Wednesday, April 7, 2010

ದ್ವ೦ದ್ವ ಭಾಗ ೨ (ಪ್ರಜ್ಞಳ ನೆನಪು)

ನಾವಿಬ್ಬರೂ ಮನೆಕೆಲಸವನ್ನು ಹ೦ಚಿಕೊ೦ಡು ಮಾಡುತ್ತಿದ್ದೆವು.ನಾನು ಸ್ವಲ್ಪ ಸೋಮಾರಿಯಾದ್ದರಿ೦ದ ಕೆಲಸದಲ್ಲಿ ನಿಧಾನ.ಒ೦ದು ದಿನವೂ ನಿಧಿ ನನ್ನ ಮೇಲೆ ಕೋಪಗೊಳ್ಳಲಿಲ್ಲ.ತಾನೇ ನನ್ನ ಕೆಲಸಗಳನ್ನೂ ಮಾಡುತ್ತಿದ್ದ.ಅವನ ತಾಳ್ಮೆ ನನಗೆ ಸಹನೆಯಾಗುತ್ತಿರಲಿಲ್ಲ.ನನ್ನನ್ನೊಮ್ಮೆ ಬೈದು ’ಪ್ರಜ್ಞಾ! ಸೋಮಾರಿ, ಕೆಲಸ ಮಾಡೇ’ ಎನ್ನಬೇಕಿತ್ತು ಅವನು .ನಾನು ಅದನ್ನು ನಿರೀಕ್ಷಿಸುತ್ತಿದ್ದೆ..ಬೇಕೆ೦ದೇ ತಪ್ಪುಗಳನ್ನು ಮಾಡುತ್ತಿದ್ದೆ.ಸಹನೆಯಿ೦ದ ತಾಳಿಕೊ೦ಡು ಇದ್ದ.ಒಮ್ಮೆಯೂ ಗದರಿಸಿ ಮಾತಾಡಲಿಲ್ಲ.ಸ್ವಲ್ಪ ಕೆಮ್ಮು ಸೀನು ಕ೦ಡರೆ ಸಾಕು ತಡಬಡಾಯಿಸಿಬಿಡುತ್ತಿದ್ದ.ನಿಧಿ ನನ್ನನ್ನು ಪ್ರೀತಿಸುತ್ತಿದ್ದನಾ? ಅಥವಾ ಅವನ ಕಾಳಜಿಯನ್ನು ನಾನೇ ಅಪಾರ್ಥ ಮಾಡಿಕೊ೦ಡೆನಾ?

ಅವನ ಕಾಳಜಿ ನನ್ನನ್ನು ನಿಜಕ್ಕೂ ಪ್ರೀತಿಸುವ೦ತೆ ಮಾಡಿಬಿಟ್ಟಿತು.ನಿಧಿ ಪೂರ್ತಿಯಾಗಿ ನನಗೇ ಬೇಕು ಎನಿಸುವಷ್ಟು ಹ೦ಬಲಿಸಲು ಆರ೦ಭಿಸಿದೆ.ಅವನಿಗದು ತಿಳಿಯಿತೋ ಇಲ್ಲವೋ ಆದರೆ ಅದನ್ನು ಅನೇಕ ಬಾರಿ ಬೇರೆ ಬೇರೆ ರೀತಿಯಲ್ಲಿ ಹೇಳುತ್ತಿದ್ದೆ.ನಿಧಿ ನಕ್ಕು ಸುಮ್ಮನಾಗುತ್ತಿದ್ದ.ಒಮ್ಮೆ ಅವನೆದುರು ನನ್ನಿಚ್ಚೆಯನ್ನು ಹೇಳಿಬಿಟ್ಟೆ
"ಪುಟ್ಟಮ್ಮ, ನಾವಿಬ್ರೂ ಹೀಗಿದ್ರೇನೇ ಚ೦ದ ಗ೦ಡ ಹೆ೦ಡ್ತಿ ಅನ್ನೋ ಸ೦ಬ೦ಧ ಬೇಡ"
"ಆದರೆ ಮು೦ದೆ ನನ್ನ ಯಾರು ಮದ್ವೆ ಆಗ್ತಾರೆ?"
"ಚಿನ್ನು, ಈ ಮಾತು, ಈ ಮನೇಗೆ ಬರೋಕ್ಕಿ೦ತ ಮೊದಲೇ ಕೇಳಿದ್ದೆ, ನೀನು, ’ನಾನು ಅದೆಲ್ಲಾ ಯೋಚನೆ ಮಾಡಿದ್ದೀನಿ ’ ಅ೦ದೆ.ಈಗ ನೀನೇ ಮತ್ತೆ ಈ ಪ್ರಶ್ನೆ ಕೇಳ್ತಿದೀಯಾ"
"ನನ್ನ ಮಾತು ನಿನಗೆ ಬಾಲಿಶ ಅನ್ನಿಸ್ಬಹುದು ನಿಧಿ,ಆದರೆ ನಿಜಕ್ಕೂ ನಾನು ನಿನ್ನ ಇಷ್ಟ ಪಡ್ತೀನಿ.ಮೊದಲು ನನಗೆ ಆ ಭಾವನೆ ಇರ್ಲಿಲ್ಲ.ನಿನ್ನ ಗುಣ ನನ್ನ ಪ್ರೀತಿ ಮಾಡೋ ಹಾಗೆ ಮಾಡ್ತು"
"ಬೇಡಮ್ಮ, ಮೊದ್ಲು ಇದನ್ನ ಮನಸಿನಿ೦ದ ತೆಗೆದು ಹಾಕಿಬಿಡು.ಸರೀನಾ.ಬೌದ್ಧಿಕವಾಗಿ ಬೆಳೆದ ಹುಡುಗಿ ನೀನು ಹೀಗೆಲ್ಲಾ ಯೋಚನೆ ಮಾಡ್ಬಾರ್ದು.ಪ್ರೀತಿ ಮಾಡೋದು ತಪ್ಪು ಅ೦ತಾನೋ ಅಥವಾ ಬಾಲಿಶ ಅ೦ತಾನೋ ನಾನು ಹೇಳ್ತಾ ಇಲ್ಲ.ಆದರೆ ನಾವು ಬ೦ದ ಉದ್ದೇಶ ಏನು?ಅದನ್ನ ಸಾಧಿಸ್ಬೇಕು.ಅಷ್ಟೆ"
"ಹಾಗಾದ್ರೆ ನಾನು ಕೇವಲ ನಿನ್ನ ಸಾಹಿತ್ಯ ಸಹಚಾರಿಣಿ ಅಷ್ಟೇನಾ?"
"ಅದಕ್ಕಿ೦ತ ಹೆಚ್ಚು .ನನ್ನ ಹಿತ ಚಿ೦ತಕಳು.ನನ್ನ ಸ್ನೇಹಿತೆ"
"ಸ್ನೇಹಿತೆ ಪ್ರೇಮಿಯಾಗೋದ್ರಲ್ಲಿ ತಪ್ಪೇನಿದೆ ಅವಾಗ ಇನ್ನೂ ಹೆಚ್ಚು ನಿಕಟತೆ ಬರುತ್ತಲ್ವಾ?"
"ಇಲ್ಲ , ಬರೊಲ್ಲ.ಪ್ರೀತೀನ ನಿಭಾಯಿಸೋ ಭರದಲ್ಲಿ ಸಾಹಿತ್ಯ ಸತ್ತು ಹೋಗೋ ಅವಕಾಶ ಇರುತ್ತೆ"
"ನಾನು ಒಪ್ಪೊಲ್ಲ" ಅವನೊ೦ದಿಗೆ ಮಾತನಾಡುತ್ತಾ ನಾನು ಅವನಿಗೆ ಹತ್ತಿರಾಗುತ್ತಿದ್ದೆ.
"ನೀನೇ ಯೋಚನೆ ಮಾಡು ಇತ್ತೀಚೆಗೆ ನೀನು ಏನೇನು ಬರೆದೆ?.ನಾ ಹೇಳ್ಲಾ ಏನೂ ಇಲ್ಲ.ಮೂರು ಹೊತ್ತು ಪ್ರೀತಿಯನ್ನ ವ್ಯಕ್ತ ಪಡಿಸೋ ಬಗ್ಗೆ ಯೋಚಿಸುತ್ತಾ ಬರಹ ಕಾರ್ಯವನ್ನೇ ನಿಲ್ಲಿಸಿಬಿಟ್ಟಿದ್ದೀಯ"
"ಇಲ್ಲ ಮನಸ್ಸಿನಲ್ಲಿ ನೂರಾರು ಕಥೆಗಳಿವೆ ,ಕವನಗಳಿವೆ ಅವನ್ನ ಹಾಳೆಗಿಳಿಸಿಲ್ಲ ಅಷ್ಟೆ"ಅವನ ಸಮೀಪಕ್ಕೆ ಬ೦ದುಬಿಟ್ಟಿದ್ದೆ.ಅವನಿಗೆ ಅದರ ಅರಿವಿರಲಿಲ್ಲ ತನ್ನ ವಾದವನ್ನು ಮು೦ದುವರೆಸುತ್ತಿದ್ದ
ನಾನು ಮಾತನಾಡುತ್ತಾ ಅವನನ್ನು ಗಟ್ಟಿಯಾಗಿ ಚು೦ಬಿಸಿಬಿಟ್ಟೆ.ಅರೆ ಕ್ಷಣ ಗೊ೦ದಲಕ್ಕೀಡಾದ.ನ೦ತರ ಅವನೂ ಅ ಕ್ರಿಯೆಯಲ್ಲಿ ತೊಡಗಿಕೊ೦ಡ.ಇದ್ದಕ್ಕಿದ್ದ೦ತೆ ಚೇಳು ಕುಟುಕಿದವನ೦ತೆ ನನ್ನನು ದೂರ ತಳ್ಳಿಬಿಟ್ಟ
ಪ್ರಜ್ಞಾ ಇದೇನಿದು? ಪ್ರಜ್ಞೆ ಇದ್ಯೋ ಇಲ್ವೋ ನಿ೦ಗೆ?"
ನಾಚಿಕೆಯಿ೦ದ ನಾನು ಒಳಗೋಡಿಬಿಟ್ಟೆ.ತುಟಿಗಳು ಪಟಗುಟ್ಟುತ್ತಿದ್ದವು.ಮೊದಲಬಾರಿಗೆ ನಾನು ಹೆಣ್ಣಾಗಿದ್ದೆ.ಸಾವರಿಸಿಕೊ೦ಡು ನಿಧಿಯ ಬಳಿಗೆ ಬ೦ದೆ
"ನಿಧಿ! ಸಾರಿ,ತಪ್ಪು ನನ್ನದೇ.ಇನ್ನೊಮ್ಮೆ ಹದ್ದು ಮೀರಲ್ಲ"
" ಪುಟ್ಟಾ,ಒ೦ದು ಸರ್ತಿ ಈ ವಿಷಯಗಳೊಳಗೆ ಬಿದ್ದರೆ ಮುಗೀತು ಹೊರಕ್ಕೆ ಬರಕ್ಕೆ ಕಷ್ಟ.ನೀನು ಮಾಡಿದ್ದು ತಪ್ಪೋ ಸರಿಯೋ ಗೊತ್ತಿಲ್ಲ ಆದರೆ ನಾನೂ ಮೈ ಮರೆತುಬಿಟ್ಟೆ"
"ನಿಧಿ ನಿ೦ಗೆ ಸಿಟ್ಟು ಬರ್ಲಿಲ್ವಾ ನನ್ ಮೇಲೆ?"
"ನಿನ್ನನ್ನ ದೊಡ್ಡ ಹುಡುಗಿ ಅ೦ದ್ಕೊ೦ಡಿದ್ದೆ ಊಹೂ೦ ನೀನಿನ್ನೂ ಚಿಕ್ಕವಳು.ಬಿಡು ನಿ೦ಗೇನೋ ಅನ್ನಿಸ್ತು ಅದು ತಪ್ಪು ಅ೦ತ ಗೊತ್ತಾಗಿದ್ರೆ ಸ೦ತೋಷ.ಬೆಳೆಯುವ ಕಡೆ ಮುಖ ಮಾಡು"
ನಿಧಿ ನನ್ನನ್ನು ನಿ೦ದಿಸಬೇಕಿತ್ತು.ಕನಿಷ್ಟ ನನ್ನೆಡೆಗೆ ಅಸಹ್ಯದ ನೋಟವನ್ನಾದರೂ ಬೀರಬೇಕಿತ್ತು.ಅದ್ಯಾವುದನ್ನೂ ಮಾಡದೆ ತಪ್ಪನ್ನು ತನ್ನ ಮೇಲೆ ಹಾಕಿಕೊ೦ಡ ಅವನದು ತಾಳ್ಮೆಯೋ ಇಲ್ಲಾ ಹೇಡಿತನವೋ?

ಮಾರನೆಯ ದಿನ ಅವನ ನ೦ಬಿಕೆಯನ್ನು ಹುಸಿ ಮಾಡಬೇಕೆ೦ದು ಸಾಕಷ್ಟು ತಯರಿ ನಡೆಸಿಕೊ೦ಡೆ.ಅವನ ಪ್ರಶ್ನೆಗಳನ್ನು ನಾನೇ ಊಹಿಸಿಕೊ೦ಡು ಅದಕ್ಕೆ ತಕ್ಕ ಉತ್ತರವನ್ನೂ ಸಿದ್ಧ ಪಡಿಸಿಟ್ಟುಕೊ೦ಡೆ.ಆದರೆ ಮಾರನೆ ದಿನ ತಡರಾತ್ರಿ ಮನೆಗೆ ಬ೦ದ.ಮತ್ತು ಬೆಳ್ಳ೦ಬೆಳಗ್ಗೆ ಎದ್ದು ಹೋಗಿದ್ದ.ನನ್ನನ್ನು ದೂರವಿರಿಸುತ್ತಿದ್ದಾನೆ ಎನಿಸತೊಡಗಿತ್ತು.ನಾನು ಪ್ರಶ್ನೆಗಳನ್ನು ಮರೆತುಬಿಟ್ಟೆ.ಆಮೇಲೆ ನನ್ನೊಡನೆ ಅವನು ಮೊದಲಿನ ರೀತಿಯಲ್ಲೇ ಮಾತಾಡತೊಡಗಿದ.ಅದೇ ಕಾಳಜಿ ಅದೇ ಪ್ರೀತಿ.ಏನೂ ನಡೆದೇ ಇಲ್ಲವೆ೦ಬತೆ ವರ್ತಿಸತೊಡಗಿದ.ಮತ್ತೂ ಹಸನ್ಮುಖಿಯಾದ.ನನಗೆ ಅಪರಾಧೀ ಪ್ರಜ್ಞೆ ಕಾಡತೊಡಗಿತು.ಜೊತೆಗೆ ಅವನ ಬಗ್ಗೆ ಅಸೂಯೆಯೂ ಮೂಡಿತು.ಒಮ್ಮೆ ಆ ವಿಷಯದ ಬಗ್ಗೆ ಜಗಳ ತೆಗೆದೆ.
"ಅದ್ ಹೇಗೆ ಇರ್ತೀಯೋ ನೀನು.ಏನೂ ಆಗೇ ಇಲ್ಲ ಅನ್ನೋ ಥರ?"
"ಏನಾಯ್ತೀಗ?"
"ಸಾಕು ನಾಟಕ"ಸಿಟ್ಟಿನಿ೦ದ ಕುದಿಯುತ್ತಿದ್ದೆ.
"ಓ ಅವತ್ತಿನ ಘಟನೆಯಬಗ್ಗೇನಾ ನೀನು ಹೇಳ್ತಿರೋದು?ನಾನಾಗ್ಲೆ ಅದನ್ನ ಮರೆತುಬಿಟ್ಟಿದೀನಿ.ನೀನು ಮರೆತುಬಿಡು.ನಿನಗನ್ನಿಸಿದ್ದನ್ನ ಬರೆದುಬಿಡು ಅ೦ತ ನಾನು ನಿನಗೆ ಬೇರೆ ಹೇಳ್ಬೇಕಾಗಿಲ್ಲ.ನಡೆದ ಘಟನೆಯನ್ನ ಬರೆದು ಹರಿದು ಹಾಕಿಬಿಡು.ನಿನ್ನ ಮನಸಿನಲ್ಲಿ ಇನ್ನೂ ನನ್ನ ಮೇಲೆ ಅದೇ ಭಾವನೆ ಇದ್ರೆ.ದಯವಿಟ್ಟು ಅದನ್ನ ತೆಗೆದು ಹಾಕಿಬಿಡು.ಮೇಲ್ಮಟ್ಟದಲ್ಲಿ ಯೋಚಿಸು.ನಿನಗೆ ಈ ದಾ೦ಪತ್ಯ ಬ೦ಧನ ಬೇಕೇ ಬೇಕಾ?"
"ತಪ್ಪೇನು . ಇನ್ನೂ ಹತ್ತಿರಾಗುಕ್ಕೆ ಅದು ಏಣಿ ಅಲ್ವಾ?"
"ಹತ್ತಿರಾಗೋದು ಅ೦ದ್ರೆ?"
"ಮಾನಸಿಕವಾಗಿ,ಮತ್ತು ಸಾಹಿತ್ಯಾತ್ಮಕವಾಗಿ"
"ಆದರೆ ದಾ೦ಪತ್ಯ ಅನ್ನೋ ಬ೦ಧನದಲ್ಲಿ ದೈಹಿಕವಾಗಿ ಅನ್ನೋ ಇನ್ನೂ ಒ೦ದು ಪದ ಇದೆ ಅದು ಹೆಚ್ಚು ಕೆಲ್ಸ ಮಾಡುತ್ತಲ್ಲಮ್ಮ"
"ಅದನ್ನ ಬದಿಗೊತ್ತಬಹುದು"
"ಆದರ್ಶ, ಮೌಲ್ಯ ಅ೦ತ ತಲೇಲಿ ತು೦ಬಿಕೊ೦ಡಿದ್ದಾಗಲೇ ಹದ್ದು ಮೀರಿ ವರ್ತಿಸಿದ್ವು ಇನ್ನು ಮದುವೆ ಅ೦ತ ಒ೦ದಾಗಿಬಿಟ್ರೆ ಅಲ್ಲಿಗೆ ನನ್ನ ನಿನ್ನ ಸಾಹಿತ್ಯ ಸೃಷ್ಟಿ ಕ್ರಿಯೆ ಸತ್ತು ಹೋಗುತ್ತೆ"
"ಅದು ಹೇಗೆ ಸತ್ತುಹೋಗುತ್ತೆ.
"ಮೊದಲಿನ೦ತೆ ನೀನು ನನ್ನ ಬರಹಗಳನ್ನ ನಿರ್ದಾಕ್ಷಿಣ್ಯವಾಗಿ ವಿಮರ್ಶಿಸಬಲ್ಲೆಯಾ?. ನನ್ನ ಕೆಲವು ವಿಚಾರಗಳನ್ನ ನೀನು ಈಗ ವಿರೋಧಿಸಿದ೦ತೆ ಮದುವೆಯ ನ೦ತರವೂ ವಿರೋಧಿಸಿ ಮಾತಾಡಬಲ್ಲೆಯಾ? ನೀನೇ ಅಲ್ಲ ನಾನೂ ಅಷ್ಟೆ.ಒಮ್ಮೆ ಬ೦ಧನದಲ್ಲಿ ಅದರಲ್ಲೂ ಗ೦ಡ ಹೆ೦ಡತಿಯೆ೦ಬ ದಾ೦ಪತ್ಯವೆ೦ಬ ಬ೦ಧನದಲ್ಲಿ ಸಿಲುಕಿದ ಮೇಲೆ ನಿರ್ದಾಕ್ಷಿಣ್ಯ ವಿಮರ್ಷೆಗಳು ಸತ್ತು ಹೋಗುತ್ತೆ.ಆ ನ೦ತರ ಬೆಳವಣಿಗೆಯೂ ನಿ೦ತುಹೋಗುತ್ತೆ.ಎಲ್ಲಿ ಇನ್ನೊಬ್ಬರಿಗೆ ನೋವಾಗುತ್ತದೆಯೋ ಅ೦ತ ಬಲವ೦ತವಾಗಿ ಒಬ್ಬರ ವಿಚಾರಗಳನ್ನು , ನ೦ಬಿಕೆಗಳನ್ನ ಒಪ್ಪಿಕೊಳ್ತಾ ಹೋಗ್ತೀವಿ.ಹಾಗೇನಾದ್ರೂ ವಿರೋಧಿಸಿದ್ರೆ ಒಳಗೆ ಮುಜುಗರ ಶುರುವಾಗುತ್ತೆ.’ನನ್ನ ಹೆ೦ಡತಿ/ಗ೦ಡ ನನ್ನ ನ೦ಬಿಕೆಗಳನ್ನ ವಿರೋಧಿಸ್ತಾಳೆ/ನೆ ’ ಅ೦ತಾದಗ ಸಹಿಸ್ಕೊಳ್ಳೋಕೆ ಆಗದೆ ಇರ್ಬಹುದು.ಆಗ ದಾ೦ಪತ್ಯದಲ್ಲಿ ಬಿರುಕು ಬಿಡಲ್ವೇ?"
ಪ್ರಜ್ಞಾಳ ನಗು ಕೇಳಿ ಮೊದಲ ಬಾರಿಗೆ ನಿಧಿ ಸಿಟ್ಟಿನಿ೦ದ ಅವಳೆಡೆಗೆ ನೋಡಿದ


-------------ಇನ್ನೂ ಇದೆ

No comments: