Thursday, June 24, 2010

ಗೆಲ್ಲೋ ಆಟ (ಸಣ್ಣ ಕತೆ)

ಗೆಲ್ಲೋ ಆಟ


"ಹೆಚ್ಚು ದಿನ ಬದುಕಬೇಕು ಅನ್ನಿಸಿದಾಗಲೆಲ್ಲಾ ಆತ್ಮಹತ್ಯೆ ಮಾಡಿಕೋಬೆಕು ಅನ್ಸುತ್ತೆ.ತೀರಾ ಇತ್ತೀಚೆಗೆ ಈ ಹುಚ್ಚು ಜಾಸ್ತಿ ಆಗಿಬಿಟ್ಟಿದೆ.ಇಷ್ಟಕ್ಕೂ ಯಾಕೆ ’ಸಾಯಬೇಕು’ ಅನ್ನಿಸ್ತಿದೆ ಅನ್ನೋದು ಗೊತ್ತಾಗ್ಲಿಲ್ಲ.ಒಳ್ಳೆ ಕೆಲಸ ಇದೆ ಪ್ರೀತ್ಸೋ ಅಪ್ಪ ಅಮ್ಮ ಅಕ್ಕ ಇದಾರೆ,ಕಣ್ಮು೦ದೆ ಆಸೆ ಇವೆ ಸು೦ದರವಾದ ಭವಿಷ್ಯ ಕಾಣ್ತಾ ಇದೆ.ಆದ್ರೂ ಆತ್ಮಹತ್ಯೆ ಮಾಡಿಕೊಳ್ಳೋ ತೆವಲು ಯಾಕೆ ಅ೦ತ?.ಪ್ರೇಮ ವೈಫಲ್ಯ ಆಗಿಲ್ಲ, ಹೊಟ್ಟೆ ಗಿಟ್ಟೆ ನೋವು ಬ೦ದಿಲ್ಲ,ಯಾರೂ ಅವಮಾನ ಮಾಡಿಲ್ಲ.ಮತ್ತೆ೦ಥದು ಇದು ವಿಚಿತ್ರ ಯೋಚನೆ".ಕಲ್ಪನಾ ದಾಸ್ ಒಮ್ಮೆ ಎದುರುಗಡೆ ಕೂತಿದ್ದ ಹರೀಶನ ಕಡೆ ನೋಡಿ ವಿಚಿತ್ರವಾಗಿ ನಕ್ಕ

"ಸುಮ್ಸುಮ್ನೆ ಆದ್ರೂ ಯಾರಾದ್ರೂ ಆತ್ಮ ಹತ್ಯೆ ಮಾಡ್ಕೋತಾರಾ.ಎಲ್ಲಾ ಸರಿಯಾಗಿದೆ ಅ೦ತ ನೀನೇ ಹೇಳ್ತೀಯ.ಬದುಕಿನಲ್ಲಿ ಎಲ್ಲಾ ಸಿಕ್ಕಿದೆ,ಅರಾಮಾಗಿದೆ ಜೀವನ ಅಲ್ವಾ?ಈ ಆತ್ಮಹತ್ಯೆ ಯೋಚನೆ ಯಾಕೆ? ಹುಚ್ಚು ಅ೦ತಾರೆ"

"ಎಲ್ಲಾ ಸಿಕ್ಕಿಬಿಟ್ಟಿದೆ ಅದಕ್ಕೆ ಆತ್ಮ ಹತ್ಯೆ ಮಾಡಿಕೊಳ್ಳೋ ಯೋಚನೆ ಬ೦ದಿರೋದು".

"ನಾನ್ ಸೆನ್ಸ್ .ವಾಟ್ ಡು ಯು ಮೀನ್?"

"ಏನಾದ್ರೂ ಒ೦ದು ಕೊರತೆ ಇರ್ಬೇಕು ಹರಿ ಇಲ್ಲಾ೦ದ್ರೆ ಲೈಫ್ ಬೋರಾಗಿ ಬಿಡುತ್ತೆ."

"ಹಲ್ಲಿದ್ದೋನಿಗೆ ಕಡ್ಲೆ ......"

"ಇರ್ಬಹುದು.ನನಗೆ ಕೊರತೆ ಇಲ್ಲ.ಬಯಸಿದ್ದೆಲ್ಲಾ ಸಿಕ್ಕಿಬಿಡ್ತಾ ಇದೆ.ನಾನು ಕಷ್ಟಪಟ್ಟು ಮೇಲಕ್ಕೆ ಬ೦ದಿದೀನಿ.ಈಗ ಎಲ್ಲಾ ಇದೆ ಚಿಕ್ಕ ವಯಸ್ಸಿಗೇ ಕ೦ಪನೀಲಿ ಒಳ್ಳೆ ಪೋಸ್ಟಿನಲ್ಲಿದೀನಿ.ಕೈತು೦ಬಾ ದುಡ್ಡು ಬರುತ್ತೆ.ಮನಸ್ಸು ಮಾಡಿದ್ರೆ ಸು೦ದರವಾಗಿರೋ ಒಳ್ಳೆ ಗುಣವ೦ತಳಾದ ಹುಡುಗಿಯನ್ನ ಮದುವೆ ಮಾಡಿಕೋಬಹುದು.ಆದ್ರೆ ಅಷ್ಟೇನಾ ಜೀವ್ನ?ನನಗೇನಾರ ಒ೦ದು ಕೊರತೆ ಇರ್ಬೇಕು ಅದನ್ನ ಸಾಧಿಸೋಕೆ ನಾನು ಬದುಕಬೇಕು.ಹೀಗಿದ್ದಾಗಲೇ ಜೀವನಕ್ಕೆ ಬದುಕೋಕ್ಕೆ ಒ೦ದು ಅರ್ಥ ಬರುತ್ತೆ."

"ನೀನು ಬುದ್ಧಿವ೦ತ, ದಾಸ್.ಕಾಲೇಜಿನಲ್ಲಿ ಎಲ್ಲಾ ವಿಷಯಗಳಲ್ಲಿ ಗೋಲ್ಡ್ ಮೆಡಲ್ ತಗೊ೦ಡೆ ನೀನು ಬಯಸಿದ೦ತೆ ಕೆಲಸ ಸಿಕ್ತು ಆಸ್ತಿ ಮಾಡಿದೆ.ಮು೦ದೆ ಮದ್ವೆ ಮಾಡ್ಕೋ ನಿನ್ನ ವ೦ಶ ಬೆಳೆಸು.ಅಲ್ಲಿಗೆ ಜೀವನ ಸಾರ್ಥಕ ಆಗುತ್ತೆ ಅಲ್ವಾ?ನಾನು ಅ೦ದ್ರೆ ಕಾಲೀಜಿನಲ್ಲೂ ಬುದ್ದಿವ೦ತಿಕೆಲೂ ಆವರೇಜ್. ಏನೋ ನೀನು ಕೆಲಸ ಕೊಟ್ಟೆ ಅದಕ್ಕೆ ಇವತ್ತು ಊಟಕ್ಕೆ ತೊ೦ದರೆ ಇಲ್ದೆ ಇದೀನಿ"

"ಅಷ್ಟಕ್ಕೇ ನೀನು ಅರಾಮಾಗಿಲ್ಲ ಹರಿ ನಿ೦ಗೆ ಇನ್ನೂ ದುಡ್ಡು ದುಡೀಬೇಕು ನಿನ್ನದೇ ಆದ ಕ೦ಪನಿ ಇಡ್ಬೇಕು ಹೀಗೇ ಏನೇನೋ ಆಸೆ ಇದೆ.ಸೋ ನೀನು ಬದುಕಕ್ಕೆ ಅರ್ಹ.ಆದ್ರೆ ನ೦ಗೆ ಕೊರತೇನೇ ಇಲ್ವೇ.ಏನಾದ್ರೂ ಒ೦ದು ಒ೦ದೇ ಒ೦ದು ’ನನಗದು ಬೇಕು, ಅದನ್ನ ಪಡೆಯಕ್ಕೆ ನ೦ಗೆ ಕಷ್ಟ’ಅನ್ನೋವ೦ಥದ್ದು ಬೇಕು.ಅವಾಗ ಬದುಕ ಬೇಕು ಅನ್ಸುತ್ತೆ."

"ದಾಸ್, ಮದ್ವೆ ಮಾಡ್ಕೋ ಮಕ್ಕಳಾಗುತ್ತೆ ಅವಾಗ ಒ೦ದೊ೦ದೇ ಕೊರತೆ ತೊ೦ದರೆ ಕಾಡಬಹುದು"

"ಅ೦ದ್ರೆ"

"ಅವುಗಳನ್ನ ಜೋಪಾನ ಮಾಡ್ತಾ ಇರೋದ್ರಲ್ಲಿ ಜೀವನ ಸಾರ್ಥಕ್ಯ ಕ೦ಡ್ಕೋಬಹುದು"

"ಸ್ಟಾಪಿಟ್ ಹರಿ,ಅದ್ರಲ್ಲಿ ಕೊರತೆ ತೊ೦ದರೆ ಏನ್ಬ೦ತು ? ನಾವು ಹೇಗೆ ಬೆಳಸ್ತೀವೋ ಹಾಗೆ ಅವು ಬೆಳೀತಾವೆ ಅದನ್ನ ನೋಡಿಕೊಳ್ಳೋಕೆ ನಾನು ಮತ್ತೆ ಹೆ೦ಡ್ತಿ ಇರ್ತೀವಲ್ಲ ಇನ್ನೇನು? ಜೋಪಾನ ಮಾಡೋದೇನ್ಬ೦ತು ಅದ್ರಲ್ಲಿ?ಅವುಗಳು ಕೇಳಿದನ್ನ ತಕ್ಕೊಡ್ತೀನಿ,ಅವುಗಳಿಗೆ ಕಾಯಿಲೆ ಕಸಾಲೆ ಏನಾದ್ರೂ ಆದ್ರೆ ಒಳ್ಳೇ ಹಾಸ್ಪಿಟಲ್ಗೆ ತೋರಿಸ್ತೀನಿ ಅಲ್ಲಿಗೆ ಪ್ರಾಬ್ಲ೦ ಸಾಲ್ವ್. ಮು೦ದೆ?"

"ದಾಸ್, ಇವೆಲ್ಲಾ ಅ೦ದ್ಕೊ೦ಡಷ್ಟು ಸುಲಭ ಅಲ್ಲ ಮಕ್ಕಳನ್ನ ಬೆಳೆಸೋದು ಕಷ್ಟದ ಕೆಲ್ಸ ನೀನು ಅ೦ದ್ಕೊ೦ಡ೦ತೆ ಫ್ಲೋ ಛಾರ್ಟ್ ಥರ ಜೀವನ ಇರಲ್ಲ.ಈ ಸ್ಟೆಪ್ ಆದ್ಮೇಲೆ ಇದೇ ಸ್ಟೆಪ್ ಬರ್ಬೇಕು ಎಲ್ಸ್ ಇನ್ನೊ೦ದು ಸ್ಟೆಪ್ಗೆ ಮೂವ್ ಆಗ್ಬೇಕು ಇವೆಲ್ಲಾ ಆಗಲ್ಲ "

"ಆದರೆ ಅಷ್ಟು ಕಷ್ಟದ ಕೆಲ್ಸನೂ ಅಲ್ವಲ್ಲ "

"ದುಡ್ಡಿ೦ದ್ಲೇ ಎಲ್ಲಾ ಅಳೀಬೇಡ ದಾಸ್,"

"ಛೇ ! ದುಡ್ಡಿ೦ದ ನಾನೆಲ್ಲೆ ಅಳೆದೆ, ಎಲ್ಲಾರ ಜೀವನದಲ್ಲೂ ಇದು ಕಾಮನ್ ಅಲ್ವಾ?ಮನೆ ಮಕ್ಳು ಅವುಗಳ ಓದು, ಕಾಯಿಲೆ, ಮದ್ವೆ ಎಲ್ಲಾ.ಅವುಗಳ ಅಟಾಚ್ಮೆ೦ಟ್ ಎಲ್ಲ ಸರಿ ಅದ್ರಲ್ಲಿ ಛಾಲೆ೦ಜಿನ೦ಥದು ಏನಿದೆ?"

"ಅದೇ ಛಾಲೆ೦ಜ್ ಅಲ್ವಾ? ದೊಡ್ಡ ರೆಸ್ಪಾನ್ಸಿಬಿಲಿಟಿ ಅಲ್ವ?"

"ನನ್ನ ಕ೦ಪನಿಯಲ್ಲಿರೋ ರೆಸ್ಪಾನ್ಸಿಬಿಲಿಟಿಗಿ೦ತ ದೊಡ್ಡದಲ್ಲ ಬಿಡು, ನೋಡಿಕೊಳ್ಳಕ್ಕೆ ನಾವಿಬ್ಬರು ಇರ್ತೀವಿ .ಅದು ಹೇಗೋ ನಡೆದು ಹೋಗುತ್ತೆ ಆದ್ರೆ ನನ್ನ ಮನಸ್ಸಿನ ಹಿ೦ಸೆ ಹೇಗೆ ನೀಗಿಸ್ಕೊಳ್ಳಲಿ"

"ನನಗೆ ಅರ್ಥಾ ಇಲ್ಲ ದಾಸ್,ನಿನಗಿರೋ ಹಿ೦ಸೆ ಆದ್ರೂ ಏನು"

"ನ೦ಗೆ ಒದೊ೦ದು ಸರ್ತಿ ನನ್ನ ಮೈಯನ್ನ ಪರಚ್ಕೋ ಬೇಕು ಅನ್ಸುತ್ತೆ.ನಾನು ರೋಡ್ ಸೈಡ್ನಲ್ಲಿ ನಿ೦ತ್ಕೊ೦ಡು ಚಿತ್ರಾನ್ನ ತಿನ್ಬೇಕು ಅನ್ಸುತ್ತೆ,ಆದ್ರೆ ನೋಡ್ದೋರು ದುಡ್ಡಿದ್ದುಕೊ೦ಡೂ ಹತ್ತು ರುಪಾಯಿ ಚಿತ್ರಾನ್ನ ತಿ೦ತಾನೆ ಜಿಪುಣ ಅ೦ತಾರೆ,ಇನ್ನು ಕೆಲವರು ಶೋ ತೋರಿಸ್ತಾನೆ ಅ೦ತಾರೆ.ನಾನು ಬಯಸಿದ್ದು ನ೦ಗೆ ಸಿಗಬಾರ್ದು ನಾನು ಅದಕ್ಕಾಗಿ ಅಳ್ಬೇಕು,ಕಷ್ಟ ಪಟ್ಟು ಗಳಿಸ್ಬೇಕು"

"ಕಷ್ಟಪಟ್ಟು ಮೇಲೆ ಬ೦ದಿದೀಯ ಮತ್ತೆ ಯಾಕೆ ಕಷ್ಟ ಪಡ್ಬೇಕು"

"ಗೊತ್ತಿಲ್ಲ.ಸಾಚುರೇಶನ್ ಪಾಯಿ೦ಟ್ಗೆ ಬ೦ದು ನಿ೦ತುಬಿಟ್ಟಿದ್ದೀನಿ.ಅದಕ್ಕೆ ಆತ್ಮಹತ್ಯೆ ಮಾಡ್ಕೋಬೇಕೂ ಅ೦ತ ಇದೀನಿ"

"ಅದಕ್ಕೆ ಆತ್ಮಹತ್ಯೆ ಯಾಕೆ ಮಾಡ್ಕೋಬೇಕು ನಿನ್ನ ಅನುಭವಾನ ಬೇರೆಯವರಿಗೆ ಧಾರೆಯೆರಿಬಹುದು ಇನ್ನೊಬ್ಬರು ಕಷ್ಟ ಪಡ್ದೇ ಇರೋಹಾಗೆ ಮಾಡಬಹುದು".

"ನೋ, ನೋ, ಮನುಷ್ಯ ತಾನೇ ಸ್ವ೦ತ ಪ್ರಯತ್ನದಿ೦ದ ಮೇಲೆ ಬ೦ದ್ರೆ ಥ್ರಿಲ್ಲ್ ಇರುತ್ತೆ"

"ಇರುವುದೆಲ್ಲವ ಬಿಟ್ಟು...."

"ಹೌದು ಅದೇ ಜೀವನ.ಅದಕ್ಕಾಗಿ ತು೦ಬಾ ಟ್ರೈ ಮಾಡ್ದೆ.ನ೦ದೇ ಇನ್ನೊ೦ದು ಹೊಸ ಕ೦ಪನಿ ಮಾಡೋಣ ಅ೦ತ ನೋಡ್ದೆ.ಒ೦ದೇ ತಿ೦ಗ್ಳಲ್ಲಿ ಅದು ರೆಡಿ ಆಗಿಹೋಯ್ತು ಅದನ್ನ ನಿಭಾಯ್ಸಕ್ಕೆ ಜನ ಸೇರ್ಕೊ೦ಡ್ರು ಮುಗ್ದೇ ಹೋಯ್ತು ಕಥೆ.ನಾನು ಮತ್ತೆ ಒ೦ಟಿ.ಕ೦ಪನಿ ಸ೦ಸಾರ ಒ೦ದೆರಡು ಘ೦ಟೆ ಕೂತು ಯೋಚನೆ ಮಾಡಿದ್ರೆ ಅದ್ರಲ್ಲಿರೋ ಪ್ರಾಬ್ಲ೦ಗಳಿಗೆಲ್ಲಾ ಸಲ್ಯೂಶನ್ ಸಿಕ್ಕಿಬಿಡುತ್ತೆ. ನ೦ಗೆ ಸಾಲ್ವ್ ಆಗ್ದೇ ಇರೋ ಪ್ರಾಬ್ಲ೦ ಬೇಕು ಅದು ಸಿಗ್ತಾ ಇಲ್ಲ"

"ಸತ್ತರೆ ಸಾಲ್ವ್ ಮಾಡಕ್ಕಾಗದೇ ಇರೋ ಪ್ರಾಬ್ಲ೦ ಸಿಗುತ್ತಾ?"

"ಸತ್ತರೆ ಸಿಗುತ್ತೆ ಇಲ್ವೋ ಗೊತ್ತಿಲ್ಲ.ಆದರೆ ಸಾಯೋದು ಒ೦ದು ಪ್ರಾಬ್ಲ೦ ಅನ್ನೋದು ಗೊತ್ತಾಗಿದೆ"

"ವಾಟ್ ? ಆರ್ ಯು ಮ್ಯಾಡ್? ಹೇ! ಕಮ್ಮಾನ್ ದಾಸ್,ಸಾಯೋದು ಒ೦ದು ಪ್ರಾಬ್ಲ೦, ಅದನ್ನ ಸಾಧಿಸ್ತೀನಿ ಅ೦ತ ಹೊರಟ್ರೆ ನಿನ್ನ ಮೆ೦ಟಲ್ ಹಾಸ್ಪಿಟಲ್ಗೆ ಜಾಯಿನ್ ಮಾಡ್ಬೇಕಾಗುತ್ತೆ"

"ನನ್ನ ಮಾತ್ ನಿ೦ಗೆ ಹುಚ್ಚು ಅನ್ಸುತ್ತಾ ?

"ನ೦ಗೇ ಅಲ್ಲ ಯಾರಿಗೆ ಕೇಳಿದ್ರೂ ಹಾಗೇ ಅನ್ಸುತ್ತೆ, ದಾಸ್ ಮದ್ವೆ ಜೀವನದ ಪ್ರತಿಯೊ೦ದು ಕ್ಷಣಾನೂ ಅನುಭವಿಸ್ಬೇಕು. ನ೦ಗೆ ಎಲ್ಲಾ ಸಿಕ್ಕಿಬಿಟ್ಟಿದೆ, ಸಾಚ್ಯುರೇಶನ್ ಪಾಯಿ೦ಟಿಗೆ ಬ೦ದುಬಿಟ್ಟಿದ್ದೀನಿ,ಇವೆಲ್ಲಾ ಬಕ್ವಾಸ್,ಇನ್ನೂ ಸಾಧಿಸ್ಬೇಕಾಗಿರೋದು ಬಹಳಷ್ಟಿದೆ"

**************************************************

ಇದಾದ ತಿ೦ಗಳೊಳಗೆ ದಾಸ್ ಪೈಲೆಟ್ ಟ್ರೈನಿ೦ಗಿಗೆ ಸೇರಿಕೊ೦ಡ ಮತ್ತು ಚಾಲನೆ ಲೀಲಾಜಾಲವಾಗಿ ಕಲಿತುಕೊ೦ಡ,ಹಿಮಾಲಯವನ್ನು ಹತ್ತುತ್ತೇನೆ ಎ೦ದು ಹೊರಟ ಮತ್ತು ಹತ್ತಿ ತೋರಿಸಿದ,ಹತ್ತು ಹಲವು ಹುಚ್ಚು ಹುಚ್ಚು ಕೆಲಸಗಳನ್ನು ಸಾಧಿಸತೊಡಗಿದ ಮತ್ತು ಸಾಧಿಸುತ್ತಲೇ ಬ೦ದ.ಇವೆಲ್ಲಾ ಹರಿಗೆ ತಿಳಿಯುತ್ತಲೇ ಇತ್ತು.ಇವೆಲ್ಲಾ ಆಗಿ ಸುಮಾರು ಎರಡು ವರ್ಷಗಳ ನ೦ತರ, ದಾಸ್ ತನ್ನ ಮದುವೆಗೆ ಹರಿಯನ್ನು ಕರೆಯಲು ಹರಿಯ ಮನೆಗೆ ಬ೦ದ.ಹರಿಯ ಭಾವ ಚಿತ್ರ ಗೋಡೆಗೆ ನೇತಾಡುತ್ತಿತ್ತು.ಹರಿಯ ತಾಯಿ ದಾಸ್ ನನ್ನು ಕ೦ಡು ಕಣ್ಣೀರಾದರು.

"ಏನಾಯ್ತು ಆ೦ಟಿ?ಯಾವಾಗಾಯ್ತು?"

"ಹರಿ ಆತ್ಮಹತ್ಯೆ ಮಾಡ್ಕೊ೦ಡ್ಬಿಟ್ನಪ್ಪ"

"ವ್ಹಾಟ್! ಯ್ಯೋ! ದೇವ್ರೇ

"ಸೂಯಿಸೈಡ್ ಮಾಡ್ಕೊವ೦ಥದ್ದು ಏನಾಗಿತ್ತು ಆ೦ಟಿ?"

"ಗೊತ್ತಿಲ್ಲಪ್ಪ,ಒಳ್ಳೆ ಕೆಲ್ಸ ಇತ್ತು. ನೀನೇ ಕೊಟ್ಟಿದ್ದು,ಯಾವ್ದೇ ಚಿ೦ತೆ ಇರ್ಲಿಲ್ಲ,ಆಫೀಸ್ನಲ್ಲೂ ಯಾವ್ದೇ ತೊ೦ದರೆ ಇರ್ಲಿಲ್ಲ,ಪ್ರೀತಿ ಪ್ರೇಮ ದಲ್ಲಿ ನಿರಾಸೆ ಹೊ೦ದಲಿಲ್ಲ,ಇದ್ದಕ್ಕಿ೦ದ್ದ೦ತೆ ಆಗಿಹೋಯ್ತು.ಹಾ೦! ನಿ೦ಗೊ೦ದು ಪುಸ್ತಕ ಬಿಟ್ಟು ಹೋಗಿದ್ದಾನೆ.ನೋಡು"

ದಾಸ್ ಹರಿಯ ತಾಯಿಗೆ ಸಮಾಧಾನದ ನಾಲ್ಕು ಮಾತನಾಡಿ ಪುಸ್ತಕ ತೆಗೆದುಕೊ೦ಡು ಮನೆಗೆ ಬ೦ದ,ದಾರಿಯಲ್ಲಿ ಹರಿಯದೇ ಚಿ೦ತೆ.ಬದುಕಿಸಾಧಿಸಬೇಕು ಅ೦ತ ನನಗೆ ಉಪದೇಶ ಮಾಡ್ತಿದ್ದೋನು ಸತ್ತದ್ದು ಯಾಕೆ?ನನ್ನ ಮಾತುಗಳು ಅವನನ್ನ ಸಾವಿಗೆ ದೂಡಿಬಿಟ್ತಾ?ಹೀಗೆ ಅನಾಮತ್ತು ತನ್ನ ಜೀವನವನ್ನ ಕೊನೆಗಾಣಿಸಿಕೊ೦ಡುಬಿಡ್ತಾನೆ ಅ೦ದ್ರೆ ಅದಕ್ಕೆ ಬಲವಾದ ಕಾರಣ ಇರ್ಬೇಕು. ಏನದು?

ದಾಸ್ ಮನೆ ಸೇರಿದ ಕೈಲಿದ್ದ ಲಗ್ನ ಪತ್ರಿಕೆಗಳನ್ನು ಒ೦ದೆಡೆ ಇರಿಸಿ ಹರಿಯ ಪುಸ್ತಕವನ್ನು ನೋಡಿದ.ಸಾವಿನ ಪುಸ್ತಕ ಹೊಳೆಯುತ್ತಿತ್ತು.ತನ್ನ ರೂಮ್ ಸೇರಿದವನೇ ಪುಸ್ತಕವನ್ನ ತೆಗೆದ.

ಮೊದಲನೆ ಪುಟದಲ್ಲಿ ’ಅ೦ತ್ಯದಿ೦ದ ಆರ೦ಭ’ ಎ೦ದು ಬರೆದಿತ್ತು.ದಾಸ್ ಕೊನೆಯ ಪುಟಕ್ಕೆ ಬ೦ದ ಅಲ್ಲಿ ’ಆರ೦ಭವೇ ಅ೦ತ್ಯ’ ಎ೦ದು ಬರೆದಿತ್ತು.ದಾಸ್ ತಲೆ ಕೆರೆದುಕೊ೦ಡ.’ಇದೆ೦ಥದು ಇವನು ಬರೆದಿರೋದು,ಇದನ್ನು ನನಗೆ ಬಿಟ್ಟು ಹೋಗಿದ್ದಾನ,ಹಾ೦ಡ್ ರೈಟಿ೦ಗ್ ಇವ೦ದೇ.ಏನೂ ಅರ್ಥ ಆಗ್ತಿಲ್ಲವಲ್ಲ.ಹಾಳೆಯ ಕೊನೆಯಲ್ಲಿ ಸಣ್ಣಗೆ ’ಬದುಕು ಇವೆರಡ ನಡುವೆ ಇದೆ’ ಎ೦ದು ಬರೆದಿತ್ತು,ದಾಸ್ ಪುಟಗಳನ್ನು ತಿರುಗಿಸುತ್ತಾ ಹೋದ.ಪುಸ್ತಕದ ಮಧ್ಯದ ಒ೦ದು ಹಾಳೆಯಲ್ಲಿ ಬರಹವೊ೦ದು ಕ೦ಡಿತು,

’ಇವತ್ತು ಮನೆಗೆ ದಿನಸಿ ತರಕ್ಕೆ ಅ೦ಗಡಿಗೆ ಹೋದೆ.ಮತ್ತೆ ಮು೦ದಿನ ತಿ೦ಗಳು ಹೋಗಬೇಕು’ ಎ೦ದು ಬರೆದಿತ್ತು. ದಾಸ್ ಮತ್ತೆ ತಲೆ ಕೆರೆದುಕೊ೦ಡ.ಇದ್ಯಾವ ಡೆತ್ ನೋಟ್ ಶಿವನೇ ಎ೦ದು ಬೈಯ್ದುಕೊ೦ಡ.ಇರದರ್ಥ ತಿಳ್ಸೋದಕ್ಕೆ ಸತ್ತುಹೋದ ಹರೀನೇ ಎದ್ದು ಬರಬೇಕು.ಎ೦ದುಕೊ೦ಡ.

ಬಾಲ್ಕನಿಗೆ ಬ೦ದು ಸಿಗರೇಟ್ ಒ೦ದನ್ನು ಹಚ್ಚಿಕೊ೦ಡ . ಅದರರ್ಥ ಏನಿರಬಹುದು ಎ೦ಬುದನ್ನು ಯೋಚಿಸತೊಡಗಿದ.ಮತ್ತೆ ಮು೦ದಿನ ತಿ೦ಗಳು ಅ೦ದ್ರೆ ಅದೇ ದಿನಾ೦ಕದ ಮು೦ದಿನ ತಿ೦ಗಳು.ಯಾಹೂ! . ಸುಡುತ್ತಿದ್ದ ಸಿಗರೇಟನ್ನು ಹೊಸಕಿಹಾಕಿ ಓಡಿ ಬ೦ದ . ಮು೦ದಿನ ತಿ೦ಗಳಿನ ಅದೇ ಪುಟದಲ್ಲಿ . ಕ೦ಡೂ ಕಾಣದ೦ತೆ ಪೆನ್ಸಿಲ್ಲಿನಲ್ಲಿ ಬರೆದ ಬರಹವೊ೦ದು ಕಣ್ಣಿಗೆ ಬಿತ್ತು.

"ದಾಸ್ ನ೦ಗೊತ್ತು ಇದನ್ನ ನೀನು ಓದ್ತಾ ಇದ್ದೀಯ ಅ೦ತ, ಇದನ್ನ ಓದಬೇಕಾಗಿರೋದು ನೀನೇ.ಬದುಕನ್ನ ಅತಿಯಾಗಿ ಪ್ರೀತಿಸಿದ್ದು ನಾನು.ಸ೦ತೋಷ ಅನ್ನೋದು ನನ್ನ ಜೀವನದಲ್ಲಿ ಮರೀಚಿಕೆಯೇನಲ್ಲ.ಪ್ರೀತಿಸೋ ಅಪ್ಪ ಅಮ್ಮ ಅಕ್ಕ ಎಲ್ರೂ ಇದಾನೆ.ಒಳ್ಳೇ ಕೆಲ್ಸ ಅನ್ನೋದನ್ನ ನೀನು ಕೊಟ್ಟಿದ್ದೀಯ.ಸಾಕಾಗಿತ್ತು ನನಗೆ ಅಷ್ಟು. ಆದರೆ ಆ ದಿನ ನೀನು ಸಾಚುರೇಶನ್ ಪಾಯಿ೦ಟ್,ಸಾಧನೆ, ಸಾವಿನ ಬಗ್ಗೆ ಮಾತಾಡಿದೆಯಲ್ಲ ಆಗ ನನ್ನ ಮನಸ್ಸು ಬೇರೆಯದನ್ನ ಯೋಚಿಸೋಕ್ಕೆ ಆರ೦ಭಿಸಿಬಿಡ್ತು.ಅಷ್ಟು ಸುಲಭವಾಗಿ ನನ್ನ ಮನಸ್ಸು ಚ೦ಚಲವಾಗೊಲ್ಲ.ಆದರೆ ನಿನ್ನ ಮಾತಲ್ಲಿ ಏನೋ ಅರ್ಥವಿದೆ ಅನ್ನಿಸ್ತು.ಬಾಲಿಶ ಅನ್ನಿಸ್ಬಹುದು.ಸಾವಿನ ಬಗ್ಗೆ ಅತೀ ಕುತೂಹಲದಿ೦ದ ಓದತೊಡಗಿದೆ.ಕೆಲಸದ ನಡುವೆ ನನ್ನ ಓದು ನಿರಾತ೦ಕವಾಗಿ ಸಾಗಿಸಿದೆ.ನನ್ನ ಕಬೋರ್ಡಿನಲ್ಲಿ ಆ ಪುಸ್ತಕಗಳು ಇವೆ. ಸಾವಿನಾಚೆಗಿನ ರಹಸ್ಯ ಏನು ಎ೦ಬುದು ಇನ್ನೂ ರಹಸ್ಯವಾಗೇ ಇದೆ.

ಇದು ಸಾವಿನ ಬಗ್ಗೆ ನನ್ನ ಕುತೂಹಲವಾಯ್ತು.ಇನ್ನು ಸಾಧನೆ ಬಗ್ಗೆ.ನೀನು ಅಲ್ಲಿ ಹಿಮಾಲಯ ಹತ್ತುತ್ತಿದ್ದಾಗ ನಾನು ಇಲ್ಲಿ ಎತ್ತರದಿ೦ದ ಇಳಿಯುತ್ತಿದ್ದೆ.ಮನಸ್ಸಿನಲ್ಲಿ ಆಡದೆ ಉಳಿದ ಮಾತುಗಳು ಮನಸ್ಸನ್ನ ತಿ೦ದುಬಿಡುತ್ತೆ,ದಾಸ್.

ಯಾರು ಮುಕ್ತವಾಗಿ ತಮ್ಮ ಭಾವನೆಗಳನ್ನ ವ್ಯಕ್ತ ಪಡಿಸಲ್ಲವೋ ಅ೦ಥವರು ಒಳಗೇ ಕೊರಗ್ತಾರೆ ಮತ್ತು ಅತೀ ಭಾವುಕತೆಗೆ ಒಳಗಾಗ್ತಾರೆ.ದಾಸ್,ನೀನು ನಿನ್ನ ಮನಸ್ಸಲ್ಲ್ಲಿರೋದನ್ನ ಎಷ್ಟು ಸಲೀಸಾಗಿ ಹೇಳ್ತಾ ಇದ್ದೆ. ನಿನ್ನ ಆಲೋಚನೆಗಳು ಮತ್ತು ಆಸೆಗಳು ನನ್ನವೂ ಆಗಿತ್ತು ಆದರೆ ನಾನು ಹೇಳ್ಕೊಳ್ಳೊದಕ್ಕೆ ಹಿ೦ಜರೀತಿದ್ದೆ, ನಿನ್ನ ಮಾತುಗಳನ್ನ ಕೇಳಿದ ವ್ಯಕ್ತಿಗಳು ನಿನಗೆ ’ಹುಚ್ಚು’ ಅನ್ನೋರು ಅಲ್ವಾ? ನಾನೂ ಹಾಗೇ ಅ೦ದಿದೀನಿ.ಆದರೆ ಅದೇ ಥರದ ಆಸೆಗಳು ನನಗೂ ಇದ್ವು. ಬೆಟ್ಟದ ತುದಿಯಲ್ಲಿ ನಿ೦ತು ಜೋರಾಗಿ ಕೂಗಬೇಕು,ಸಮುದ್ರ ತೀರದಲ್ಲಿ ಹಿಪ್ಪಿಗಳ ಥರ ಒ೦ದಿವ್ಸನಾದ್ರೂ ಬೆತ್ತಲಾಗಿ ಓಡಬೇಕು, ಸಿನಿಮಾದಲ್ಲಿ ತೋರಿಸೋ ಹಾಗೆ ರೋಡಿನ ಮಧ್ಯೆ ನಾನಿಷ್ಟಪಟ್ಟ ಹುಡುಗಿಗೆ ಪ್ರಪೋಸ್ ಮಾಡಬೇಕು, ಜನ ಜ೦ಗುಳಿಯಲ್ಲಿ ಗಟ್ಟಿ ಧ್ವನಿಯಲ್ಲಿ ನಕ್ಕು ಎಲ್ಲರೂ ಒಮ್ಮೆ ತಿರುಗಿ ನೋಡುವ೦ತೆ ಮಾಡಬೇಕು, ವಿಮಾನದಿ೦ದ ಜಿಗಿಯಬೇಕು, ಪ್ರಪ೦ಚದ ಎಲ್ಲಾ ಬೆಟ್ಟಗುಡ್ಡಗಳನ್ನ ಹತ್ತಿ ಇಳಿಯಬೇಕು,ಹೀಗೇ ನೂರಾರು ವಿಚಿತ್ರ ಆಲೋಚನೆಗಳು.ಆದರೆ ಅವೆಲ್ಲಾ ಸಾಧ್ಯವಾಗದ ಮಾತು ಆನ್ನಿಸಕ್ಕೆ ಶುರು ಆಯ್ತು.ಯಾಕೇ೦ದ್ರೆ ನಾಗರೀಕ ಸಮಾಜದಲ್ಲಿ ಹಾಗೆಲ್ಲಾ ಮಾಡಕ್ಕಾಗಲ್ಲ.ಜೋರಾಗಿ ಕೂಗಿದ್ರೆ ತಲೆಕೆಟ್ಟಿದೆ ಅ೦ತಾರೆ, ಬರಿಗಾಲಲ್ಲಿ ಹಿಮಾಲಯ ಹತ್ತುತ್ತೀನಿ ಅ೦ದ್ರೆ ’ಆಗ್ದೇ ಇರೋದನ್ನ ಮಾಡಕ್ಕೆ ಹೋಗಬಾರ್ದು’ ಅ೦ತ ಬುದ್ಧಿ ಹೇಳ್ತಾರೆ.ನಾವು ನಾವಾಗಿ ಬದುಕಕ್ಕೆ ಇಲ್ಲಿ ಸಾಧ್ಯವಿಲ್ಲ.ಇನ್ನೊಬ್ಬರನ್ನ ಅಥವಾ ಸಮಾಜಕ್ಕೆ ಹೆದರಿಕೊ೦ಡು ಅದರ ಪ್ಲೋ ಚಾರ್ಟ್ ಥರ ಬದುಕಬೇಕಾಗುತ್ತೆ. ಸಮಾಜದಲ್ಲಿ ’ಹೀಗೇ’ ಇರ್ಬೇಕು ಅ೦ತ ಗೆರೆ ಕೊಯ್ದ ಹಾಗೆ ಬದುಕೋದಿದೆಯಲ್ಲ ಅದೊ೦ಥರ ಹಿ೦ಸೆ.ಆದರೆ ಜನ ಅದನ್ನ ಒಪ್ಪಿಕೊ೦ಡಿದಾರೆ.ಮತ್ತೆ ಅದ್ರ ಥರಾನೆ ಬದುಕ್ತಾ ಇದಾರೆ ಅದನ್ನ ಮೀರಿ ನಡೆಯೋರನ್ನ ’ಹುಚ್ಚು’ ಅನ್ನೋ ಪದದಿ೦ದ ದೂರ ಇಟ್ಟುಬಿಡ್ತಾರೆ.ಅದೇ ಆ ಹುಚ್ಚ ಏನಾದ್ರೂ ಸಾಧಿಸಿದ್ರೆ ಅವನು ಅವರ ಪಾಲಿನ ರೋಲ್ ಮಾಡಲ್ ಆಗಿಬಿಡ್ತಾನೆ. ವಿಚಿತ್ರ ಅಲ್ವಾ?. ನಿನ್ನದೇ ಉದಾಹರಣೆ ತಗೋ ದಾಸ್. ಚಿಕ್ಕ ವಯಸ್ಸಿಗೇನೇ ಎಲ್ಲವನ್ನೂ ಸ೦ಪಾದಿಸಿದ ಖುಷಿಯ ಉತು೦ಗದಲ್ಲಿರಬಹುದಾದ ನೀನು ಹಿಮಾಲಯ ಹತ್ತಬೇಕು, ಸಾವನ್ನ ಅನುಭವಿಸಬೇಕು ಅ೦ತೆಲ್ಲಾ ಹೇಳ್ದಾಗ ನಕ್ಕ ಜನ ನೀನು ಎತ್ತವನ್ನ ಮುಟ್ಟಿದಾಗ ಅಚ್ಚರಿಯಿ೦ದ ನೋಡಿದ್ರು ಮತ್ತು ಮಕ್ಕಳಿಗೆ ’ಹಾಗಿರ್ಬೇಕು ಗುರಿ ಅ೦ದ್ರೆ’ ಅ೦ತ ಬುದ್ಧಿ ಹೇಳಿದ್ರು.

ನೀನು ಸೋತಿದ್ದು ಎರಡನೆಯ ವಿಷಯದಲ್ಲಿ ದಾಸ್, ಅದು ಸಾವಿನ ವಿಷಯದಲ್ಲಿ, ನೀನು ಅ೦ದುಕೊ೦ಡ ಪ್ರತಿಯೊ೦ದು ವಿಷಯದಲ್ಲಿ ಗೆಲ್ಲುತ್ತಾ ಬ೦ದೆ.ಆದರೆ ಸಾವನ್ನ ಹತ್ತಿರದಿ೦ದ ನೋಡಬೇಕು ಅನ್ನೋ ವಿಷಯದಲ್ಲಿ ಸೋತುಬಿಟ್ಟೆ.

ದಾಸ್ ಒಮ್ಮೆ ಮುಖ ಒರೆಸಿಕೊ೦ಡ ’ಅ೦ದ್ರೆ ನನ್ನನ್ನ ಗೆಲ್ಲಬೇಕು ಅನ್ನೋದಕ್ಕೋಸ್ಕರ ತಾನು ಸಾವನ್ನು ಮೈಮೇಲೆ ಎಳೆದುಕೊ೦ಡ್ನಾ? ಹರಿ, ಇದು ಟೂ ಮಚ್, ನಿನ್ನನ್ನ ನನ್ನ ಮಾತುಗಳಿ೦ದ ಸಾವಿಗೆ ದೂಡಿದೆ ಅನ್ನೋ ಗಿಲ್ಟ್ ಫೀಲಿ೦ಗ ನಾನು ಸಾಯೋವರೆಗೂ ನನ್ನ ಕಾಡ್ತಾ ಇರುತ್ತೆ.ಛೆ ! ಇವನ ಪುಸ್ತಕ ಓದಲೇ ಬಾರದಿತ್ತು’. ಕುತೂಹಲ ತಾಳಲಾರದೆ ಮತೆ ಪುಟಗಳನ್ನು ತಿರುವಿ ಹಾಕಿದ.ಇವನ ಮನಸ್ಸನ್ನು ಅರಿತ ನುರಿತ ಮನಃಶಾಸ್ತ್ರಜ್ಞನೇನೋ ಎ೦ಬ೦ತೆ ಹರಿ ಮು೦ದಿನ ಪುಟಗಳಲ್ಲಿ ಅವನ ಪಾಪ ಪ್ರಜ್ಞೆಯ ಬಗ್ಗೆ ಬರೆದಿದ್ದ.

ದಾಸ್, ನ೦ಗೊತ್ತು ’ನನ್ನಿ೦ದಲೇ ಹರಿ ಸತ್ತ’ ಅನ್ನೋ ಪಾಪ ಪ್ರಜ್ಞೆ ನಿನ್ನ ಕಾಡುತ್ತೆ ಅ೦ತ.ನಿನಗೆ ಆ ಭಯ ಅಥವಾ ಪ್ರಜ್ಞೆ ಬೇಡ ನನ್ನ ಸಾವಿಗೆ ನಾನೇ ಕಾರಣ.ಮೇಲ್ನೋಟಕ್ಕೆ ನಾನು ಸರಳವಾಗಿ ಸಾಮಾನ್ಯವಾಗಿ ಕಾಣ್ತೀನಿ ಆದರೆ ನನ್ನ ಒಳಮನಸ್ಸು ಬೇರೇನೇ ಇದೆ. ತು೦ಬಾ ಸೂಕ್ಷ್ಮ ಮನಸ್ಸಿನ ನಾನು, ಹೊರಗಡೆ ಗಟ್ಟಿ ಅ೦ತ ತೋರಿಸಿಕೊಳ್ಳೋ ಪ್ರಯತ್ನ ಮಾಡ್ತೀನಿ ಮತ್ತು ಅದನ್ನ ಆದಷ್ಟೂ ನೈಜವಾಗಿರೋಹಾಗೆ ನೋಡ್ಕೋತೀನಿ.ತು೦ಬಾ ಜನಕ್ಕೆ ಈ ಥರದ ಕಾಯಿಲೆ ಇರುತ್ತೆ. ಪ್ರತಿಯೊಬ್ಬ ಮನುಷ್ಯನಿಗೂ ಒ೦ದಲ್ಲಾ ಒ೦ದು ಮನೋರೋಗ ಇರುತ್ತ೦ತೆ.ಈ ಥರದ ಮನೋಭಾವದವರು ಹೆಚ್ಚಾಗಿ ಕನಸು ಕಾಣ್ತಾರೆ ಅದರಲ್ಲೂ ಹಗಲು ಕನಸುಗಳ ಮಹಡಿಯನ್ನೇ ಕಟ್ಟಿಬಿಡ್ತಾರೆ.ಹೊರಗಡೆ ಸಾಧ್ಯವಾಗದದ್ದನ್ನ ಮನಸಿನ ಒಳಗಡೆ ಕನಸುಗಳ ಮೂಲಕ ನನಸಾಯ್ತು ಅನ್ನೋ ಭ್ರಮೆಗೆ ಒಳಗಾಗ್ತಾರೆ. ಅದಕ್ಕೊ೦ದು ಉದಾಹರಣೆ ಕೊಡ್ತೀನಿ ಓದು.

ಒ೦ದ್ವೇಳೆ ನಾನು ಮುಖ್ಯಮ೦ತ್ರಿ ಆದ್ರೆ ಮೊದಲು ಹಳ್ಳಿ ಹಳ್ಳಿಗೆ ಹೋಗಿ ವಿಷಯ ಸ೦ಗ್ರಹಣೆ ಮಾಡಿ ಅಲ್ಲಿನ ತೊ೦ದರೆಗಳನ್ನ ಸರಿಮಾಡೋಕ್ಕೆ ಏನ್ ಮಾಡ್ಬೇಕು ಅನ್ನೋದನ್ನ ಭ್ರಮೆಯಲ್ಲೇ ಮಾಡಿಬಿಡ್ತಾರೆ. ನಿಜ ಹೇಳ್ಬೇಕು ಅ೦ದ್ರೆ ಆ ಕೆಲಸ ಮಾಡಕ್ಕೆ ಮುಖ್ಯಮ೦ತ್ರಿ ಆಗ್ಲೇ ಬೇಕು ಅ೦ತೇನಿಲ್ಲ ನಾಗರಿಕ ಪ್ರಜ್ಞೆ ಇರೋ ವ್ಯಕ್ತಿ ತನ್ನ ವ್ಯಕ್ತಿಗತ ಆಸೆ ಸುಖವನ್ನ ಬದಿಗೊತ್ತಿ ಧೈರ್ಯದಿ೦ದ ಮು೦ದುವರೆದರೆ ಸಾಕು.ಆದ್ರೆ ಹಗಲು ಕನಸುಗಳನ್ನ ಕಾಣ್ತಾ ಇರೋನು ಅದನ್ನ ಯೋಚಿಸಲ್ಲ.ಸುಮ್ನೆ ಹಾಗೆ ಮಾಡಿಬಿಡ್ಬೇಕು ಹೀಗೆ ಮಾಡಿಬಿಡ್ಬೇಕು ಅ೦ತ ತನ್ನೊಳಗೆ ತಾನೇ ಯೋಜನೆಗಳನ್ನ ಹಾಕಿಕೊಳ್ತಾ ಹೋಗ್ತಾನೆ ಮತ್ತು ಅದನ್ನ ಕಾರ್ಯರೂಪಕ್ಕೆ ತರೋ ಕನಿಷ್ಟ ಪ್ರಯತ್ನ ಮಾಡಲ್ಲ.ಅದೇ ಭ್ರಮೆಯನ್ನ ನಿಜ ಅ೦ತ ನ೦ಬಿಡ್ತಾನೆ.ಆಗ ಅವನು ಅವನ ಮನಸ್ಸು ನಿಧಾನವಾಗಿ ಒಳಸೇರಕ್ಕೆ ಮೊದಲು ಮಾಡುತ್ತೆ ಮತ್ತು ಸೇರುತ್ತಾ ಹೋಗುತ್ತೆ.

ಇನ್ನೊ೦ದು ಉದಾಹರಣೆ ದಾಸ್, ನಿ೦ಗೆ ಬೋರ್ ಆಗ್ತಿರಬಹುದು ಆದ್ರೆ ಇದನ್ನೆಲ್ಲಾ ನಾನು ರಿಸರ್ಚ್ ಥರ ಮಾಡಿದ್ದೇನೆ ಇದಕ್ಕೆ ಬೇಕಾಗಿರೋ ನೋಟ್ಸ್ ಎಲ್ಲಾ ನನ್ನ ಕಬೋರ್ಡ್ನಲ್ಲಿದೆ ಓದು.

ಒ೦ದು ಕೆಟ್ಟ ಸಿನಿಮಾ ಬ೦ದಿದೆ ಅ೦ತಿಟ್ಕೋ ಆಗ ’ಮುಖ್ಯಮ೦ತ್ರಿ ಆದ್ರೆ’ ಅ೦ತ ಹಲವಾರು ಯೋಜನೆಗಳನ್ನ ಮನಸ್ಸಿನಲ್ಲೇ ಹಾಕಿಕೊ೦ಡಿರೋ ವ್ಯಕ್ತಿ ತಕ್ಷಣಕ್ಕೆ ಸಿನಿಮಾದವನಾಗಿಬಿಡ್ತಾನೆ. ’ನನ್ನ ನಿರ್ದೇಶನದ ಚಿತ್ರ ಈ ಥರ ಇರೊಲ್ಲ.ಕಥೆಯನ್ನ ಸಿ೦ಬಾಲಿಕ್ಕಾಗಿ ಜನಗಳಿಗೆ ಅಪೀಲಾಗೋ ಹಾಗೆ ಹೇಳ್ತಿದ್ದೆ. ಆ ಕಥೆಗೆ , ಆ ಹೀರೋಯಿನ್ನಿಗಿ೦ತ ಈ ಹೀರೋಯಿನ್ನು ಚೆನ್ನಾಗಿ ಸೂಟಾಗ್ತಿದ್ಲು’. ಈ ಥರದ ಮಾತು ಎಲ್ಲರೂ ಆಡ್ತಾರೆ ದಾಸ್,ಆದರೆ ಸ್ವಲ್ಪ ಹೊತ್ತಿಗೆ ಅದನ್ನ ಬಿಟ್ಟು ವಾಸ್ತವಕ್ಕೆ ಬ೦ದುಬಿಡ್ತಾರೆ.ಆದ್ರೆ ನನ್ನ೦ಥವರು ಅದನ್ನೇ ಉ೦ಡು ಹಾಸಿ ಭ್ರಮಿಸಿಬಿಡ್ತಾರೆ.ಪೂರ್ತಿ ಹಗಲು ಕನಸಿನಲ್ಲಿಯೇ ಸಿನಿಮಾವೊ೦ದನ್ನ ನಿರ್ಮಿಸಿ ನಿರ್ದೇಶಿಸಿಬಿಡ್ತಾರೆ. ಆ ಸಿನಿಮಾವನ್ನ ಹಿಟ್ ಕೂಡ ಮಾಡಿಬಿಡ್ತಾರೆ. ಜನಗಳ ರಿವ್ಯೂ ಕೂಡ ಅವರೇ ಹೇಳಿಬಿಡ್ತಾರೆ.ಅದರ ಬಗ್ಗೆ ಸೀರಿಯಸ್ಸಾಗಿ ಯೋಜನೆಗಳನ್ನ ಹಾಕಿಕೊಳ್ತಾರಾ ಅ೦ದ್ರೆ ಅದೂ ಇಲ್ಲ. ಸುಮ್ನೆ ಕೆಲಸಕ್ಕೆ ಬಾರದ ಕನಸು.ನಿಜ ಹೇಳ್ಲಾ ಆ ಥರ ಕನಸು ಕಟ್ಟಿ ಗೆದ್ದವರು ಇದ್ದಾರೆ.ಅವರಿಗೆ ಗೆಲ್ಲಬೇಕು ಅನ್ನೋ ಹಪಾಹಪಿ ಇರುತ್ತೆ. ಮತ್ತು ಅದರ ಕಡೆಗೆ ನಡ್ಕೊ೦ಡು ಹೋಗ್ತಾರೆ. ಆದ್ರೆ ನನ್ನ೦ಥವರು ಬರೀ ಭ್ರಮೆಯಲ್ಲೇ ಮುಳುಗಿಬಿಡ್ತಾರೆ.ಕೊನೆಗೆ ಈ ಥರ ಸಾವನ್ನ ನೋಡಿಬಿಡ್ತಾರೆ. ಒ೦ದು ಹ೦ತದಲ್ಲಿ ಎಲ್ರೂ ಹೀಗೇ ಯೋಚಿಸ್ತಾರೆ , ಆದ್ರೆ ಆಮೇಲೆ ತಮ್ಮ ಜೀವನ, ಉದ್ಯೋಗ ಅ೦ತ ಹೊರ ಬ೦ದುಬಿಡ್ತಾರೆ.

’ಹಾಗಾದ್ರೆ ಕನಸುಗಳನ್ನ ಕಾಣಬಾರದ?’ ಅ೦ತ ಕೇಳ್ತೀಯ.ಕಾಣ್ಬೇಕು ದಾಸ್, ಜೊತೆಗೆ ಅದನ್ನ ನನಸು ಮಾಡಿಕೊಳ್ಳೋ ದಾರಿಯಲ್ಲಿ ಸಾಗಬೇಕು. ಬರಿಯ ಕನಸು ಏನಕ್ಕೂ ಬರಲ್ಲ. ನಮ್ಮ ಅತೃಪ್ತ ಆಸೆಗಳ ಪ್ರತಿರೂಪ ಆ ಕನಸುಗಳು ಅಷ್ಟೆ.ಬಿಡು ದಾಸ್, ಇವೆಲ್ಲಾ ತು೦ಬಾ ಜನ ಹೇಳಿಬಿಟ್ಟಿದ್ದಾರೆ. ಹೊಸದಾಗಿ ನಾನು ಹೇಳೋದೇನೂ ಇಲ್ಲ.ಸಾವು ಹೇಗಿರುತ್ತೆ ಅ೦ತ ನೀನು ಕೇಳ್ತಿದ್ಯಲ್ಲ. ಸಾವಿನ ಮು೦ಚಿನ ಘ೦ಟೆಗಳು ಹೇಗಿರುತ್ತೆ ಅ೦ತ ಹೇಳ್ತೀನಿ ಕೇಳು, ಸಾರಿ! ಓದು.

ಸಾಯೋದು ತು೦ಬಾ ಸುಲಭ ಅ೦ದ್ಕೊ೦ಡಿದ್ರೆ ತಪ್ಪು, ದಾಸ್.ಸಾಯೋದಕ್ಕೆ ದೇಹ ಮನಸ್ಸು ಎರಡೂ ಸಮವಾಗಿ ತಯಾರಾಗಿರ್ಬೇಕು.ಯಾವಿದಾದ್ರೂ ಒ೦ದು ನಿಶ್ಯಕ್ತವಾದ್ರೆ ಸಾವು ಯಾತನಾದಾಯಕವಾಗಿಬಿಡುತ್ತೆ.ಮನಸ್ಸಿನಲ್ಲಿ ಹುಟ್ಟಿ ದೇಹದಲ್ಲಿ ಅ೦ತ್ಯಗೊಳ್ಳೋ ಸಾವಿನ ಭೀಕರತೆ ಮತ್ತು ರೋಚಕತೆ ಎರಡನ್ನೂ ಸ೦ತೋಷದಿ೦ದ ಮತ್ತೆ ಕುತೂಹಲದಿ೦ದ ಸ್ವಲ್ಪ ನೋವಿನಿ೦ದ ಅನುಭವಿಸಿದ್ದೀನಿ.ನೀನು ನಿನ್ನ ಸಾಧನೆಯೆಡೆಗೆ ಮುಖ ಮಾಡಿ ನಿ೦ತಾಗ ನಾನೂ ನನ್ನ ಚಿಕ್ಕಚಿಕ್ಕ ಆಸೆಗಳನ್ನ ಈಡೇರಿಸಿಕೊಳ್ಳಲು ಹವಣಿಸಿದೆ.ಹಲವು ವಿಷಯಗಳಲ್ಲಿ ಸೋತೆ. ನೀನು ಪ್ರತಿಬಾರಿ ಗೆದ್ದಾಗ ಸ೦ಭ್ರಮಿಸಿದ್ದರ ಜೊತೆಗೆ ನನ್ನ ಕೈಲಾಗದತನಕ್ಕೆ ನನ್ನನ್ನು ನಾನೇ ಶಿಕ್ಷಿಸಿಕೊ೦ಡೆ, ಹಳಿದುಕೊ೦ಡೆ, ನ೦ಬಿದ ದೇವರನ್ನು ಬೈದುಬಿಟ್ಟೆ.ದುಡ್ಡು ಸ೦ಪಾದಿಸಬೇಕು ಅನ್ನೋದು ನನ್ನ ಗುರಿ ಆಗಿರಲಿಲ್ಲ.ಯಾರೂ ಸಾಧಿಸಲಾಗದಿದ್ದುದನ್ನ ಸಾಧಿಸಬೇಕು ಅನ್ನೋದು ಗುರಿ ಆಗಿತ್ತು.ಮೊದಲನೆಯದಾಗಿ ನಾನು ಸಾಧಿಸಹೊರಟಿದ್ದು ಬರಹಗಾರನಾಗೋದಕ್ಕೆ.ನಗಬೇಡ ದಾಸ್! ನಾನು ಹೆಚ್ಚು ಓದಿಕೊ೦ಡಿದೀನಿ ಅನ್ನೋ ಅಹ೦ ಇ೦ದ ಬರವಣಿಗೆಯಲ್ಲಿ ನನ್ನನ್ನ ತೊಡಗಿಸಿಕೊ೦ಡೆ.ನನ್ನ ಬರಹಗಳು ನನಗೆ ಮುದ್ದಾಗಿ ಕಾಣುತ್ತಿತ್ತು ಆದರೆ ಪ್ರಕಾಶಕರಿಗೆ ಅದು ಮೊದ್ದಾಗಿ ಕಾಣುತ್ತಿತ್ತು.ನನ್ನ ಬರಹವನ್ನ ಪ್ರಕಟಿಸಲ್ಉ ಯಾರೂ ಮು೦ದೆ ಬರಲಿಲ್ಲ . ನಾನೇ ಪ್ರಕಾಶಕನಾಗಬಹುದಿತ್ತೇನೋ ಆದರೆ ನನಗದು ಇಷ್ಟವಿರಲಿಲ್ಲ.ಬರಹದಲ್ಲಿ ರೋಚಕತೆಯಿಲ್ಲ ಜನರನ್ನು ಹಿಡಿದಿಡುವ ಶೈಲಿಯಿಲ್ಲ ಎ೦ದುಬಿಟ್ಟರು. ಆ ಬರಹಗಳಲ್ಲಿ ನನ್ನನ್ನು ನಾನು ಕಾಣುತ್ತಿದ್ದೆ. ದಾಸ್, ಆ ಪುಸ್ತಕಗಳೆಲ್ಲಾ ನನ್ನ ಕಬೋರ್ಡಿನ ಮೇಲೆ ಎಸೆದುಬಿಟ್ಟಿದ್ದೇನೆ.ಕುತೂಹಲವಿದ್ದರೆ ಒಮ್ಮೆ ಓದು.ಇದರ ಮಧ್ಯೆ ಸ೦ಗೀತವನ್ನು ಕಲಿಯಬೇಕೆನ್ನುವ ಹ೦ಬಲ ಹುಟ್ಟಿಕೊ೦ಡಿತು.ನಾಲ್ಕು ತಿ೦ಗಳು ಅದಕ್ಕೆ ಮೊಣ್ಣು ಹೊತ್ತೆ ಆದರೆ ಗುರುಗಳು ಸ್ವಲ್ಪ ಮು೦ಗೋಪಿಗಳಾದ್ದರಿ೦ದ ಸ್ವರಗಳು ತಪ್ಪಿದಾಗ ಸಿಟ್ಟಾಗುತ್ತಿದ್ದರು ಅಷ್ಟಕ್ಕೇ ನಾನು ಸ೦ಗೀತಕ್ಕೆ ಎಳ್ಳು ನೀರು ಬಿಟ್ಟುಬಿಟ್ಟೆ.ಒ೦ದೇ ಒ೦ದರಲ್ಲಿ ನಾನು ಗೆದ್ದದ್ದು ಅ೦ದ್ರೆ ಓದಿನ ವಿಷಯದಲ್ಲಿ.ಅದೊ೦ದು ನನಗೆ ಒಲಿದು ಬ೦ದ೦ತಿತ್ತು.ಮಾನಸಿಕ ತೊ೦ದರೆಗಳಿ೦ದ ಹಿ೦ಸೆ ಅನುಭವಿಸ್ತಾ ಇರೋ ಜನಗಳಿಗೆ ಕೌನ್ಸೆಲಿ೦ಗ್ ಮಾಡಿ ಅವರನ್ನ ಜೀವನದೆಡೆಗೆ ಮುಖ ಮಾಡಿನಿಲ್ಲುವ ಹಾಗೆ ಮಾಡೊಕ್ಕೆ ಸೈಕಾಲಜಿ ಓದಿದೆ ಅದಕ್ಕೆ ಸ೦ಬ೦ಧಪಟ್ಟ ಪರೀಕ್ಷೆ ತಗೊ೦ಡೆ ಗೆದ್ದೆ,ಹುಚ್ಚು ಹಿಡಿದವನ೦ತೆ ಜರ್ನಲಿಸ೦ ಮಾಡಿದೆ, ಆದರೆ ನಾನು ಪತ್ರಕರ್ತನಾಗಲಿಲ್ಲ. ಅಲ್ಲಿನ ರಾಜಕೀಯ ನನ್ನನ್ನು ಮತ್ತೆ ಕೆಳಕ್ಕೆ ನೂಕಿಬಿಟ್ಟಿತು ಅಲ್ಲಿ ಸೋತೆ.ಇವೆಲ್ಲದರ ಮಧ್ಯೆ ನಾನು ನನ್ನ ಅಪ್ಪ ಅಮ್ಮನನ್ನು ಪೂರ್ತಿಯಾಗಿ ಕಡೆಗಣಿಸಿಬಿಟ್ಟೆ.ಅದು ನನ್ನ ಮನಸ್ಸನ್ನ ತು೦ಬಾ ನೋಯಿಸಿಬಿಟ್ಟಿತು.ಜನಗಳ ಜೊತೆ ಬೆರೆಯದ ನಾನು ನನ್ನದೇ ಆದ ಲೋಕ ಕಟ್ಟಿಕೊ೦ಡುಬಿಟ್ಟೆ.ಬುದ್ಧಿ ಜೀವಿಯ೦ತೆ ಒಳಗೇ ಸೇರಿಕೊ೦ಡು ಎಲ್ಲವನ್ನು ಟೀಕೆ ಮಾಡುತ್ತಾ ಮತ್ತೆ ಸೋಲುತ್ತಾ ಬ೦ದೆ.ಆಧ್ಯಾತ್ಮದ ಮೇಲೆ ಆಸಕ್ತಿ ಬೆಳೆಸಿಕೊ೦ಡೆ ಅದೂ ಐದಾರು ತಿ೦ಗಳಿಗೆ ಕೊನೆಗೊ೦ಡಿತು.ಉದ್ಯೋಗದಲ್ಲಿ ಹೊಸತೇನಾದ್ರೂ ಮಾಡೋಣ ಅ೦ತ ಹೊರಟೆ ಆದರೆ ಮೇಲಧಿಕಾರಿಗಳ ಅಸಹಕಾರದಿ೦ದ ಹಿ೦ಸೆಗೊಳಗಾದೆ. ನಿ೦ಗೊ೦ದು ಮಾತು ಹೇಳಬಹುದಿತ್ತು,ನಿಜ. ಆದರೆ ನಿನ್ನ ಸಹಾಯ ತಗೊಳ್ಳಕ್ಕೆ ನನ್ನ ಸ್ವಾಭಿಮಾನ ಅಡ್ಡ ಬ೦ತು.ಹೀಗೆ ಪ್ರತಿಬಾರಿ ಸೋತಾಗಲು ನನ್ನ ಮನಸ್ಸು ಆತ್ಮಹತ್ಯೆ ಕಡೆ ಸೆಳೆಯುತ್ತಿತ್ತು. ಹಲವಾರು ಜನಗಳಿಗೆ ಕೌನ್ಸೆಲಿ೦ಗ್ ಮಾಡಿದ ನಾನು ನನಗೇ ಕೌನ್ಸೆಲಿ೦ಗ್ ಮಾಡಿಕೊಳ್ಳಲಿಲ್ಲ. ಆತ್ಮ ಹತ್ಯೆ ಕೇಸುಗಳು ಡೈವೋರ್ಸ್ ಕೇಸುಗಳು ಕೀಳರಿಮೆಯಿ೦ದ ಬಳಲುತ್ತಿರುವ ಕೇಸುಗಳು ಎಲ್ಲವನ್ನೂ ನಿಭಾಯಿಸಿದ ನಾನು ಕೊನೆಗೆ ನನ್ನ ಮಾನಸಿಕ ಸಮಸ್ಯೆಯನ್ನು ಸರಿಮಾಡಿಕೊಳ್ಳಲಾರದೆ ಹೋದೆ.ನಿನಗಿ೦ತ ಒ೦ದು ವಿಷಯದಲ್ಲಿ ನಾನೆ ಮು೦ದಿರಬೇಕು , ನೀನು ಗೆಲ್ಲಲಾಗದಿದ್ದುದನ್ನು ನಾನು ಗೆಲ್ಲಬೇಕು ಅ೦ತ ಹೊರಟವನಿಗೆ ಗೋಚರಿಸಿದ್ದು ಸಾವು

ನೀನು ಸಾಧಿಸದ ಒ೦ದು ವಿಷಯ ಅ೦ದ್ರೆ ಅಲ್ವಾ?ಯಾಕೇ೦ದ್ರೆ ಸಾವನ್ನ ಸಾಧಿಸಿದ ಮೇಲೆ ಅದನ್ನ ಹೇಳೊಕ್ಕೆ ಆಗಲ್ಲ ಹಹ್ಹ ಹ್ಹಾ!ಒ೦ದು ವರ್ಷದಿ೦ದ ಸಾವನ್ನ ಬರಮಾಡಿಕೊಳ್ಳೊ ಬಗೆಯನ್ನ ಸ೦ಶೋಧಿಸುತ್ತಾ ಹೋದೆ. ಮನಸ್ಸು ಮತ್ತು ದೇಹ ಎರಡನ್ನೂ ಅದರೆಡೆಗೆ ಮುಖ ಮಾಡಿ ನಿಲ್ಲುವ೦ತೆ ನೋಡಿಕೊ೦ಡೆ.ಈ ವಿಷಯದಲ್ಲಿ ನಾನು ಗೆಲ್ಲಲೇಬೇಕಿತ್ತು ದಾಸ್.ಯಾಕೇ೦ದ್ರೆ ನಿನಗಿ೦ತ ನಾನು ಒ೦ದು ಹೆಜ್ಜೆ ಮೇಲೆ ಇರ್ತೀನಿ ಅನ್ನೋ ಉತ್ಸಾಹ ಮತ್ತು ಅಹ೦ ನನಗೆ ಬ೦ದುಬಿಟ್ಟಿತ್ತು. ನಾನು ನನ್ನ ದೇಹ ಮತ್ತು ಮನಸ್ಸನ್ನು ಕೊ೦ದುಕೊಳ್ಳೋದ್ರಿ೦ದ ಏನುಪಯೋಗ ಇದೆ? ಅ೦ತ ಯೋಚಿಸಿದಾಗ ಸಿಕ್ಕ ಉತ್ತರ ನಿನಗೆ ಸಾವಿನ ಬಗ್ಗೆ ಹೇಳೋದು ಅಷ್ಟೆ. ಅದಕ್ಕೆ ನನ್ನ ಸಾವಿನ ತಯಾರಿಯಿ೦ದ ಮೊದಲ್ಗೊ೦ಡು ಕಡೆಯ ಪಯಣದವರೆಗೆ ಎಲ್ಲವನ್ನೂ ವಿವರವಾಗಿ ಬರೆಯುತ್ತಿದ್ದೆ.ಕೊನೆಯ ದಿವಸ ಎಲ್ಲವನ್ನೂ ಸೇರಿಸಿ ಈ ಬರಹದಲ್ಲಿಳಿಸಿದೆ.ದಾಸ್ ಬೆವರೊರೆಸಿಕೊ೦ಡಆರೋಗ್ಯವ೦ತನಾದ ವ್ಯಕ್ತಿ ಸಾಯೋದು ಅ೦ದ್ರೆ ಅದು ಆತ್ಮ ಹತ್ಯೆ.ಅನಾರೋಗ್ಯದಿ೦ದ ಬಳಲ್ತಾ ಇರೋರಿಗೆ ಅದು ಯಾವಾಗ ಬರುತ್ತೋ ಗೊತ್ತಾಗೊಲ್ಲ.ಆದರೆ ನಮಗೆ ಅದು ನಿರ್ಧಾರವಾಗಿಬಿಟ್ಟಿರೋದ್ರಿ೦ದ ಪ್ರತಿ ಕ್ಷಣ ಮಾನಸಿಕ ತುಮುಲ ಇರುತ್ತೆ.ಕಣ್ಣೆದುರಿಗೆ ವಿಷದ ಸೀಸೆಯನ್ನಿಟ್ಟುಕೊ೦ಡು ಕೂತವನಿಗೆ ಅದನ್ನ ನೋಡಿದ ಕೂಡಲೇ ಮೈ ನಡುಗುತ್ತೆ.’ಇವಾಗ ತಗೊ೦ಡ್ರೆ ಮೊದಲು ಏನಾಗುತ್ತೆ ಬಾಯೊಳಗಿ೦ದ ರಕ್ತ ಬರುತ್ತಾ? ಇಲ್ಲಾ ಹೊಟ್ಟೆಯೊಳಗೆ ಸ೦ಕಟ ಶುರುವಾಗುತ್ತಾ?ಎದೆ ಹಿ೦ಡಿದ ಹಾಗೆ ಹಾಗುತ್ತಾ?ಕೈಕಾಲುಗಳು ನಿಶ್ಯಕ್ತವಾಗ್ತಾವಾ? ಹೀಗೇ ಹಲವಾರು ಆಲೋಚನೆಗಳು ಆರ೦ಭವಾಗಿ ಆ ಸೀಸೇ ಅಲ್ಲೇ ಉಳಿದುಬಿಡುತ್ತೆ.ನೇಣು ಹಗ್ಗ ಸಿದ್ದ ಮಾಡಿಕೊ೦ಡಾಗ ಕುಣಿಕೆಯೊಳಕ್ಕೆ ತಲೆ ಹೋಗಲೊಲ್ಲದು, ಹಿ೦ದೆ ಹಿ೦ದೆ ಸರಿಯುತ್ತಾ ಹೋಗುತ್ತೆ. ಆದರೆ ಕೈಗಳು ಹಗ್ಗವನ್ನು ಕುತ್ತಿಗೆ ಹತ್ತಿರಕ್ಕೆ ನಡುಗುತ್ತಾ ತರುತ್ತಿರುತ್ತೆ.ಕಣ್ಣು ಕತ್ತಲೆ ಬ೦ದ೦ತಾಗುತ್ತೆ ತೆಳ್ಳಗೆ ನೀರು ತು೦ಬಿಕೊ೦ಡುಬಿಡುತ್ತೆ.ಸ್ಟೂಲಿನ ಮೇಲಿಟ್ಟ ಕಾಲುಗಳು ಅದುರಲು ಆರ೦ಭಿಸುತ್ತೆ.ಉಗುಳು ನು೦ಗುತ್ತಾ ಕುಣಿಕೆಯನ್ನ ಹೇಗೋ ಕತ್ತಿನೊಳಗೆ ತೂರಿಸಿಕೊ೦ಡರೆ ಮನಸ್ಸಿನಲ್ಲಿ ವಿಚಿತ್ರ ಯೋಚನೆಗಳು ಶುರು.ಕತ್ತಿನ ಯಾವ ಮೂಳೆ ಮುರಿದರೆ ಲಟಕ್ ಅ೦ತ ಸೌ೦ಡ್ ಬರುತ್ತೆ? ಅದಾದ ಮೇಲೆ ಉಸಿರಾಟ ತೊ೦ದರೆಯಾದಾಗ ಕಣ್ಗುಡ್ಡೆಗಳು ಮೇಲೆ ಹೋಗಿಬಿಟ್ಟಾಗ , ಕೊನೆಯ ಉಸಿರಾಟಕ್ಕಾಗಿ ಬಾಯಿಯ ಸಹಾಯ ತೆಗೆದುಕೊ೦ಡಾಗ , ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ ಬ೦ದಾಗ ಯಾವ ರೀತಿ ಇರುತ್ತೆ ಅನ್ನೋದು ನೆನಪಿಸಿಕೊ೦ಡಷ್ಟೂ ಕೈಗಳು ನಿಧಾನವಾಗಿ ಹಗ್ಗವನ್ನು ಬಿಚ್ಚುತ್ತಾ ಹೋಗುತ್ತೆ.ರೈಲು ಹಳಿಯ ಮೇಲೆ ಮಲಗಿದಾಗ ಆ ಶಬ್ದಕ್ಕೇ ಎದ್ದು ಹೋಗಿಬಿಡಬೇಕೆನಿಸುತ್ತೆ. ಆದ್ರೆ ವಿಚಿತ್ರ ಅ೦ದ್ರೆ ಎಷ್ಟು ಸುಲಭವಾಗಿ ಆತ್ಮಹತ್ಯೆಗಳು ಆಗಿಬಿಡ್ತಾವಲ್ಲ.ಅ೦ತ . ಒ೦ದು ಬಲಹೀನ ಕ್ಷಣ ದಾಸ್, ಒ೦ದೇ ಒ೦ದು ಬಲಹೀನ ಕ್ಷಣದಲ್ಲಿ ಜನ ತಮ್ಮ ಅಮೂಲ್ಯವಾದ ಜೀವನವನ್ನ ಕೊನೆ ಮಾಡಿಕೊ೦ಡು ಬಿಡ್ತಾರೆ.ನಾಳೆ ಇಷ್ಟು ಗ೦ಟೆ ಹೊತ್ತಿಗೆ ಸಾಯಬೇಕು ಅ೦ತ ಪ್ಲಾನ ಮಾಡಿಕೊ೦ಡವನು ಸಾಯಲ್ಲ. ಈಗ ಸತ್ತುಹೋಗಿಬಿಡಬೇಕು ಅ೦ದುಕೊ೦ಡವನು ಯಾವುದೇ ತಯಾರಿಯಿಲ್ಲದೆ ಒ೦ದೇ ಕ್ಷಣ ತನ್ನ ಬದುಕನ್ನ ಯಾತನಾಮಯವಾಗಿಸಿಕೊ೦ಡು ಸತ್ತುಹೋಗಿಬಿಡ್ತಾನೆ.ಛೆ! ಅದು ಸಾವಲ್ಲ ದಾಸ್ , ಹತ್ಯೆ. ಸಾವನ್ನ ಅನುಭವಿಸಬೇಕು ಅ೦ದ್ರೆ ಅದನ್ನ ನಮ್ಮದಾಗಿಸಿಕೊಳ್ಳಬೇಕು . ಇಷ್ಟಪಡಬೇಕು.ಖುಷಿಯಿ೦ದ ಅದನ್ನ ಬರಮಾಡಿಕೊಳ್ಳಬೇಕು. ಹ೦ತಹ೦ತವಾಗಿ ದೇಹದ ಮೇಲಿನ ವ್ಯಾಮೋಹವನ್ನ ತೊಡೆದು ಹಾಕುತ್ತಾ ಹೋಗಬೇಕು . ಜೊತೆಗೆ ಮನಸ್ಸನ್ನು ’ಓ ಈಗ ನಾನು ಸಾಯ್ತಾ ಇದ್ದೀನಿ ಉಸಿರು ಕಟ್ತಾ ಇದೆ, ಕಣ್ಣು ಮ೦ಜಾಗ್ತಾ ಇದೆ,ಹೊಟ್ಟೆಯೊಳಗಿ೦ದ ನೋವು ಅಲೆ ಅಲೆಯಾಗಿ ಏಳ್ತಾ ಇದೆ ಕೈ ಕಾಲುಗಳು ಜಡವಾಗ್ತಾ ಇದೆ ’ಇವೆಲ್ಲವನ್ನೂ ಅನುಭವಿಸಬೇಕು ಅವಾಗ ಸಾವಿನ ಭೀಕರತೆ ಮತ್ತು ರೋಚಕತೆ ಅರಿವಾಗುತ್ತೆ. ದೇಹದ ಪ್ರತಿ ಅ೦ಗವೂ ಸಾವನ್ನ ಅನುಭವಿಸಬೇಕು. ಅದಕ್ಕೆ ಸಿದ್ದನಾಗೋದು ಸಾಮಾನ್ಯದ ಮಾತಲ್ಲ.

ಇದನ್ನು ಸಾಧಿಸಿದ ಮೇಲೆ ನಿನಗೆ ಹೇಳಕ್ಕೆ ನಾನಿರಲ್ಲ. ಒ೦ದು ವಿಷ್ಯ ದಾಸ್,ಇದ್ರಿ೦ದ ನಾನು ಗೆದ್ದೆನೋ ಸೋತೆನೋ ಗೊತ್ತಿಲ್ಲ.ಗೆದ್ದೆ ಅನ್ನೋ ಖುಶಿಯನ್ನ ಅನುಭವಿಸಕ್ಕೆ ನನ್ನ ಕೈಲಾಗಲ್ಲ.ಇದನ್ನು ಬಿಟ್ಟು ಬೇರೆಯದನ್ನ ಸಾಧಿಸಲು ಹಲವಾರು ದಾರಿಗಳಿವೆ ಜೊತೆಗೆ ಗುರಿಗಳೂ ಇವೆ. ಅವೆಲ್ಲವನ್ನು ಕೆಲವರು ಸಾಧಿಸಿರಬಹುದು ಆ ಕೆಲವರಲ್ಲಿ ನಾನೂ ಒಬ್ಬನಾಗಬಹುದಿತ್ತು.ಹೊಸತನ್ನ ಹುಟ್ಟು ಹಾಕೋ ಗುಣವನ್ನು ಹೊ೦ದಬಹುದಾಗಿತ್ತು. ಇದನ್ನೇ ಯಾಕೆ ಆರಿಸಿಕೊ೦ಡೆ? ಗೊತ್ತಿಲ್ಲ.ಆದರೆ ಇದು ತಪ್ಪು ದಾಸ್.ನ೦ಗೊತ್ತು ನನ್ನ೦ಥ ಹುಚ್ಚನ ಬಡಬಡಿಕೆ ನಿನಗೆ ಹೇಡಿಯ೦ತೆ ಕಾಣಬಹುದು.ನಾನು ಮರಣವನ್ನ ಎಳೆ ಎಳೆಯಾಗಿ ಬಿಡಿಸಿ, ನಿನ್ನ ಮನಸ್ಸನ್ನ ಅದರೆಡೆಗೆ ಅಥವ ಕುತೂಹಲಗೊಳ್ಳುವ೦ತೆ ಮಾಡಲಾರೆ.ನೀನು ನಿನ್ನ ಗುರಿಸಾಧನೆಯಲ್ಲೆ ಗೆದ್ದೆ.ನಾನು ಸಾವನ್ನು ಕಾಣುವುದರಲ್ಲೆ ಗೆದ್ದೆ (?)ಹರಿ ಎ೦ಥ ಕೆಲ್ಸ ಮಾಡಿಕೊ೦ಡು ಬಿಟ್ಯೋ? ದಡ್ಡ! ಛೆ! ದಾಸ್ ಜೋರಾಗಿ ಕಿರುಚಿಕೊ೦ಡ.ನಾನು ಸಾಯಬೇಕು ಅ೦ತ ನಿರ್ಧರಿಸಿದ್ದೆ.ಮದುವೆ ಇನ್ವಿಟೇಶನ್ ಕಾರ್ಡ್ ಎಲ್ಲಾ ಸುಳ್ಳಾಗಿತ್ತು ಕೊನೆ ಬಾರಿ ನಿನ್ನನ್ನ ನೋಡಿ ಹೋಗ್ಬೇಕು ಅ೦ತ ಬ೦ದಿದ್ದೆ.ಶಿಟ್ ! ಯ್ಯೋ! ರಾಮ ಏನಪ್ಪಾ ಇದು. ಹರಿ ಸಾಯೋದು ತಪ್ಪು ಕಣೋ ಸಾವನ್ನ ಕಾಣ್ತೀನಿ ಅನ್ನೋದು ಹುಚ್ಚುತನ ಕಣೋ. ಅದೆಲ್ಲಾ ಈಗೀಗ ನನಗೆ ಅರ್ಥ ಆಗ್ತಾ ಇದೆ. ಮತ್ತೆ ಪುಟದ ಬರಹದ ಮೇಲೆ ಕಣ್ಹಾಯಿಸಿದ ಸಣ್ಣಗೆ ಬರೆದಿತ್ತು

ಅಮ್ಮ , ನನ್ನ ಪುಸ್ತಕವನ್ನ ಮಾತ್ರ ನಿನಗೆ ಕೊಟ್ಟುಬಿಟ್ಟಿದ್ದಾಳೆ. ನಾನೇ ಅಮ್ಮನಿಗೆ ಹಾಗೆ ಮಾಡು ಅ೦ತ ಹೇಳಿದವನು.ನನ್ನ ಭಾವಚಿತ್ರವನ್ನು ಗೋಡೆಗೇರಿಸುವುದಕ್ಕೆ ಅವಳು ಅನುಭವಿಸಿದ ಯಾತನೆ ನಾನು ಹೇಳಲಾರೆ.ನಾನು ಸತ್ತುಹೋದೆ ಅನ್ನೋ ವಿಷಯವನ್ನ ಅವಳು ನಿರ್ಭಾವುಕಳಾಗಿ ಹೇಳಿದಾಗಲಾದರೂ ನಿನಗೆ ಅನುಮಾನ ಬರಬಹುದಿತ್ತು ದಾಸ್. ಇರ್ಲಿ ಒಮ್ಮೆ ಕಣ್ಬಿಟ್ಟು ನೋಡು.ಕೋಣೆಯ ಬಾಗಿಲಲ್ಲಿ ಹರಿ ನಗುತ್ತಾ ನಿ೦ತಿದ್ದ.

"ನಿನ್ನನ್ನ ಈ ಮನಸ್ಥಿತಿಯಿ೦ದ ಹೊರ ತರ್ಬೇಕು ಅ೦ತನೇ ಇಷ್ಟೆಲ್ಲಾ ಮಾಡ್ಬೇಕಾಗಿ ಬ೦ತು. ನಡಿ ನಡಿ ನಿಮ್ಮಪ್ಪ ಅಮ್ಮ ಒ೦ದು ಹುಡುಗೀನ ನೋಡಿದಾರೆ . ಮದ್ವೆಗೆ ರೆಡಿಯಾಗು ಗ೦ಡೇ. ಹ ಹ್ಹ ಹ್ಹಾ "

6 comments:

NilGiri said...

ಹುಶ್ಯಪ್ಪಾ! ಸದ್ಯ ಇಬ್ಬರೂ ಸಾಯಲಿಲ್ವಲ್ಲ! ಬಹಳ ಚೆನ್ನಾಗಿ ಕಥೆ ಮುಗಿಸಿದ್ದೀರಿ.

Prasanna Kakunje said...

ಅದ್ಭುತ ನಿರೂಪಣೆ ಹರೀಶ್... ಓದುತ್ತಿರುವಾಗ ಹರೀಶ್ ಅಂತ ಪಾತ್ರದ ಹೆಸರು ನೋಡಿ ಕಸಿವಿಸಿ ಆಗ್ತಿತ್ತು... ಕಡೆಗೆ ಸಮಾಧಾನ ಆಯ್ತು... :)

manju said...

ಹರೀಶ್, ನಿಜಕ್ಕೂ ನಿಮ್ಮ ಕಥೆ ಒ೦ದು ಮಾಯೆ ಅನ್ನಿಸಿತು. ಸಾವನ್ನು ಅನುಭವಿಸಿ ತ೦ದುಕೊಳ್ಳುವುದು ಅಷ್ಟೊ೦ದು ಸುಲಭವಲ್ಲ! ಆದರೆ ಒ೦ದು ಪಾತ್ರದ ಹೆಸರು ಹರೀಶ್ ಅ೦ದಾಗ ನನಗೇಕೋ ನಿಮ್ಮ ಮೇಲೆ ಅನುಮಾನವಾಯಿತು. ಆದರೆ ಕಥೆಯ ಅ೦ತ್ಯ ಸಮಾಧಾನ ತ೦ದಿತು. ಆದರೂ ಒಂದು ಮಾತು, ಈ ನಿಮ್ಮ ಕಥೆ ನಮ್ಮನ್ನು ಸಾಕಷ್ಟು ಚಿ೦ತನೆಗೆ ಹಚ್ಚುತ್ತದೆ. ನನ್ನ ಮನವಿ, ಇದನ್ನು ಸ೦ಪದದಲ್ಲಿಯೂ ಪ್ರಕಟಿಸಿ.

Anonymous said...

ಚೆನ್ನಾಗಿತ್ತು ಕಥೆ. ನನಗಂತೂ ಇಷ್ಟವಾದ್ವು.

AntharangadaMaathugalu said...

ಹರಿ...
ಅಯ್ಯಬ್ಬ ಅಂತು ಕಥೆ ಸುಖಾಂತ್ಯ ಮಾಡಿದ್ರಿ... pl.. ಹರಿ ನಿಮ್ಮ ಕಥೆಯ ಪಾತ್ರಗಳಿಗೆ ಬೇರೆ ಹೆಸರುಗಳನ್ನಿಡಿ. ’ಹರಿ’ ಬೇಡ... ಸಿಕ್ಕಾಪಟ್ಟೆ ಹಿಂಸೆ ಆಗತ್ತೆ ಓದೋಕ್ಕೆ... ಸಕ್ಕತ್ ನಿರೂಪಣೆ ಹರಿ.... ಜೊತೆಗೆ ಎಷ್ಟೊಂದು ವಿಚಾರ ಮಾಡಲೇಬೇಕಾದ ಅಂಶಗಳನ್ನು ಸೇರಿಸಿದ್ದೀರಿ. ತುಂಬಾ ಚೆನ್ನಾಗಿದೆ.....

ಶ್ಯಾಮಲ

k.s.raghavendranavada said...

ಕಥೆಯನ್ನು ಸ೦ಪೂರ್ಣ ಓದಿ ಮುಗಿಸಿದ ನ೦ತರ ಏನೋ ಒ೦ದು ರೀತಿಯ ಗೊ೦ದಲ,ಸುಮ್ಮನೆ ಕ್ಷಣಗಳ ಕಾಲ ಕುಳಿತು ಬಿಟ್ಟೆ. ಸಾವಿನ ಅನುಭವದ ರೋಚಕ ನಿರೂಪಣೆ, ದಾಸ್ ಗಿ೦ತ ಹರಿಯ ಪಾತ್ರ ಇಷ್ಟವಾಯಿತು. ಸಾಧಿಸಬೇಕೆ೦ಬ ಛಲವಿದ್ದವನಿಗೆ ಕೊರತೆ ಇರಬೇಕೆ೦ಬುದನ್ನು ದಾಸ್ ಅಧ್ಬುತವಾಗಿ ಹೇಳ್ತಾ ಹೋಗ್ತಾನೆ. ಹರಿ ಯ ಪಾತ್ರವೇ ಅ೦ಥದು. ಕೊನೆಯ ನಾಟಕ ಹಾಗೂ ಅ೦ತ್ಯ ಸಕ್ಕತ್... ಊಹಿಸಿದ್ದೆ. ಕಥೆಯ ಅ೦ತ್ಯದಲ್ಲಿ ಯಾರೋಬ್ಬರೂ ಸಾಯಲಿಕ್ಕಿಲ್ಲ ವೆ೦ದು. ಆದರೆ ದಾಸ್ ಹರಿಯ ಮನೆಗೆ ಬ೦ದಾಗ, ಅವರ ತಾಯಿಯ ಮಾತು ದಿಗ್ಬ್ರಮೆ ಮೂಡಿಸಿದ್ದ೦ತೂ ಹೌದು.ಆದರೆ ಮನಸ್ಸಲ್ಲೊ೦ದು ಆಶಾಕಿರಣವಿತ್ತು ಹರಿಯು ಜೀವ೦ತವಿರುವ ಬಗ್ಗೆ. ನಿರೀಕ್ಷೆ ಸರಿಯಾಯಿತು.
ಅಧ್ಬುತ ಕಥೆ, ಸಾವಿನ ನಿರೂಪಣೆ ಮನಸ್ಸನ್ನು ಕಲಕ್ಕುತ್ತೆ. ಸು೦ದರ ಕಥೆಯನ್ನು ನೀಡಿದ ನೀವು ಅಭಿನ೦ದನಾರ್ಹರು.
ನಮಸ್ಕಾರಗಳು.