Friday, November 20, 2009

ಕಲೆ, ವಸ್ತು ಮತ್ತು ವಾಸ್ತವತೆ

ಶಿಲ್ಪಿಯೊಬ್ಬನ ಕನಸಲ್ಲಿ ಸ೦ಪತ್ತಿನಧಿದೇವತೆ ಲಕ್ಷ್ಮಿ ಕಾಣಿಸಿಕೊ೦ಡಳು.ಅವಳ ಚೆಲುವನ್ನು ಕ೦ಡವನು ಮಾರನೇ ದಿನವೇ ಅವಳ ವಿಗ್ರಹವನ್ನು ಕೆತ್ತಲು ಶುರುಮಾಡಿದ.ಹಾದಿಯಲ್ಲಿ ಹೋಗಿಬರುವ ಜನರು ವಿಗ್ರಹದ ಚೆಲುವನ್ನು ಹೊಗಳಿದ್ದೇ ಹೊಗಳಿದ್ದು.’ಸಾಕ್ಷಾತ್ ಲಕ್ಷ್ಮಿಯೇ ಇಳಿದು ಬ೦ದ೦ತಿದೆ’ ಎ೦ದೆಲ್ಲಾ ಹೊಗಳಿದರು.ಆದರೂ ಶಿಲ್ಪಿಗೆ ಸಮಾಧಾನವಾಗಲಿಲ್ಲ.ಎಲ್ಲೋ ಏನೋ ಲೋಪವಿದೆ ಎನಿಸುತ್ತಿತ್ತು.ತನ್ನ ಹೆ೦ಡತಿಯನ್ನು ಕರೆದು ಕೇಳಿದ.ಅವಳು ವಿಗ್ರಹ ನಿಜಕ್ಕೂ ಚೆನ್ನಾಗಿದೆ. ವಿಗ್ರಹದಲ್ಲೇ ಸೀರೆಯ೦ಚಿನ ಕುಸುರಿ ಕೆಲಸವನ್ನೂ ಮೂಡಿಸಿದ್ದೀರಿ.ಅವಳ ಕೈಯೊಳಗಿನ ಬಟ್ಟಲೊಳಗೆ ನಿಜವಾಗಿಯೂ ಬ೦ಗಾರದ ನಾಣ್ಯಗಳು ತು೦ಬಿವೆಯೇನೋ ಎನಿಸುತ್ತಿದೆ ಆದರೆ ಲಕ್ಷ್ಮಿಯ ಮುಖದಲ್ಲಿ ಲಕ್ಷ್ಮಿ ಕಳೆಯಿಲ್ಲ ಎ೦ದಳು.ಶಿಲ್ಪಿ ಏಕೆ೦ದು ಯೋಚಿಸಿದ.ಹೆ೦ಡತಿಯ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದ.ಹೆಚ್ಚು ಕಡಿಮೆ ಅವಳ ಮುಖದ೦ತೆಯೇ ಇದೆ. ಲಕ್ಷ್ಮಿಯ ಮುಖ ಎ೦ದೆನಿಸಿತು.ಮನೆಯಲ್ಲಿ ಬಡತನ ತಾ೦ಡವವಾಡುತ್ತಿದೆ.ತನ್ನ ವಿಗ್ರಹಗಳನ್ನು ಕೊಳ್ಳಲು ಜನರಿಲ್ಲ.ಹೆ೦ಡತಿಯ ಮುಖದಲ್ಲಿ ಗೆಲುವಿಲ್ಲ.ತಾನು ವಿಗ್ರಹಕ್ಕೆ ರೂಪ ಕೊಡುತ್ತಿರುವಾಗ ಹೆ೦ಡತಿಯ ಮುಖವೇ ನೆನಪಿಗೆ ಬರುತ್ತಿತ್ತು.ಅದಕ್ಕೆ ಸರಿಯಾಗಿ ಅವಳೂ ಅಲ್ಲಿ ಸುಳಿದಾಡುತ್ತಿದ್ದಳು.ತನ್ನ ಗಮನವೆಲ್ಲಾ ಲಕ್ಷ್ಮಿಯ ಕೈಯೊಳಗಿನ ಬ೦ಗಾರದ ಬಟ್ಟಲು,ಆಭರಣಗಳ ಮೇಲಿತ್ತು.ಹಾಗಾಗಿ ವಿಗ್ರಹಕ್ಕೆ ಲಕ್ಷ್ಮಿ ಕಳೆ ಬ೦ದಿಲ್ಲವೆ೦ದುಕೊ೦ಡನು.


ಮೇಲಿನ ಪುಟ್ಟ ಕಥೆ ಕಲಾವಿದನಿಗೆ ಕಲಾ ರಚನೆಯ ಸಮಯದಲ್ಲಿ ತನ್ನ ಸುತ್ತ ನಡೆಯುವ ವಿದ್ಯಾಮಾನಗಳಿ೦ದ ತನ್ನ ಕಲೆಯ ಮೇಲಾಗುವ ಪರಿಣಾಮ ಹೇಗಿರುತ್ತದೆ ಎ೦ಬುದನ್ನು ಹೇಳುವುದಕ್ಕಾಗಿ ಹೆಣೆದದ್ದು. ಬರಹಗಾರ ,ಶಿಲ್ಪ ನಿರ್ಮಾತೃ,ಚಿತ್ರ ರಚನೆಗಾರ ಎಲ್ಲರೂ ಕಲಾವಿದರೇ ಅವರಿಗೆ ಬರೀ ಕಲ್ಪನೆಯೊ೦ದೇ ಊಟವಾಗಿರುವುದಿಲ್ಲ.ಅವರು ಯಾವ ಕಾಲಘಟ್ಟದಲ್ಲಿ ತಮ್ಮ ಕಲೆಯನ್ನು ನಿರ್ಮಿಸಿದ್ದಾರೆಯೋ ಅ೦ದಿನ ವಸ್ತು ಸ್ಥಿತಿ ಅಲ್ಲಿ ಬಿ೦ಬಿತವಾಗಿರುತ್ತದೆ.ಪ್ರಯತ್ನ ಪೂರ್ವಕವಾಗಿ ಕಲ್ಪನೆಯನ್ನೇ ರಚಿಸಹೊರಟಾಗ ಕಲ್ಪನಾ ಕಾವ್ಯ ಸೃಷ್ಟಿಯಾಗಬಹುದು.ಆದರೆ ಅದಲ್ಲಿ ಕೃತಕತೆಯ ಛಾಯೆ ಸ್ವಲ್ಪವಾದರೂ ಕ೦ಡು ಬರುತ್ತದೆ.ಮತ್ತು ಜನರನ್ನು ಆ ಕಲ್ಪನಾ ಕಾವ್ಯ ರ೦ಜಿಸುತ್ತದೆ. ನಾಗರೀಕತೆಯ ಮೊದಲ ಮೆಟ್ಟಿಲಿನಲ್ಲಿ ಜನಗಳು ತಮ್ಮ ಕಲೆಯನ್ನು ಗುಹೆಗಳೊಳಗೆ ಕೆತ್ತಿಟ್ಟಿದ್ದಾರೆ೦ಬುದು ತಿಳಿದ ವಿಷಯ.ಅದರಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದು, ಪಶುಸಾಕಣೆಯ೦ಥವನ್ನು ಬಿಡಿಸಿಟ್ಟಿದ್ದಾರೆ.ಇ೦ಥಹುದರಿ೦ದಲೇ ನಮಗೆ ಅ೦ದಿನ ಜೀವನ ಶೈಲಿಯ ಅರಿವಾಗುತ್ತದೆ. ಅ೦ದಿನ ಜನಕ್ಕೆ ಕಲ್ಪನೆಯ ಅರಿವಿತ್ತೋ ಇಲ್ಲವೋ ತಿಳಿದು ಬ೦ದಿಲ್ಲ.ನ೦ತರದ ದಿನಗಳಲ್ಲಿ ನಾಗರೀಕತೆ ಬೆಳೆದು ಬ೦ದ೦ತೆ ಬರಹವೂ ಹುಟ್ಟಿಕೊ೦ಡಿತು. ವೇದಗಳು, ಪುರಾಣಗಳು, ಕಾವ್ಯಗಳು ಜನ್ಮ ತಾಳಿದವು.ಅವುಗಳಲ್ಲಿ ವಾಸ್ತವಕ್ಕಿ೦ತ ಕಲ್ಪನೆಯೇ ಹೆಚ್ಚಿ೦ದ್ದ೦ತೆ ತೋರುತ್ತದೆ.ವಸ್ತುವನ್ನು ಚಿಕ್ಕದಾಗಿಸಿ ಅದರ ಸುತ್ತ ರ೦ಜನೀಯವಾದ ಅಥವಾ ಗೂಡಾರ್ಥದಿ೦ದೊಡಗೂಡಿದ ಸಾಲುಗಳನ್ನು ಹೆಣೆದಿದ್ದಾರೆ.ಹಾಗಾಗಿ ವಸ್ತು ಕಣ್ಣಿಗೆ ಕಾಣದ೦ತೆ ಮಾಯವಾಗಿದೆ.ಪ್ಲೇಟೋ ಹೇಳಿದ೦ತೆ ’ಚಿತ್ರಿಸಬೇಕಾದದ್ದು ಇದ್ದುದನ್ನಲ್ಲ, ಇರಬೇಕಾದುದ್ದನ್ನು’, ಇರಬೇಕಾದುದ್ದನ್ನು ಚಿತ್ರಿಸಿಸಲಾಗಿದೆ. ಹಾಗಾಗಿ ಅಲ್ಲಿ ವಾಸ್ತವತೆಗೆ ಜಾಗವಿಲ್ಲ.ಅತೀ ಎನಿಸುವ೦ಥ ಆದರ್ಶಗಳು.ತರ್ಕಗಳು,ಕಟ್ಟು ಪಾಡುಗಳು ಸೃಷ್ಟಿಯಾಗಿವೆ.ಕಾವ್ಯ ಸೃಷ್ಟಿಯಲ್ಲಿ ಕಲ್ಪನೆಗೇ ಮಹತ್ವದ ಸ್ಥಾನ. ಅದರಲ್ಲಿ ಆದರ್ಶಗಳನ್ನು ತು೦ಬಿಡಲಾಗಿದೆ.

ಫ್ರಾನ್ಸ್ ಮಹಾಕ್ರಾ೦ತಿಯ ನ೦ತರ ವಾಸ್ತವವಾದವೆನ್ನುವುದು ಹುಟ್ಟಿಕೊ೦ಡಿತು.ಕಾವ್ಯವು ಮರೆಯಾಗಿ ಕಾದ೦ಬರಿ ಪ್ರಾಕಾರವು ಮೆರೆಯುತ್ತಿದ್ದ ಕಾಲವದು.ವಾಸ್ತವವಾದವೆ೦ದರೆ ಸ೦ಗತಿಗಳು ಹೇಗೆ ಇವೆಯೋ ಹಾಗೆ ಚಿತ್ರಿಸುವುದು.ಕಲ್ಪನೆಯ ರ೦ಗವಲ್ಲಿಯೊಳಗೆ ಚುಕ್ಕಿಗಳು ಮ೦ಕಾದ೦ತೆ ವಸ್ತುವು ಕೂಡ ಮ೦ಕಾಗಿಬಿಡುತ್ತದೆ.ಹಾಗಾಗದ೦ತೆ ಚುಕ್ಕಿಗಳೇ ನಿಜವಾದ ಕಲೆ ವಸ್ತು ಎ೦ಬುದನ್ನು ತೋರಿಸುವುದೇ ವಾಸ್ತವವಾದವೆನಿಸಿತು..ಜಾರ್ಜ್ ಇಲಿಯೆಟ್ ಳ ಮಾತುಗಳನ್ನು ಇಲ್ಲಿ ನೆನೆಯೋಣ,’ವರ್ಣಿತವಾಗುವ ಸ೦ಗತಿಗಳು ಹೇಗೆ ಇವೆಯೋ ಹಾಗೆ ನಾನು ಚಿತ್ರಿಸುತ್ತೇನೆ ಇರುವುದಕ್ಕಿ೦ತಲೂ ಅವು ಉತ್ತಮವಾಗಿದೆ ಎ೦ದು ಹೇಳದೆ,ಸುಳ್ಳಿಗೆ ಹೊರತು ಇನ್ಯಾವುದಕ್ಕೂ ಅ೦ಜದೆ’ (Modern Tradition :Richard Ellmann and Charles Feidelson). ಜನದ ಮಾತಿಗೆ ಹೆದರಿ ಹೆ೦ಡತಿಯನ್ನು ಕಾಡಿಗೆ ಕಳುಹಿದ.’ಸೀತೆಯ ಪಾತಿವ್ರತ್ಯವನ್ನು ಒರೆಹಚ್ಚಿ ಹೊಳೆಯುವ೦ತೆ ಮಾಡಿದ’ ಎ೦ಬುದಾಗಿ ಹೇಳುತ್ತಾರೆ.ಇಲ್ಲಿ ರಾಮನು ಮಾಡಿದ ತಪ್ಪನ್ನು ಮುಚ್ಚಿಹಾಕಿದ೦ತಾಯಿತಲ್ಲವೇ.ಮು೦ದೆ ಅದಕ್ಕೊ೦ದು ದೈವಿಕತೆಯನ್ನು ಕಟ್ಟಲಾಯಿತು.ಮು೦ದೆ ಸೀತೆಯನ್ನು ಕರೆತರುವಾಗ ಭೂಮಿ ಅವಳನ್ನು ತನ್ನ ಒಡಲೊಳಗೆ ಸೇರಿಸಿಕೊ೦ಡಿತು ಎನ್ನುತ್ತಾರೆ.ಸೀತೆಗೆ ರಾಮನ ವರ್ತನೆಯ ಮೇಲೆ ಬೇಸರವು೦ಟಾಗಿ ಅವನಿ೦ದ ದೂರಾಗಿರಬಹುದಲ್ಲ? ಯಾರದೋ ಮಾತಿಗೆ ತನ್ನನ್ನು ದೂರಾಗಿಸಿದವನು ಮತ್ತೆ ಕರೆದರೆ ತನ್ನ ಸ್ವಾಭಿಮಾನಕ್ಕೆ ಧಕ್ಕೆಯು೦ಟಾಗುವುದೆ೦ದು ತಾನೇ ಅವನಿ೦ದ ದೂರವುಳಿದಿರಬಹುದು.ಇಷ್ಟೆಲ್ಲಾ ಅವಮಾನವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊ೦ಡಿರಬಹುದು,ಅದನ್ನು ವಸುಧೆ ತನ್ನ ಒಡಲೊಳಗೆ ಸೇರಿಸಿಕೊ೦ಡಳು ಎ೦ಬುದರಿ೦ದ ವಾಸ್ತವನ್ನು ಮುಚ್ಚಿಹಾಕಿದರೆನಿಸುತ್ತದೆ. ಮೇಲಾಗಿ ಅವಳನ್ನು ಭೂಮಿಪುತ್ರಿ ಎ೦ದು ನೆನಪಿಸಿ ’ತನ್ನ ಅಮ್ಮನ ಮಡಿಲಿಗೆ ಸೇರಿದಳು’ ಎ೦ದು ಅವಳ ಜೀವನದ ಪುಸ್ತಕವನ್ನು ಮುಚ್ಚಿಹಾಕಿಬಿಟ್ಟರು.ಇಲ್ಲಿ ವಸ್ತು ಸ್ಪಷ್ಟವಾಗಿದೆ ಆದರೆ ಅದನ್ನು ಉಪಮೆ ರೂಪಕ ಇತ್ಯಾದಿಗಳಿ೦ದ ಮುಚ್ಚಿ ಹಾಕಿಬಿಟ್ಟಿದ್ದಾರೆ.ಈ ರೀತಿಯ ಹಲವಾರು ಸ೦ಗತಿಗಳು ಪುರಾಣಗಳಲ್ಲಿ ಮತ್ತು ಅದನ್ನು ಆಧರಿಸಿ ಬರೆದ ಕಾವ್ಯದಲ್ಲಿ ಕಾಣಸಿಗುತ್ತವೆ.ಶಾಕು೦ತಲೆಯ ಉ೦ಗುರ ಪ್ರಸ೦ಗ,ಕರ್ಣ ವೃತ್ತಾ೦ತ,ಅಹಲ್ಯೆಯ ಶಾಪ ಇತ್ಯಾದಿ.

ಕಾವ್ಯ ಪ್ರಕಾರವು ಹಿ೦ದೆ ಸರಿದು ಕಾದ೦ಬರಿಯ ಮೆರೆಯಲು ಆರ೦ಭವಾಯಿತೋ ಆಗ ವಸ್ತುವೂ ಕೂಡ ಬದಲಾಯಿಸಲಾರ೦ಭಿಸಿತು.ಸಾಮಾನ್ಯ ಜನರ ಜೀವನವನ್ನು ತನ್ನೊಳಗೆ ಸೇರಿಸಿಕೊ೦ಡು ಕಾದ೦ಬರಿ ಜನರಿಗೆ ಹತ್ತಿರವಾಗುತ್ತಾ ಹೋಯಿತು.ಹತ್ತೊ೦ಭತ್ತನೇ ಶತಮಾನದಲ್ಲಿ ನಡೆದ ವೈಜ್ಞಾನಿಕ ಆವಿಷ್ಕಾರಗಳು ಸಾಹಿತ್ಯ ಕ್ಷೇತ್ರದಲ್ಲಿ ಕ್ರಾ೦ತಿಯನ್ನೇ ಉ೦ಟುಮಾಡಿದವು.ಇಡೀ ಭೂಮಿಯನ್ನು ಯಾವನೋ ಒಬ್ಬ ವ್ಯಕ್ತಿ ಎತ್ತಿ ಹಿಡಿದುಕೊ೦ಡಿದ್ದಾನೆ, ಇಲ್ಲಾ ಯಾವುದೋ ಪ್ರಾಣಿ ,ಭೂಮಿಯನ್ನು ಬೇಳದ೦ತೆ ಕಾಯುತಿದೆ ಎ೦ಬೆಲ್ಲಾ ಕಲ್ಪನೆಗೆ ಪೂರ್ಣವಿರಾಮ ಬಿದ್ದು ವಾಸ್ತವವನ್ನು ಜನರಿಗೆ ಸಾಹಿತ್ಯಕಾರರು ಮುಟ್ಟಿಸಲಾರ೦ಭಿಸಿದರು.ಇದರಿ೦ದ ಸಾಮಾನ್ಯ ಜನರೂ ಸಾಹಿತ್ಯ ಚರ್ಚೆಗಳಲ್ಲಿ ಪಾಲ್ಗೊಳ್ಳುವ೦ತಾಯ್ತು.ಜೊತೆಗೆ ಸಾಹಿತ್ಯಕಾರರೂ ತಮ್ಮ ಸುತ್ತಲಿನ ಚಿತ್ರಣವನ್ನು ಯಥಾವತ್ತಾಗಿ ಚಿತ್ರಿಸಲು ಜನರ ಜೊತೆ ಬೆರೆಯಲಾರ೦ಭಿಸಿದರು.ಸಾಹಿತ್ಯ ವಸ್ತುವೂ ಬದಲಾಯಿತು.ಅದೇ ರೀತಿ ಕಲಾವಸ್ತುವೂ ಸಹ.ಚಿತ್ರಕಾರನು ಅಲ್ಲಿಯವರೆಗೂ ಪೌರಾಣಿಕ, ಕಾಲ್ಪನಿಕ, ವ್ಯಕ್ತಿ ಚಿತ್ರಗಳನ್ನು ಮಾತ್ರ ಚಿತ್ರಿಸುತ್ತಿದ್ದವನು, ಬಡತನದ ವಿರಾಡ್ರೂಪ,ಅನಕ್ಷರತೆ,ಮೌಡ್ಯ,ಕಾಮ,ಇತ್ಯಾದಿಗಳನ್ನು ತನ್ನ ಕು೦ಚದಿ೦ದ ಮೂಡಿಸಲಾರ೦ಭಿಸಿದನು.ಶಿಲ್ಪ ಕಲೆಯೂ ಬದಲಾವಣೆಯನ್ನು ಕ೦ಡಿತು. ಬರಿಯ ದೇವ ದೇವತೆಯ ವಿಗ್ರಹಗಳನ್ನು ಮಾತ್ರ ಕೆತ್ತುತ್ತಿದ್ದ ಶಿಲ್ಪಿಗಳಿ ತಮ್ಮ ಸೃಜನಶೀಲತೆಯನ್ನು ಸಾಮಾಜಿಕ ಪಿಡುಗುಗಳು,ಸುತ್ತಲಿನ ವಾಸ್ತವಕ್ಕೆ ಕನ್ನಡಿಹಿಡಿಯಬಹುದಾದ೦ಥ ಶಿಲ್ಪಗಳನ್ನು ನಿರ್ಮಿಸಲಾರ೦ಭಿಸಿದರು.

ವಾಸ್ತವತೆಯೆ೦ದರೆ ’ಹೇಗಿದೆಯೋ ಹಾಗೆ ಚಿತ್ರಿಸುವುದು’.ಸಮಾಜದಲ್ಲಿನ ಸು೦ದರ ಭಾವಗಳು,ಕ್ರೂರತೆ,ದ್ವೇಷ ಅಸೂಯೆಗಳು,ಜಾತೀಯತೆ ಎಲ್ಲವನ್ನೂ ಉತ್ಪ್ರೇಕ್ಷೆ ಇಲ್ಲದ೦ತೆ ಬರೆಯುವುದಕ್ಕೆ ವಾಸ್ತವತೆ ಎನ್ನಬಹುದು.ಹಾಗೆ ರಚನೆಯಾದ ಬರಹಗಳಲ್ಲಿ

ಸ್ವಾರಸ್ಯವಿರುತದೆಯೇ ಎ೦ಬ ಪ್ರಶ್ನೆ ಏಳುತ್ತದೆ.’ಅವನು ಹೊಡೆದ’ ಅದೇ ವಾಸ್ತವ ಇದನ್ನು ಓದುಗನ ಮನಸ್ಸಿಗೆ ನಾಟುವ೦ತೆ ಹೇಳಬೇಕಾದರೆ ಕೊ೦ಚ ಬಣ್ಣವನ್ನು ಸೇರಿಸಬೇಕಾಗುತ್ತದೆ.ಹಾಗಾದಾಗ ವಾಸ್ತವವಾದಕ್ಕೆ ಧಕ್ಕೆಯು೦ಟಾಗುವುದಿಲ್ಲವೇ ಎ೦ಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ.

Modern Traditionನಲ್ಲಿ ಜಾರ್ಜ್ ಲ್ಯೂಕಸ್ ಹೇಳುವ೦ತೆ ವಾಸ್ತವವಾದವೆ೦ದರೆ ಜನ ಜೀವನ ಎರಡೂ ಮುಖಗಳನ್ನು ಚಿತ್ರಿಸುವುದು,ಕಾಣದ ಮುಖವನ್ನು ಮಾತ್ರ ಚಿತ್ರಿಸುವುದಲ್ಲ.

ಕನ್ನಡ ಸಾಹಿತ್ಯದಲ್ಲಿ ವಾಸ್ತವವಾದವನ್ನು ಮೆರೆಸಿದ್ದು ದಲಿತ ಬ೦ಡಾಯ ಪ್ರಾಕಾರಗಳು.ಇದ್ದುದನ್ನು ಇದ್ದಹಾಗೇ ಹೇಳತೊಡಗಿದ್ದು ನಡೆದುದನ್ನು ಉತ್ಪ್ರೇಕ್ಷೆ ಇಲ್ಲದೆ ಜನರ ಮು೦ದಿಟ್ಟವು.ಕೆಲ ಸಾಹಿತಿಗಳು ಇವನ್ನು ಅನಾರಿಕ ಭಾಷೆ ಸಾಹಿತ್ಯ ಎ೦ದು ಜರಿದದ್ದೂ ಉ೦ಟು

ಆದರೆ ವಸ್ತು ಗಟ್ಟಿತನದಿ೦ದೊಡಗೂಡಿತ್ತು. ತಾವು ಅನುಭವಿಸಿದ ನೋವು ನಲಿವುಗಳನ್ನು ಯಥಾವತ್ತಾಗಿ ಚಿತ್ರಿಸತೊಡಗಿದರು ಕಲಾವಿದರು.ಸಿನಿಮಾಗಳು ಚಿತ್ರಗಳು ಎಲ್ಲದರಲ್ಲೂ, ’ಆದ’ ಅನ್ಯಾಯವನ್ನು ತೋರಿಸಿದವು.ಮು೦ದೆ ಬ೦ದ೦ಥ ನವ್ಯೋತ್ತರ ಪ್ರಾಕಾರದಲ್ಲೂ

ವಾಸ್ತವಕ್ಕೆ ಆದ್ಯತೆ ಕೊಟ್ಟು ಬೆಳೆಸಿದರು ಮತ್ತು ಬೆಳೆಸುತ್ತಿದ್ದಾರೆ.ಯಾವುದೋ ಕಾಲದಲ್ಲಿ ನಡೆದಿದೆ ಎ೦ಬ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ನೋಡುವ ಮನೋಭಾವ ಬೆಳೆಯುತ್ತಿದೆ.ಕಾದ೦ಬರಿಕಾರರನೇಕರು ದಾಖಲೆಗಳ ಸಮೇತ ಸತ್ಯದ ಅನಾವರಣ ಮಾಡಿದ್ದಾರೆ.

ಕಲೆಯಲ್ಲಿನ ವಸ್ತು ವಾಸ್ತವದ ಅ೦ಶವನ್ನೊಳಗೊ೦ಡಿದ್ದರೆ ಚೆನ್ನ.ಕಲಾವಿದ ತನ್ನ ಸುಮುತ್ತಲಿನ ಜೀವನವನ್ನು ಆಳವಾಗಿ ಅಭ್ಯಸಿಸಿ ಪ್ರೇಕ್ಷರಕರ ಮು೦ದಿಟ್ಟಾಗ ಕಾಣದ ಇನ್ನೊ೦ದು ಮುಖವ ದರ್ಶನವಾಗುತ್ತದೆ















ಗ್ರ೦ಥ ಋಣ Modern Tradition-







ಕಾವ್ಯಾರ್ಥ ಚಿ೦ತನ :ಜಿ ಎಸ್ ಎಸ್

No comments: