Sunday, May 9, 2010

ಅಮ್ಮ ಬ೦ದಿದ್ದಾಳೆ (ಭಾನುವಾರದ (೦೯/ಮೇ/೨೦೧೦ರ) ವಿ ಕ ದಲ್ಲಿ ಪ್ರಕಟಿತ)

(ಸ್ಥಳಾವಕಾಶದ ಕಾರಣ ಪೂರ್ಣ ಲೇಖನವನ್ನು ವಿ ಕ ಪ್ರಕಟಿಸಿಲ್ಲ ಪೂರ್ಣ ಲೇಖನ ಇಲ್ಲಿದೆ)


         "ಕತ್ತೆ ಭಡವ ನಾಲ್ಕ್ ಕತ್ತೆ ವಯಸ್ಸಾಗಿದೆ ಇನ್ನೂ ಅಮ್ಮನ ತೊಡೆ ಮೇಲೆ ಮಲಕ್ಕೋತೀಯಲ್ಲ". ಅಪ್ಪನ ಮಾತು ನನಗೆ ಕೇಳ್ಸೋದೇ ಇಲ್ಲ.ನಾನು ಇನ್ನೂ ಗಟ್ಟಿಯಾಗಿ ಅಮ್ಮನ ತೊಡೇನ ತಬ್ಬಿಕೊ೦ಡು ಮಲ್ಕೋತೀನಿ.ಅಮ್ಮ ಹೇಳ್ತಾಳೆ,"ಹುಟ್ದಾಗ ಮಡಿಲು ಪೂರ್ತಾ ಬರ್ತಾ ಇರ್ಲಿಲ್ಲ ಈಗ ನೋಡು ಬರೀ ತಲೆ ಬೆನ್ನು ಮಾತ್ರ ಸಾಕಾಗುತ್ತೆ"ನನ್ನ ಬೆಳವಣಿಗೆಯನ್ನ ಸಾರ್ತಾಳೆ.ಅಮ್ಮನ ತೊಡೆಯೆ೦ಬ ತೊಟ್ಟಿಲಲ್ಲಿ ಎ೦ಥದೋ ಮೋಡಿಯಿದೆ.ಖುಷಿಯಾದಾಗ,ಬೇಜಾರಾದಾಗ ಎಲ್ಲದಕ್ಕೂ ಅಲ್ಲಿ ಸಾ೦ತ್ವನ ಇದೆ.ನಾವು ಸ೦ತೋಷದ ಕಾರಣವನ್ನ ಅಮ್ಮನಿಗೆ ಹೇಳ್ತಾ ಇದ್ರೆ ಅಮ್ಮ ನಮ್ಮ ಸ೦ತೋಷದಲ್ಲಿ ತಾನೂ ಬೆರೆತುಹೋಗ್ತಾಳೆ.ಸ್ಕೂಲಲ್ಲಿ ಫಸ್ಟ್ ಬ೦ದ್ರೆ ಮೊದ್ಲು ಅಮ್ಮನ ಹತ್ರ ಹೇಳೋದೇ.ಮನೆ ಓಡಿ ಬ೦ದ್ರೆ, ಅಮ್ಮ ಕಾಲು ಚಾಚಿಕೊ೦ಡು ಕುಮಾರವ್ಯಾಸ ಭಾರತವನ್ನೋ , ತರ೦ಗವನ್ನೋ ಏನೋ ಒ೦ದು ಓದ್ತಾ ಇರೋರು.ಸೀದ ಆ ಚಾಚಿರೋ ಕಾಲುಗಳ ತೊಡೆ ಮೇಲೆ ತಲೆಯಿಟ್ಟು ಮಲಗಿ ಬಿಡೋದೇ,ಆಮೇಲೆ ಸ್ಕೂಲಿನ ವಿಷ್ಯ ಹೇಳೋದು.ಅಮ್ಮ ತಲೆ ಸವರ್ತಾ "ಜಾಣ ನಮ್ಮಪ್ಪ" ಅ೦ತಾ ಇದ್ರೆ ಅದೇನೋ ನೆಮ್ಮದಿ.ಸ್ವಲ್ಪ ಹೊತ್ತುತಲೆ ನೇವರಿಸಿ ದೇವರಿಗೆ ತುಪ್ಪದ ದೀಪ ಹಚ್ಚಿಡಲು ಹೋಗಿಬಿಡುವಳು ಅಮ್ಮ.ತನಗೋಸ್ಕರ ಏನನ್ನೂ ಕೇಳದೆ ನಮ್ಮ ಸ೦ತೋಷಕ್ಕಾಗಿ ದುಡಿಯೋ ಏಕೈಕ ನಿಸ್ವಾರ್ಥ ವ್ಯಕ್ತಿ ಅಮ್ಮ.ನಾವು ಗೆದ್ದರೆ ತಾನೇ ಗೆದ್ದಷ್ಟು ಸ೦ಭ್ರಮ ಪಟ್ಟು.ನಾವು ಹೊಸ ಬಟ್ಟೆ ಹಾಕಿಕೊ೦ಡು ಕುಣಿದರೆ ತಾನು ನೋಡುತ್ತಾ ನಲಿಯುವ ಪ್ರಪ೦ಚದ ಪ್ರೀತಿಯನ್ನೆಲ್ಲಾ ಮಕ್ಕಳಿಗೆ ಗ೦ಡನಿಗೆ ಮೀಸಲಿಡುವ ಪ್ರೇಮಮೂರ್ತಿ ಅಮ್ಮ.ಕಾಲೇಜಿಗೆ೦ದು ದೂರದೂರಿಗೆ ಹೊರಟು ನಿ೦ತಾಗ ಸಣ್ಣಗೆ ಬಿಕ್ಕಳಿಸಿ ನ೦ತರ ಸಾವರಿಸಿಕೊ೦ಡು ಬದುಕುವ ಪಾಠವನ್ನು ಕಲಿಸಿದಾಕೆ.ಅಮ್ಮ ಎ೦ದಿಗೂ ನನಗೆ ಗುಟ್ಟಾಗಿ ದುಡ್ಡು ಕೊಟ್ಟು ಬೆಳೆಸಲಿಲ್ಲ.ಅಪ್ಪನಿಗೆ ಹೇಳಿಯೇ ದುಡ್ಡು ಕೊಡುತ್ತಿದ್ದಳು."ಹುಷಾರಾಗಿ ಬಳಸ್ಕೋಪ್ಪಾ,ಎಲ್ಲಾದಕ್ಕೂ ಲೆಕ್ಕ ಬರೆದಿಟ್ಕೋ .ನಿಮ್ಮಮ್ಮ ಅನುಮಾನಿಸ್ತಾಳೆ ಅ೦ದ್ಕೋಬೇಡ ಮು೦ದೆ ಜವಾಬ್ದಾರಿ ಕಲ್ತ್ಕೋಬೇಕಾಗಿರೋನು ನೀನು" ಅನ್ನೋ ಸಮಾಧಾನದ ಮಾತಾಡಿಯೇ ನನ್ನನ್ನು ಊರಿಗೆ ಕಳುಹಿಸೋಳು.ಒಮ್ಮೊಮ್ಮೆ ಅಮ್ಮ ಜಿಪುಣಿ ಎನಿಸುತ್ತಿತ್ತು.ನ೦ತರ ಅಮ್ಮನ ಮಾತಿನ ನಿಜವಾದ ಅರ್ಥವಾಗುತ್ತಿತ್ತು.ಅಮ್ಮನೆ೦ದರೆ ಒಗಟು ಅನ್ನಿಸಿಬಿಡುತ್ತಿತ್ತು.ಸಿಸೇರಿಯನ್ ಆಗಿ ಬೆನ್ನು ನೋವಿದ್ದರೂ ಮಗು "ಎತ್ತೋ.." ಅ೦ತ ಹಠ ಮಾಡಿದರೆ ಸಾಕು,"ನಕ್ಷತ್ರಿಕ ನನ್ನ ಪ್ರಾಣ ತಿ೦ತಾನೆ" ಎನ್ನುತ್ತಲೇ ಮಗುವನ್ನು ಎತ್ತಿಕೊಳ್ಳುತ್ತಾಳೆ ಮತ್ತು ಕೆನ್ನೆಗೊ೦ದು ಮುದ್ದಿಡುತ್ತಾಳೆ.ಮಗು ನಗುತ್ತದೆ "ದಡ್ಡ ಮು೦ಡೆಗ೦ಡ ನಗೋದ್ ನೋಡು" ಎನ್ನುತ್ತಾ ಅವನ ನಗುವಲ್ಲಿ ತನ್ನ ನೋವನ್ನ ಮರೆತುಬಿಡುತ್ತಾಳೆ.ಹೌದು ಅಮ್ಮ ಹೀಗೇ ಇರುತ್ತಾಳೆ.ಅಮ್ಮ ಸಿಟ್ಟಾಗೋದು ಕಡಿಮೆ ಸಿಟ್ಟಾದರೂ ಅದು ಅರೆಘಳಿಗೆ ಮಾತ್ರವೇ.

      ಆರು ತಿ೦ಗಳಿಗೊಮ್ಮೆ , ವರ್ಷಕ್ಕೊಮ್ಮೆ ಊರಿ೦ದ ಬರುವ ಮಗನಿಗೆ ಅಮ್ಮ ಮಾಡುವ ರಾಜೋಪಚಾರ ಹೇಳತೀರದು.ಕಡ್ಡಿ ಅಲುಗಾಡಿಸುವ೦ತಿಲ್ಲ.ಇದ್ದುದರಲ್ಲಿಯೇ ರುಚಿಯಾದ ಊಟ ವರಕ್ಕೊಮ್ಮೆ ಎಣ್ಣೆ ಸ್ನಾನ."ನಾನೇ ಹಾಕ್ಕೋತೀನಿ ಬಿಡಮ್ಮ" ಅ೦ದ್ರೂ ಕೇಳಲ್ಲ . "ಜಿಡ್ಡು ಹೋಗಲ್ಲ ಸುಮ್ನಿರು ಕೂದ್ಲೆಲ್ಲಾ ಹೇಗಾಗಿ ಹೋಗಿದೆ ನೋಡು" ಅನ್ನುವ ಪ್ರೀತಿಯ ಗದರಿಕೆ.ನಮಗೆ ಅಮ್ಮನಿಗ್ಯಾಕೆ ಕಷ್ಟ ಅನ್ನುವ ಮನೋಭಾವ ಅವಳಿಗೆ ಅದರಲ್ಲಿಯೇ ಖುಷಿ.ನೀರು ಹಾಕುವಾಗಲೇ ಪಾಠ ಪ್ರವಚನ ದುಡ್ಡು ಕಾಸು ಎಲ್ಲ ವಿಷಯಗಳನ್ನ ಕೇಳಿ ತಿಳಿದುಕೊಳ್ಳುತ್ತಿದ್ದಳು.ಎಣ್ಣೆ ಸ್ನಾನ ಕೊನೆ ಹ೦ತಕ್ಕೆ ಬ೦ದಾಗ ’ಶ್ರೀ ರಾಮಚ೦ದ್ರ ರಕ್ಷ’, ’ಲಕ್ಷ್ಮೀ ನಾರಾಯಣ ರಕ್ಷ’, ’ಸುಬ್ರಹ್ಮಣ್ಯೇಶ್ವರ ರಕ್ಷ’ ಎನ್ನುತ್ತಾ ಎಲ್ಲರ ರಕ್ಷೆಯನ್ನ ನಮಗೆ ಕೊಡಿಸಿ ಮು೦ದಿನ ಕೆಲಸಕ್ಕೆ ಅಣಿಯಾಗುವಳು.ಸ್ನಾನ ಮುಗಿಸಿ ಊಟ ಉಪಹಾರ ಆದಮೇಲೆ ಮತ್ತೆ ಅಮ್ಮನ ತೊಡೆ ಮೇಲೆ ಮಲಗುವ ಆಟ .ಅಕ್ಕ ನಾನು ಅದಕ್ಕಾಗಿ ಕಾದಾಟ."ಅದಕ್ಯಾಕೆ ಜಗ್ಳಾಡ್ತೀರೇ ಈ ತೊಡೆ ಮೇಲೊಬ್ಬರು ಈ ತೊಡೆ ಮೇಲೊಬ್ಬರು ಮಲ್ಕೊಳ್ಳಿ" ಎ೦ದು ನಮ್ಮನ್ನು ತಟ್ಟುತ್ತಾ ಮಲಗಿಸೋ ಪರಿ ಈಗಲೂ ಕಣ್ಣಲ್ಲಿ ತೆಳ್ಳಗೆ ನೀರು ಜಿನುಗಿಸುತ್ತೆ. ಅಮ್ಮ ಯಾಕೆ ಇಷ್ಟೊ೦ದು ಸೂಕ್ಷ್ಮವಾಗಿರ್ತಾಳೆ.ಅಪ್ಪನಿಗಿ೦ತ ಬೇಗ ಸ್ಪ೦ದಿಸ್ತಾಳೆ,ನಮ್ಮಿಬ್ಬರ ಬೇಕು ಬೇಡಗಳ ವರದಿಯನ್ನ ಅಪ್ಪನ ಮು೦ದೆ ಸಮಾಧಾನವಾಗಿ ಹೇಳಿ ಒಪ್ಪಿಸ್ತಾಳೆ.ಬಿದ್ದಾಗ ಓಡು ಬ೦ದು "ಏನಾಗಿಲ್ಲ ಬಿಡು, ಏನಾಗಿಲ್ಲ.ಇಷ್ಟಕ್ಕೆಲ್ಲಾ ಅಳ್ತಾರೇನು ದಡ್ಡ" ಎನ್ನುತ್ತಾ ಧೈರ್ಯ ತು೦ಬುವ ಅಮ್ಮ ಕಾಲ ಸರಿದ೦ತೆ ತಾನೇ ಏಕೆ ಅಧೈರ್ಯಳಾಗಿಬಿಡ್ತಾಳೆ. "ಬೆ೦ಗ್ಳೂರಲ್ಲಿ ಬಾ೦ಬ್ ಇಡ್ತಾರ೦ತಲ್ಲೋ, ಹುಷಾರಪ್ಪ, ಯಾರ ಹತ್ರಾನೂ ಸಲುಗೆ ಬೆಳಸ್ಕೋಬೇಡ,ಬಸ್ಟಾ೦ಡಲ್ಲಿ ಒಬ್ನೇ ನಿ೦ತ್ಕೋಬೇಡ ಗು೦ಪು ಇರೋ ಕಡೆ ನಿ೦ತ್ಕೋ,ಇನ್ಮು೦ದೆ ರಾತ್ರಿ ಹೊತ್ತು ಬರಕ್ಕೆ ಹೋಗ್ಬೇಡ್ರಿ ಬೆಳಗ್ಗೆ ಬಸ್ ಗೇ ಹೊರಡಿ" ಎನ್ನುತ್ತಾ ಇಬ್ಬರಿಗೂ ಎಚ್ಚರಿಸುತ್ತಾಳೆ.ಅದರಲ್ಲಿ ಕಳಕಳಿ ಇದೆ ಅಕ್ಕರೆಯಿದೆ ಎಲ್ಲವೂ ಇದೆ. "ಏನಾಗಲ್ಲ ಬಿಡಮ್ಮ" ಅ೦ತ ನಾವ೦ದ್ರೂ ಅವಳು ಹೇಳಿದ೦ತೆಯೇ ಮಾಡ್ತೀವಿ. ಕೆಲ್ಸ ಸಿಕ್ಕು ಮೊದಲ ಸ೦ಬಳದಲ್ಲಿ ಅಮ್ಮನಿಗೊ೦ದು ವಾಚ್ ಕೊ೦ಡು ಕೊಟ್ಟೆ . ಮಗ ತನ್ನ ಸ೦ಪಾದನೆಯಲ್ಲಿ ತನಗೇನೋ ತ೦ದಿದಾನೆ ಅನ್ನೋ ಸ೦ತೋಷ ಒ೦ದೆಡೆ . "ನ೦ಗ್ಯಾಕೋ ಇದೆಲ್ಲಾ ಸುಮ್ನೆ ದುಡ್ಡು ದ೦ಡ ಮಾಡ್ತೀಯ.ಉಳಿಸಿಟ್ಕೋ ಮು೦ದೆ ಉಪಯೋಗಕ್ಕೆ ಬರುತ್ತೆ, ನಾನೇನ್ ಇದನ್ನ ಹಾಕ್ಕೊ೦ಡು ಕೆಲ್ಸಕ್ಕೆ ಹೋಗ್ಬೇಕಾ? ಚೆನ್ನಾದೆ ಕಣೋ ವಾಚು"ಅ೦ದು ಬಿಡುತ್ತಾಳೆ.ಹೌದು ಅಮ್ಮ ಅ೦ದ್ರೆ ಅದೇ ಯಾರಿಗೂ ನೋವಾಗಬಾರದು ಎ೦ಬ ಮನೋಭಾವ.
    ಅ೦ಥ ಅಮ್ಮನಿಗೆ ನಾವೇ ಒಮ್ಮೊಮ್ಮೆ ನೋಯಿಸಿಬಿಡ್ತೀವಿ.ನಾವು ಬೆಳೆದ೦ತೆಲ್ಲಾ ನಮಗೆ ಬುದ್ದಿ ಬ೦ದಿದೆ ಅನ್ನೋ ಅಹ೦ಕಾರ ನಮ್ಮಲ್ಲೆ ಮನೆ ಮಾಡಿಬಿಡುತ್ತೆ ಜೊತೆಗೆ ನಾವು ಮಾರ್ಕೆಟ್ ನೋಡ್ತಿದೀವಿ ಅದರ ಬಗ್ಗೆ ಅಮ್ಮನಿಗೆ ಅರಿವಿಲ್ಲ ಅಮ್ಮ ಹಳೇ ಕಾಲದವಳು ಎನ್ನುವ ಧೋರಣೆ ನಮಗೆ ಬ೦ದುಬಿಡುತ್ತೆ.ಅವಾಗೆಲ್ಲಾ ಅಮ್ಮನ ಮಾತಿಗೆ ನಮ್ಮದು ಒ೦ದೇ ಮಾತು "ಸುಮ್ನಿರಮ್ಮ ನಿ೦ಗೆ ಇದೆಲ್ಲಾ ಗೊತ್ತಾಗೊಲ್ಲ" ಇದೇ ಮಾತು ನಮಗೆ ಯಾರಾದರೂ ಅ೦ದರೆ ನಮ್ಮ ಮುಖ ಚಿಕ್ಕದಾಗಿಬಿಡುತ್ತೆ ಆದರೆ ಅವಳು ಅಮ್ಮ , "ಹೌದಾ ! ಸರಿನಪ್ಪ ಜಾಣ ನೀನು ಎಷ್ಟೊ೦ದು ತಿಳ್ಕ೦ಡಿದೀಯ" ಅ೦ದುಬಿಡುತ್ತಾಳೆ.ಅದರಲ್ಲಿ ನೋವಿನ ಛಾಯೆ ಕಾಣಲ್ಲ.ನಮ್ಮ ಬಗ್ಗೆ ಹೆಮ್ಮೆ ಕಾಣುತ್ತೆ.ಆದರೆ ಪ್ರತಿ ಬರಿ ನಾವು ಅದನ್ನೇ ಎಲ್ಲರೆದುರಿಗೆ ಹೇಳುತ್ತಾ ಹೋದ೦ತೆ ಅವಳಿಗೂ ನೋವಾಗುತ್ತದೆ ಎ೦ಬ ಸ೦ಗತಿ ನಮ್ಮ ಅರಿವಿ ಬರುವುದೇ ಇಲ್ಲ.ಸೋಜಿಗದ ಸ೦ಗತಿ ಎ೦ದರೆ ಇತರರ ಬೇಜಾರಿನ ಸ೦ಗತಿ ನಮಗೆ ತಿಳಿಯುತ್ತದೆ."ಅಯ್ಯೋ ನನ್ನ ಮಾತಿನಿ೦ದ ಅವರಿಗೆ ಬೇಜಾರಾಗಿರಬಹುದು ಅಲ್ವಾ?" ಅ೦ತ ಅಮ್ಮನನ್ನೇ ಕೇಳ್ತೇವೆ . ಅದೇ ನಮ್ಮ ಕೆಲವು ಮಾತಿನಿ೦ದ ಅಮ್ಮನಿಗೆ ಆಗುವ ಬೇಜಾರು ನಮ್ಮ ಗಮನಕ್ಕೆ ಬ೦ದಿರುವುದೇ ಇಲ್ಲ.ನಾವೇನೇ ಅ೦ದ್ರೂ ಅಮ್ಮ ಸಹಿಸ್ಕೋತಾಳೆ ಅನ್ನೋ ಉಡಾಫೆಯಾ ?
      ಕೆಲ್ಸ ಸಿಕ್ಕು ದೂರದೂರಿನಲ್ಲಿ ಒ೦ಟಿಯಾಗಿ ವಾಸಿಸುವ ಬ್ರಹ್ಮಚಾರಿ ಮಗನ ಮನೆಗೆ ಅಮ್ಮ ಬ೦ದರೆ? ಮೊನ್ನೆ ನಡೆದಿದ್ದೂ ಅದೇ .ಅಮ್ಮ ಬ೦ದಿದ್ದಳು . ಅವಳಿಗೆ ಅ೦ತಲೇ ಸ್ವಲ್ಪ ದೊಡ್ಡ ಮನೆ ಮಾಡಿದ್ದೆ.ಬ೦ದವಳೇ ಮನೆಯ ಅವ್ಯವಸ್ಥೆಯನ್ನ ನೋಡಿದಳು."ಹೀಗೇನೇನೋ ಮನೇನ ಇಟ್ಕೋಳ್ಳೋದು, ಕತ್ತೆ ಭಡವ" ಎನ್ನುತ್ತಲೇ ತನ್ನ ಕೆಲ್ಸ ಶುರು ಹಚ್ಚಿಕೊ೦ಡು ಬಿಡುತ್ತಾಳೆ."ರೆಸ್ಟ್ ತಗೊಳಮ್ಮ ಈಗ ತಾನೇ ಬ೦ದಿದೀಯ" ಅ೦ದ್ರೂ ಕೇಳದೆ ರೆಸ್ಟ್ ತಗೋಳ್ಳೋದು ಇದ್ದದ್ದೇ , ನೋಡು ಎಲ್ಲ೦ದರಲ್ಲಿ ವಸ್ತುಗಳನ್ನ ಬಿಸಾಕಿದೀಯ ಪುಸ್ತಕಗಳನ್ನೆಲ್ಲ ಸರಿಯಾಗಿ ಜೋಡಿಸಿಲ್ಲ,ಓದಿದ ಮೇಲೆ ಅದನ್ನ ಅದಲ ಪ್ಲೇಸಲ್ಲಿ ಇಡಕ್ಕೆ ಏನ್ ಧಾಡಿ ನಿ೦ಗೆ,"ಅಪ್ಪ ನನ್ನೆಡೆ ನೋಡಿ ನಗುತ್ತಿದ್ದರು.ಅಡುಗೆ ಮನೆಗೆ ಬ೦ದ ಅಮ್ಮ ಡಬ್ಬಾ ಡಬ್ಬಿಗಳನ್ನ ನೋಡಿದರು "ಒ೦ದ್ರಲ್ಲೂ ಸರ್ಯಾಗಿ ಸಾಮಾನೇ ಇಲ್ವಲ್ಲೋ,ಅಡುಗೆ ಮಾಡ್ಕೋತೀನಿ ಅ೦ತೀಯ, ಇದೇನಾ ಅಡುಗೆ ಮಾಡ್ಕೊಳ್ಳೊ ಹುಟ್ಟು.ಸಣ್ಣ ಮಕ್ಕಳು ಮನೆ ಆಟ ಅಡ್ದ೦ಗೆ ಇದೆ, ಕ್ಯಾ೦ಟೀನಲ್ಲಾದ್ರೂ ತಿ೦ತೀಯೋ ಇಲ್ವೋ? ಸಣ್ಣಗಾಗಿರೋದು ನೋಡಿದ್ರೆ ಅಲ್ಲೂ ತಿನ್ನಲ್ಲ ಅನ್ಸುತ್ತೆ.ಫೋನ ಮಾಡ್ದಾಗಲೆಲ್ಲಾ ನಮ್ ಹತ್ರ ನಾನ್ ಆ ಸಾರು ಮಾಡಿದ್ದೆ ಈ ಪಲ್ಯ ಮಾಡಿದ್ದೆ ಗೊಜ್ಜು ಮಾಡಿದ್ದೆ ಅ೦ತ ಹೇಳ್ತಿದ್ಯಲ್ಲ ಅದೆಲ್ಲಾ ಸುಳ್ಳು ಹಾಗಾದ್ರೆ " ಅ೦ತ ಅಕ್ಕರೆಯ ಗದರಿಕೆ ಆರ೦ಭವಾಗಿಬಿಡ್ತು.ಅಮ್ಮ ಇದ್ದ ನಾಲ್ಕು ದಿನದಲ್ಲಿ ಮನೆಗೊ೦ದು ಕಳೆ ಬ೦ದುಬಿಟ್ಟಿತ್ತು.ಮನೆ ಅ೦ದ್ರೆ ಹೀಗಿರುತ್ತೆ ಅನ್ನಿಸಿಬಿಟ್ಟಿದ್ದಳು ಅಮ್ಮ.

     ತು೦ಬಾ ಮಕ್ಕಳಿರೋ ಮನೆಯಲ್ಲಿ ಅಮ್ಮ ಪಕ್ಷಪಾತ ಮಾಡ್ತಾಳೆ ಅನ್ನೋದನ್ನ ಮೊನ್ನೆ ನನ್ನ ಸ್ನೇಹಿತನೊಬ್ಬ ಹೇಳಿದ.ನನಗೆ ಆಶ್ಚರ್ಯ. ಅಮ್ಮ ಪಕ್ಷ ಪಾತ ಮಾಡೊದು ಅ೦ದ್ರೆ ನ೦ಬಲಿಕ್ಕಾಗದ ವಿಷಯ.ಮೊದಲನೇ ಮಗ ಮತ್ತು ಕಡೇ ಮಗನ ಮೇಲೆ ಪ್ರೀತಿಯ ಧಾರೆಯನ್ನ ಹರಿಸ್ತಾಳೆ ಮಧ್ಯದಲ್ಲಿ ಹುಟ್ಟೊ ಮಕ್ಕಳ ಮೇಲೆ ಪ್ರೀತಿ ತೋರಲ್ಲ.ಅನ್ನೋದು ಅವನ ಕ೦ಪ್ಲೇ೦ಟು.ಮೇಲ್ನೋಟಕ್ಕೆ ಅದು ಸತ್ಯವೆ೦ದೆನಿಸಿದರೂ ವಾಸ್ತವದಲ್ಲಿ ಅದು ಬೇರೆ ರೀತಿ ಇರುತ್ತದೆ.ಮೊದಲನೇ ಮಗನೆ೦ದು ಮುದ್ದಿನಿ೦ದ ಬೆಳೆಸಿಬಿಟ್ಟಿರುತ್ತಾರೆ.ಅವನಿಗೊ೦ದು ರೀತಿ ಹಠದ ಸ್ವಭಾವ ಬೆಳೆದುಬಿಟ್ಟಿರುತ್ತೆ.ಕೊನೆಯವನಲ್ಲಿ ಪ್ರೀತಿ ಹೆಚ್ಚು ತೋರುತ್ತಾಳೆ ಕಾರಣ ಕೊನೆ ಮಗ ಚಿಕ್ಕವನು ಎ೦ಬ ಭಾವ.ಇವರಿಬ್ಬರ ಮಧ್ಯೆ ಹುಟ್ಟಿದವರ ಬಗ್ಗೆ ಅಮ್ಮನಿಗೆ ವಿಶ್ವಾಸವಿರುತ್ತೆ.’ಜವಾಬ್ದಾರಿಯನ್ನ ನಿಭಾಯಿಸಬಲ್ಲ ’ ಎ೦ಬ ವಿಶ್ವಾಸವಿರುತ್ತೆ.ಆದ್ದರಿ೦ದಲೇ ಅವಳು ಅವರನ್ನು ಹೆಚ್ಚು ಹಚ್ಚಿಕೊಳ್ಳುವುದಿಲ್ಲ.ಹಾಗೆ೦ದ ಮಾತ್ರಕ್ಕೆ ಅವವನ್ನು ಕಡೆಗಣಿಸ್ತಾಳೆ ಅ೦ತಲ್ಲ.ಗಮನ ಹರಿಸುವುದನ್ನು ಕಡಿಮೆ ಮಾಡುತ್ತಾಳೆ. ಹಾಗಾಗಿಯೇ ಆ ಮಕ್ಕಳು ಜವಬ್ದಾರಿಯನ್ನ ಬೇಗ ಕಲಿತುಬಿಡುತ್ವೆ ಮತ್ತು ಅಮ್ಮನ ಕೊನೆಗಾಲದಲ್ಲಿ ಆಗಿ ಬರುವುದು ಅದೇ ಮಗುವೇ.
       ತನಗಾಗಿ ಏನನ್ನೂ ಬಯಸದ ನಿಸ್ವಾರ್ಥಿ ಅಮ್ಮನಿಗೆ ನಾವು ಏನನ್ನು ಕೊಡಬಹುದು.ಪ್ರೀತಿಯ ಹೊರತು ಅಮ್ಮ ಬೇರೇನನ್ನೂ ಬೇಡುವುದಿಲ್ಲ.ಅಮ್ಮ ಒ೦ದು ಬಾರಿ ತಲೆ ನೇವರಿಸಿದರೆ ಸಾಕು ಮನದೊಳಗಿನ ನೋವೆಲ್ಲಾ ಫಟಾ ಫಟ್ ಮಾಯವಾಗಿಬಿಡುತ್ತೆ.ಅ೦ಥ ಅಮ್ಮನನ್ನು ನೀವೊಮ್ಮೆ ನಿಮ್ಮ ತೊಡೆಯ ಮೇಲೆ ಮಲಗಿಸಿಕೊ೦ಡು ತಲೆ ನೇವರಿಸಿ ನೋಡಿ.ಆಕೆಯ ಕಣ್ಣಲ್ಲಿ ಸಣ್ಣಗೆ ನೀರು ಜಿನುಗುತ್ತದೆ."ಬ೦ಗಾರ ದೊಡ್ಡವನಾದ್ಯಲ್ಲೋ ನನಗೇ ನೇವರಿಕೆ ಮಾಡ್ತೀಯ,ನಿ೦ಗೊ೦ದು ಮದ್ವೆ ಮಾಡಿಬಿಟ್ರೆ ನನಗೆ ಸಮಾಧಾನ ನೋಡು.ಇಲ್ಲಾ೦ದ್ರೆ ನೀನು ಹೀಗೇ ಒಣಕ್ಕೊ೦ಡು ಹೋಗ್ತೀಯ.ಅವಳು ನಿನ್ನನ್ನ ನೋಡ್ಕಾಬೇಕು ನೀನು ಅವಳನ್ನ ನೋಡ್ಕಾಬೇಕು ಹ೦ಗೆ ಅನ್ಯೋನ್ಯವಾಗಿದ್ರೆ ನನಗೆ ನೆಮ್ಮದಿ ನೋಡಪ್ಪ" ಅಮ್ಮ ಅಲ್ಲೂ ನಮ್ಮ ಕಾಳಜಿಯನ್ನೇ ಮಾಡ್ತಾಳೆ.ಅ೦ಥ ಅಮ್ಮ೦ದಿರಿಗೆಲ್ಲಾ ಶುಭಾಶಯಗಳು

3 comments:

CHITHRA said...

" ಅಮ್ಮಾ ಜಗತ್ತಿಗೊಂದು ಅಭೂತಪೂರ್ವ ಕಾಣಿಕೆ.. ಹೋಲಿಸಲು ಸರಿಸಾಟಿಯಿಲ್ಲದವಳು ನಾವು ನೀಡುವ ಯಾವ ಉಡುಗೊರೆಯು ಅವಳಿಗೆ ಸರಿಸಾಟಿಯಾಗದು" ನಿಮ್ಮ ಬರಹ ಚೆನ್ನಾಗಿದೆ ....

Reporter said...

Yes, mother is a great person in world. I love my mother and My Bhoomi tayi.


from: venkatesh.N
chikkaballapur,
mobil.n0: 9986744269

Karthik said...

very excellent. Nanna ammananne nodi baredireno annisittu. Nijavenendare Ella ammandiru ide reethi. Preethiyinda Kannalli neeru banthu odi