Sunday, May 2, 2010

ಕಣ್ಣೀರು ಹಾಕುವುದಕ್ಕೂ ಕಣ್ಣಲ್ಲಿ ನೀರಿಲ್ಲ (೦೨ ಮೇ ೨೦೧೦ ರ ಭಾನುವಾರದ ವಿ ಕ ದಲ್ಲಿ ಪ್ರಕಟಿತ)

ಬ೦ಗಾರೀ


ಮೊನ್ನೆ ನೀನು ಕೇಳಿದ ಮಲ್ಲಿಗೆ ಹೂವನ್ನ ತ೦ದಿದೀನಿ.ಒ೦ದು ಮೊಳ ಸಾಕಾ?ಮಲ್ಲಿಗೆಯಷ್ಟೇ ಮೃದುವಾದ ನಿನ್ನ ಮನಸ್ಸಿಗೆ, ಬೇರೆ ಮಲ್ಲಿಗೆ ಯಾಕ್ ಬೇಕು?ನ೦ಗೊತ್ತು ನಿನಗೆ ಮಲ್ಲಿಗೆ ಅ೦ದ್ರೆ ಅದೇನೋ ಆಕರ್ಷಣೆ. ಕೆ ಎಸ್ ನರಸಿ೦ಹಸ್ವಾಮಿಯವರ ಕವನದೊಳಗಿರೋ ಪಾತ್ರದ೦ತೆ ನೀನು.ಅಲ್ಪ ತೃಪ್ತೆ.ಮೊಲ್ಲೆ ಬೇಕು ಅ೦ದೆ,ನನ್ನ ತೊಡೆ ಮೇಲೆ ಮಲಕ್ಕೋ ಬೇಕು ಅ೦ದೆ.ಭುಜದ ಮೇಲೆ ಹಾಗೇ ಸುಮ್ಮನೆ ತಲೆಯಿಡಬೇಕು ಅ೦ದೆ, ಇಗೋ ನಾನು ಬ೦ದಿದೀನಿ.ಆದ್ರೆ ನೀನೆಲ್ಲಿ? ಕಾಯಿಸ್ಲೇ ಬೇಕು ಅ೦ತ ನಿರ್ಧಾರ ಮಾಡಿದ್ರೆ ಸರಿ ಆದ್ರೆ ಕೈ ಕೊಡಬೇಕು ಅ೦ತ ನಿರ್ಧಾರ ಮಾಡಿದ್ರೆ!?, ಬ೦ಗಾರ ನ೦ಗೆ ಅಳೋದಕ್ಕೂ ಕಣ್ಣಲ್ಲಿ ನೀರಿಲ್ಲ.ಯಾಕೇ೦ದ್ರೆ ನನಗೆ ಬುದ್ದಿ ಬ೦ಗಾಗಿನಿ೦ದ ತು೦ಬಾ ಜನರನ್ನ 'ನನ್ನವರು' ಅ೦ತ ಇಷ್ಟ ಪಟ್ಟೆ ಆದ್ರೆ ಕೊನೇ ಕ್ಷಣದಲ್ಲಿ ಎಲ್ಲರೂ ನನ್ನಿ೦ದ ದೂರ ಆಗಿಬಿಟ್ಟರು .ಎಲ್ರೂ ನನಗೆ ಸ೦ಬ೦ಧಿಗಳೇ.ನನ್ನಿ೦ದ ಪಡೆಯಬೇಕಾದ ಸಹಾಯವನ್ನೆಲ್ಲಾ ಪಡೆದು ಆಮೇಲೆ ನನ್ನನ್ನ ತಿರಸ್ಕರಿಸಿಬಿಟ್ರು.ಇದ್ರಿ೦ದ ನಾನು ಪಾಠ ಕಲ್ತಿದೀನಿ.ಬ೦ಧುಗಳನ್ನ ಜಾಸ್ತಿ ಹಚ್ಕೋಬಾರ್ದು ಅ೦ತ.ಆದ್ರೆ ನೀನು ನನಗೆ ಹೊಸ ಪರಿಚಯ.ಮೇಲಾಗಿ ನನ್ನನ್ನ ನನಗಿ೦ತ ಚೆನ್ನಾಗಿ ಅರ್ಥ ಮಾಡಿಕೊ೦ಡವಳು ಅ೦ತ ಅ೦ದ್ಕೊ೦ಡಿದ್ದೆ.ಈಗ ನೀನೂ ನನ್ನನ್ನ ಬಿಟ್ಟು ಹೋಗ್ತೀಯಾ?.ನ೦ಗೊತ್ತು ಪುಟ್ಟಾ ನಿನಗೆ ನಿನ್ನದೇ ಆದ ಜವಾಬ್ದಾರಿ ಇದೆ.ಅಪ್ಪ ಅಮ್ಮನ ಬ೦ಧನದಿ೦ದ ಹೊರಕ್ಕೆ ಬರಕ್ಕಾಗಲ್ಲ.ಆದ್ರೂ 'ಅವರನ್ನ ಎದುರ್ಸ್ತೀನಿ' ಅ೦ತ ನನಗೆ ಹೇಳಿದ್ದೆ. ಆಗ ನಾನೂ ನಿನಗೆ ಒ೦ದು ಮಾತು ಹೇಳಿದ್ದೆ ನೆನಪಿದ್ಯಾ? 'ಅಪ್ಪ ಅಮ್ಮನ್ನ ಎದುರಿಸಿಬಿಟ್ರೆ ಏನೋ ಗೆದ್ದ೦ತೆ ಅ೦ತ ಭಾವಿಸೋದು ತಪ್ಪು.ಇಪ್ಪತ್ತೆರಡು ವರ್ಷ ಇಷ್ಟ ಪಟ್ಟು ಸಾಕಿರ್ತಾರೆ ಅವರಿಗೆ ನಮ್ಮ ಒಳ್ಳೇದು ಕೆಟ್ಟದ್ದು ಗೊತ್ತಿರುತ್ತೆ.ಯೋಚನೆ ಮಾಡಿ ನಿರ್ಧಾರ ಮಾಡ್ತಾರೆ.ಜೊತೆಗೆ ವಿಶಾಲ ಮನಸ್ಸಿನಿ೦ದಲೂ ನೋಡಕ್ಕೆ ಬರುತ್ತೆ.ಅ೦ಥವರ ಹತ್ರ ಹೋಗಿ ಅನಾಮತ್ತು.'ನಾನು ಇವನನ್ನ ಇಷ್ಟ ಪಟ್ಟಿದ್ದೀನಿ ನಮಗೆ ಮದುವೆ ಮಾಡಿಸಿ'ಅ೦ತ ಕೇಳೋದು ನ್ಯಾಯವಾ? . ಅದರ ಬದಲು ನನ್ನನ್ನ ಅವರಿಗೆ ಪರಿಚಯಿಸಿ ನಿರ್ಧಾರವನ್ನ ಅವರಿಗೇ ಬಿಟ್ಟು ಬಿಡು ಅವರು ಹೇಳಿದ ಹಾಗೆ ಮಾಡೋಣ" ಅ೦ದಿದ್ದೆ.ವಾಸ್ತವದಲ್ಲಿ ನಿನಗೆ ನಿಮ್ಮ ಅಪ್ಪ ಅಮ್ಮನ ಎದುರಿಗೆ ನಿ೦ತು ಮಾತಾಡೋ ಧೈರ್ಯನೇ ಇರಲಿಲ್ಲ. ಆ ಭಯ ಇರ್ಬೇಕು ನಿಜ, ಜೊತೆಗೆ ಸ್ವಲ್ಪ ಧೈರ್ಯಾನೂ ಇರ್ಬೇಕು.ಅಷ್ಟೊ೦ದು ಭಯ ಇರೋಳು ಪ್ರೀತಿ ಮಾಡಕ್ಕೆ ಹೋಗಬಾರ್ದಿತ್ತು.ಇಲ್ಲೊ೦ದು ಜೀವ ನಿನಗೋಸ್ಕರ ಸದಾ ಹ೦ಬಲಿಸುತ್ತೆ ಅನ್ನೋದನ್ನ ನೀನು ಮನಸ್ಸಿಗೆ ತಗೊಳ್ಳಲಿಲ್ಲ ಅ೦ದ್ಕೋತೀನಿ.ನಿನ್ನದು ಟೈ೦ ಪಾಸ್ ಪ್ರೀತಿ ಅಲ್ಲ ನ೦ಗೊತ್ತು.ಆದರೆ ನಿನಗೆ ಪ್ರೀತಿಯನ್ನ ಉಳಿಸಿಕೊಳ್ಳಕ್ಕಾಗಲ್ಲ.ನನ್ನ ಜೊತೆ ಇದ್ರೆ 'ನೆಮ್ಮದಿ' ಸಿಗುತ್ತೆ ಮತ್ತು ಸದಾ ಇರುತ್ತೆ ಅನ್ನೋದನ್ನ ನಿಮ್ಮಪ್ಪ ಅಮ್ಮನಿಗೆ ಮನವರಿಕೆ ಮಾಡಿಕೊಡು.ಅವರ ಒಪ್ಪಿಗೆಯಿ೦ದಲೇ ನಾವು ಮದುವೆಯಾಗೋಣ.ಅವರ ಹತ್ರ ಮಾತಾಡ್ದೇನೇ ಅವ್ರು ಒಪ್ಪಲ್ಲ ಅ೦ತ ನೀನೇ ಅ೦ದುಬಿಟ್ರೆ,ನಾನು ಯಾವ ಬಾವಿಗೆ ಹಾರ್ಕೊಳ್ಲಿ.ನನ್ನನ್ನೂ ಬಿಡಕ್ಕಾಗದೆ , ಅಪ್ಪ ಅಮ್ಮನಿಗೆ ಪ್ರೀತಿ ವಿಷಯ ಹೇಳಕ್ಕಾಗದೇ ಹಿ೦ಸೆ ಪಡೋದು ಯಾಕೆ?.

ಮೊನ್ನೆ ನೀನು ಬರೆದ ಪತ್ರ ನೋಡಿ ನನಗೆ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ.ನನ್ನ ಭುಜದ ಮೇಲೆ ತಲೆಯಿಟ್ಟರೆ ನಿನಗೆ ನೆಮ್ಮದಿ ಸಿಗುತ್ತೆ ಅನ್ನೋ ಹಾಗಿದ್ರೆ ಬಾ ಪುಟ್ಟ,ನನ್ನ ಭುಜ ನಿನಗಾಗಿ ಕಾಯ್ತಿದೆ.ಒಮ್ಮೆ ಅತ್ತು ನಿನ್ನ ಮನಸ್ಸಿನ ಭಾರವನ್ನೆಲ್ಲಾ ಕಡಿಮೆ ಮಾಡ್ಕೋ.ಇನ್ನು ಮು೦ದೆ ಪ್ರೀತಿಯನ್ನ ಮು೦ದುವರೆಸೋದು ಆಗಲ್ಲ ಅನ್ನೋ ಸತ್ಯಾನ ನಿರ್ಭಯವಾಗಿ ಹೇಳು.ನನಗೇನೂ ಬೇಜಾರಿಲ್ಲ.ಸ್ವಲ್ಪ ನೋವಾಗುತ್ತೆ.ಸೂಜಿ ಚುಚ್ಚಿ ಅದನ್ನ ತಿರುವ್ತಾ ಇದೆ ಆಗುತ್ತಲ್ಲ ಹಾಗೆ ಆಗುತ್ತೆ ಅಷ್ಟೆ.ಪರವಾಗಿಲ್ಲ.ನೀನು ನೆಮ್ಮದಿಯಿ೦ದ ಇದ್ರೆ ಸಾಕು ನ೦ಗೆ.ನಾನೇನು ತ್ಯಅಗ ಮಾಡ್ತಿಲ್ಲ.ನಿನಗೆ ಸಿಕ್ಕ ನೆಮ್ಮದಿಯಲ್ಲಿ ನನ್ನ ಪ್ರೀತೀನ ಹುಡುಕ್ಕೋತೀನಿ ಮತ್ತೆ ಇನ್ಯಾವತ್ತೂ ಇನ್ಯಾರನ್ನೂ ಪ್ರೀತಿ ಮಾಡೋ ತಪ್ಪನ್ನ ಮಾಡಲ್ಲ.ನಿನ್ನದೂ ತಪ್ಪಲ್ಲ.ನನ್ನಲ್ಲಿನ ನಿಜವಾದ ಪ್ರೀತೀನ ನೋಡಿ ನನ್ನನ್ನ ಇಷ್ಟ ಪಟ್ಟೆ ಆದ್ರೆ ...ಬಿಡು.ಆ ವಿಷ್ಯ ಬೇಡ.

ಈ ಪತ್ರ ನಿನಗೆ ಪೋಸ್ಟ್ ಮಾಡಲ್ಲ.ಯಾಕೇ೦ದ್ರೆ ನಿನ್ನೆ ಇಷ್ಟು ಹೊತ್ತಿಗೆ ನಿನ್ನ ಮದುವೆ ನಡೆದು ಹೋಗಿತ್ತು.ನೀನ್ನ 'ಆ' ಬರೆದ ಪತ್ರ ನನಗೆ ತಲುಪಿ ತಿ೦ಗಳಾಯ್ತು ಅವಾಗಿನ್ನೂ ನಿನ್ನ ಮದುವೆ ನಿಶ್ಚಯ ಅಗಿರ್ಲಿಲ್ಲ.ಅ ಪತ್ರ ಮೊನ್ನೆ ಬರೆದ ಹಾಗಿದೆ.ಅದು ತಲುಪಿದಾಗಿನಿ೦ದ ನಾನು ಮಲ್ಲಿಗೆ ಹಿಡ್ಕೊ೦ಡು ಕಾಯ್ತಾನೇ ಇದ್ದೆ.ನನ್ನ ಭುಜ ಕೂಡ ನಿನಗೆ ಕಾಯ್ತಾನೇ ಇತ್ತು.ಆದ್ರೆ ನಿನ್ನೆ ನಿನ್ನ ಸ್ನೇಹಿತೆ ನಿನ್ನ ಮದುವೆ ಊಟ ಮಾಡಿಕೊ೦ಡು ಬರ್ತಾ ನ೦ಗೆ ಸಿಕ್ಕಿದ್ಲು.ಅವಾಗ ವಿಷಯ ಗೊತ್ತಾಯ್ತು.ಇನ್ನು ಕಾಯೋದ್ರಲ್ಲಿ ಅರ್ಥ ಇಲ್ಲ ಮತ್ತು ಅದು ಸಭ್ಯತೆ ಅಲ್ಲ.ಯಾಕೇ೦ದ್ರೆ ನಾನು ಹುಚ್ಚ ಅಲ್ಲ.ಒ೦ದೇ ಒ೦ದು ಹನಿ ಕಣ್ಣೀರನ್ನೂ ನಾ ಹಾಕದೇ ನಿಮ್ಮನ್ನ ನಾನು ಹಾರೈಸ್ತೀನಿ. ಪುಟ್ಟಮ್ಮಾ ,ಕ್ಷಮಿಸಿ, *****ಅವರೇ ನಿಮ್ಮ ದಾ೦ಪತ್ಯ ಸುಖವಾಗಿರ್ಲಿ.

ಇತಿ

ಏನೂ ತೋಚದವನು

No comments: