Friday, July 30, 2010

ನಾ ಇದ್ದರೂ ಇಲ್ಲದಿದ್ದರೂ ನಿನಗೆ ನೀನೇ..

ಅಕ್ಕರೆಯ ಮಗಳು ಹೊಸ ಪ್ರಪ೦ಚಕ್ಕೆ ಕಾಲಿಡುವಾಗ ಭಯ ಆತ೦ಕಗಳಿ೦ದ ತ೦ದೆಯನ್ನು ಕೈ ಹಿಡಿದು ನಡೆಸು ಎನ್ನುತ್ತಾಳೆ. ತ೦ದೆಯದವನು ಮಗಳಿಗೆ ಹೇಳುವ ಧೈರ್ಯ ಯಾವ ರೀತಿಯದು. ಅದು ಕೇವಲ ಧೈರ್ಯವೇ, ಇಲ್ಲಾ ಸಾ೦ತ್ವನವೇ, ಸದಾ ಜೊತೆಗಿರುವೆನೆ೦ಬ ವಾಗ್ದಾನವೇ ಯಾವುದು ಇದರಲ್ಲಿ ಸೂಕ್ತ. ತನ್ನ ಮಗಳು ತಾನಿಲ್ಲದಿದ್ದರೂ ಸ್ವತ೦ತ್ರವಾಗಿ ಬದುಕಬೇಕುಎ೦ಬ ಆಲೋಚನೆಯುಳ್ಳ ತ೦ದೆ ಮಗಳಿಗೆ ಹೇಳುವ ಮಾತುಗಳನ್ನು ಕವನದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ. ಈ ಕವನಕ್ಕೆ ಕಾರಣರಾದವರಿಗೆ ನಮನಗಳನ್ನು ಸಲ್ಲಿಸುತ್ತಾ….


ಕೈ ಹಿಡಿಸು ನಡೆಸಲು


ನೀನೀಗ ಮಗುವಲ್ಲ ಮಗಳೇ

ನಿನಗೆ ನಿನ್ನದೇ ವ್ಯಕ್ತಿತ್ವವಿದೆ

ಜವಾಬ್ದಾರಿಯಿದೆ ಅಷ್ಟನ್ನೂ

ನಿನಗೆ ಹೇಳಿಕೊಟ್ಟಿದ್ದೇನೆ



ಇನ್ನು ನೀನು ನಿನ್ನದೇ ಕಣ್ಣಲ್ಲಿ

ಜಗವ ನೋಡು ಮತ್ತು ಅಳೆದುಬಿಡು

ಸುತ್ತ ಕಾಣುವ ಮ೦ದಿ

ಕಣ್ಣೊಳ ಬೀಳುವ ಧೂಳೂ ಹೌದು

ಆನ೦ದ ಬಾಷ್ಪವೂ ಹೌದು



ಧೂಳನ್ನು ತೆಗೆಯುವ ಕೈ ನಿನ್ನದು

ಬೀಳದ೦ತೆ ತಡೆಯಿಡಿಯುವ ಮನವೂ ನಿನ್ನದು

ನಾನು ಕೇವಲ ನೋಡುಗ

ಮತ್ತು ಪುಟ್ಟ ನಿರ್ದೇಶಕ

ನಟನೆ ನಿನ್ನದು ಫಲವೂ ನಿನ್ನದು



ಹೊರಗೆಲ್ಲೂ ಹೋಗದಿರು ಮಗಳೇ

ಕತ್ತಲಿದೆ ಎನ್ನುವ ಕಾಲ ಇನ್ನಿಲ್ಲ

ನೀನೀಗ ಪ್ರಬುದ್ಧೆ ಮತ್ತು

ನನ್ನ ಹಾಗೆಯೇ ನಿನ್ನ ಮನವೂ

ಎಚ್ಚರಿಕೆಯ ಗೂಡು



ಮುಖವಾಡಗಳ ನಡುವೆ

ಮೂಕಿಯಾಗದಿರು. ಮತ್ತು

ಮುಗ್ಧೆಯಾಗದಿರು.

ಕಾಣು ಎಲ್ಲವನು

ಕಣಸಿಸು ಎಲ್ಲವನು

ನೀ ನೀನಾಗಿರು

ನಾ ಇದ್ದರೂ ಇಲ್ಲದಿದ್ದರೂ

1 comment:

ಮನಮುಕ್ತಾ said...

ಹೊರ ಪ್ರಪ೦ಚಕ್ಕೆ ಕಾಲಿಡುವಾಗ ಮಗಳ ಮನಸ್ಸು ಭಯ ಪಡುವುದು ಸಹಜ..ಆ ಸಮಯದಲ್ಲಿ ತ೦ದೆಯೇ ಮೊಟ್ಟ ಮೊದಲ ಆಸರೆ .ಅದನ್ನು ನಿರ್ವಹಿಸುತ್ತಾ ,ತ೦ದೆಯು ತನ್ನ ಮಗಳಿಗೆ ಮು೦ದಿನ ಹೆಜ್ಜೆಯ ಬಗ್ಗೆ ನೀಡಿದ ಉಪದೇಶ ಹಾಗೂ ಜಗತ್ತಿನ ಬಗೆಗಿನ ಸೂಕ್ಶ್ಮ ಪರಿಚಯ ಕವನದಲ್ಲಿ ಚೆನ್ನಾಗಿ ಮೂಡಿಬ೦ದಿದೆ.