Tuesday, August 17, 2010

ಬರೀ ಸ್ವಗತ

ನನಗೆ ಮದುವೆಯಾಗಿ, ಅಪ್ಪನ ಮನೆಯಿಂದ ಗಂಡನಮನೆಗೆ ಬಂದು ನಾಕು ತಿಂಗಳಾಯ್ತು.ಇನ್ನೂ ಈ ಮನಯನ್ನ ನನ್ನ ಮನೆ ಅಂತ ತಕ್ಷಣಕ್ಕೆ ಒಪ್ಪಿಕೊಳ್ಳಕ್ಕೆ ಆಗ್ತಾ ಇಲ್ಲ.ಆದ್ರೂ ಒಪ್ಪ್ಕೊಂಡ ಹಾಗೆ ನಾಟಕ ಆಡಬೇಕು (ಇದು ಸ್ವಲ್ಪ ದಿನ ಮಾತ್ರ ಅಂತ ಗೊತ್ತು).ಇಲ್ಲಿರೋರು ನನ್ನವರೇ ಅಂತ ಗೊತ್ತು ಆದ್ರೂ ಹೆದರಿಕೆ ಇದೆ.ನನ್ನ ಮನೇಲಿ ನಾನು ಕೆಲಸಾನ ತೋಚಿಕೊಂಡು ಮಾಡಿದ ಹಾಗೆ ಇಲ್ಲಿ ಮಾಡೋಕೆ ಸ್ವಲ್ಪ ಮುಜುಗರ ಆಗುತ್ತೆ.ಇದೂ ಅಷ್ಟೆ ಸ್ವಲ್ಪ ದಿವಸ ಅಂತ ಗೊತ್ತು ಅದರೂ ......


     ಅಮ್ಮಾ ನನ್ನನ್ನ ಬಿಟ್ಟು ನೀನು ಹೇಗಿದೀಯಾ. ಒಬ್ಳೇ ಮಗಳು ಅಂತ ಇರೋ ಬರೋ ಪ್ರೀತಿನೆಲ್ಲಾ ನನ್ಮೇಲೆ ತೋರ್ಸಿ ಈಗ ಇದ್ದಕ್ಕಿಂದ್ದಂತೆ ಒಂಟಿ ಮಾಡಿದ್ಯಲ್ಲಮ್ಮ.ನಾನೇನು ಇಲ್ಲಿ ಕಷ್ಟ ಪಡ್ತಾ ಇಲ್ಲ,ಇವರೂ ಕೂಡ ಅದೇ ಥರಾ ಪ್ರೀತಿ ಮಾಡ್ತಾರೆ.ಕೇಳಿದ್ದು ಕೊಡಿಸ್ತಾರೆ.ಎಲ್ಲಾ ಸರಿ ಆದ್ರೂ ಯಾಕೋ ನೀನಿಲ್ಲಾ ಅಂತ ಅನ್ನಿಸ್ತಾಇದೆ.ನೀನು ದಿನಕ್ಕೆ ನಾಲ್ಕೈದು ಸಾರಿ ಫೋನ್ ಮಾಡ್ತೀಯ ಅವಾಗ ಸಮಾಧಾನ ಆಗುತ್ತೆ ಮತ್ತೆ ಬೇಜಾರು ಆಗುತ್ತೆ . ನಾನು ಮುಖ ಸಪ್ಪೆ ಮಾಡಿಕೊಂಡರೆ ಇವರಿಗೆ ಬೇಜಾರು ಆಗುತ್ತೆ."ಮನೆಗೆ ಹೋಗ್ಬೇಕು ಅನ್ನಿಸುತ್ತಾ",ಅಂತ ಕೇಳ್ತಾರೆ ,'ಹುಂ' ಅಂದ್ರೆ ಕಳಿಸ್ತಾರೆ ಆದ್ರೆ ಹಾಗೆ ಹಗಲಲ್ಲ ಬಂದು ಹೋಗೋದು ಚೆನ್ನಾಗಿರಲ್ಲ ಅಂತ ನಾನೇ ಬರಲ್ಲ.ಈಗಾಗಲೇ ಈ ನಾಕು ತಿಂಗಳಲ್ಲಿ ತೊಂಭತ್ತು ದಿವಸ ಅಲ್ಲಿಗೆ ಬಂದಿದ್ದೆ.ಪಾಪ , ಇವರಿಗೂ ನಮ್ಮ ಸೊಸೆ ನಮ್ಮ ಜೊತೆ ನಗ್ತಾ ನಗ್ತಾ ಮಾತಾಡ್ಲಿ ಅಂತ ಆಸೆ ಇರಲ್ವಾ?.ಮದುವೆ ಮಾಡ್ಕೊಂಡ ಎಲ್ಲರಿಗೂ ಹೇಗೆ ಅನ್ನಿಸುತ್ತಾ?.ಚಿಕ್ಕಮ್ಮನನ ಕೇಳಿದ್ರೆ 'ಮೊದಲು ಒಂದೆರಡು ತಿಂಗಳು ಹೀಗೆ ಅನ್ಸುತ್ತೆ ಆಮೇಲೆ ಬಾ ಅಂದ್ರೂ ನೀನೆ ಬರಲ್ಲ ಕಣೆ. 'ಅಯ್ಯೋ ನನಗೆ ಕೆಲಸ ಇದೆ ಚಿಕ್ಕಮ್ಮ', ಅಂತ ಜಾರ್ಕೊತಿಯಾ'ಅಂತಾರೆ ನಿಜ ಇರಬಹುದು . ಆದ್ರೆ ಯಾಕೂ ಅದು ಸುಳ್ಳು ಅಂತ ಅನ್ನಿಸ್ತಾ ಇದೆ . ನಾನು ಇದರಿಂದ ಹೊರಕ್ಕೆ ಬರಕ್ಕೆ ಆಗಲ್ವಾ?ನೀನಾದರೆ ಬಡ ಬಡ ಅಂತ ಮಾತಾಡ್ತಿಯ ಆದ್ರೆ ಅಪ್ಪ ಎಷ್ಟು ಕೊರಗ್ತಾ ಇದಾರೋ?.ನನ್ನನ್ನ ಗಂಡನ ಮನೆಗೆ ಕಳಿಸಿದ ಮೇಲೆ ಆ ದಿನ ರಾತ್ರಿ ಅಪ್ಪ ಅತ್ತರಂತೆ.ಅಪ್ಪ ಅಳೋದು ಆಶ್ಚರ್ಯ ಆಗುತ್ತೆ. ತಾತ ಹೋದಾಗಲೇ ಅಳ್ಲಿಲ್ಲ.ದೊಡ್ದಪ್ಪಂದಿರಿಗೆ ಸಮಾಧಾನ ಹೇಳ್ತಿದ್ರು.'ಯಾವಾಗಲೂ ನನ್ನ ತೋಳ ಮೇಲೆ ಮಲಕ್ಕೊಂಡು ನಿದ್ದೆ ಮಾಡ್ತಾ ಇದ್ಲು ಪುಟ್ಟಿ. ಈಗ ಮನೆಯೆಲ್ಲಾ ಬಿಕೋ ಅಂತಾ ಇದೆ',ಅಂತ ಅತ್ತರಂತೆ . ನಂಗೆ ಅಷ್ಟೊಂದು ಪ್ರೀತಿ ಒಟ್ಟು ಬಿಟ್ರಿ. ಈಗ ನೋಡಿ ನನ್ನ ಕಷ್ಟ.

     ಇಲ್ಲೇನು ಯಾರೂ ಕಷ್ಟ ಕೊಡಲ್ಲ. ನಿಜ ಹೇಳ್ಬೇಕಂದ್ರೆ ಅಪ್ಪನ ಥರ ಮಾವಾನೂ 'ಪುಟ್ಟೀ' ಅಂತಾನೆ ಕರೆಯೋದು, ಅತ್ತೆ ಕೂಡಾ.ಅದಕ್ಕೆ ನಾನು ಅವರನ್ನ ಅಪ್ಪ ಅಮ್ಮ ಅಂತ ಕರೀತೀನಿ.ಇನ್ನು ಇವರಂತೂ 'ಚಿನ್ನೂ' ಅಂತ ಕರಿತಾರೆ.ಸಣ್ಣ ಮಗೂ ಥರಾ ನೋಡ್ಕೋತಾರೆ.ಯಾರೂ ಹೆಸರು ಹಿಡಿದು ಕೂಗೋಲ್ಲ.ಒಂದು ಕೆಲಸ ಹೇಳೋಲ್ಲ.ನಾನೇ ಕೇಳಿ ಕೆಲಸ ತಗೋ ಬೇಕು.'ಅಮ್ಮ ತರಕಾರಿ ಹೆಚ್ಚಿಕೊಡಲ' ಅಂತೀನಿ 'ಆಯ್ತು' ಅಂತಾರೆ.ನಾನು ಹೋಳುಗಳನ್ನ ದಪ್ಪಗೆ ಹೆಚ್ಚಿದರೆ'ಅಷ್ಟೊಂದು ದಪ್ಪ ಬೇಡ ಪುಟ್ಟಿ ಸ್ವಲ್ಪ ಸಣ್ಣ ಹೆಚ್ಚು ನಿಮ್ಮ ಮಾವನಿಗೆ ಸಣ್ಣ ಇರ್ಬೇಕು'.ಅವರು ಹೇಳೋದು ತಪ್ಪಿಲ್ಲ. ಕೆಲಸ ಕಲೀಲಿ ಅಂತ ಹೇಳ್ತಾರೆ.ನಮ್ಮ ಮನೇಲಿ ನಾನು ಹೇಗೆ ಹೆಚ್ಚಿದರೆ ಹಾಗೆ ಅಡುಗೆ ಮಾಡ್ತಿದ್ದೆ ನೀನು. ಇಲ್ಲಿ ಇವರಿಗೆ ಸ್ವಲ್ಪ ಪೆರ್ಫೆಕ್ಶನ್ ಬೇಕು.ಅಷ್ಟಕ್ಕೆ ನನ್ನ ಮುಖ ಚಿಕ್ಕದಾಗಿ ಬಿಡುತ್ತೆ ಹೊರಗಡೆ 'ಆಯ್ತು, ಅಮ್ಮ ಸಣ್ಣ ಹೆಚ್ತೀನಿ 'ಅಂತ ಅಂದ್ರೂ ಒಳಗೆ ಒಂದು ಥರಾ ಅನ್ನಿಸುತ್ತೆ. ಪ್ರತಿಯೊಂದು ಕೆಲಸ ಮಾಡಕ್ಕಿಂತ ಮುಂಚೆ ಅವರಿಗೆ ಹೊಂದೋ ರೀತಿ ಯಾವುದು ಅದನ್ನ ತಿಳ್ಕೊಂಡು ಮಾಡ್ತೀನಿ.ಇದು ನನ್ನ ಸ್ವಭಾವಕ್ಕೆ ವಿರುದ್ಧ. ಆದ್ರೂ ಮಾಡ್ತೀನಿ.ನನ್ನ ಅಭಿರುಚಿಗಳ ಜೊತೆಗೆ ಅವರ ಅಭಿರುಚಿ ಸೇರಿಸಿಕೊಂಡು ಮಾಡೋದ ಸಂಸಾರಾಂದ್ರೆ?.ನಿಮ್ಮಗಳ ಮೇಲೆ ಸಿಟ್ಟು ಮಾಡ್ಕೋತಾ ಇದ್ದೆ, ಮಾತು ಬಿಡ್ತಾ ಇದ್ದೆ,ಮತ್ತೆ ಸೇರ್ತಾ ಇದ್ದೆ.ಇಲ್ಲಿ ಕೋಪ ಮಾಡಿ ಕೊಳ್ಳೋದಕ್ಕೂ ಭಯ.ಸಿಟ್ಟು ಬಂದ್ರೆ ನು೦ಗ್ಕೋ ಬೇಕು. ಮತ್ತೆ ನಗೋ ಹಾಗೆ ನಾಟಕ ಆಡಬೇಕು .ಮದುವೆಗಿಂತ ಮು೦ಚೆ ಒಂದೆರಡು ಸಲ ಇಲ್ಲಿಗೆ ಬಂದಿದ್ದೆನಲ್ಲ ಅವಾಗ ಏನೂ ಅನ್ನಿಸಿರಲಿಲ್ಲ ಬಹುಶಃ ಮನೆಗೆ ವಾಪಾಸು ಹೋಗಿ ಬಿಡ್ತೀನಿ ಅಂತ ಧೈರ್ಯ ಇರಬೇಕು.ಈಗ ಮಾತ್ರ ತುಂಬಾ ಮುಜುಗರ, ಭಯ.ಮುಂದೆ ನೀವು ನಂಜೊತೆ ಇರಲ್ಲ ಅಂತ ಮನಸಿಗೂ ಗೊತ್ತಾಗಿರ್ಬೇಕು.

     ಒಬ್ಳೇ ಮಗಳು ಸಾಕು ಅಂತ ಯಾಕೆ ನೀವು ಅಂದುಕೊಂಡಿರಿ? ನಂಗೊಂದು ತಮ್ಮಾನೋ, ತಂಗೀನೋ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತು . ಈ ವಿಷಯಗಳನ್ನ ಹೇಳಿಕೊಲ್ಲೋದಿಕ್ಕೆ ಅವ್ರು ಇರ್ತಾ ಇದ್ರೂ.ನಿಮ್ಮ ಹತ್ರ ಹೇಳಿದ್ರೆ ಬೇಜಾರು ಮಾಡ್ಕೊತಿರ ಮತ್ತೆ ಅಳ್ತಿರ.ತಪ್ಪು ಮಾಡಿದ್ರಿ ನೀವು ಅನ್ಸುತ್ತೆ.ಮದುವೆ ಮನೇಲಿ ಓಡಾಡಿಕೊಂಡು ನನ್ನನ್ನ ರೇಗಿಸ್ತಾ , ಅಳಿಸ್ತಾ ,ಅಣಕಿಸುಸ್ತಾ ಇರೋ ತಮ್ಮ ಇರಬೇಕಾಗಿತ್ತು .

      ನಾನು ಹೇಳಿದ್ದೆ ಸರಿ ಅಂತ ನನ್ನನ್ನ ಬೆಳೆಸಿದ್ರಿ (ಅಪ್ಪ ಅವಾಗವಾಗ ಬೈತಾ ಇದ್ರೂ ಅಂತಿಟ್ಕೋ)ಅದೇ ದೊಡ್ಡ ತಪ್ಪೇನೋ ಅನ್ಸುತ್ತೆ.ಇಲ್ಲಿ ನನಗಿಂತ ಸರಿಯಾಗಿ ಮತ್ತೆ ಸಮರ್ಥವಾಗಿ ಮಾಡೋರನ್ನ ನೋಡಿದ್ರೆ ಹೆಮ್ಮೆ ಆಗುತ್ತೆ ಮತ್ತು ನಾನು ತಪ್ಪು ಮಾಡಿದೆ ಅನ್ನೋ ಭಾವ ಬರುತ್ತೆ. ಅದು ಸರಿ ಮಾಡ್ಕೊತೀನಿ ಬಿಡು.ಸುಮ್ನೆ ನಿನ್ಹತ್ರ ಹೇಳ್ಕೋಬೇಕು ಅನ್ನಿಸ್ತು ಅಷ್ಟೆ. ತಲೆ ಕೆಡಿಸ್ಕೋಬೇಡ, ನಿನ್ನ ಮಗಳು ಸುಖವಾಗಿದಾಳೆ.
  

2 comments:

Raghu said...

ಮದುವೆ ಮಾಡಿ ಕೊಟ್ಟ ನಂತರ ಹೆಣ್ಣು ತವರಿನ ಮನೆಯಿಂದ ಹೊರಗೆ ಎಂದು ಹೇಳುವ ರೂಢಿ ಇದೆ.
ಏನೇ ಇದ್ದರು ಹೊಸ ಮನೆಗೆ ಸರಿಹೊಂದಲು ತುಂಬಾನೆ ಸಮಯ ಬೇಕು ತವರಿನ ನೆನಪು ಕೂಡ ಕಾಡುತ್ತ ಇರುತ್ತದೆ.
ಆಗ ಒಳ್ಳೆ ಸ್ನೇಹಿತ ಸಂಗ ಬೇಕು..
ಒಳ್ಳೆಯ ಬರಹ.
ನಿಮ್ಮವ,
ರಾಘು.

ಮನಮುಕ್ತಾ said...

ಮದುವೆಯ ನ೦ತರ ಮದುವೆಯಾದ ಹುಡುಗಿಗೆ ಗ೦ಡನಮನೆಯ ವಾತಾವರಣಕ್ಕೆ, ಜನರಿಗೆ, ನೆ೦ಟರಿಷ್ಟರಿಗೆ ಹೊ೦ದಿಕೊಳ್ಳಲು ಕೆಲ ಸಮಯ ಬೇಕು..ಆಗ ಮನಸ್ಸಿನಲ್ಲಿ ಬರುವ ಭಾವಗಳನ್ನು ತು೦ಬಾ ಚೆನ್ನಾಗಿ ಬರೆದಿದ್ದೀರಿ.