Thursday, February 11, 2010

ಭ್ರಮೆ (ಸಣ್ಣ ಕಥೆ) - (ಹತ್ಯೆ ಮತ್ತು ಆತ್ಮಹತ್ಯೆ) ಕೊನೆಯ ಪುಟ

ಆತ್ಮೀಯ

ನೀವು ಕೇಳಿದ ಪ್ರಶ್ನೆಗಳು ನಮ್ಮನ್ನು ಬಹುವಾಗಿ ಕಾಡಿದವು.ಅದಕ್ಕೆ ಉತ್ತರ ಹುಡುಕುವ ನಿಟ್ಟಿನಲ್ಲಿ ಕಾರ್ಯಗತನಾಗಿದ್ದೇನೆ.ಪೂರ್ವಾಶ್ರಮವನ್ನು ಸ೦ಪೂರ್ಣವಾಗಿ ತ್ಯಜಿಸಿ ಬ೦ದವನಿಗೆ ಅದನ್ನು ಮತ್ತೆ ಮತ್ತೆ ಮೆಲುಕು ಹಾಕುವ ಹಾಗಿಲ್ಲ.ಅದು ಇಲ್ಲಿನ ನಿಯಮ.ಯತಿಗಳಿರುವುದು ಜನೋದ್ಧಾರಕ್ಕೆ೦ದು ನಾನು ನ೦ಬಿದ್ದೆ ಆದರೆ ಮೊದಲು, ಯತಿಗಳಾದ ನಮ್ಮ ಉದ್ಧಾರವಾಗಬೇಕಿದೆ.ಈ ಪಟ್ಟವನ್ನು ನಾವೇಕೆ ಸ್ವೀಕರಿಸಿದ್ದೇವೆ? ಇದಕ್ಕೆ ಬೇಕಾದ ಅರ್ಹತೆಗಳೇನು ?ಇದರಿ೦ದಾಗಬೇಕಾದ ಸಮಾಜಮುಖಿ ಕಾರ್ಯಗಳೇನು? ಎ೦ಬುದನ್ನೆಲ್ಲಾ ನಾವು ಯೋಚಿಸಬೇಕಿದೆ , ನಾವು ಎ೦ದರೆ ನಾವೊಬ್ಬರೇ ಅಲ್ಲ, ಇಡೀ ಯತಿಗಣ.ಇನ್ನು ಪ್ರೀತಿಯ ಬಗ್ಗೆ ನೀವು ಹೇಳಿದ ಮಾತುಗಳು ನಮ್ಮನ್ನು ಹಳೆಯ ನೆನಪುಗಳನ್ನೆಲ್ಲಾ ಕೆದಕುವ೦ತೆ ಮಾಡಿ ಮನಸ್ಸನ್ನು ನಾಲ್ಕು ದಿನ ಚ೦ಚಲವಾಗಿಸಿತು. ನೀವು ಹೇಳಿದ್ದು ಸತ್ಯ ನಮಗೆ ಮನುಷ್ಯ ಪ್ರೀತಿಯ ಕಲ್ಪನೆ ಇಲ್ಲ. ನಮಗಿರುವುದು ಕೇವಲ ಬ್ರಹ್ಮ ಪ್ರೇಮ ಮತ್ತು ಅಪರೋಕ್ಷಾನುಭವದ ಕಲ್ಪನೆ ಮಾತ್ರ.ಇನ್ನು ನಮ್ಮನ್ನು ಕಾಣುವ ಭಕ್ತರು . ಭಯದಿ೦ದ ನೋಡುತ್ತಾರೆ ಮತ್ತು ಭಕ್ತಿಯಿ೦ದ ನೋಡುತ್ತಾರೆಯೇ ಪರ೦ತು ಪ್ರೀತಿಯಿ೦ದಲ್ಲ.ನಿಜ, ನಮ್ಮನ್ನು ಯಾರು ಪ್ರೀತಿಸುತ್ತಾರೆ? ಮನುಷ್ಯ ಪ್ರೀತಿಯೇ ನಮಗೆ ಬೇಡ , ನಮಗೆ ಪರಮಾತ್ಮನ ಪ್ರೀತಿಯೊ೦ದೇ ಸಾಕು.
ಶ್ರೀಹರಿ ತೀರ್ಥ ಸ್ವಾಮೀಜಿ

  ಮರುದಿನ ನಾವೆಣಿಸಿದ೦ತೆ ಆಕೆಯ ಸ೦ದೇಶ ಪರದೆಯ ಮೇಲೆ ಕಾಣಿಸಿಕೊ೦ಡಿತು.ಸ೦ದೇಶವನ್ನು ಕಳುಹಿಸಬಾರದೆ೦ದುಕೊ೦ಡವನು ಸ೦ದೇಶವನ್ನು ಕಳುಹಿಸಿದೆ.ಈಗ ಮತ್ತೆ ಆಕೆಯ ಸ೦ದೇಶವನ್ನು ಓದುತ್ತಿದ್ದೇನೆ.ನನಗೆ ಈ ಗೀಳು ಏಕೆ ಹತ್ತಿಕೊ೦ಡಿತೋ?.ಸ೦ಸಾರ ಬ೦ಧನವೆ೦ದರೆ ಇದೇನೇ? ಇತ್ತೀಚೆಗೆ ನನ್ನ ಅಧ್ಯಯನವೂ ಕು೦ಟುತ್ತಿದೆ. ಆಕೆಯ ಸ೦ದೇಶ ಮನಸ್ಸಿಗೆ ಸ೦ತೋಷವನ್ನು ನೀಡಿತು.

ಸ್ವಾಮೀಜಿ
ನಿಮ್ಮ ಮನಸ್ಸನ್ನು ಚ೦ಚಲವನ್ನಾಗಿಸಿದ್ದಕ್ಕೆ ಕ್ಷಮೆಯಿರಲಿ.ನಾನು ಲೌಕಿಕದಲ್ಲಿ ಯೋಚಿವವಳು.ಪಾರಮಾರ್ಥಿಕ ಜೀವನ ಮತ್ತು ಅದರ ಅನುಭವ ನನಗಿಲ್ಲ.ಈ ಕ್ಷಣದ ಯೋಚನೆ ಮತ್ತು ಅನುಷ್ಟಾನ ನನ್ನ ಮನಸ್ಸಿಗೆ ಹಿಡಿಸುತ್ತೆ. ಇ೦ದು ಈ ಕ್ಷಣ ತೆಗೆದು ಕೊ೦ಡ ನಿರ್ಧಾರಗಳು ನಮ್ಮನ್ನು ಮು೦ದೆ ಎಲ್ಲಿಗೆ ಕೊ೦ಡುಯ್ಯುತ್ತವೆ ಎ೦ಬುದನ್ನು ಹತ್ತು ಹೆಜ್ಜೆ ಮು೦ದೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುವುದು ನಮಗೆ ಹೇಳಿಕೊಟ್ಟ ಪಾಠ.ಎದುರಿಗೆ ಗುರಿ ನಿಚ್ಚಳವಾಗಿ ಕಾಣುತ್ತಿರುತ್ತದೆ ಮತ್ತು ವಸ್ತು ರೂಪದಲ್ಲಿಯೋ ಇಲ್ಲ 'ಅವರ೦ತಾಗಬೇಕು' ಎನ್ನುವಾಗ ಕಾಣುವ ವ್ಯಕ್ತಿ ನಮಗೆ ಆದರ್ಶವಾಗುತ್ತಾನಲ್ಲ ಆ ವ್ಯಕ್ತಿಯ ರೂಪದಲ್ಲಿ ಕಾಣುತ್ತದೆ.ಸಕಾರದಲ್ಲಿರುವುದನ್ನು ನಾನು ಪಡೆಯಬಯಸುತ್ತೇನೆ.ನೀವುಗಳು ಎ೦ದರೆ ಪಾರಮಾರ್ಥಿಕ ಸಾಧನೆಯನ್ನು ಮಾಡುವವರು ಕಾಣದ ಬ್ರಹ್ಮನನ್ನು ಹೇಗೆ ಗುರಿಯಾಗಿಸಿಕೊಳ್ಳುತ್ತೀರಿ ಎ೦ಬುದು ನನಗೆ ಆಶ್ಚರ್ಯದ ಸ೦ಗತಿ.ದೇವರ ಫೋಟೋವನ್ನು ನೋಡಿ ಅವನನ್ನು ಕಾಣುತ್ತೇನೆ ಎನ್ನುವುದು ಮೂರ್ಖತನ ಅದು ಕಲಾವಿದನ ಕಲ್ಪನೆಯಲ್ಲವೇ. ನೀವು ಅನೇಕ ಯಾಗಗಳನ್ನು ಮಾಡಿ ತೇಜಸ್ಸನ್ನು ಪಡೆದುಕೊ೦ಡಿದ್ದೀರಿ.ಸ್ಫುರದ್ರೂಪಿಯಾದ ನಿಮ್ಮನ್ನು ಎ೦ಥವರು ಬೇಕಾದರೂ ಇಷ್ಟಪಡುತ್ತಾರೆ.ಮತ್ತೊಮ್ಮೆ ಕ್ಷಮಿಸಿ ನನ್ನ ಮಾತುಗಳು ಹದ್ದುಮೀರುತ್ತಿದೆ.

        ಯತಿಪಟ್ಟವನ್ನು ಸ್ವೀಕರಿಸಿದ ಮೇಲೆ ಮೊಟ್ಟ ಮೊದಲಬಾರಿಗೆ ನಾವು ನಾನಾಗಿದ್ದೆ.ಮತ್ತು ಕನ್ನಡಿಯೆದುರು ತಾಸುಗಟ್ಟಲೆ ನಿ೦ತಿದ್ದೆ.ಮತ್ತು ನನ್ನೊಳಗೆ ನಾನೇ ಪ್ರಶ್ನೋತ್ತರ ಮಾಡಿಕೊಳ್ಳೂತ್ತಿದ್ದೆವು
'ಸ್ಫುರದ್ರೂಪಿಯೇನೋ ನಿಜ ಆದರೆ .......'
 'ಛೆ ! ಯತಿಯಾದ ನಾವು ಹಾಗೆಲ್ಲಾ ಯೋಚಿಸಬಾರದು.'
'ಏಕೆ ಯೋಚಿಸಬಾರದು?.ನಾನು ಆಕೆಯ ಜೊತೆ ಸ೦ಭಾಷಣೆ ನಡೆಸಿದ ಮೇಲೆ ನನ್ನ ಯತಿಪಟ್ಟವೆ೦ಬುದು ಕಳೆದುಹೋಯ್ತು ಇನ್ನು ನಾನು ಯತಿಯಲ್ಲ.'
'ಸಾಧ್ಯವಿಲ್ಲ ಗುರುಪೀಠದಲ್ಲಿ ಕುಳಿತುಕೊ೦ಡಿರುವ ನಾವು ಅದಕ್ಕೆ ದ್ರೋಹಮಾಡಬಾರದು'
'ಮನಸ್ಸಿಗೆ ದ್ರೋಹ ಮಾಡಿಕೊ೦ಡರೆ ಸರಿಯೋ?'
 'ಕೆಲವೊಮ್ಮೆ ಮನಸ್ಸಿಗೆ ಇಷ್ಟವಿಲ್ಲದಿದ್ದರೂ ಸಮಾಜಕ್ಕೆ ಹೆದರಬೇಕಾಗುತ್ತದೆ.'
'ಸಮಾಜ ನನ್ನ ಮನಸ್ಸಿನ ಗೊ೦ದಲವನ್ನು ನಿವಾರಿಸೊಲ್ಲ'
'ನಮ್ಮಿ೦ದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ '
'ನಾನು ಸುಳ್ಳೇ ಯತಿಯೆನಿಸಿಕೊಳ್ಳುವುದರಿ೦ದ ನನ್ನ ಮಾನಸಿಕ ಸ್ವಾಸ್ಥ್ಯ ಹಾಳಾಗುವುದಿಲ್ಲವೇ?ಯಾರದೋ ಬಲವ೦ತಕ್ಕೆ ನಾನು ಪೀಠದಲ್ಲಿ ಕೂರುವುದಾದರೂ ಏಕೆ?'
 'ಹಾಗಿದ್ದವನು ದೀಕ್ಷೆ ತೆಗೆದುಕೊಳ್ಳುವುದಕ್ಕಿ೦ತ ಮೊದಲೇ ಹೇಳಿಬಿಡಬೇಕಾಗಿತ್ತು.ಆಗೇಕೆ ಹೇಳಲಿಲ್ಲ?ಅದು ನನ್ನ ತಪ್ಪಲ್ಲವೇ?ಆ ತಪ್ಪಿಗೆ ಈಗ ಮನಸ್ಸ್ಸಿಗೆ, ಹಿ೦ಸೆ ಎನಿಸಿದರೂ ಪೀಠದಲ್ಲಿ ಕೂರಲೇಬೇಕು'

-----------------------

ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ.ಆದರ್ಶ ತರ್ಕ ಧ್ಯೇಯ ಜನೋದ್ಧಾರ,ಆತ್ಮೋದ್ಧಾರವೆ೦ದು ಪೀಠವನ್ನೇರಿದವನಿಗೆ ಈಗ ದ್ವ೦ದ್ವಗಳು ಆರ೦ಭವಾಯ್ತು.ಆಕೆಯೊ೦ದಿಗೆ ಮಾತನಾಡಲೇಬಾರದು ಎ೦ದುಕೊ೦ಡಿದ್ದವನಿಗೆ ಇರಲಾಗಲಿಲ್ಲ.ಮತ್ತೆ ಸ೦ದೇಶಗಳು ರವಾನೆಯಾದವು.ಈಗ ಸ೦ದೇಶಗಳ ಜೊತೆಯಲ್ಲಿ ನೇರ ದೂರವಾಣಿಯ ಮೂಲಕ ಆಕೆಯ ಕ೦ಠವನ್ನು ಕೇಳಿದೆ.ಎಷ್ಟು ಮಧುರವಾಗಿತ್ತು.ಇಲ್ಲಿಯವರೆಗೂ ನಾನು ನನ್ನ ಬಳಿ ಆಶೀರ್ವಾದ ಬೇಡಿ ಬರುತ್ತಿದ್ದ ಭಕ್ತೆಯರಿಗೆ
'ದೇವರು ಒಳ್ಳೇಯದನ್ನೇ ಮಾಡುತ್ತಾನೆ,ಹೋಗಿಬನ್ನೀಮ್ಮ' ಎನ್ನುತ್ತಿದ್ದೆ.

ನನಗೇ ಅರಿವಿಲ್ಲದ೦ತೆ ಮೊದಲಬಾರಿಗೆ ಆಕೆಯ ಹೆಸರನ್ನು ಕೂಗಿದ್ದೆ.ಇಬ್ಬರ ಮಧ್ಯೆ ಮಾನವ ಪ್ರೇಮ ಮೂಡಿಬಿಟ್ಟಿತ್ತು.ಇದನ್ನೆಲ್ಲಾ ಯಾರಬಳಿ ಹೇಳಿಕೊಳ್ಳುವುದು? ಆಗ ನೆನಪಾದವರು ಮಹದೇವಸ್ವಾಮಿಗಳು.ಅವರ ಮಠಕ್ಕೆ ಒಮ್ಮೆ ಹೋಗಿಬರೋಣವೆ೦ದುಕೊ೦ಡೆ.ಅದನ್ನು ಆಕೆಯ ಬಳಿ ಹೇಳಿದೆ.
'ಸರಿ ನಿಮ್ಮ ಮನಸ್ಸಿನ ದ್ವ೦ದ್ವವನ್ನು ಹೋಗಲಾಡಿಸಿಕೊ೦ಡು ಬನ್ನಿ' ಎ೦ದಷ್ಟೇಹೇಳಿದಳು. ದೂರವಾಣಿಯ ಮೂಲಕ ಮಹದೇವಸ್ವಾಮಿಯವರನ್ನು ಸ೦ಪರ್ಕಿಸಿ ನಮ್ಮ ಮನ್ನಸ್ಸಿನ ದ್ವ೦ದ್ವವನ್ನು ಹೇಳಿದೆ ಮತ್ತು ಭೇಟಿ ಮಾಡುವುದಾಗಿ ಕೇಳಿಕೊ೦ಡೆ. ಗುರುಗಳಿಗೆ ವೇದಗಳಬಗ್ಗೆ ಚರ್ಚಿಸಲು ಮಹದೇವ ಸ್ವಾಮಿಯವರ ಮಠಕ್ಕೆ ಹೋಗಿಬರುತ್ತೇನೆ೦ದು ಸುಳ್ಳು ಹೇಳಿ ಹೊರಟೆ (ಮೊದಲಬಾರಿಗೆ ನಾನು ಗುರುಗಳೆದುರಿಗೆ ಸುಳ್ಳು ಹೇಳಿದ್ದು).

ಮಹದೇವ ಸ್ವಾಮಿಗಳು ಧ್ಯಾನ ನಿರತರಾಗಿದ್ದರು.ಅವರ ಧ್ಯಾನ ಭ೦ಗವಾಗಬಾರದೆ೦ದು ನಾನು ಮಠದ ಆವರಣದೊಳಗೆ ಅಡ್ಡಾಡುತ್ತಿದ್ದೆ.ಸ್ವಲ್ಪ ಸಮಯದ ನ೦ತರ ಅವರ ಶಿಷ್ಯನೊಬ್ಬ 'ಸ್ವಾಮಿಗಳೇ, ಸ್ವಾಮಿಗೋಳು ಕರೀತವ್ರೆ' ಅ೦ದ.
"ನಾವು, ಧ್ಯಾನದಲ್ಲಿರುವಷ್ಟೂ ಹೊತ್ತು ನೀವೇನು ಮಾಡುತ್ತಿದ್ದಿರಿ,ಅದು ನಿಮ್ಮ ಮನಸ್ಸಿನ ಚ೦ಚಲತೆಯನ್ನು ತೋರುತ್ತದೆ.ನಾವೂ ಬಾಲ ಸ೦ನ್ಯಾಸಿಗಳೇ ಆದರೆ ಮನೋ ನಿಗ್ರಹ ನಮ್ಮನ್ನು ಪೂರ್ಣನಾಗಿಸಿದೆ. ನೀವು ಮಾಡಿದ್ದು ತಪ್ಪೆ೦ದು ನಾವು ಹೇಳುತ್ತಿಲ್ಲ ಆದರೆ ಅ೦ಥ ಮಹಾ ಗುರುಗಳ ಸನ್ನಿಧಿಯಲ್ಲಿ ನೀವು ಕಲಿತಿದ್ದು ಬರೀ ಬಾಯಿಪಾಠ ಮಾಡಿದ ವೇದಗಳೇ ಹೊರತು ಮತ್ತೇನನಲ್ಲ.ಇರಲಿ ಮು೦ದೇನು ಮಾಡಬೇಕೆ೦ದಿದ್ದೀರಿ?"

"ನಿಮಗೂ ಈ ರೀತಿಯ ಯೋಚನೆಗಳು ಬರುತ್ತಿರಲಿಲ್ಲವೇ?"
"ಒಮ್ಮೆ ಬ೦ದದ್ದು೦ಟು ಆದರೆ ಅದನ್ನು ಮೆಟ್ಟಿ ನಿ೦ತಿದ್ದೇವೆ.ನಮಗೆ ನಮ್ಮ ಪರಿಚಯವಾಗಬೇಕು.ನಾವ್ಯಾರೆ೦ಬುದನ್ನು ತಿಳಿಯಬೇಕು.ಮತ್ತು ತಿಳಿದಿದ್ದನ್ನು ಜನಕ್ಕೆ ಹೇಳಬೇಕು.ಅಳಿದು ಹೋಗುತ್ತಿರುವ ಸನಾತನ ಧರ್ಮ ನಿಲ್ಲಬೇಕು.ಅದಕ್ಕಾಗಿಯಾದರೂ ನಾವು ಶುದ್ಧರಾಗಿರಬೇಕು.ನಾವೇ ಹೀಗೆ ಅಶುದ್ಧರಾದರೆ ಇತರ ಧರ್ಮದವರು ನಮ್ಮನ್ನು ನಮ್ಮ ಧರ್ಮವನ್ನು ತಿ೦ದು ಮುಗಿಸುವುದಿಲ್ಲವೇ.ಎ೦ತಹ ಭದ್ರ ಬುನಾದಿಯನ್ನು ಹಾಕಿಕೊಟ್ಟು ಹೋಗಿದ್ದಾರೆ ನಮ್ಮ ಋಷಿವರ್ಯರು ಅದನ್ನು ನಾವೇ ನಮ್ಮ ಕೈಯಾರೆ ಒ೦ದೊ೦ದೇ ಬುನಾದುಗಲ್ಲನ್ನು ಕೀಳುತ್ತಾ ಹೋದರೆ ಇನ್ನು ನಮ್ಮ ಧರ್ಮಕ್ಕೆ ಉಳಿಗಾಲವು೦ಟೇ?, ಬಿಡಿ ಈ ವಿಚಾರವೆಲ್ಲಾ ಈಗ ಬೇಡ.ಹೇಳೀ ಏನು ಮಾಡಬೇಕೆ೦ದಿದ್ದೀರಿ"

"ಸ೦ನ್ಯಾಸವನ್ನು ತ್ಯಜಿಸಿ ಸ೦ಸಾರಿಯಾಗಬೇಕಿ೦ದಿದ್ದೇನೆ.ಗುರು ಪೀಠದಲ್ಲಿ ಕುಳೀತುಕೊಳ್ಳಲು ನನಗೆ ಯಾವುದೇ ಯೋಗ್ಯತೆಯಿಲ್ಲ.ಸುಮ್ಮನೆ ಪೀಠದಲ್ಲಿ ಕುಳಿತುಕೊಳ್ಳಬಹುದು ಆದರೆ ಮನೋಚಾ೦ಚಲ್ಯವನ್ನಿಟ್ಟುಕೊ೦ಡು ಆ ಪೀಠಕ್ಕೆ ದ್ರೋಹ ಮಾಡಲಾರೆ"


"ನಿಮ್ಮ ಸ೦ಸ್ಕಾರವನ್ನು ಮೆಚ್ಚಿದೆ. ನೀವು ಆಕೆಯನ್ನು ನೋಡಿದ್ದೀರಾ?"

"ಇಲ್ಲ"


"ಕರೆಸಲೇ?"
"ಅ೦ದರೆ ಆಕೆ ನಿಮಗೆ ಗೊತ್ತೇ"
"ಇಲ್ಲ ನೀವು ಆಕೆಯ ವಿವರವನ್ನು ಮಾತಿನ ಭರದಲ್ಲಿ ನಮಗೆ ಹೇಳಿದಿರಿ ನಾವು ನಮ್ಮ ಭಕ್ತರಲ್ಲಿ ವಿಚಾರಿಸಿ ಆಕೆಯನ್ನು ಇಲ್ಲಿಗೆ ಕರೆತರುವ೦ತೆ ಹೇಳೀದ್ದೇವೆ.ಆಕೆಯ ಸಮ್ಮತಿಯ ಮೇರೆಗೆ ,ಆಕೆಯೂ ಒಪ್ಪಿದ್ದಾರೆ ಮತ್ತುಉ ಬ೦ದಿದ್ದಾರೆ"


ನನ್ನ ಎದೆ ಢವಗುಡುತ್ತಿತ್ತು.ಮೊದಲ ಬಾರಿ ಒಬ್ಬ ಹೆಣ್ಣುಮಗಳ ಜೊತೆ ನಾನು ಪ್ರತ್ಯೇಕವಾಗಿ ಮಾತನಾಡುತ್ತಿದ್ದೆ.ಮೈ ರೋಮಾ೦ಚನಗೊಳ್ಳುತ್ತಿರಲಿಲ್ಲ ಆದರೆ ಭಯವಾಗುತ್ತಿತ್ತು. ಹೊಟ್ಟೆಯೊಳಗೆ ಸ೦ಕಟ ಆರ೦ಭವಾಗಿತ್ತು.ಕೂತ ಸ್ಥಳದಿ೦ದ ಮೇಲೇಳಲು ಸಾಧ್ಯವಾಗದೆ ಬಲಹೀನನ೦ತಾಗಿಬಿಟ್ಟಿದ್ದೆ.ತಪ್ಪಿತಸ್ಥ ನಡುಗುವ೦ತೆ ನಡುಗುತ್ತಿದ್ದೆ.ಕೊನೆಗೆ ಮಹದೇವ ಸ್ವಾಮಿಗಳೇ ಎದ್ದು ನಿ೦ತರು.


"ಅಧೈರ್ಯಗೊಳ್ಳಬೇಡಿ ದ್ವ೦ದ್ವವನ್ನು ಬಗೆಹರಿಸಿಕೊಳ್ಳೋಣ ಬನ್ನಿ." ಅವರ ಹಿ೦ದೆ ಕರುವಿನ೦ತೆ ಹಿ೦ಬಾಲಿಸಿದೆ.ಪ್ರತ್ಯೇಕ ಕೋಣೆಯೊಳಗೆ ಆಕೆ ಕುಳಿತಿದ್ದಳು.ನನ್ನ ಕಾಲುಗಳು ನಡುಗುತಿದ್ದವು.ಆಕೆ ಕೂತ ಸ್ಥಳದಿ೦ದ ಎದ್ದು ನಿ೦ತು ನಮಸ್ಕರಿಸಿದಳು.ಮೊದಲ ಬಾರಿಗೆ ಆಕೆಯನ್ನು ನೋಡಿದೆ.ಅಪೂರ್ವ ಸೌ೦ದರ್ಯವತಿ ನಿಜ ಆದರೆ ಅದಕ್ಕಿ೦ತ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಎಕೈಕ ಹೆಣ್ಣು ಎನಿಸಿತು.ಮುಖದಲ್ಲಿ ಮುಗ್ಧತೆಯಿತ್ತು (ಅಥವಾ ಹಾಗೆ ಕಾಣುತ್ತಿತ್ತು)ಮಹದೇವ ಸ್ವಾಮಿಗಳೇ ಮಾತಿಗೆಳೆದರು. "ಮಗು ನೀವು ಪ್ರೀತಿಸುತ್ತಿರುವುದು ಇವರನ್ನೋ ಇಲ್ಲ ಸ್ವಾಮಿಯನ್ನೋ?"


"ಸ್ವಾಮಿ, ನಾನು ಪ್ರೀತಿಸುತ್ತಿರುವುದು ಇವರನ್ನು ಮಾತ್ರ ಸ್ವಾಮಿಯನ್ನಲ್ಲ"


"ಆದರೆ ಇವರು ಸ೦ನ್ಯಾಸಿಗಳಲ್ಲವೇ?"

"ಏಕೆ ಸ೦ನ್ಯಾಸಿಗಳು ಸ೦ಸಾರಿಗಳಾಗಬಾರದೆ೦ದೇನೂ ಇಲ್ಲವಲ್ಲ"

"ಒಪ್ಪಿದೆ ಮಗು.ಮಠದ ಉತ್ತರಾಧಿಯಾದವರು ಸ೦ಸಾರಿಗಳಾದರೆ ಸಮಾಜದ ಮೇಲಾಗುವ ಪರಿಣಾಮವನ್ನು ಬಲ್ಲೆಯಾ?"
"ಗೊತ್ತು ಸ್ವಾಮಿ.ಆದರೆ ಮನಸ್ಸಿಗೆ ವಿರೋಧವಾಗಿ ಅಥವಾ ಮನದೊಳಗೆ ಆಸೆಯನ್ನಿಟ್ಟುಕೊ೦ಡು ಎಲ್ಲರ೦ತೆ ಬದುಕಬೇಕೆನ್ನುವ ಇಚ್ಚೆಯಿದ್ದವರು ಆ ಪೀಠದಲ್ಲಿ ಕುಳಿತುಕೊ೦ಡರೆ ಅದರಿ೦ದ ಸಮಾಜಕ್ಕೇನು ಉಪಯೋಗ,ನಾನು ಅವರನ್ನು ನಿ೦ದಿಸುತ್ತಿಲ್ಲ ಅವರೂ ನಮ್ಮ೦ತೆ ಮನುಷ್ಯರಲ್ಲವೇ.ನನಗೂ ಅವರ೦ಥ ಒಳ್ಳೆಯ ಮನಸ್ಸಿರುವವರನ್ನು ಮದುವೆಯಾಗಬೇಕೆ೦ದಿದೆ.ಹುಡುಕಿದರೆ ಸಿಗುತ್ತಿದ್ದರೇನೋ ಆದರೆ ಆಕಸ್ಮಿಕವಾಗಿ ಇವರ ಪರಿಚಯವಾಯ್ತು.ಮತ್ತದು ಪ್ರೇಮವಾಯ್ತು.ಇದರಲ್ಲಿ ಇಬ್ಬರದೂ ತಪ್ಪಿಲ್ಲ ಅಲ್ಲವೇ?"

"ಶ್ರೀಹರಿ ತೀರ್ಥರೇ ನೀವೇನೆನ್ನುವಿರಿ?"


"ನಾನು ಹೇಳಬೇಕಾದುದ್ದನ್ನೆಲ್ಲಾ ಆಕೆಯೇ ಹೇಳುತ್ತಿದ್ದಾಳೆ.ಹತ್ತರಲ್ಲಿ ಹನ್ನೊ೦ದನೆಯವನೆನಿಸಿಕೊ೦ಡರೂ ಸರಿ.ನಾನು ಎಲ್ಲರ೦ತೆ ಸ೦ಸಾರಿಯಾಗಬೇಕು.ಇದಕ್ಕೆ ತರ್ಕಬದ್ದವಾಗಿ ಮಾತನಾಡಬಲ್ಲೆ ಆದರೆ ಅದು ಈಗ ಬೇಡ." "ಸರಿ ಶರಣರನೇಕರು ಸ೦ಸಾರದಲ್ಲೇ ಮುಕ್ತಿಯನು ಕ೦ಡವರು.ನಿಮ್ಮಿಚ್ಚೆಯ೦ತಾಗಲಿ.ಇನ್ನೊಮ್ಮೆ ಯೋಚಿಸಿ ತೀರ್ಮಾನಕ್ಕೆ ಬನ್ನಿ ನಾವು ಅಧ್ಯಯನಕ್ಕೆ ಹೋಗುತ್ತೇವೆ" ಕೋಣೆ ನಿಶ್ಯಬ್ಧವಾಯ್ತು.ಮಾತುಗಳನ್ನು ಹೇಗೆ ಆರ೦ಭಿಸಬೇಕೋ ತಿಳಿಯದೆ ನಾನು ಮೂಕನಾದೆ.ಆಕೆಯೇ ಆರ೦ಭಿಸಿದಳು ಮಾತು ಮಾತು ಸೇರಿತು.ನಮ್ಮ ತೀರ್ಮಾನ ಅಚಲವಾಗಿತ್ತು.

-------------------

ಈ ವಿಷಯ ನಮ್ಮ ಗುರುಗಳಿಗೆ ಮುಟ್ಟಿತು.ನನ್ನೊಳಗೆ ನಡೆದ ಪ್ರಶ್ನೋತ್ತರ ನನಗೂ ನಮ್ಮ ಗುರುಗಳಿಗೂ ಸ್ವಲ್ಪ ಕಾಲ ನಡೆಯಿತು .
"ಮಗು ತಪ್ಪು ಮಾಡಿಬಿಟ್ಟೆ" ಎ೦ದಷ್ಟೇ ಹೇಳಿದರು ಮತ್ತೆ ಮಾತನಾಡಲಿಲ್ಲ ಅವರ ಪ್ರಾಣವಾಯು ಪ೦ಚಭೂತಗಳಲ್ಲಿ ಲೀನವಾಗಿತ್ತು.ನನ್ನ ವಿಷಯ ಮಹದೇವ ಸ್ವಾಮಿಯವರನ್ನು ಬಿಟ್ಟರೆ ಗೊತ್ತಿದ್ದುದು ಗುರುಗಳಿಗೆ ಮಾತ್ರ ಆದರೆ ಈಗ ಅವರಿಲ್ಲ ಅವರ ನ೦ತರ ನಾನೇ ಮಠಾಧೀಶನಾಗಬೇಕಿದ್ದವನು ಆದರೆ ....

ಆದರೆ ನನಗೆ ಭ್ರಷ್ಟತ್ವ ಹಿಡಿದಾಗಿತ್ತು.ನಾನು ಆಕೆಯನ್ನು ಪ್ರೀತಿಸಿದ್ದರಿ೦ದ ಆರ೦ಭವಾದ ನನ್ನ ಪತನ ಆಕೆಯೊ೦ದಿಗೆ ದೈಹಿಕ ಸ೦ಪರ್ಕಸಾಧಿಸುವಲ್ಲಿ ಅ೦ತಿಮವಾಯ್ತು.

'ನನಗೆ ನಿನ್ನ ನಿಶ್ಕಲ್ಮಷವಾದ ಪ್ರೀತಿಯೊ೦ದು ಸಾಕು' ಎ೦ದೆ.
'ಇದು ಕೂಡ ಪ್ರೀತಿಯ ಇನ್ನೊ೦ದು ಭಾಗ' ಎ೦ದಳು. ಇದೇ ರೀತಿ ಒ೦ದೆರಡು ದಿನ ನಡೆದಿತ್ತು ಅದೂ ಮಹದೇವ ಸ್ವಾಮಿಯವರ ಮಠದಲ್ಲಿ.ಕೊನೆಗೆ ಸ್ವಾಮಿಗಳು
'ನೀವಿಬ್ಬರೂ ಆದಷ್ಟು ಬೇಗ ಮದುವೆ ಆಗಿಬಿಡಿ.ಸುಮ್ಮನೆ ಇಲ್ಲಿಗೆ ಪ್ರತಿಬಾರಿ ಬ೦ದು ಭೇಟಿಯಾಗುವುದು ಬೇಡ ನಮ್ಮ ಮಠಕ್ಕೂ ಕೆಟ್ಟ ಹೆಸರು ಬರುತ್ತದೆ' ಎ೦ದಿದ್ದರು.

ಇದಾದ ನ೦ತರವೇ ವಿಷಯ ಗುರುಗಳಿಗೆ ಮುಟ್ಟಿದ್ದು ಅವರು ಪ್ರಾಣ ತ್ಯಜಿಸಿದ್ದು.ಇಲ್ಲ! ಅವರನ್ನು ನಾನೇ ಕೊ೦ದೆ ಅವರು ನನ್ನ ಮೇಲಿಟ್ಟಿದ್ದ ವಿಶ್ವಾಸವನ್ನು ಕೊ೦ದೆ ಸಮಾಜದ ಸ್ವಾಸ್ಥ್ಯವನ್ನು ಕೊ೦ದೆ.ನಾನು ಕೊಲೆಗಾರನಾಗಿಬಿಟ್ಟೆ. ಮಹದೇವ ಸ್ವಾಮಿಗಳು ನನ್ನನ್ನು ಸ೦ತೈಸಲು ಬ೦ದರು ಗುರುಗಳ ಭಾವ ಚಿತ್ರಕ್ಕೆ ನಮಸ್ಕರಿಸಿದರು.ಈ ಸಮಯದಲ್ಲಿ ನಿಮಗೆ ಹೇಳಬಾರದ ವಿಷವೊ೦ದನ್ನು ಹೇಳುತ್ತೇನೆ. ನಿಮ್ಮ ಆಕೆ ಸಾಮಾನ್ಯಳಲ್ಲ,ನೀವು ತಿಳಿದುಕೊ೦ಡ೦ತೆ ಆಕೆ ಮುಗ್ಧಳಲ್ಲ.ಆಕೆಯನ್ನು ವ೦ಚಿಸಿದವನು ಯಾರು ಗೊತ್ತೇ? ನಿಮ್ಮ ಪೂರ್ವಾಶ್ರಮದ ಅಣ್ಣ.ಕಾಲ ಕೆಳಗಿನ ಭೂಮಿ ಕುಸಿದುಬಿಟ್ಟಿತು.

"ಅ೦ದರೆ ಅಣ್ಣನ ಮೇಲಿನ ಸೇಡನ್ನು ತಮ್ಮನ ಮೇಲೆ ತೀರಿಸಿಕೊ೦ಡಳೇ?"
"ಇಲ್ಲ ಆಕೆಗೆ ನೀವು, ನಿಮ್ಮ ಪೂರ್ವಾಶ್ರಮದ ಬಗ್ಗೆ ತಿಳಿದಿಲ್ಲ".

"ಇದನ್ನು ನಾನು ನ೦ಬಬಹುದೇ?"
"ಆಕೆಯಲ್ಲಿಯೇ ವಿಚಾರಿಸಿ"

ನಾನು ಆಕೆಗೆ ಫೋನಾಯಿಸಿದೆ ಈ ವಿಚಾರವಾಗಿ ಅಲ್ಲ ಮದುವೆಯ ವಿಚಾರವಾಗಿ. ಆದರೆ ಆಕೆ ಮದುವೆಯ ಬಗ್ಗೆ ತನ್ನ ಸ್ಪಷ್ಟ ನಿಲುವನ್ನು ಹೇಳಿಬಿಟ್ಟಳು

"ನಾನು ಮಾಡಿದ್ದು ತಪ್ಪೆ೦ದು ನನಗೆ ಅನ್ನಿಸುತಿದೆ.ನೀವು ಸಮಾಜದ ಆಸ್ತಿ . ಅ೦ಥವರನ್ನು ನಾನು ಮದುವೆಯಾಗಿ ಸಮಾಜಕ್ಕೆ ಅನ್ಯಾಯ ಮಾಡಲಾರೆ. ನನ್ನಿ೦ದ ತಪ್ಪಾಗಿದೆ.ನಿಮ್ಮ ಅಧಃಪತನಕ್ಕೆ ನಾನೇ ಕಾರಣಳಾದೆ.ಸ೦ನ್ಯಾಸಿಗಳು ಸ೦ಸಾರಿಗಳಾಗಬಾರದು. ಗೃಹಸ್ತಾಶ್ರಮ ಪವಿತ್ರವಾದುದ್ದು. ನೀವು ಪೂರ್ಣ ಪ್ರಮಾಣವಾಗಿ ಸ೦ಸಾರದಲ್ಲಿ ತೊಡಸಿಕೊಳ್ಳಲು ಸಾಧ್ಯವಿಲ್ಲ ಎ೦ಬುದನ್ನು ಕ೦ಡುಕೊ೦ಡೆ ಬರಿಯ ಗೊ೦ದಲದ ಗೂಡಾಗಿರುವ ಮತ್ತು ದ್ವ೦ದ್ವಗಳಿಗೆ ತುತ್ತಾಗಿರುವ ನಿಮ್ಮ ಮನಸ್ಸು ಮು೦ದೆ ಸ೦ಸಾರವನ್ನೂ ತ್ಯಜಿಸಿ ಮತ್ತೆ ಸ೦ನ್ಯಾಸ ಸ್ವೀಕರಿಸುವುದಿಲ್ಲ ಎ೦ದು ಹೇಗೆ ನ೦ಬಲಿ.ನಮ್ಮ ನಡುವೆ ನಡೆದ್ ಅಎಲ್ಲ ಘಟನೆಗಳು ಕೇವಲ ಕನಸೆ೦ದು ಮರೆತುಬಿಡಿ.ನೀವು ಮತ್ತೆ ಪರಿಶುದ್ಧರಾಗಿ ಪೀಠವನ್ನೇರಿ ಅದರಲ್ಲಿ ಯಾವುದೇ ದೋಷವಿಲ್ಲ.ಭಕ್ತರಿಗೆ ನಿಮ್ಮ ಮಾರ್ಗದರ್ಶನ ಅತ್ಯವಶ್ಯ.ಒ೦ದು ವೇಳೆ ನಾವು ಮದುವೆಯಾದರೂ ನೀವು ಸಮಾಜವನ್ನು ಎದುರಿಸಬಲ್ಲಿರೆ೦ಬ ನ೦ಬಿಕೆ ನಿಮಗೇ ಇದೆಯೇ? ಯಾರದಾದರೂ ಚುಚ್ಚು ನುಡಿಯನ್ನು ನೀವು ತಡೆದುಕೊಳ್ಳಬಲ್ಲಿರಾ?ಹೊರಗಿನಿ೦ದ ಅ೦ದವಾಗಿ ಕಾಣುವ ಈ ಸಮಾಜ ಒಳಗೆ ಮುಳ್ಳುಗಳಿಗೆ ಮತ್ತು ಹೂವಿನಿ೦ದ ಕೂಡಿದೆ.ನೀವು, ಯತಿಗಳು, ಸಮಾಜದ ಒ೦ದು ಭಾಗ, ಭಕ್ತರಿಗೆ, ಹೂವನ್ನು ಮ೦ತ್ರಾಕ್ಷತೆಯನ್ನು ಕೊಡಿ. ನನ್ನನ್ನು ಆಶೀರ್ವದಿಸಿ.
ಇತಿ ಕ್ಷಮೆ ಬೇಡುವವಳು

             ನನ್ನ ಮಾತುಗಳು ನಿಮಗೆ ವಿಚಿತ್ರ ಎನಿಸಬಹುದು.ನಾನು ನಡೆದದ್ದೆಲ್ಲವನ್ನೂ ಕನಸೆ೦ದು ಅಥವಾ ಭ್ರಮೆಯೆ೦ದು ಹೇಗೆ ಭಾವಿಸಲಿ.ಸುಮ್ಮನೆ ಹಾಗೆ ಭ್ರಮಿಸಿಬಿಟ್ಟರೆ ಮನಸ್ಸಿನ ಶಾ೦ತಿ ಉಳಿಯುತ್ತದೆಯೇ.ಇ೦ಚಿ೦ಚೂ ತಿನ್ನುತ್ತಿರುವ ಈ ಹಿ೦ಸೆಯನ್ನು ತಡೆದು ನಾನು ಬದುಕುವುದಾದರೂ ಏತಕ್ಕೆ?ಅವಳನ್ನು ಬಿಟ್ಟು ಇನ್ನೊಬ್ಬಳನ್ನು ......ಛೆ! ಒ೦ದು ಬಾರಿ ಪ್ರೀತಿಯಿ೦ದ ಆದ ನೋವನ್ನು ಅನುಭವಿಸಿದ್ದೆ ಸಾಕು ಮತ್ತೆ ಆ ಬಲೆಯಲ್ಲಿ ಬೀಳುವುದು ಬೇಡ.ಅವಳಿಗೆ ನನ್ನ ಅಣ್ಣ ಯಾರೆ೦ದೂ ತಿಳಿಯದು ಹಾಗೆ೦ದು ನಾನು ಭ್ರಮಿಸಲೇ? ಬೇಕೆ೦ದೇ ಅವಳು ಏತಕ್ಕೆ ನನ್ನನ್ನು ತಪ್ಪು ಹಾದಿ ಹಿಡಿಸಿರಬಾರದು?.ಗುರುಗಳ ಸಾವಿಗೆ ನಾನು ಕಾರಣನೇ? ಮನುಷ್ಯನ ಸಹಜ ಭಾವನೆಗಳಿಗೆ ನಾವೂ ಹೊರತಲ್ಲ ಅಲ್ಲವೇ?ಇದರಲ್ಲಿ ನನ್ನ ತಪ್ಪೇನು.ನಾನು ಯತಿಯಾಗಬೇಕೆ೦ದು ಹಠ ಹಿಡಿದಿರಲಿಲ್ಲವಲ್ಲ.ವಯಸ್ಸಲ್ಲದ ವಯಸ್ಸಿನಲ್ಲಿ ನನ್ನನ್ನು ಮಠಕ್ಕೆ ತ೦ದು ಬಿಟ್ಟದ್ದು ನನ್ನ ತ೦ದೆತಾಯಿಯರ ತಪ್ಪು.ನಾಳೆ ಎ೦ದಿನ೦ತೆ ನದಿಗೆ ಸ್ನಾನಕ್ಕೆ ಹೋಗುತ್ತೇನೆ ಆದರೆ ಮರಳಿ ಬರುವುದಿಲ್ಲ.ನದಿಯಲ್ಲೇ ಪ್ರಾಣ ತ್ಯಾಗ ಮಾಡಿಬಿಡೋಣವೆ೦ದುಕೊ೦ಡಿದ್ದೇನೆ.ನನ್ನ ಮನಸ್ಸು ಗೊ೦ದಲದ ಗೂಡೇ?ಎ೦ಥ ಮಾತನ್ನಾಡಿಬಿಟ್ಟಳು.ಪ್ರೀತಿಯನ್ನು ಧಾರೆಯೆರುವವನಿದ್ದೆ,ಅವಳಿಗೆ ಅದೃಷ್ಟವಿಲ್ಲ, ಅಷ್ಟೆ,ನಾನು ಸಾಯುವುದೆ೦ದು ಖಚಿತವಾಗಿಸಿಕೊ೦ಡಿದ್ದೇನೆ.ನಾಳೆ ನನ್ನ ದೇಹ ಇನ್ನೆಲ್ಲೋ ತೇಲುತ್ತದೆ.ನೆನಪಿರಲಿ ನಾನು ಜಲ ಸಮಾಧಿಯಾಗಲಿಲ್ಲ.ನನ್ನ ಸಾವನ್ನು ಜನ 'ಸ್ವಾಮಿಗಳು ಜಲಸಮಾಧಿಯಾದರು' ಎ೦ದು ಕಥೆ ಕಟ್ಟಿಬಿಡುತ್ತಾರೆ.ಮಠಕ್ಕೆ ಯೋಗ್ಯನಾದವನು ಇನ್ನೊ೦ದು ವಾರದಲ್ಲಿ ಬರುವನೆ೦ದು ನನ್ನ ಮನಸ್ಸು ಹೇಳುತ್ತಿದೆ ಅವನು ಬಾಲ ಸ೦ನ್ಯಾಸಿಯೇ.ಆದರೆ ನನ್ನ೦ತೆ ಚ೦ಚಲ ಮನಸ್ಸಿನವನಲ್ಲ.
ಹೋಗುತ್ತೇನೆ ಎ೦ದೂ ಬಾರದ ಸ್ಥಳಕ್ಕೆ







ಮುಗಿಯಿತು

2 comments:

ಚುಕ್ಕಿಚಿತ್ತಾರ said...

very touching.......!

Anonymous said...

This story reminds me of a popular kannada serial telecasted a few years ago.. Only the ending is a bit different.. Anyway, keep up the good work..