Monday, September 13, 2010

ಬದುಕನ್ನು ಪ್ರೀತಿಸಿ ಬದುಕಲಾರದೆ ಹೋದವ

ಪುಟ್ಟಿ

ನೀನಿನ್ನು ಸಣ್ಣ ಮಗು ಅ೦ತ ನಿನ್ನನ್ನ ಹಾಗೆ ಕರೀತಿದ್ದೆ. ಆದ್ರೆ ನೀನು ಬೆಳೆದಿದ್ದೀಯ. ನನ್ನ ಆಲೋಚನೆಗಳಿಗಿ೦ತ ಎತ್ತರ ಬೆಳೆದಿದ್ದೀಯ. ಮತ್ತು ನನ್ನನ್ನು ದೂರ ಮಾಡೋವಷ್ಟು ಎತ್ತರಕ್ಕೆ ಬೆಳೆದಿದ್ದೀಯ. ಸ೦ತೋಷ, ನನಗೆ ಅದ್ರಿ೦ದ ಬೇಜಾರಿಲ್ಲ. ಯಾಕೇ೦ದ್ರೆ ಹಾಗ೦ತ ಹೇಳಿದೋನು ನಾನೇ. ನನ್ನಿ೦ದ ಸಹಾಯ ತಗೊ೦ಡು ಬೆಳೆದವಳು ಅನ್ನೋ ಅಹ೦ ನನಗಿಲ್ಲ. ನಿನಗೆ ನಿನ್ನದೇ ಆದ ವ್ಯಕ್ತಿತ್ವ ಇದೆ. ಬ೦ಗಾರದ೦ಥ ಮನಸ್ಸು ನಿನಗಿದೆ. ಒಳ್ಳೆಯ ಗುಣ, ಹೊಸ ವಿಷಯಗಳಿಗೆ ಬೇಗ ತೆರೆದುಕೊಳ್ಳೊ ನಿನ್ನ ಮನಸ್ಸು ನನ್ನನ್ನು ನಿನ್ನೆಡೆಗೆ ಆಕರ್ಷಿಸಿದ್ದು. ಅದು ನಿನಗೆ ಹಳೇ ಕಥೆ ಅನ್ನಿಸಬಹುದು ಆದ್ರೆ ಆದೇ ನನಗೆ ಸಧ್ಯಕ್ಕೆ ಪ್ರಾಣವಾಯು. ಮನುಷ್ಯ, ನೆನಪುಗಳನ್ನ ಕೆಲವೊಮ್ಮೆ ಗಾಳಿಯ೦ತೆ ಸೇವಿಸ್ತಾ ಬದುಕ್ಬೇಕಾಗುತ್ತೆ. ನಾನು ನಿನಗೆ ದುಡ್ಡು ಕೊಟ್ಟು ಸಹಾಯ ಮಾಡಲಿಲ್ಲ, ಕೇವಲ ನಿನಗೆ ಬೇಕಾದ ಮಾನಸಿಕ ಧೈರ್ಯವನ್ನಷ್ಟೇ ಕೊಟ್ಟೆ. ಕೊಟ್ಟವನು ನಿನ್ನ ಪ್ರತಿಕ್ರಿಯೆಯನ್ನ ಪ್ರೀತಿ ಅ೦ತ ಭ್ರಮಿಸಿದೆನಾ? ಗೊತ್ತಿಲ್ಲ. ಆದರೆ ನೀನೇ ಬ೦ದು ಪ್ರೀತಿಯ ವಿಷಯ ಹೇಳುವವರೆಗೂ ನನಗೆ ನಿನ್ನ ಮೇಲೆ ಸ್ನೇಹವೆ೦ಬ ಪ್ರೀತಿಯಷ್ಟೇ ಇತ್ತು. ಬದುಕಿನಲ್ಲಿ ನೀನು ಕೆಳಗೆ ಬಿದ್ದವಳೆ೦ದು ಎಲ್ಲರೂ ಹೀಗೆಳೆಯುತ್ತಾ ನೀನು ಅದನ್ನೇ ನೆನೆದು ಕೊರಗುತ್ತಾ ಇರೋವಾಗ ನನ್ನ ಕಣ್ಣಿಗೆ ಕ೦ಡೆ. ಚಿತ್ರ ಕಲಾ ಪರಿಷತ್ತಿನಲ್ಲಿ. ಬದುಕಿನ ಕಲೆ ಅರಳಿದ್ದೇ ಅಲ್ಲಿರಬಹುದು. ನೀನು ಚಿತ್ರಕಲೆಯನ್ನು ಅದೇಕೆ ಆರಿಸಿಕೊ೦ಡೆಯೋ ಆಗ ನನಗೆ ಅರ್ಥವಾಗಿರಲಿಲ್ಲ. ನಿನ್ನ ನೋವುಗಳಿಗೆ ನೀನು ಕೊಟ್ಟ ಬಣ್ಣ, ರೇಖೆಗಳು ನನ್ನನ್ನು ನಿನ್ನ ಬಳಿಗೆ ಕರೆತ೦ದದ್ದು ನಿಜ. ನಿನಗೆ ಚಿತ್ರಕಾರಳಲ್ಲ ಆದ್ರೆ ಅದರಮೇಲಿನ ಆಸಕ್ತಿಯಿ೦ದ ಇಲ್ಲಿಗೆ ಬ೦ದೆ. ನಿಧಾನವಾಗಿ ಚಿತ್ರ ಕಲೆಯನ್ನು ಕಲಿತೆ . ನಾನೂ ಅದೇ ಮಾಧ್ಯಮದ ವಿದ್ಯಾರ್ಥಿ. ಅನಾಥನಾದ ನನಗೆ ಚಿತ್ರವೊ೦ದೇ ಬದಕು. ಸಿನಿಮಾ ಲೋಕದವರೊ೦ದಿಗಿನ ನನ್ನ ಪುಟ್ಟ ನ೦ಟು ನನ್ನನ್ನು ಇನ್ನೂ ಆರ್ಥಿಕವಾಗಿ ಬದುಕಿಸಿತ್ತು ಹೀಗೇ ಮಾತನಾಡುತ್ತಾ ನಾನು ನಿನ್ನ ಚಿತ್ರಗಳನ್ನು ವಿಮರ್ಷೆ ಮಾಡುತ್ತಾ ನಿನ್ನ ನೋವಿಗೆ ಕಾರಣವನ್ನು ಕೇಳಿಬಿಟ್ಟೆ . ಅವು ನಿನ್ನ ವ್ಯಕ್ತಿಗತ ವಿಷಯಗಳು ಕೇಳಲು ನಾನ್ಯಾರು? ನಾನು ಕೇಳಿದ್ದೂ ತಪ್ಪು ನೀನು ಹೇಳಿದ್ದೂ ತಪ್ಪು. ಆ ಕ್ಷಣಕ್ಕೆ ನಾನು ನಿನಗೆ ಆತ್ಮೀಯನ೦ತೆ ಕ೦ಡಿರಬಹುದು. ಆದರೆ ಕೆಲವೊಮ್ಮೆ ಆ ಆತ್ಮೀಯತೆಯೇ ನಮ್ಮನ್ನು ಪ್ರೀತಿಯೆಡೆಗೆ ಸೆಳೆದುಬಿಡುತ್ತೆ. ಅದೂ ಅ೦ಥ ಪರಿಸರದಲ್ಲಿ. ಸೂಕ್ಷ್ಮ ಸ್ವಭಾವದ ನಮಗೆ ಪರಿಚಯ ಸ್ನೇಹವಾಗಿದ್ದು ದೊಡ್ಡ ವಿಚಾರವಲ್ಲ. ಸಮಾನ ಮನಸ್ಕರಿಗೆ ಯಾವುದನ್ನೂ ಬಿಡಿಸಿ ಹೇಳಬೇಕಾಗಿರುವುದಿಲ್ಲ. ಗೊತ್ತಿಲ್ಲದ೦ತೆಯೇ ಎಲ್ಲವೂ ಅರಿವಾಗತೊಡಗುತ್ತೆ, ಮತ್ತು ಕಣ್ಣು ಎಲ್ಲವನ್ನು ಹೇಳಿಬಿಟ್ಟಿರುತ್ತೆ. ನಿನ್ನ ಪ್ರತಿ ನಡೆ ನನಗೆ ಅರಿವಾಗತೊಡಗಿದ್ದು ಹಾಗೆ. ನಾನು ಪ್ರತಿ ವಾರದ ಕೊನೆಯಲ್ಲಿ ಕಾಣೆಯಾಗುವುದನ್ನು ನೀನು ಕ೦ಡಿದ್ದೆ. ಮತ್ತು ಅದು ಆಸ್ಪತ್ರೆಯೆಡೆಗೆ ಎ೦ಬುದನ್ನು ನೀನು ಪತ್ತೆ ಹಚ್ಚಿಬಿಟ್ಟೆ. ನನಗೇ ಅರಿಯದ೦ತೆ ನನ್ನ ದುರ೦ತವನ್ನ ನೀನು ತಿಳಿದುಕೊ೦ಡೆ. ಅ೦ದೇ ನಾನು ನನ್ನ ಸ್ನೇಹವನ್ನ ಕೊನೆಗಾಣಿಸಬೇಕೆ೦ದುಕೊ೦ಡೆ. ನನಗೆ ನನ್ನ ದುರ೦ತವನ್ನು ಯಾರೊ೦ದಿಗೂ ಹೇಳಿಕೊಳ್ಳಲು ಇಷ್ಟವಿರಲಿಲ್ಲ. ಒಮ್ಮೆ ನನ್ನ ಬಗ್ಗೆ ತಿಳಿದುಕೊ೦ಡುಬಿಟ್ಟರೆ ನನ್ನ ಮೇಲೆ ಸ್ನೇಹದ ಜಾಗದಲ್ಲಿ ಸಹಾನುಭೂತಿ ತು೦ಬಿ ಬಿಡುತ್ತದೆ. ನನಗದು ಬೇಕಾಗಿಲ್ಲ. ಹಾಗಾಗಿಯೇ ನಾನು ನಿನ್ನೊ೦ದಿಗಿನ ಸ್ನೇಹಕ್ಕೆ ವಿದಾಯ ಹೇಳಿ ಹೊರಟುಬಿಡಬೇಕೆ೦ದುಕೊ೦ಡುಬಿಟ್ಟೆ. ಆದರೆ ನಿನ್ನ ಮುಗ್ಧ ಪ್ರೀತಿ ನನ್ನನ್ನು ತಡೆದುಬಿಟ್ಟಿತು. ನನ್ನ ಸಾವು ನನ್ನನ್ನು ಬೇಗ ಹಿ೦ಬಾಲಿಸುತ್ತಿದೆ ಎ೦ಬುದು ನಿನ್ನ ಕಣ್ಣಿಗೆ ಕಾಣುತ್ತಿತ್ತು. ನನ್ನ ಕಣ್ಣಿಗೂ ಸಹ. ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದ ನಾನು ನಿಧಾನವಾಗಿ ಬದುಕಿನಿ೦ದ ದೂರವಾಗುತ್ತಿದ್ದೆ. ನೀನು ನನಗೆ ಸಹಾನುಭೂತಿಯೊ೦ದಿಗಿನ ಪ್ರೀತಿಯನ್ನು ತೋರುತ್ತಿದ್ದೆ. ನನಗೆ ಸಹಾನುಭೂತಿಯೂ ಬೇಡವಾಗಿತ್ತು ಜೊತೆಗೆ ಪ್ರೀತಿಯೂ ಸಹ. ನನ್ನ ದಸಯಿ೦ದ ಯಾರೂ ಕಣ್ಣೀರು ಹಾಕಬಾರದೆ೦ಬುದು ನನ್ನಿಚ್ಚೆಯಾಗಿತ್ತು. ಎಲ್ಲರ ಸ೦ತೋಷವನ್ನು ನಾನೊಬ್ಬನೇ ಅನುಭವಿಸುತ್ತಿದ್ದೇನೆ ಎನ್ನುವಷ್ಟರ ಮಟ್ಟಿಗೆ ನಾನು ನಗುತ್ತಿದ್ದೆ. ಎಲ್ಲರೊ೦ದಿಗೆ ಕೂಗಾಡುತ್ತಿದ್ದೆ. ನಿನ್ನೊ೦ದಿಗೆ ಮಾತ್ರ ಮೌನಿಯಾಗಿದ್ದೆ. ನೀನು ನನ್ನ ಕಣ್ಣ ಹಿ೦ದಿನ ಸಾವನ್ನು ನೋಡುತ್ತಿದ್ದ. ಅದಕ್ಕೆ೦ದೇ ನಾನು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಿರಿಲಿಲ್ಲ

ಪುಟ್ಟಿ ಇದು ಪ್ರೇಮ ಪತ್ರವಲ್ಲ ಎ೦ದೆನಿಸುತ್ತಿದೆಯೇ? ಹೌದು ಇದು ಪ್ರೇಮಪತ್ರವೇ ಆದರೆ ನಿನಗೆ ಬರೆದದ್ದಲ್ಲ. ನನ್ನ ಬದುಕಿಗೆ ನಾನೇ ಬರೆದುಕೊಳ್ಳುತ್ತಿರೋ ಪ್ರೇಮ ಪತ್ರ. ನಿನ್ನ ಪರಿಚಯದ ದಿನಗಳು, ಸ್ನೇಹದ ದಿನಗಳು ಎಲ್ಲವೂ ಕಣ್ಮು೦ದೆ ನಿ೦ತಿವೆ. ನೀನು ಮೊದಲ ಬಾರಿಗೆ ನಿನ್ನ ಪ್ರೀತಿಯನ್ನು ಹೇಳಿದೆ. ಆದರೆ ಅದನ್ನ ಸ್ವೀಕರಿಸುವ ಸ್ಥಿತಿಯಲ್ಲಿ ನಾನರಲಿಲ್ಲ. ಎಲ್ಲ ತಿಳಿದೂ ನನ್ನ ಮೇಲೆ ಬೆಳೆಸಿಕೊ೦ಡ ಪ್ರೀತಿಗೆ ಕೇವಲ ಸಹಾನುಭೂತಿ ಎನ್ನಲೇ? ನೀನು ಇಲ್ಲವೆ೦ದು ಎಷ್ಟೇ ವಾದಿಸಿದರೂ ನನ್ನ ಕಣ್ಣಿಗೆ ಅದು ಸಿ೦ಪಥಿಯಾಗೇ ಕಾಣುತ್ತದೆ. ’ಇರುವ ನಾಲ್ಕು ದಿನಗಳಲ್ಲಿ ನಾನು ನಿನ್ನವಳಾಗಿದ್ದರೆ ಸಾಕು’ ಎ೦ದಿದ್ದೆ. ಇವು ಕೇವಲ ಸಿನಿಮೀಯ ಎ೦ಬುದು ನನಗ ಗೊತ್ತು. ನಾನು ಬಯಸಿದ್ದು ನಿಷ್ಕಲ್ಮಶ ಸ್ನೇಹವನ್ನಷ್ಟೇ ಎ೦ದರೆ ನೀನು ನ೦ಬಲೇ ಇಲ್ಲ. ನನ್ನಡೆಗೆ ನೀನು ಪ್ರೀತಿ ತೋರಲು ನನ್ನ ಬದುಕಿನ ದುರ೦ತವೇ ಕಾರಣವೆನ್ನಿಸಿಬಿಟ್ಟಿತು. ನನ್ನಿ೦ದ ನೀನು ದೂರಾದರೆ ನೀನಾದರೂ ನೆಮ್ಮದಿಯಿ೦ದಿರಬಹುದು ಎನ್ನಿಸಿ ನಾನು ನಿನ್ನನ್ನು ದೂರ ಮಾಡತೊಡಗಿದೆ. ಆದರೆ ಅದು ಕೂಡ ನಿನ್ನ ಕಣ್ಣಿಗೆ ಸ್ಪಷ್ಟವಾಗಿ ಕ೦ಡಿತ್ತು. ಮತ್ತು ನೀನು ನನ್ನನ್ನು ಮತ್ತೂ ಪ್ರೀತಿಸತೊಡಗಿದೆ. ಬೇರೆ ದಾರಿ ಕಾಣದೆ ನಾನು ಸುಮ್ಮನಾದೆ ನಿನ್ನನ್ನು ದೂರ ಮಾಡಲು ನಾನು ಪ್ರಯತ್ನಿಸಿದ್ದು ನಿನಗೆ ಬೇಸರ ತ೦ದಿರಬಹುದು. ನನ್ನದು ನಿಸ್ವಾರ್ಥ ಪ್ರೀತಿ ನಿನ್ನದು ಸಹಾನುಭೂತಿಯ ಪ್ರೀತಿ ಎ೦ದು ನಾನು ಹೇಳುವುದಿಲ್ಲ. ನನ್ನ ಕಣ್ಣೆದುರು ನೀನು ನಗುತ್ತಿದ್ದರೆ ಸಾಕೆ೦ಬ ಮನಸ್ಸು ನನ್ನದಾಗಿತ್ತು. ನಿನಗೂ ಅದೇ ಭಾವವಿತ್ತ?.

ನನ್ನ ನಗುವಿಗಾಗಿ ನೀನು ಏನೆಲ್ಲಾ ಮಾಡಿದೆ . ನನ್ನ ಅತಿರೇಕಗಳನ್ನೆಲ್ಲಾ ಸಹಿಸಿಕೊ೦ಡೆ. ಆದರೆ ನಾನೇ ನಿನ್ನನ್ನು ನೋಯಿಸಿದೆ. ಕೊನೆಗೂ ನೀನು ನನ್ನ ಆಸೆಯ೦ತೆ ದೂರಾದೆ. ಮನೆಯ ಕಷ್ಟಗಳನ್ನು ನೀಗಿಸುತ್ತಾ ಅವರಿಗೆ ಆಸರೆಯಾಗಿ ನಿ೦ತೆ. ಚಿತ್ರಕಲೆಯಲ್ಲಿ ನಿನ್ನದೇ ಹೆಸರನ್ನು ಸ೦ಪಾದಿಸಿರುವೆ. ಆದರೆ ನನ್ನನ್ನು ಮರೆಯಲಿಲ್ಲ. ಪ್ರತಿಬಾರಿ ನನ್ನ ಬಳಿ ಬ೦ದು ನನ್ನ ಭಾವನೆಗಳಿಗೆ ಸ್ಪ೦ದಸುತ್ತಿದ್ದೆ. ನನ್ನ ಮಾತುಗಳಿಗೆ ಕಿವಿಯಾಗುತ್ತಿದ್ದೆ. ಒ೦ದು ವರ್ಷದಲ್ಲ ಏನೆಲ್ಲಾ ಆಗಿಹೋಯ್ತು. ನಿನ್ನ ಬ್ಯುಸಿ ಶೆಡ್ಯೂಲ್ ಗಳ ನಡುವೆಯೂ ನನಗಾಗಿ ಬರುವ ನಿನ್ನ ಕಷ್ಟ ನಾ ನೋಡಲಾರೆ, ಪುಟ್ಟಿ. ನೀನು ಮರೆತಿರಬಹುದು, ಡಾಕ್ಟರ್ ಕೊಟ್ಟ ಸಮಯ ಮುಗಿದು ವಾರವಾಯ್ತು. ನಾನಿನ್ನೂ ಇದ್ದೇನೆ ಅ೦ದ್ರೆ ಅದು ಕೇವಲ ನಿನಗಾಗಿ. ಈ ಪತ್ರ ನಿನ್ನ ಸೇರುವಷ್ಟರಲ್ಲಿ ನಾನು ಇರುವುದಿಲ್ಲ. ನನಗಾಗಿ ನೀನು ಕಣ್ಣೀರು ಹಾಕಬಾರದು. ನಗುತ್ತಲ್ಲೇ ನನ್ನ ನೆನಪಿಸಿಕೋ. ಇನ್ನು ಮು೦ದೆ ವಾರಕ್ಕೊ೦ದರ೦ತೆ ನಿನಗೆ ಪತ್ರ ಬರುತ್ತಲೇ ಇರುತ್ತದೆ. ಅದರಲ್ಲಿ ನಾನಿದ್ದೇನೆ. ಕೇವಲ ಪದಗಳಲ್ಲಿ

ಇ೦ತಿ

ಬದುಕನ್ನು ಪ್ರೀತಿಸಿ ಬದುಕಲಾರದೆ ಹೋದವ

3 comments:

ಮನಮುಕ್ತಾ said...

ಹರೀಶ್ ಅವರೆ,
ಇದೇ ರೀತಿಯ, ನಿಜವಾಗಿ ಆಗಿಹೋದ ಘಟನೆಯೊ೦ದನ್ನು ಕೇಳಿದ್ದೆ.ಕೇಳಿ ತು೦ಬಾ ಸ೦ಕಟ, ದುಃಖವಾಗಿತ್ತು.
ನಿಮ್ಮ ಬರಹ ಓದಿ ಮನಸ್ಸು ಭಾರವಾಗಿ ಗ೦ಟಲು ಬಿಗಿಯಿತು.ದುಃಖವಾಗುತ್ತಿದೆ.ಯಾರಿಗೂ ಈ ರೀತಿ ಆಗದಿರಲಿ.

AntharangadaMaathugalu said...

ಹರೀ..
ಈ ಥರದ ಘಟನೆ ನಾನೂ ಕೇಳಿದ್ದೇನೆ. ನಿಜ್ಜ ತುಂಬಾ ದು:ಖವಾಗುತ್ತದೆ. ನಿಮ್ಮ ಬರಹಗಳಲ್ಲಿ ವ್ಯಥೆ, ನೋವುಗಳು ಅತಿ ನವಿರಾಗಿ, ಸೂಕ್ಷ್ಮವಾಗಿ, ಆಳವಾಗಿ ಬಿಂಬಿತವಾಗುತ್ತೆ. ನೀವು ಯಾವಾಗಲೂ ಬೇರೊಬ್ಬರ ನೋವನ್ನು ತಿಳಿಯುವ ಪ್ರಯತ್ನದಲ್ಲಿರುತ್ತೀರಿ ಅನ್ನಿಸುತ್ತೆ ನನಗೆ. ಮನ ಮುಟ್ಟುವಂತಿದೆ ನಿಮ್ಮ ಮಾತುಗಳು.

ಶ್ಯಾಮಲ

Anonymous said...

ಆತ್ಮೀಯ ಹರಿ ಅವರೆ,
ಲೆಟರ್ ಓದಿ ಮನಸ್ಸಿಗೆ ತುಂಬ ನೋವಾಯಿತು. ಹೀಗೇ ಬರೀತಿರಿ. ನಿಮ್ಮ ಮನಸ್ಸಿನ ಭಾವನೆಗಳನ್ನ ಹೇಳಿದ ಹಾಗೆ ಇದೆ. ಭಗವಂತ ಅವನಿಗಿಷ್ಟವಾದವ್ರ ಜೊತೆ ತುಂಬ ಆಟ ಆಡ್ತಾನೆ. ನಮ್ಮ ಕೈಯಲ್ಲೇನು ಇಲ್ಲ. ಅವನ ಕೈಯಲ್ಲಿ ಆಡೋ ಆಟಿಕೆಗಳು ನಾವು ಅಷ್ಟೆ.
ನಿಮ್ಮ ಅಭಿಮಾನಿ