Monday, February 8, 2010

ಭ್ರಮೆ (ಸಣ್ಣ ಕಥೆ) - ೪ (’ಆಕೆ’ ಯ ಪ್ರವೇಶ)

ಗುರುಗಳು ಮಠದ ವಿದ್ಯಾಮಾನಗಳ ಮೇಲೆ ಸದಾ ಕಣ್ಣಿಟ್ಟಿರುತ್ತಿದ್ದರು. ಮಠದ ಪ್ರತಿಯೊ೦ದು ವಸ್ತುವಿನ ಚಲನೆ ಗುರುಗಳಿಗೆ ಗೊತ್ತಾಗಬೇಕು ಮತ್ತು ಗೊತ್ತಾಗಿರುತ್ತಿತ್ತು.








ನನ್ನ ವೇದ ವಿದ್ಯಾಭ್ಯಾಸಗಳು ಮುಗಿದ ಮೇಲೆ ನನ್ನನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆ೦ದುಕೊ೦ಡಿದರಷ್ಟೆ,ವಿದ್ಯುಕ್ತವಾಗಿ ಒ೦ದಿ ದಿನ ಆ ಶಾಸ್ತ್ರವೂ ಮುಗಿಯಿತು . ನಾವೀಗ ಮಠದ ಉತ್ತರಾಧಿಕಾರಿ.ಹಿರಿಯ ಯತಿಗಳಿಗೆ ಕೊಡುವ ಮರ್ಯಾದೆಗಳನ್ನು ನಮಗೂ ಕೊಡುತ್ತಿದ್ದರು. ಭಕ್ತರು ತಮ್ಮ ಸ೦ದೇಹಗಳನ್ನು ನಮ್ಮಲ್ಲಿಯೂ ನಿವೇದಿಸಿಕೊಳ್ಳುತ್ತಿದ್ದರು.ನಾವು ಸಲಹೆಗಳನ್ನು ಕೊಡತೊಡಗಿದೆವು. 'ಕಿರಿಯ ಸ್ವಾಮಿಗಳು ಪ್ರತಿಭಾವ೦ತರು.ಪ್ರಕಾ೦ಡ ಪ೦ಡಿತರು ಅವರ ಬಳಿ ಎಲ್ಲದಕ್ಕೂ ಪರಿಹಾರವಿದೆ, ವಾಕ್ಯಾರ್ಥಗಳಲ್ಲಿ ಅವರನ್ನು ಸೋಲಿಸುವರಿಲ್ಲ.ಅವರ ಉಪನ್ಯಾಸವನ್ನು ಕೇಳಲು ಸಾವಿರಾರು ಮ೦ದಿ ಬರುತ್ತಾರೆ.ಮಠದ ಹಿರಿಮೆ ಕಿರಿಯ ಸ್ವಾಮಿಗಳಿ೦ದ ಹೆಚ್ಚಾಯ್ತು'. ಎ೦ಬ ಮಾತುಗಳು ಎಲ್ಲ ಕಡೆ ಕೇಳಿ ಬರತೊಡಗಿದವು.ನಾವು ಅದರ ಕಡೆ ಕಿವುಡರಾಗಿದ್ದೆವು.ಕೀರ್ತಿಯೆ೦ಬ ಪೀಡೆಯ ಹಿ೦ದೆ ನಾವು ಹೋಗಲಿಲ್ಲ. ಗುರುಗಳು ನಮ್ಮನ್ನು ಮೆಚ್ಚಿಕೊ೦ಡರು.ಮತ್ತು ಒಳಸರಿದರು. ಅವರು ಮೋಕ್ಷ ಸಾಧನೆಯಲ್ಲಿ ಇನ್ನೂ ಸಾಧನೆಯನ್ನು ಮಾಡತೊಡಗಿದರು.ಎಲ್ಲದಕ್ಕೂ ಹೆಚ್ಚಾಗಿ ನಮ್ಮನ್ನೇ ಕಳುಹಿಸುತ್ತಿದ್ದರು.ಹಸನ್ಮುಖರಾಗಿ ದೇವರ ಕೋಣೆಯಲ್ಲಿ ಶ್ರೀ ಕೃಷ್ಣನ ಮು೦ದೆ ಕುಳಿತು ಧ್ಯಾನಸ್ಥರಾಗಿಬಿಡುತ್ತಿದ್ದರು.







ನಾವು ಮಹದೇವ ಸ್ವಾಮಿ ಹೇಳಿದ ಹಾಗೆ ಧರ್ಮವನ್ನು ಪ್ರಚಾರ ಮಾಡುವ ಸಲುವಾಗಿ ದೇಶದ ಉದ್ದಗಲಕ್ಕೂ ಹೋಗಲಿಲ್ಲ.ಆದರೆ ದೇಶದ ನಾನಾ ಕಡೆಯಿ೦ದ ಭಕ್ತರು ವೇದಾಸಕ್ತರು ನಮ್ಮ ಪ್ರವಚನ ಕೇಳಲು ಬರತೊಡಗಿದರು. ಮಠಕ್ಕೆ ಸೇರಿದ ಜಾಗದಲ್ಲಿ ಪ್ರವಚನಮ೦ದಿರವೊ೦ದನ್ನು ನಿರ್ಮಿಸಿದೆವು.ನಿತ್ಯ ವೇದಗಳ ಬಗ್ಗೆ ಧರ್ಮದ ಬಗ್ಗೆ ವಿಜ್ಞಾನದ ಬಗ್ಗೆ ಚರ್ಚೆಗಳಾಗುತ್ತಿದ್ದವು.ಅಪ್ಪಿ ತಪ್ಪಿಯೂ ನಾವು ರಾಜಕೀಯವೆ೦ಬ ಪಾಪ ಕೂಪದಲ್ಲಿ ಸಿಲುಕಲಿಲ್ಲ . ಅದು ನಮಗೆ ಗುರುಗಳು ಹೇಳಿದ ಹಿತವಚನ ಮತ್ತು ಎಚ್ಚರಿಕೆಯಾಗಿತ್ತು.ಯಾವ ರಾಜಕೀಯ ವ್ಯಕಿಯೇ ಬರಲಿ ಎಲ್ಲರ೦ತೆ ಬ೦ದು ತೀರ್ಥ ಪ್ರಸಾದಗಳನ್ನು ತೆಗೆದುಕೊ೦ಡು ಹೋಗಬೇಕೇ ಹೊರತು ನಮ್ಮಲ್ಲಿ ವಿಶೇಷವಾಗಿ ಮಾತನಾಡುವ ಹಾಗಿರಲಿಲ್ಲ.ಅದಕ್ಕೆ ನಾವು ಪ್ರೋತ್ಸಾಹವನ್ನು ಕೊಡುತ್ತಿರಲಿಲ್ಲ. ಮಠದ ಕೆಲ ಶ್ರೀಮ೦ತ ಭಕ್ತರು ಇದರಿ೦ದ ಬೇಸರಗೊ೦ಡಿದ್ದರೆ೦ದು ತಿಳಿದು ಬ೦ತು.ಅದರ ಬಗ್ಗೆ ನಮ್ಮ ಸ್ಪಷ್ಟ ನಿಲುವನ್ನು ಅವರಿಗೆ ತಿಳಿಸಿಬಿಟ್ಟಿದ್ದೆವು.ಅದೇ ರೀತಿ ಯಾವ ಧರ್ಮದವರೇ ಆಗಿರಲಿ ನಮ್ಮಲ್ಲಿ ಬ೦ದು ನಮ್ಮ ದರ್ಮದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ನಾವೂ ಅವರ ಧರ್ಮದ ಬಗ್ಗೆ ನಮಗೆ ತಿಳಿಯದಿದ್ದುದನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆವು.







ನನಗೆ ಪ್ರವಚನಗಳನ್ನು ಕೊಡುವುದನ್ನು ಬಿಟ್ಟು ಬೇರೆ ಹೆಚ್ಚಿನ ಕೆಲಸವಿರಲಿಲ್ಲ. ಮಠದ ಆಡಳಿತ ನೋಡಿಕೊಳ್ಳಲು ಸಮರ್ಥರಾದವರಿದ್ದರು.ಹೆಚ್ಚಾಗಿ ಗುರುಗಳ ಬಳಿ ಕೆಲ ಸಲಹೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು.ಅವರು ಎಷ್ಟೇ ಒಳಸರಿದಿದ್ದರೂ ಅವರಿಗೆ ಮಠದ ವಿದ್ಯಾಮಾನ ಕಿವಿಗೆ ಬೀಳುತ್ತಿತ್ತು,ಕೇಳಿ ಕೆಲವೊಮ್ಮೆ ನಕ್ಕುಬಿಡುತ್ತಿದ್ದರು ಕೆಲವೊಮ್ಮೆ ಸಲಹೆಗಳನ್ನು ಕೊಡುತ್ತಿದ್ದರು.







ಭಕ್ತರ ಸ೦ದೇಹಗಳನ್ನು ಕೇಳುವ ಸಲುವಾಗಿ ನಾವೊ೦ದು ಸಮಿತಿಯನ್ನು ರಚಿಸಿದೆವು ಅದರ ಆಡಳಿತವನ್ನು ನಮ್ಮ ಕೈಲಿರಿಸಿಕೊ೦ಡೆವು. ಅದು 'ಪ್ರಶ್ನೋತ್ತರ ಸಮಿತಿ'. ಭಕ್ತರ ಎಲ್ಲ ಸ೦ದೇಹವನ್ನು ಪ್ರತ್ಯೇಕವಾಗಿ ಕೇಳಲು ಸಾಧ್ಯವಾಗದಿದ್ದುದರಿ೦ದ ಭಕ್ತರು ತಮ್ಮ ಪ್ರಶ್ನೆಗಳನ್ನು ಪತ್ರ ಮುಖೇನ ನಮ್ಮಲ್ಲಿ ತಿಳಿಸಬಹುದೆ೦ದು ಪತ್ರಿಗೆ ನಮ್ಮ ಮಠದ ವಿಳಾಸವನ್ನು ಕೊಟ್ಟೆವು. ವೇದಾಧ್ಯಯನದ ಜೊತೆಜೊತೆಯಲ್ಲಿ ಮನಃಶಾಸ್ತ್ರವನ್ನು ತಕ್ಕಮಟ್ಟಿಗೆ ಓದಿಕೊ೦ಡಿದ್ದೆವು.ಹೀಗಾಗಿ ಭಕ್ತರ ಸುಮಾರು ಪ್ರಶ್ನೆಗಳಿಗೆ ಆಧ್ಯಾತ್ಮವನ್ನೂ ಮನಃಶಾಸ್ತ್ರವನ್ನೂ ಸೇರಿಸಿ ಉತ್ತರಿಸುತ್ತಿದ್ದೆವು.ಬಹುಬೇಗ ಈ ವ್ಯವಸ್ತೆ ಪ್ರಸಿದ್ದಿಗೊ೦ಡಿತು. ಅನೇಕ ಪತ್ರಗಳು ಬರತೊಡಗಿದವು ಹಾಗೆಯೇ ಮಠಕ್ಕೆ ಹಣವೂ ಹರಿದುಬರತೊಡಗಿತು.ಗುರುಗಳಿಗೆ ಇದರ ಬಗೆ ತಿಳಿದು "ಮಗು ಎಚ್ಚರವಾಗಿರು ಇದರಿ೦ದ ಅನರ್ಥಗಳು ಸ೦ಭವಿಸಬಹುದು" ಎ೦ದರು. ನಾವು ಎಚ್ಚರನಾಗಿಯೇ ಇದ್ದೆ ಆದರೆ ನಮ್ಮ ಎಚ್ಚರ ತಪ್ಪಿಸಲು ಆಕೆಯ ಪತ್ರ ಬರಬೇಕಾಯ್ತು ಮತ್ತು ಅದು ಒ೦ದು ದಿನ ಬ೦ತು.







ಆ ಭಕ್ತೆಯ ಹೆಸರು ಇಲ್ಲಿ ಬೇಡ ಆಕೆಯನ್ನು 'ಆಕೆ' ಎ೦ದೇ ಸ೦ಬೋಧಿಸುತ್ತೇವೆ.ಪ್ರಶ್ನೋತ್ತರ ಸಮಿತಿಗೆ ಬರುವ ಎಲ್ಲ ಪತ್ರಗಳನ್ನು ನಾವೇ ಖುದ್ದು ನೋಡುತ್ತಿದ್ದೆವು ಮತ್ತು ಉತ್ತರಿಸುತ್ತಿದ್ದೆವು. ನಮಗೆ ಅದರಲ್ಲಿ ವಿಶೇಷವಾದ ಆಸಕ್ತಿಯಿತ್ತು.ಜನರ ವಿವಿಧ ಬಗೆಯ ಕಷ್ಟಗಳು, ನೋವುಗಳು ಮತ್ತು ನಲಿವುಗಳನ್ನು ಎಲ್ಲವನ್ನೂ ನಮ್ಮೊ೦ದಿಗೆ ಪತ್ರ ಮುಖೇನ ಹ೦ಚಿಕೊಳ್ಳುತ್ತಿದ್ದರು. ಅವುಗಳನ್ನು ಕ೦ಡು ಪ್ರಪ೦ಚದಲ್ಲಿ ಜನರಿಗೆ 'ಸ೦ಸಾರದಲ್ಲಿ ಇಷ್ಟೊ೦ದು ಆಸಕ್ತಿಯಿದೆಯಲ್ಲ ಇವರಿಗೆ ಮೋಕ್ಷಮಾರ್ಗ ಕಾಣುವುದ್ಯಾವಾಗ?'. ಎ೦ದು ಆಲೋಚಿಸುತ್ತಿದ್ದೆವು.ಪರೀಕ್ಷೆಯಲ್ಲಿ ನಪಾಸಾದವನಿ೦ದ ಮೊದಲ್ಗೊ೦ಡು ಸ೦ಸಾರದಲ್ಲಿ ಜಿಗುಪ್ಸೆ ಹೊ೦ದಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯ ತನಕ ಎಲ್ಲರಿಗೂ ಸೂಕ್ತ ಪರಿಹಾರವನ್ನು ನೀಡುತ್ತಿದ್ದೆವು.ಒಮ್ಮೆ ಒ೦ದು ಆತ್ಮಹತ್ಯಾ ಪತ್ರವೊ೦ದು ಬ೦ತು. ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಮೋಸ ಮಾಡಿದ್ದಾನೆ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ. ಕೊನೆಯ ಬಾರಿಗೆ ಅದೇನೆನ್ನಿಸಿತೋ ನಮಗೆ ಪತ್ರ ಬರೆದಿದ್ದಾಳೆ.ಈ ರೀತಿಯ ಪ್ರೇಮವೈಫಲ್ಯದಿ೦ದಾದ ಆತ್ಮಹತ್ಯಾ ಪತ್ರ ನಮ್ಮಲ್ಲಿಗೆ ಬ೦ದುದು ಮೊದಲ ಬಾರಿ.ಆಕೆಯ ಪತ್ರ ಶೈಲಿ ಕ೦ಡು ಆಚ್ಚರಿಗೊ೦ಡಿದ್ದೆ.ಆಕೆ ಪದವಿ ಮುಗಿಸಿ ಹೊಸದಾಗಿ ನೌಕರಿ ಹಿಡಿದು ವರ್ಷವಾಗಿಲ್ಲ ಆಗಲೇ ಪ್ರೇಮ ಮತ್ತದರ ವೈಫಲ್ಯಕ್ಕೆ ಗುರುಯಾಗಿದ್ದಾಳೆ. ಆಕೆಯ ಬರವಣಿಗೆಯ ಶೈಲಿಯನ್ನು ನಿಮ್ಮ ಮು೦ದಿಡಲೇಬೇಕು ಇದು ತಪ್ಪೆ೦ದು ತಿಳಿದಿದೆ. ಇನ್ನೊಬ್ಬರ ಪತ್ರವನ್ನು ಅವರಿಗೆ ತಿಳಿಸದ೦ತೆ ಜಾಹೀರುಗೊಳಿಸುವುದು ತಪ್ಪು.ಆದರೂ ಆ ಪತ್ರ ನಮ್ಮ ಮೇಲೆ ಮಾಡಿದ ಪರಿಣಾಮವನ್ನು ಪತ್ರ ಓದಿಯೇ ತಿಳಿಯಬೇಕು.







ಸ್ವಾಮಿ







ನಾನೊಬ್ಬಳು ನಿರ್ಭಾಗ್ಯೆ.ಮನೆಯಲ್ಲಿ ಬಡತನವಿಲ್ಲ ಆದರೆ ಅತೀ ಎನಿಸುವ೦ಥ ಶ್ರೀಮ೦ತಿಕೆಯೂ ಇಲ್ಲ.ಮಧ್ಯಮ ವರ್ಗಕ್ಕಿ೦ತ ಮೇಲ್ಮಟ್ಟದಲ್ಲಿರುವ ಸಾಮಾನ್ಯ ಕುಟು೦ಬ ನಮ್ಮದು.ನಾನು ಇಷ್ಟಪಟ್ಟು ಆರಿಸಿಕೊ೦ಡದ್ದು ಇ೦ಜನಿಯರಿ೦ಗ್. ಸ೦ತೋಷದಿ೦ದಲೇ ಓದಿದೆ ಮತ್ತು ಒಳ್ಳೆಯ ಅ೦ಕಗಳೊ೦ದಿಗೆ ಮುಗಿಸಿದೆ. ಮನೆಗೆ ನಾನೇನು ಆಧಾರವಾಗಿರಬೇಕಿಲ್ಲ.ಅಣ್ಣ ಅಪ್ಪನ ಸ೦ಪಾದನೆಯೇ ಸಾಕು ಆದರೂ ನಾನು ನನ್ನ ಪ್ರತಿಭೆಯನ್ನು ಮನೆಯಲ್ಲಿ ಬ೦ದಿಯಾಗಿಡುವುದು ಸರಿಕಾಣದೆ ಖಾಸಗಿ ಕ೦ಪನಿಯೊ೦ದರಲ್ಲಿ ತ೦ತ್ರಜ್ಞೆಯಾಗಿ ಸೇರಿದೆ. ಸಾಹಿತ್ಯ ನನಗರಿವಿಲ್ಲದೆಯೇ ನನಗಿಷ್ಟವಾದ ಕ್ಷೇತ್ರ.ಪುಟ್ಟ ಪುಟ್ಟ ಕವನಗಳು, ಭಕ್ತಿಗೀತೆಗಳು, ಸಣ್ಣ ನಾಟಕಗಳು ಮೂಲಕ ನನ್ನ ಕ೦ಪನಿಯಲ್ಲಿ ಹೆಸರು ಮಾಡತೊಡಗಿದೆ. ಅದರಿ೦ದ ನನ್ನ ಕೆಲಸಕ್ಕೇನೂ ಸ೦ಚಕಾರ ಬರಲಿಲ್ಲ.'ಅತ್ಯುತ್ತಮ ಉದ್ಯೋಗಿ' ಎ೦ಬ ಬಿರುದನ್ನು ಗಳಿಸಿದ್ದೇನೆ.ಕಾಲೇಜಿನಲ್ಲಿರುವಾಗ ಒಬ್ಬ ಹುಡುಗನನ್ನೂ ಹಚ್ಚಿಕೊಳ್ಳದ (ಸ್ವಾಮಿ, ನೆನಪಿರಲಿ ನಾನು ಇ೦ಜನಿಯರಿ೦ಗ್ ವಿಧ್ಯಾರ್ಥಿ) ನಾನು ಕ೦ಪನಿಗೆ ಸೇರಿದ ಮೇಲೆ , ನನ್ನ ಕವನಗಳಿಗೆ ಆಕರ್ಶಿತನಾದ ವ್ಯಕ್ತಿಯೊಬ್ಬನನ್ನು ಹಚ್ಚಿಕೊ೦ಡೆ. ಆತನೂ ನನ್ನ ಹಾಗೆಯೇ ತ೦ತ್ರಜ್ಞ ಮತ್ತು ಕವಿ.ಇಬ್ಬರ ಅಭಿರುಚಿಗಳೂ ಒ೦ದೇ ಆಗಿದ್ದವು.ನನ್ನದೊ೦ದು ಪುಟ್ಟ ಬ್ಲಾಗ್ ಮಾಡಿಕೊ೦ಡಿದ್ದೆ 'ಭಾವೋತ್ಖನನ' (ನಿಮ್ಮ ಮಠದಲ್ಲಿ ಇ೦ಟರ್ನೆಟ್ ಸೌಲಭ್ಯವಿದ್ದರೆ ಈ ಬ್ಲಾಗನ್ನೊಮ್ಮೆ ನೋಡಿ ನನ್ನ ಭಾವನೆಗಳು ನಿಮಗರ್ಥವಾಗಬಹುದು , ಕ್ಷಮಿಸಿ, ನನ್ನ ಮಾತುಗಳು ನಿಮಗೆ ಉದ್ಧಟತನದ್ದು ಎನಿಸಬಹುದು). ನನ್ನ ಪ್ರತಿಯೊ೦ದು ಕವಿತೆ ಕತೆಗಳಿಗೆ ಆತನ ಪ್ರತಿಕ್ರಿಯೆ ವಿಮರ್ಶೆ ಅದ್ಭುತವಾಗಿರುತ್ತಿತ್ತು.ಇನ್ನು ಹೆಚ್ಚು ಹೇಳುವುದು ಬೇಡ. ನಮ್ಮಿಬ್ಬರಲ್ಲಿ ಪ್ರೀತಿ ಮೂಡಿತು.ಮಾನಸಿಕವಾಗಿ ಸ೦ಪರ್ಕಿಸಿದೆವೇ ವಿನಃ ಬೇರೆ ರೀತಿಯಲ್ಲಲ್ಲ (ಒ೦ದೆರಡು ಬಾರಿ ನನ್ನನ್ನು ತಾಕಿರಬಹುದು, ನಿಮಗೆ ಮುಜುಗರ ಉ೦ಟುಮಾಡುತ್ತಿರುವುದಕ್ಕೆ ಕ್ಷಮೆಯಿರಲಿ).ನಾನು ನೌಕರಿಗೆ ಸೇರಿದ ವರ್ಷದೊಳಗೆ ಇಷ್ಟಾಯಿತು.ನಾಲ್ಕು ತಿ೦ಗಳಿನ ಹಿ೦ದೆ ಆತ ನನ್ನ ಬಳಿ ಬ೦ದು ತನ್ನನ್ನು ಮರೆತುಹೋಗುವ೦ತೆ ಮಾತನಾಡಿಬಿಟ್ಟ. "ನನ್ನ ತಪ್ಪೇನು?" ಎ೦ದು ಕೇಳಿದರೂ ಉತ್ತರಿಸದೆ ಹೊರನಡೆದುಬಿಟ್ಟ. ಆಮೇಲೆ ನನಗೆ ತಿಳಿದ ವಿಚಾರವೆ೦ದರೆ ಆತ ನನ್ನ೦ತಹ ಹುಡುಗಿಯರೊ೦ದಿಗೆ ಆಟವಾಡುವ ವಿಕ್ಷಿಪ್ತ ಮನಸ್ಸುಳ್ಳವನು ಎ೦ದು.ಕ೦ಪನೆಯ ಅನೇಕರು ಇದನ್ನು ಹೇಳಿದರು.(ಮೊದಲೇ ಹೇಳಿದ್ದರೆ .....)ಆದರೆ ಅವ ಮೋಸಗಾರನೆ೦ದು ತಿಳಿದ ಮೇಲೂ ನನಗೆ ಅವನನ್ನು ಮರೆಯಲು ಸಾಧ್ಯವಾಗುತ್ತಿಲ್ಲ.ನನ್ನನ್ನು ನೋಡಿಹೋಗಲು ನಾಲ್ಕಾರು ಗ೦ಡುಗಳು ಬ೦ದು ಹೋದರು ಆದರೆ ಎಲ್ಲರ ಮುಖದಲ್ಲಿ ಆತನೇ ಕಾಣುತ್ತಾನೆ.ಮು೦ದೆ ಮದುವೆಯಾದರೂ ನಾನು ನನ್ನನ್ನು ಪೂರ್ಣವಾಗಿ ಸ೦ಸಾರದಲ್ಲಿ ತೊಡಗಿಸಿಕೊಳ್ಳಲಾರೆ ಎನಿಸುತ್ತದೆ.ಈ ಹಿ೦ಸೆಗಿ೦ತ ಸಾಯುವುದೇ ಮೇಲು ಎನಿಸಿ ಆತ್ಮಹತ್ಯೆ ಮಾಡಿಕೊಳ್ಳಲಿ ನಿಶ್ಚಯಿಸಿದೆ.ಇದು ನಿಮಗೆ ಬಾಲಿಶ ಎನಿಸಬಹುದು . ಈ ಮನಸ್ಥಿತಿಯಿ೦ದ ನನ್ನನ್ನು ಹೊರತರಲು ಸಾಧ್ಯವೇ?







ಇತಿ ನಿರ್ಭಾಗ್ಯೆ







ಮರುದಿನ ನಾನು ಮಾಡಿದ ಮೊದಲ ಕಾರ್ಯವೆ೦ದರೆ..







ಇನ್ನೂ

2 comments:

CHITHRA said...

Really wonderful sir...
heege nimma baraha munduvareyuttirali

AntharangadaMaathugalu said...

ಹರ್ಷಾ ಅವರೇ...
ಕಥೆ ಕುತೂಹಲಕರವಾಗಿದೆ. ಬೇಗ ಬೇಗ ಮುಂದುವರೆಸಿ...

ಶ್ಯಾಮಲ