್ನೋ ಕಡೆ ಹತ್ತಿದ್ದು .ಹೆಚ್ಚು ಮಾತಿಲ್ಲ .
ಬರೀ ಸಣ್ಣ ನಗು ಅದೇ ನನ್ನನ್ನು ಪದೇ ಪದೇ ನೋಡುವಂತೆ ಮಾಡಿದ್ದು .ನಾಚಿಕೆ ಬಿಟ್ಟು
ನಿನ್ನ ನೋಡ್ತಾ ಇದ್ದೆ .ಮದುವೆ ಮುಗಿಯೋ ತನಕ ಏನೋ ನೆಪ ಹೇಳಿ ಅದೇ ಸಮಯಕ್ಕೆ ಅದೇ ಬಸ್ಸಿನಲ್ಲಿ
ಬರ್ತಾ ಇದ್ದೆ .ಆದ್ರೆ ನೀನು ನೀನಾಯ್ತು ನಿನ್ನ ಗೆಳತಿಯರ ಬಳಗವಾಯ್ತು ಮತ್ತೆ ನಿನ್ನ ನಗುವಾಯ್ತು .
ನಿನ್ನನ್ನ ನೋಡ್ತಾ ಇದ್ದಿದ್ದನ್ನ ನೋಡಿ ನಿನ್ನ ಗೆಳತಿ ಒಬ್ಬಳು
"ಎ ನೋಡೇ ಅವ್ನು ನಿಂಗೆ ಲೈನ್ ಹೊಡೀತಾ ಇದಾನೆ ಅನ್ಸುತ್ತೆ "ಅಂದು ಬಿಟ್ಟಳು .

ನಿನಗಾದ ಮುಜುಗರವನ್ನು ನಾ ಬಲ್ಲೆ .ಆದರೆ ವಿಧಿ ಇಲ್ಲ, ನಿನ್ನ ನಗು ನನ್ನನ್ನು ಆವರಿಸಿತ್ತು ..
ನಿಂಜೊತೆ ಮಾತಾಡ್ತಾ ಇರೋ ಆಗೇ ನನ್ನೊಳಗೆ ನಾನೇ ಮಾತನಾಡಿಕೊಳ್ತಾ ಇದ್ದೆ ಮದುವೆ
ಮುಗಿಯೋ ದಿನ ಬಂದು ಬಿಡ್ತು ನನಗೋ ಚಡಪಡಿಕೆ ಶುರು ಆಯ್ತು .ನಾಳೆ ಇಂದ ನಿನ್ನ ನಗು
ನೋಡೋಕೆ ಆಗಲ್ಲ, ಮತ್ತೆ ಕೆಲಸಕ್ಕೆ ಬೇರೆ ಹೋಗ್ಬೇಕು , ಛೆ! ಅನ್ಸಿಬಿಡ್ತು .ನಿನ್ನ ನಗು ನನ್ನ
ಮನಸಿನಿಂದ ಮರೆಯಾಗಲೇ ಇಲ್ಲ.ಅದೇ ನಗು ನನ್ನ ಕವನಗಳಿಗೆ ಸ್ಫೂರ್ತಿ ಆಯ್ತು.


ಮತ್ತೆ ನಿನ್ನನ್ನು ನೋಡಿದ್ದು ಬಸ್ಸಿನಲ್ಲೇ. ಆರು ತಿಂಗಳ ನಂತರ .ನಿನಗೆ ನನ್ನ ಮುಖ ನೆನಪಿಲ್ಲ ಅನ್ನಿಸ್ತು .
ಇದ್ದಿದ್ರೆ ನನ್ನ ಪಕ್ಕ ಬಂದು ಕೂತ್ಕೊತಾ ಇರ್ಲಿಲ್ಲ.ನಾನು ಕಿಟಕಿ ಪಕ್ಕದಲ್ಲಿ ಕೂತಿದ್ದೆ .ಸಮಾ ಗಾಳಿ ಬೇರೆ
ಬೀಸ್ತಾ ಇತ್ತು ಅದಕ್ಕೆ ನಿನ್ನ ಕೂದಲು ಬೇಸರಗೊಂಡ೦ತಿತ್ತು .ನೀನು "ಕಿಟಕಿ ಹಾಕ್ತಿರಾ" ಎಂದು ಕೇಳುವ
ಮೊದಲೇ ನಾನು ಕಿಟಕಿ ಹಾಕಿ ಆಗಿತ್ತು .ನಿನ್ನ ಧನ್ಯವಾದ ಬರಿ ನಗು .ಇನ್ನೂ ಐದೂವರೆ ಗಂಟೆ ನೀನು
ನನ್ನ ಪಕ್ಕದಲ್ಲಿರ್ತೀಯ ಅನ್ನೋದನ್ನ ಕಲ್ಪಿಸಿಕೊಂಡೆ ನನ್ನ ಮನಸ್ಸು ಸಂತಸಗೊಂಡಿತ್ತು .ಆದರೆ ಅದನ್ನ
ತೋರಗೊಡದೆ ಕಿಟಕಿ ಗಾಜಿನ ಹಿಂದಿನ ಹಸಿ ಹಸಿರನ್ನ ನೋಡ್ತಾ ಇರೋ ಹಾಗೆ ನಟಿಸ್ತಾ ಕೂತು ಬಿಟ್ಟಿದ್ದೆ
.ನನ್ನೊಳಗೆ ನಾನು 'ಬಂಗಾರದಂಥ ಹುಡುಗಿ' ಅಂದುಕೊಳ್ತಾ ಇದ್ದೆ.ಕಿಟಕಿಗೆ ತಲೆ ಆನಿಸಿ ಕಲ್ಪನೆಯಲ್ಲಿ
ಮುಳುಗಿ ಬಿಟ್ಟೆ .ನಿನ್ನ ಮೃದು ಕೆನ್ನೆಗಳು ನನ್ನ ಭುಜವನ್ನ ಸೋಕುತ್ತಿದೆ ಅನ್ನಿಸ್ತಾ ಇತ್ತು .ನಿಜ ನೀನು ತೊಕಡಿಸ್ತಾ
ನನ್ನ ಭುಜದ ಮೇಲೆ ಒರಗಿಬಿಟ್ಟಿದ್ದೆ. ಮತ್ತೆ ತಿಳಿದೆದ್ದು 'ಸಾರಿ'ಅಂದು ಮೊದಲಿನ ಸ್ತಿತಿಗೆ ಕೂತೆ .ಮತ್ತೆ ಅದೇ
ಸೀನ್ ರಿಪೀಟ್ .ಈ ಸರ್ತಿ ತೂಕಡಿಸಿ ಭುಜಕ್ಕೆ ಒರಗಿದವಳು ಹಾಗೆ ನಿದ್ರಿಸಿ ಬಿಟ್ಟೆ.ನಾನೂ ಎಚ್ಚರ ಮಾಡ್ಲಿಕ್ಕೆ
ಹೋಗಲಿಲ್ಲ. ನಿನ್ನ ಬಿಸಿ ಉಸಿರು ನನ್ನ ಎದೆಗೆ ತಾಕಿ ಎದೆ ಬಡಿತಕ್ಕೆ ತಾಳ ಹಾಕುತ್ತಿತ್ತು . ನಾನಂತೂ ಸ್ವಪ್ನ
ಲೋಕದಲ್ಲಿ ತೇಲಾಡುತ್ತಾ ಮಲಗಿಬಿಟ್ಟೆ .ಎಚ್ಚರವಾದರೂ ಕಣ್ಮುಚ್ಚಿ ಕನಸು ಕಾಣುತ್ತಾ ಇದ್ದು ಬಿಟ್ಟೆ .ಹಾಳಾದ
ಹಂಪ್ ಒಂದು ನಿನ್ನ ಎಬ್ಬಿಸಿ ಬಿಟ್ತು.ಎದ್ದವಳ ಮುಖ ಆಗ ತಾನೇ ಎದ್ದ ಪುಟ್ಟ ಮಗುವಿನಂತೆ ಇತ್ತು ಅಬ್ಭಾ!.ಹೊಳೆವ
ಕಂಗಳು .ಮುಗ್ಧ ಮುಖ .ಚೆನ್ದುತಿಗಳು ಬಿಗಿದಾಗ ಕಾಣುವ ಕೆನ್ನೆಯ ಗುಳಿ. ಅಲ್ಲವೋ ಅಮೃತ.ನಾನು ನೋಡಿಯೂ
ನೋಡದಂತೆ ನಾಟಕ ಆಡ್ತಾ ಇದ್ದೆ .ತರೀಕೆರೆ ಕಂಡಕ್ಟರ್ ಕೂಗಾಟಕ್ಕೆ ನೀನು ಪೂರ್ತಿಯಾಗಿ ಎದ್ದು ಬಿಟ್ಟಿದ್ದೆ.
.ಭದ್ರಾವತಿ ಬಂತು ನಾನು ಇಳಿದು ಹೋದೆ .ಇಳಿಯಲಾರದೆ ಇಳಿದು ಹೋದೆ.

ಏನೋ ಕಳೆದು ಕೊಂಡೆ ಅನ್ನಿಸ್ತಾ ಇದೆ ಹುಡುಗಿ .ನನ್ನ ಹುಚ್ಚುತನಕ್ಕೆ ನಾನೇ ನಗ್ತಾ ಇದ್ದೀನಿ .ನಿಜ
ನನ್ನದು ತಪ್ಪು ಅಂತ ಗೊತ್ತು .ಯಾರೋ ಏನೋ ಮೊದಲ ನೋಟದಲ್ಲೇ ಆತ್ಮೀಯ ಅನ್ನಿಸೋದಾದ್ರೂ
ಹೇಗೆ.ಯಾಕೆ?ಈ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ರ ಇಲ್ಲ .ಅನಾಮಿಕ ಅಪರಿಚಿತಳನ್ನು ಹಚ್ಚಿ ಕೊಳ್ಳೋದು ಅವಳೇ
ಎಲ್ಲವೂ ಆಗ್ತಾಳೆ ಅಂದುಕೊಳ್ಳೋದು ತಪ್ಪು ಅಂತ ಗೊತ್ತು .ನಾನು ನನ್ನೆಲ್ಲಾ ಭಾವನೆಗಳನ್ನ ನನ್ನ
ಅಪ್ಪ ಅಮ್ಮ ಅಕ್ಕನ ಹತ್ತಿರ ಹಚ್ಚಿಕೊಳ್ತೇನೆ . ನೀನೂ ಆ ಗುಂಪಿನಲ್ಲಿ ಇರಬೇಕು ಅಂತ ಬಯಸೋದು
ತಪ್ಪು ಅಂತಿಯಾ?ನೀನ್ಯಾರೋ ಏನೋ ಅಂತ ನಿನ್ನನ್ನ ಅಲ್ಲ ನನ್ನನ್ನ ನಾನು ಪ್ರಶ್ನಿಸಿ ಕೊಳ್ಳೋದಿಲ್ಲ ನೀನು
ಅಪರಿಚಿತಳಾಗಿ ಉಳಿದರೂ ಸಂತೋಷಾನೇ.ನಿನ್ನ ನೆನಪಲ್ಲಿ ಗಡ್ಡ ಬಿಟ್ತು ದೇವದಾಸನ ಥರ ಓಡಾಡಲ್ಲ.
ನನ್ನ ಮನಸಿನ ಮೂಲೆಯಲ್ಲಿ ನಿನಗೊಂದು ಸುಂದರ ಸ್ಥಳ ಕೊಟ್ಟಿದ್ದೀನಿ .ಬೇಕೆಂದಾಗ ಅಲ್ಲಿಗೆ ಬಂದು ನಿಂಜೊತೆ
ಎರಡು ಮಾತನಾಡಿ ಹೋಗ್ತೀನಿ .ಇದಕ್ಕೆ ನಿನ್ನ ಸಮ್ಮತಿಯನ್ನ ಕಾಯ್ತಾ ಇರೋ

*****************************************ನಿನ್ನ ಅಪರಿಚಿತ ಹುಡುಗ

No comments: