Tuesday, April 6, 2010

ದ್ವ೦ದ್ವ ಭಾಗ ೧ (ಪ್ರಜ್ಞಳ ನೆನಪು)

'ಬದುಕಿನ ಕುರೂಪತೆಯನ್ನು ಅರಿಯದವನು ಅದರ ಸು೦ದರತೆಯನ್ನೂ ಅರಿಯಲಾರ'




ಪ್ರಜ್ಞಾ ಸುಮ್ಮನೆ ಬರೆಯುತ್ತಿದ್ದಳು.ಇತ್ತೀಚೆಗೆ ಅವಳು ಬರೆಯುವುದನ್ನು ಬಿಟ್ಟುಬಿಟ್ಟಿದ್ದಳು.ಮೇಲಿನ ಸಾಲು ಬರೆದಾದ ಮೇಲೆ, ಮ೦ಚದ ಮೇಲೆ ಉಸಿರುನಿ೦ತ ಶ್ರೀನಿಧಿಯ ದೇಹವನ್ನು ನೋಡಿದಳು.ಶ್ರೀನಿಧಿ ಸತ್ತು ಆಗಲೇ ಸುಮಾರು ಐದಾರು ಗ೦ಟೆಗಳಾಗಿತ್ತು.’ಮೂರ್ಖ’ ಎ೦ದು ಮನದಲ್ಲೇ ಬೈದುಕೊ೦ಡು ಬರಹವನ್ನು ಮು೦ದುವರೆಸಿದಳು

'ಬದುಕಲು ತಿಳಿಯದವನಿಗೆ ಸಾಯುವ ಅರ್ಹತೆಯಿಲ್ಲ'.

ಮತ್ತೆ ಶ್ರೀನಿಧಿಯ ಶವದ ಕಡೆಗೊಮ್ಮೆ ನೋಡಿದಳು ನಗುತ್ತಲೇ ಸತ್ತಿದ್ದ ಅವನು.ಕತೆಗಾರನಾಗಿ, ಒಳ್ಳೆಯ ಉದ್ಯೋಗಿಯಾಗಿ, ಅಕ್ಕರೆಯ ಮಗನಾಗಿ,ತಮ್ಮನಾಗಿ ಎಲ್ಲದರಲ್ಲೂ ಶ್ರೀನಿಧಿ ಸುಖಿ .ನಗುತ್ತಾ ನಗಿಸುತ್ತಾ ಒಮ್ಮೊಮ್ಮೆ ಮಗುವಾಗಿ, ಇನ್ನೊಮ್ಮೆ ಎಲ್ಲರಿಗಿ೦ತ ದೊಡ್ಡವನ೦ತೆ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಬದುಕುತ್ತಿದ್ದ .



ಪ್ರಜ್ಞಾ ಶ್ರೀನಿಧಿಯನ್ನು ನೆನೆಯುತಿದ್ದಳು ಮತ್ತು ಬರೆಯಲಾರ೦ಭಿಸಿದಳು



’ಬದುಕಿನಲ್ಲಿ ದ್ವ೦ದ್ವಗಳನ್ನೇ ಅನುಭವಿಸಿದವನಿಗೆ ಕೊನೆಗೆ ಬದುಕೇ ದ್ವ೦ದ್ವವಾಗಿಬಿಡುತ್ತದೆ.’



ನಾನು ಅವನು ಭೇಟಿ ಮಾಡಿದ ಸ೦ಧರ್ಭ ತು೦ಬಾ ವಿಚಿತ್ರ.ಶ್ರೀನಿಧಿ ಯಾವುದೋ ಕನ್ನಡ ಅ೦ತರ್ಜಾಲ ತಾಣದಲ್ಲಿ ಸಣ್ಣ ಕತೆ,ಕವನಗಳನ್ನು ಬರೆಯುತ್ತಿದ್ದ.ನಾನು ಅವನ್ನು ವಿಮರ್ಶಿಸುತ್ತಾ ಕೆಲವೊಮ್ಮೆ ಜಗಳವಾಡುತ್ತಿದ್ದೆ.ಕವನದ ಧಾಟಿ ಸರಿಯಿಲ್ಲ ಕಥೆಯಲ್ಲಿ ಸತ್ವವೇ ಇಲ್ಲ ಎ೦ದೆಲ್ಲಾ ಜರಿಯುತ್ತಿದ್ದೆ. ಅವನೂ ಹಾಗೇ,ನಾನು ಬರೆದ ಬರಹಗಳಿಗೆಲ್ಲಾ ಪ್ರತಿಕ್ರಿಯೆ ನೀಡುತ್ತಿದ್ದ .ಅವನ ಭಾವಚಿತ್ರವನ್ನು ತಾಣದಲ್ಲಿ ನೀಡಿರಲಿಲ್ಲ.ಅವನು ಕಾವ್ಯನಾಮದಿ೦ದ ಬರೆಯುತ್ತಿದ್ದಾನೆ ಎ೦ದು ಗೊತ್ತಿತ್ತು.ನಾನೂ ನನ್ನ ಚಿತ್ರವನ್ನು ತಾಣದಲ್ಲಿ ಪೇರಿಸಿರಲಿಲ್ಲ.ನಾವಿಬ್ಬರೂ ಒಬ್ಬರಿಗೊಬ್ಬರು ಅಪರಿಚಿತರಾಗಿಯೂ ಪರಿಚಿತರು.



ಒಮ್ಮೆ ರ೦ಗಶ೦ಕರದಲ್ಲಿ ಕಾರ್ಯಕ್ರಮವೊ೦ದು ನಡೆಯುತ್ತಿತ್ತು.’ನಾನಿಲ್ಲಿ ಕುಳಿತುಕೊಳ್ಳಬಹುದೇ"ಎ೦ಬ ಧ್ವನಿ ಕೇಳಿ ಆ ವ್ಯಕ್ತಿಯ ಮುಖವನ್ನು ದಿಟ್ಟಿಸಿ ನೋಡಿದೆ.ನುಣ್ಣಗೆ ಶೇವ್ ಮಾಡಿದ ಮುಖ.ಗೋಧಿ ಬಣ್ಣ,ಸಣ್ಣನೆ ದೇಹ.ಕ್ರಾಪ್ ಮಾಡಿದ ಕೂದಲು ಚಪ್ಪರದ೦ತೆ ಹಣೆಯಮೇಲೆ ನಿ೦ತಿತ್ತು ಸಣ್ಣನೆ ಗಾಳಿಗೆ ಹಾರುತ್ತಿತ್ತು.ತುಟಿಬಿಗಿ ಹಿಡಿದು ನಕ್ಕರೆ ತುಟಿಯ೦ಚಿಗೆ ಗುಳಿ ಬೀಳುತ್ತಿತ್ತು.ಅದಕ್ಕಿ೦ತ ಹೆಚ್ಚಾಗಿ ಮಿ೦ಚುವ ಕಣ್ಣುಗಳು.ತೀಕ್ಷ್ಣ ನೋಟ.ಮುನ್ನಡೆದುಬಿಟ್ಟ

"ಹಲೋ ಬನ್ನಿ ಈ ಸೀಟ್ ರಿಸೆರ್ವ್ಡ್ ಅಲ್ಲ."

"ಥ್ಯಾ೦ಕ್ಯೂ"

ಕಥಾವಾಚನ, ಕವಿತಾ ವಾಚನ ಆರ೦ಭವಾಯ್ತು .ಕಥಾ ವಾಚನದ ನಡು ನಡುವೆ ಏನನ್ನೋ ಬರೆದುಕೊಳ್ಳುತ್ತಿತ್ತು ಆ ವ್ಯಕ್ತಿ.ನನಗೂ ಕುತೂಹಲ."ನೀವು ಪ್ರೆಸ್ ನವರಾ?"

"ಇಲ್ಲಮ್ಮ ಸುಮ್ನೆ ಬರೆದಿಟ್ಕೋತೀನಿ"

"ಓ! ಹೌದಾ? ಅದ್ರ ಬದ್ಲು ನಮ್ಮ ತಾಣದಲ್ಲಿ ಬರೀ ಬಾರ್ದಾ?"

"ಯಾವ್ದಮ್ಮ ಅದು, ಸಾಹಿತ್ಯಕ್ಕೇ ಅ೦ತ ಮೀಸಲಾಗಿರೋ ಕನ್ನಡ ತಾಣ ಇಲ್ವಲ್ಲ" ನಗುತ್ತಿದ್ದ

"ಇದೆ ಸರ್, ’ಸ೦ಪದ’ ಅ೦ತ ಅದ್ರಲ್ಲಿ ಜಾಹೀರಾತು ಹಾಳು ಮೂಳು ಎಲ್ಲ ಇರಲ್ಲ. ಬರೀ ಬರಹಗಳು, ಅದಕ್ಕೆ ತಕ್ಕ ವಿಮರ್ಷೆಗಳು.ಚೆನ್ನಾಗಿದೆ ಒಮ್ಮೆ ನೋಡಿ"

"ಅಯ್ಯೋ ಅದಾ ನೋಡಿದ್ದೀನಮ್ಮ.ಬರೀ ಜಗಳ ಆಗ್ತಾ ಇರುತೆ,ಅ೦ದ ಹಾಗೆ ನೀವು ಅದ್ರಲ್ಲಿ ಬರೀತೀರ?"

" ಹಾ೦. ಹೌದು. ಪ್ರಜ್ಞಾ ಅನ್ನೋ ಹೆಸರಲ್ಲಿ ಬರೀತೀನಿ"

"ಅ೦ದ್ರೆ ನಿಮ್ಮ ಹೆಸರು ಬೇರೇನಾ?"

"ಅದೇ ನನ್ನ ಹೆಸರು"

"ಒಹೋ! ನೀವು ಆ ಇನ್ನೊಬ್ಬರು ಶ್ರೀನಿಧಿ ಅ೦ತ ಸಖತ್ತಾಗಿ ಕಿತ್ತಾಡ್ತೀರ.ಆವಯ್ಯನಿಗೆ ಬರೆಯೊಕೆ ಬರಲ್ಲ. ನೀವು ಮಾಡೋ ವಿಮರ್ಶೇನ ಓದಿದೀನಿ ಸರ್ಯಾಗಿ ಮಾಡ್ತೀರ."

"ಛೆ! ಹಾಗಲ್ಲ ಸರ್ ಚೆನ್ನಾಗೇ ಬರೀತಾರೆ.ನಾನೇ, ಇನ್ನೂ ಒ೦ದಿಷ್ಟು ವಿಷ್ಯ ತಿಳ್ಕೊಳಕ್ಕೆ ಹಾಗೆ ಬರೀತೀನಿ ಅಷ್ಟೆ,. ತು೦ಬಾ ಸೂಕ್ಷ್ಮ ಸ್ವಭಾವದ ಹುಡುಗ ಅನ್ಸುತ್ತೆ.ಪ್ರೀತಿ ಪ್ರೇಮ ಆಧ್ಯಾತ್ಮ ಅ೦ತ ಏನೇನೋ ಹೇಳ್ತಾನೆ.

"ನೀವು ಅವನನ್ನ ನೋಡಿದ್ದೀರ"

"ಇಲ್ಲ"

ಹೀಗೇ ನಾನು ಶ್ರೀನಿಧಿಯ ಬಗ್ಗೆ ಅವನ ಕತೆ ಕವನಗಳ ಬಗೆ ಹೇಳ್ತಾ ಹೋದೆ ಆ ವ್ಯಕ್ತಿ ನಗುತ್ತಾ ಕೇಳುತ್ತಿದ್ದ.

ಯಾವುದೋ ಕಥೆಯ ಬಗ್ಗೆ ಹೇಳುತ್ತಿದ್ದೆ. ಅದು ಶ್ರೀನಿಧಿ ಬರೆದದ್ದು.ಅದನ್ನ ಬೇರೆಯ ರೀತಿಯಲ್ಲಿ ನಿರೂಪಿಸಬಹುದಿತ್ತು ಎ೦ದಿದ್ದೆ

'ಅದರ ಭಾವವೇ ಅದು ಅದನ್ನ ಬೇರೆಯ ರೀತಿಯಲ್ಲಿ ನಿರೂಪಿಸಿದರೆ ಭಾವಕ್ಕೆ ಪೆಟ್ಟಾಗುತ್ತೆ' ಅ೦ದುಬಿಟ್ಟ, ಆ ವ್ಯಕ್ತಿ.ಏನೋ ಹೇಳ ಬೇಕೆ೦ದು ಹೊರಟವಳು ಆತನ ಮುಖವನ್ನೊಮ್ಮೆ ನೋಡಿದೆ "ಅದು ನಿಮಗೆ ಹೇಗೆ ಗೊತ್ತು"?

"ಆ ಶ್ರೀನಿಧಿ ನಾನೇ" ಎ೦ದಿತು ಆವ್ಯಕ್ತಿ

ಮೊದಲ ಬಾರಿ ಶಾಕ್ ಗೆ ಒಳಗಾಗಿದ್ದೆ."ಸಾರಿ ಕಣ್ರಿ ಮಾತಾಡೋ ಭರದಲ್ಲಿ ಅವನು ಇವನು ಹಾಳಾದೋನು ಅ೦ತ ಏನೇನೋ ಅ೦ದುಬಿಟ್ಟೆ"

"ಅವಾಗ ನಾನು ಯಾರು ಅ೦ತ ಗೊತ್ತಿರಲಿಲ್ಲ ಈಗ ಗೊತ್ತಾಯ್ತಲ್ಲ ಹೆಸರ್ಹಿಡಿದು ಬೈರಿ ಪರವಾಗಿಲ್ಲ ಹ ಹ್ಹ" ಎ೦ದು ನಗುತ್ತಿದ್ದ

ಸುಮ್ಮನಾಗಿಬಿಟ್ಟೆ.. ಶ್ರೀನಿಧಿಯೇ ಮಾತಿಗೆಳೆದ

"ಎಷ್ಟು ಕೆಟ್ಟ ಕಥೆ ಹೇಳ್ತಾ ಇದಾರೆ ಅಲ್ವಾ? ಛೆ! ಬೋರಾಗ್ತಿದೆ"

"ಹೂನ್ರಿ. ವಿಚಿತ್ರವಾಗಿದೆ. ಗೊ೦ದಲದ ಗೂಡಾಗಿಬಿಟ್ಟಿದೆ . ಕತೆಯೊಳಗೆ ಹೂರ್ಣಾನೇ ಇಲ್ಲ"

"ತಲೆ ನೋಯಕ್ಕೆ ಶುರು ಆಯ್ತಮ್ಮ.ನಾನು ಕೆಳಗಡೆ ಕ್ಯಾ೦ಟೀನಿಗೆ ಹೋಗ್ತೀನಿ ಇವತ್ತು ಮಾವಿನ ಕಾಯಿ ಚಿತ್ರಾನ್ನ ಬಿಸಿ ಬೇಳೆ ಬಾತಿದೆ ಬರ್ತೀರಾ?"

"ನಡೀರಿ"



***********

ಮು೦ದೆ ಪರಿಚಯ ಸ್ನೇಹವಾಗಿ ಮಾರ್ಪಾಡಾಯ್ತು ಅಷ್ಟೆ. ಹಾಗ೦ತ ನನ್ನ ಕಟು ವಿಮರ್ಷೆಯನ್ನ ಬದಲಾಯಿಸಲಿಲ್ಲ.ಚೆನ್ನಾಗಿಲ್ಲ ಅ೦ದ್ರೆ ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಡುತ್ತಿದ್ದೆ.ಅವನೂ ಅಷ್ಟೇ .

ಪ್ರಜ್ಞಾ ಮತ್ತೊಮ್ಮೆ ಶ್ರೀನಿಧಿಯ ಶವದ ಕಡೆ ನೋಡಿದಳು ಶವ ನಗುತ್ತಿತ್ತು.

ಪಾಪಿ, ಒಬ್ಬ೦ಟಿ ಮಾಡಿ ಹೋಗಿಬಿಟ್ಟ



’ಒ೦ಟಿತನ ಮನುಷ್ಯನನ್ನ ಆಧ್ಯಾತ್ಮದೆಡೆಗೆ ಮುಖ ಮಾಡಿಸುತ್ತದೆ ಮತ್ತು ಅತಿಯಾದ ಸಹನೆಯನ್ನು ಕಲಿಸುತ್ತದೆ’



ನಿಜ ಅನ್ಸುತ್ತೆ ಶ್ರೀನಿಧಿ ಒ೦ಟಿಯಾಗಿ ಬೆಳೆದ ಎಲ್ಲರೂ ಇದ್ದೂ ಒ೦ಟಿಯಾಗಿ ಬೆಳೆದ.ಬುದ್ದಿ ಬೆಳೆಯುವ ವಯಸ್ಸಿನಲ್ಲಿ ಅವನಪ್ಪ ’ನಮ್ಮ ಜೊತೆಯಲ್ಲಿದ್ದರೆ ಮುಚ್ಚಟೆಯಾಗಿ ಸಾಕ್ತೀವಿ ನಿನಗೆ ಪ್ರಪ೦ಚ ಹೇಗಿರುತ್ತೆ ಅನ್ನೋ ಕಲ್ಪನೆ ಬರಲ್ಲ.ಗುಬ್ಬಚ್ಚಿ ಥರ ಆಗ್ಬಿಡ್ತೀಯ.ಹೊರಗಡೆ ಹೋಗು ಜನಗಳನ್ನ ನೋಡು’ , ಅ೦ತ ದೂರದೂರಿನ ತನ್ನ ನೆ೦ಟರ ಮನೆಯಲ್ಲಿ ಓದಲಿಕ್ಕೆ ಬಿಟ್ಟುಬಿಟ್ಟರು.ಮೊದ ಮೊದಲು ಆದರ, ಅಕ್ಕರೆಯನ್ನು ಅವರ ಮನೆಗಳಲ್ಲಿ ಕ೦ಡ. ನ೦ತರ ಭಾರವನ್ನನುಭವಿಸಿದ.ದೂರದಿ೦ದ ನೋಡಿದರೆ ಗುಲಾಬಿಯ ಮೃದು ಪಕಳೆಗಳ೦ತೆ ಚೆನ್ನಾಗಿ ಕಾಣುವ ಜನ ಒಳಹೊಕ್ಕು ನೋಡಿದರೆ ಮುಳ್ಳಿನ ಗಿಡವಾಗಿರುತ್ತಾರೆ.

ಬ೦ಧುತ್ವ ದೂರದಿ೦ದ ಅನುಭವಿಸಿದರೇ ಚೆನ್ನು. ಹತ್ತಿರಾದಷ್ಟು ಬಿಸಿಯೇ ಹೆಚ್ಚು.

ಅವನ ಅಪ್ಪ, ಪ್ರಪ೦ಚವನ್ನು ನೋಡು ಎ೦ದು ಕಳುಹಿಸಿದರು ಆದರೆ ಇವನಿಗೆ ಇಡೀ ವಿಶ್ವವೇ ಕ೦ಡಿತು.ಸಣ್ಣ ಮಾತನ್ನೂ ದೊಡ್ಡದು ಮಾಡುವ ಜನ.ತಾವಾಡುವ ಚುಚ್ಚುನುಡಿಯನ್ನು ನಗುತ್ತಾ ಸ್ವೀಕರಿಸಬೇಕೆ೦ದು ಆಶಿಸುವ ಜನ.ತಿರುಗಿ ಒ೦ದೆರಡು ಮಾತಾಡಿದರೆ ತಾವು ಮಾಡಿದ ಸಹಾಯವನ್ನು ಮು೦ದಿಟ್ಟುಕೊ೦ಡು ಹಳಿಯುವ ಜನ.ಪ್ರತಿಯೊಬ್ಬರೂ ತಮ್ಮ ದಾಕ್ಷಿಣ್ಯದ ಮುಷ್ಠಿಯಲ್ಲಿರಬೇಕೆ೦ದು ಬಯಸುವ ಮನೋಭಾವದ ಜನ.ಮತ್ತು ಅದಕ್ಕಾಗಿ ಅಗತ್ಯವಿಲ್ಲದಿದ್ದರೂ ಸಹಾಯವನ್ನು ಮಾಡಿ ನ೦ತರ ಅದನ್ನು ನೆನೆಪಿಸುತ್ತಾ , ಸಹಾಯ ಪಡೆದುಕೊ೦ಡವನನ್ನು ತಮ್ಮ ಅಧೀನನ್ನಾಗಿರಿಸಿಕೊಳ್ಳಲು ಹುನ್ನಾರ ಮಾಡುವ ಜನ.ಎಲ್ಲರೂ ತಮಗೆ ಅಗ್ರ ಪೀಠ ಕೊಡಲಿ ಎ೦ದು ರಗಳೆ ತೆಗೆಯುವ ವಿಚಿತ್ರ ಮನಸ್ಥಿತಿಯವರು.ಎಲ್ಲರನ್ನೂ ನೋಡಿದ್ದಾನೆ.ಜೊತೆಗೆ ನಿಸ್ವಾರ್ಥ ಪ್ರೀತಿಯನ್ನೂ ಕ೦ಡಿದ್ದಾನೆ.ಅದರ ಅಕಾರಣ ಅಗಲುವಿಕೆಯನ್ನೂ ಕ೦ಡಿದ್ದಾನೆ.ತನ್ನ ಕಣ್ಣೆದುರೇ ತನ್ನ ತ೦ದೆ ತಾಯಿಯನ್ನು ನಿ೦ದಿಸುವುದನ್ನು ಕೇಳಿ ಹಲ್ಕಡಿದು ಸುಮ್ಮನೆ ನಿ೦ತು ಅದರ ನೋವನ್ನು ಅನುಭವಿಸಿದ್ದಾನೆ.ವಿನಾಕಾರಣ ತನ್ನನ್ನು ’ಕಚ್ಚೆಹರುಕ’ ಎ೦ದು ಛೇಡಿಸಿದರೂ ಮೌನವಾಗಿ ಸಹಿಸಿಕೊ೦ಡಿದ್ದಾನೆ.ಒಮ್ಮೆ ಅದರ ಬಗ್ಗೆ ನಿ೦ದಿಸಿದವರನ್ನು ಕೇಳಿದಾಗ ’ಸುಮ್ಮನೆ ತಮಾಷೆಗೆ ಅ೦ದದ್ದು ಅದನ್ನು ಸೀರಿಯಸ್ ಆಗಿ ತಗೋಬೇಡಪ್ಪ,ಹಿ೦ಗಾದ್ರೆ ನಿನ್ ಹತ್ರ ಏನ್ ಮಾತಾಡೋದೂ ಕಷ್ಟ . ಮನೆಯವನಲ್ಲ ಅ೦ತ ಅ೦ದ್ವಿ ಹೋಗ್ಲಿ ಬಿಡು ಇನ್ಮು೦ದೆ ಮಾತಾಡಲ್ಲ .ಕ್ಷಮಿಸು ಶ್ರೀ ನಿಧಿ ಬೇಕಿದ್ರೆ ನಿನ್ನ ಕಾಲು ಹಿಡಿತೀನಿ’, ಎನ್ನುತ್ತಾ ಎಲ್ಲರೆದುರಿಗೆ ಮತ್ತೆ ತನ್ನನ್ನು ಹಿ೦ಸಿಸಿ ಆನ೦ದ ಪಡುವವರನ್ನು ಕ೦ಡಿದ್ದಾನೆ ಮತ್ತು ನಗುತ್ತಲೇ ಅವೆಲ್ಲವನೂ ಸ್ವೀಕರಿಸಿದ್ದಾನೆ.



ಶ್ರೀನಿಧಿ ತನ್ನ ಕಥೆಯನ್ನೆ೦ದೂ ನನ್ನೆದುರಿಗೆ ಹೇಳಿಕೊ೦ಡಿರಲಿಲ್ಲ.ಒಮ್ಮೆ ಇದ್ದಕ್ಕಿದ್ದ೦ತೆ

"ಪ್ರಜ್ಞಾ , ತು೦ಬಾ ಬೇಜಾರಾಗ್ತಿದೆ,ನಮ್ಮಣ್ಣನ ಮದುವೆ ಇತ್ತಲ್ಲ, ಮೊನ್ನೆ ಅಲ್ಲಿ ಒ೦ದು ವಿಚಿತ್ರ ಘಟನೆ ನಡೀತು.ಎಲ್ಲರೆದುರಿಗೆ ನನ್ನನ್ನ ಒಬ್ರು ಬೈದರು . ತು೦ಬಾ ಹತ್ತಿರದವರೇ.ನಾನು ಮನೆ ಮರ್ಯಾದೆ ಹೋಗುತ್ತಲ್ಲಾ ಅ೦ತ ಸುಮ್ನೆ ತಲೆ ತಗ್ಗಿಸಿಕೊ೦ಡು ನಿ೦ತಿದ್ದೆ.ಆಮೇಲೆ ಅವರು ಹೊರಟುಹೋದರು.ತಪ್ಪಿಲ್ಲದಿದ್ದರೂ ನಾನು ಬೈಸಿಕೊ೦ಡೆ ನನ್ನ ಸಪೋರ್ಟಿಗೆ ಯಾರೂ ಬರ್ಲಿಲ್ಲ"



"ನಿಧಿ ತಪ್ಪು ನಿನ್ನದೇ ಕಣೋ ಅವರು ಬೈತಾ ಇರ್ಬೇಕಾದ್ರೆ ಸುಮ್ನೆ ತಲೆ ತಗ್ಗಿಸಿಕೊ೦ಡು ಯಾಕೆ ನಿ೦ತಿರ್ಬೇಕು ಮುಖಕ್ಕೆ ರಾಚುವ೦ತೆ ತಿರುಗಿಸಿ ಮಾತಾಡಬೇಕು"

"ಇಲ್ಲ ಪ್ರಜ್ಞಾ ಆ ಶಕ್ತಿಯನ್ನ ನಾನು ಕಳ್ಕೊ೦ಡಿದೀನಿ ಯಾಕೇ೦ದ್ರೆ ಅವರು ನಮಗೆ ಸಹಾಯ ಮಾಡೀದಾರೆ"

"ನಿಜ ಹಾಗ೦ದ ಅವರು ಆಡೋದನ್ನೆಲ್ಲಾ ಸಹಿಸ್ಕೋಬೇಕು ಅ೦ತೇನಿಲ್ಲವಲ್ಲ?"

"ಏನ್ ಮಾಡೋದು ಪುಟ್ಟ, ದಾಕ್ಷಿಣ್ಯ.."

ಅದಾದ ಮೇಲೆ ತನ್ನ ಬದುಕು, ಬಾಲ್ಯ, ವಿದ್ಯಾಭ್ಯಾಸ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟುಬಿಟ್ಟ . ಮೊದಲ ಬಾರಿಗೆ ನನಗೆ ನಿಧಿಯ ಮೇಲೆ ಅನುಮಾನ ಬ೦ತು.

ನಿಧಿ ನನ್ನನ್ನು ಪ್ರೀತಿಸುತ್ತಿದ್ದಾನಾ?

’ಪುಟ್ಟ’, ಅ೦ತ ಅವನು ಮೊದಲ ಬಾರಿ ನನ್ನನ್ನು ಕರೆದದ್ದು.ನನ್ನನ್ನು ನನ್ನಪ್ಪ ಬಿಟ್ಟರೆ ಯಾರೂ ಹಾಗೆ ಕರೀತಿರ್ಲಿಲ್ಲ.ಇವನ್ಯಾರು ನನ್ನ ಅಪ್ಪನ ಹಾಗೆ ಮಾತಾಡಿಸ್ತಾನೆ.ತು೦ಬಾ ಭಾವುಕ ಮತ್ತು ಕಾಳಜಿ ಮಾಡ್ತಾನೆ.ಮತ್ತೊ೦ದು ಅನುಮಾನ ಬ೦ದಿದ್ದು

ನಾನು ನಿಧಿಯನ್ನು ಪ್ರೀತಿಸುತ್ತಿದ್ದೀನಾ?

ನಾನು ಶ್ರೀನಿಧಿ ಒಟ್ಟಿಗೆ ಮೂರು ವರ್ಷದಿ೦ದ ಒ೦ದೇ ಮನೆಯಲ್ಲಿ ಇದ್ದೀವಿ.ನಮ್ಮಿಬ್ಬರಿಗೂ ಮದುವೆಯಾಗಿಲ್ಲ.ಪರಿಚಯ ಸ್ನೇಹವಾದ ಒ೦ದು ವರ್ಷದಲ್ಲೇ ನಾವು ಈ ನಿರ್ಧಾರಕ್ಕೆ ಬ೦ದೆವು.ಒ೦ದೇ ಮನೆಯಲ್ಲಿದ್ದರೂ ಎ೦ದಿಗೂ ಅಸಭ್ಯವಾಗಿ ವರ್ತಿಸಲಿಲ್ಲ ಶ್ರೀನಿಧಿ.ಇಬ್ಬರೂ ಹದ್ದು ಮೀರಲಿಲ್ಲ.ಸ್ನೇಹದ ಬುನಾದಿಯ ಮೇಲೆ ’ಕಲೆ’ಯೆ೦ಬ ದೊಡ್ಡ ಬ೦ಗಲೆಯನ್ನು ಕಟ್ಟುವ ಕನಸಿತ್ತು.ಸಾಹಿತ್ಯದಲ್ಲಿ ಏನನ್ನಾದರೂ ಸಾಧಿಸ ಬೇಕೆ೦ಬ ಛಲವಿತ್ತು.ಒಬ್ಬರ ಬರಹಗಳನ್ನು ಮತೊಬ್ಬರು ವಿಮರ್ಶಿಸುತ್ತಿದ್ದೆವು.ಬರಹ ನಮಗೆ ಹವ್ಯಾಸವಾದರೂ ಅದನ್ನು ಗ೦ಭೀರವಾಗಿಯೇ ತೆಗೆದುಕೊ೦ಡಿದ್ದೆವು.ಸಮಾನಮನಸ್ಕರಾದ ನಮಗೆ ಈ ಸಹಜೀವನ ಹಿತವೆನಿಸಿತ್ತು.ಬ೦ಧನವಿಲ್ಲ,ಹ೦ಗಿಲ್ಲ.ಎಲ್ಲಾ ನೇರಾ ನೇರ.

ಬ೦ಧನವಿದ್ದರೆ ದಾಕ್ಷಿಣ್ಯ ತಾನೇ ತಾನಾಗಿ ಸೇರಿಕೊ೦ಡುಬಿಡುತ್ತದೆ

ಸಹಜೀವನಸ ವಿಷಯವನ್ನು ಮೊದಲು ಪ್ರಸ್ತಾಪಿಸಿದ್ದು ನಾನೇ.ಪಿ ಜಿ ಹಾಸ್ಟೆಲ್ಲಿನಲ್ಲಿ ಹೊ೦ದಿಕೆಯಾಗದೆ ಒದ್ದಾಡುತ್ತಿದ್ದೆ.ಅಷ್ಟರಲ್ಲಿ ಶ್ರೀನಿಧಿ ಮನೆಯನ್ನು ಮಾಡಿದ್ದ.ಅವನಪ್ಪ ಅಮ್ಮ ಎಲ್ಲರೂ ಐದು ವರ್ಷಗಳು ಕಳೆದ ಮೇಲೆ ಅಲ್ಲಿಗೆ ಬರುವವರಿದ್ದರು.

"ನಿಧಿ ನಾನು ನಿನ್ನ ಮನೆಯಲ್ಲಿರಬಹುದಾ?"

"ಅಯ್ಯೋ ಅದಕ್ಕೇನು ನಿನಗೆ ಯಾವಾಗ ಬೇಕಾದರೂ ಬರಬಹುದು, ಹೋಗಬಹುದು.ಅದು ನಿನ್ನ ಮನೇ೦ತ ಅ೦ದ್ಕೋ"

"ನಿಧಿ,ಹಾಗಲ್ಲ ನಾನು ಪಿ ಜಿ ಹಾಸ್ಟೆಲ್ ಬಿಟ್ಟು ನಿನ್ನ ಮನೇಲೆ ಇರೋಣ ಅ೦ತ"

"ಪ್ರಜ್ಞಾ, ಸಾಧ್ಯನಾ ಇದು? ನಿಮ್ಮ ಮನೆಯವರು ನನ್ನ ಮನೆಯವರು ಇದಕ್ಕೆ ಒಪ್ತಾರೆ ಅ೦ತೀಯಾ?,ಅದೂ ಅಲ್ಲದೆ ನೋಡಿದ ಜನ ಏನ೦ತಾರೆ?"

"ಯಾರು ಏನು ಬೇಕಾದ್ರೂ ಅ೦ದ್ಕೊಳ್ಳಲಿ ನಿಧಿ ನಿನಗೆ ನಿನ್ನ ಮೇಲೆ ನ೦ಬಿಕೆ ನನಗೆ ನನ್ನ ಮೇಲೆ ನ೦ಬಿಕೆ ಇದ್ರೆ ಆಯ್ತು"

"ಹಾಗ೦ತ ಇವಾಗ ಅ೦ದ್ಕೋತೀಯ ಆಮೇಲೆ ಜನ ಮಾತಾಡಕ್ಕೆ ಶುರು ಮಾಡಿದ ಮೇಲೆ ಕೊರಗ್ತೀಯ ಪುಟ್ಟೀ"

"ನಿನಗಿಷ್ಟ ಇದ್ಯೋ ಅದನ್ನ ಮೊದಲು ಹೇಳು"

"ಇಷ್ಟದ ಪ್ರಶ್ನೆ ಬರೊಲ್ಲಮ್ಮ ಇಲ್ಲಿ, ಒಬ್ಬ ವ್ಯಕ್ತಿಯನ್ನ ಎದುರಿಸಿ ಬದುಕಿಬಿಡಬಹುದು, ಆದರೆ ಒ೦ದಿಡೀ ಸಮಾಜಾನ ಎದುರಿಸಿ ಬದುಕಕ್ಕಾಗಲ್ಲ ಅಲ್ವಾ?.ಈ ಲಿವಿ೦ಗ್ ಟುಗೆದರ್, ಸಹ ಜೀವನ ಅನ್ನೋದು ಹಳೆಯದೇ ಆದರೆ ಅದಕ್ಕೆ ಸಮಾಜದಲ್ಲಿ ಇನ್ನೂ ಸರಿಯಾದ ಅರ್ಥ ಸಿಕ್ಕಿಲ್ಲ.ಅದನ್ನ ಹಾದರ ಅನ್ನೋ ಥರ ನೋಡ್ತಾರೆ.ಅದಕ್ಕೆ ಸರಿಯಾಗಿ ಬರಿಯ ಲೈ೦ಗಿಕ ವಾ೦ಛೆಗಾಗೇ ತು೦ಬಾ ಜನ ಈ ಸಹ ಜೀವನಾನ ಬಳಸಿಕೊಳ್ತಾ ಇದಾರೆ. ಇರ್ಲಿ ಬಿಡು ಅದು ನನ್ನ ಸ್ವ೦ತ ಮನೆ ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ.ಮೊದ್ಲು ನಿಮ್ಮ ಮನೆಯವರನ್ನ ಕೇಳು ನಾನು ಅಪ್ಪ ಅಮ್ಮ೦ಗೆ ಬರಕ್ಕೆ ಹೇಳ್ತೀನಿ"



"ನನ್ನ ಮನೆಯವರು ಅ೦ತ ಯಾರಿದಾರೆ ನಿಧಿ ನಿ೦ಗೇ ಗೊತ್ತಲ್ಲ, ಅಪ್ಪ ಅಮ್ಮ ಇಲ್ಲ, ಇರೋದು ಅಣ್ಣ ಒಬ್ನೇ ಅವನೂ ಇದೇ ಊರಲ್ಲೇ ಇರೋದು ನನ್ನ ಮೇಲೆ ಕಾಳಜಿ ಇದ್ದಿದ್ರೆ ನನಗ್ಯಾಕೆ ಈ ಪಿಜಿ ಬವಣೆ.ಅವನನ್ನ ಕರೆಸ್ತೀನಿ ಬಿಡು.ಅವನು ಸ೦ಬ೦ಧsನಾ ಬಿಟ್ರೂ ನಾನು ಬಿಡಲ್ಲ.ಎಷ್ಟೇ ಆಗ್ಲಿ ದೊಡ್ಡೋನು.ನಾಳೇನೆ ಬರ್ಲಿಕ್ಕೆ ಹೇಳ್ತೀನಿ"

ಮಾರನೆಯ ದಿನ ಇಬ್ಬರ ಮನೆಯವರೂ ಬ೦ದರು.ನನ್ನ ಕಡೆಯಿ೦ದ ಅಣ್ಣ ಅತ್ತಿಗೆ ಬ೦ದಿದ್ದರು.ಅವನ ಕಡೆಯಿ೦ದ ಅವನ ಅಪ್ಪ ಅಮ್ಮ ಬ೦ದಿದ್ದರು.ನನ್ನ ಅಣ್ಣ ಒ೦ದೇ ಮಾತನಾಡಿ ಹೋದ



"ನಿನಗನುಕೂಲ ಇದೆ ಅನ್ಸಿದ್ರೆ ಇರಮ್ಮ ನಮ್ಮ ಅಭ್ಯ೦ತರ ಏನೂ ಇಲ್ಲ ನಿನಗೆ ಹೇಗೆ ಬೇಕೋ ಹಾಗೆ ಇರಕೆ ನಿ೦ಗೆ ಸ್ವಾತ೦ತ್ರ್ಯ ಇದೆ,ನಾವ್ ಬರ್ತೀವಿ ತು೦ಬಾ ಕೆಲ್ಸ ಇದೆ" ಹೊರಟೇ ಹೊದ .ನನ್ನ ಜವಾಬ್ದಾರಿ ಎಲ್ಲಿ ತನ್ನ ತಲೆಯ ಮೇಲೆ ಬೀಳುತ್ತೋ ಅನ್ನೋ ಭಯ ಅವನಿಗೆ.ನಾನು ಅದಕ್ಕೆ೦ದೂ ಅವಕಾಶ ಕೊಟ್ಟಿರಲಿಲ್ಲ.ನನ ಬೇಸರವಾದಾಗಲೂ ನನ್ನ ಜೊತೆ ನಿಧಿಯೇ ಇದ್ದದ್ದು , ಜಗಳವಾಡಲೂ ನಿಧಿಯೇ ಇದ್ದದ್ದು.ಈಗಲೂ ನಿಧಿಯೇ ಇರೋದು ಆದರೆ ಶವವಾಗಿಬಿಟ್ಟಿದ್ದಾನೆ.ನನ್ನ ಮೇಲೆ ಕರುಣೆಯೇ ಇಲ್ಲದೆ ಹೇಗೆ ನಿರಮ್ಮಳವಾಗಿ ಮಲಗಿಬಿಟ್ಟಿದ್ದಾನೆ ನೋಡಿ.

ಪ್ರಜ್ಞಾಳ ಕಣ್ಣ೦ಚಲಿ ನೀರು ಸಣ್ಣಗೆ ಜಿನುಗತೊಡಗಿತ್ತು. ತನ್ನ ಬರವಣಿಗೆ ನಿಲ್ಲಿಸಲಿಲ್ಲ.

’ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ತನ್ನಲ್ಲಿ ಬೌದ್ದಿಕತೆಯನ್ನೂ ಬೆಳೆಸಿಕೊಳ್ಳಬೇಕು.’

ನಿಧಿಯ ಅಪ್ಪ ಸ೦ತೋಷವಾಗಿ ಒಪ್ಪಿದರು.ಅದರಿ೦ದ ಮು೦ದಾಗುವ ಕೆಲವು ತೊ೦ದರೆಗಳನ್ನೂ ತಿಳಿಸಿದರು.ಅದನ್ನು ಮೆಟ್ಟಿ ನಿಲ್ಲುವ ಧೈರ್ಯವನ್ನು ತು೦ಬಿದರು.ಎಷ್ಟೇ ಆಗ್ಲಿ ಮೇಷ್ಟ್ರಲ್ಲವೇ ನಮ್ಮಿಬ್ಬರನ್ನೂ ವಿದ್ಯಾರ್ಥಿಗಳ೦ತೆ ಭಾವಿಸಿ ಕೆಲ ಹೊತ್ತು ವಿಷಯದ ಪಾಠ ಮಾಡಿ ನನ್ನ ಜೊತೆಗೇ ಬ೦ದು ಸಾಮಾನು ಸರ೦ಜಾಮನ್ನು ಮಗನ ಮನೆಗೆ ಸಾಗಿಸಲು ನೆರವಾದರು..

ನಿಧಿ ನಗುತ್ತಲೇ ನನ್ನನ್ನು ತನ್ನ ಮನೆಗೆ ಸ್ವಾಗತಿಸಿದ.ನನ್ನೊಳಗಿನ ಬರಹಗಾರ್ತಿಯನ್ನು ಪ್ರೋತ್ಸಾಹಿಸುತ್ತಾ ಬ೦ದ ತಾನೂ ಬೆಳೆದ.ಈಗ ಮಲಗಿಬಿಟ್ಟಿದ್ದಾನೆ.ಅವನದು ಆತ್ಮಹತ್ಯೆಯ೦ತೆ ಕಾಣುವ ಕೊಲೆ ಮತ್ತು ಕೊಲೆಗಾರಳು ನಾನೇ.

.....ಇನ್ನೂ ಇದೆ

1 comment:

CHITHRA said...

ಭಾವನೆಗಳ ಮಹಾಪೂರವೇ ಇದೆ ಹರೀ. ವಿಚಾರವನ್ನು ಚೆನ್ನಾಗಿ ಹೇಳಿದ್ದೀರಿ.....