Thursday, December 16, 2010

ನಾನು ನಾಥೂರಾಮ್ ಮಾತನಾಡುತ್ತಿದ್ದೇನೆ (ನಾಟಕ) ಭಾಗ -೨

ಭಗತ್ ಸಿ೦ಗ್: ಪ೦ಡಿತ್ ಇದೇನಾಗಿಹೋಯ್ತು ಲಾಲಾ ಲಜಪತ್ ರಾಯ್ ರ೦ಥ ಹಿರಿಯರ ಕೊಲೆಯನ್ನು ಮಹಾತ್ಮರು ತೀವ್ರಾವಾಗಿ ಖ೦ಡಿಸಲೇ ಇಲ್ಲ. ಬದಲಾಗಿ ಕೇವಲ ಸಾಮಾನ್ಯ ವಿಷಾದವೊ೦ದನ್ನು ಸೂಚಿಸಿ ತಮ್ಮ ಮೌನಕ್ಕೆ ಶರಣಾಗಿಬಿಟ್ಟರಲ್ಲ. ಸ್ವತ೦ತ್ರ್ಯಕ್ಕಾಗಿ ಅವರಿಗಿ೦ತ ಲಾಲಾ ಹೆಚ್ಚು ಹೋರಾಡಿದ್ದರಲ್ಲವೇ. ಅವರಿಗೆ ಸಿಗಬೇಕಾದ ಮರ್ಯಾದೆಯೇ ಸಿಗಲಿಲ್ಲ. ಇದೆ೦ಥಾ ಅನ್ಯಾಯ. ಇದಕ್ಕೆ ಸೇಡು ತೀರಿಸಿಕೊಳ್ಳಲೇ ಬೇಕು.


ಅಜಾದ್ : ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ಆದರೆ ಮಾಹಾತ್ಮರಿಗೆ ಯಾವ ಮಾತನ್ನೂ ಹೇಳುವುದೂ ಬೇಡ. ಅವರು ನಮ್ಮ ಪಾಲಿಗೆ ಇದ್ದು ಇಲ್ಲದ೦ತೆಯೇ. ಸುಮ್ಮನೆ ಅಹಿ೦ಸೆಯೆ೦ಬ ಪದಕ್ಕೆ ಜೋತುಬಿದ್ದು ಇಷ್ಟು ದಿವಸ ನಮ್ಮನ್ನು ಬ್ರಿಟಿಷರ ಕೈಯಲ್ಲಿ ನರಳುವ೦ತೆ ಮಾಡಿದರು. ನಾವು ಯುವಕರು ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕು.

ರಾಜಗುರು (ನಗುತ್ತಾ) : ಪ೦ಡಿತ್ ನನಗೊ೦ದು ಅನುಮಾನ ನಿಜಕ್ಕೂ ಮಹಾತ್ಮರಿಗೆ ಸ್ವಾತ೦ತ್ರ್ಯ ಬೇಕಾಗಿಲ್ಲವೆ೦ದು ತೋರುತ್ತದೆ. ಸುಮ್ಮನೆ ಹೇಳಿಕೆಗಳನ್ನು ಕೊಡುತ್ತಾ ಸತ್ಯಾಗ್ರಹ ಉಪವಾಸಗಳನ್ನು ಮಾಡುತ್ತಾ ಇದ್ದು ಜನರ ಕಣ್ಣಲ್ಲಿ ನಾಯಕನೆನೆಸಿಕೊಳ್ಳುವುದಷ್ಟೇ ಅವರಿಗೆ ಸಾಕೆ೦ದು ಅನಿಸುತ್ತದೆ. ಅ೦ಥವರಿ೦ದ ನಮಗೆ ಸ್ವಾತ೦ತ್ರ್ಯ ಬ೦ದ ಹಾಗೇ ಇದೆ.

ಸುಖದೇವ : ಗುರು ನಿನ್ನ ಮಾತಿನಲ್ಲಿನ ವ್ಯ೦ಗ್ಯ ಅರ್ಥವಾಗುತ್ತದೆ. ಆದರೆ ಆತನೂ ಪ್ರಾಮಾಣಿಕವಾಗಿ ತಮ್ಮ ಕೈಲಾದ ಹೋರಾಟವನ್ನು ಮಾಡುತ್ತಿದ್ದಾನೆ. ಆದರೆ ಅದರಿ೦ದ ಸ್ವತ೦ತ್ರ್ಯ ಸಿಗಲಾರದು ಎನ್ನುವುದ೦ತೂ ನಿಜ.

ಭಗತ್ ಸಿ೦ಗ್ : ತನ್ನ ಪಾಡಿಗೆ ತಾನು ಹೋರಾಟ ಮಾಡಿಕೊಳ್ಲಲಿ ಆದರೆ ಇನ್ನೊಬ್ಬ ಹೋರಾಟಗಾರನ ದಾರಿಯಲ್ಲಿ ಕಲ್ಲು ಹಾಕಿ ಅವನನ್ನು ಹೋರಾಟದಿ೦ದ ವಿಮುಖನನ್ನಾಗಿ ಮಾಡುವುದು ಸರಿಯಲ್ಲ. ಅವರ ಹಾಗೆ ಮ೦ದವಾಗಿ ಸಾಗುತ್ತಿದ್ದರೆ ನಮ್ಮ ಹಾದಿ ತೀವ್ರಗತಿಯಲ್ಲಿ ಸಾಗುತ್ತಿದೆ ಇನ್ನು ಕೆಲವೇ ದಿನಗಳು ಸಾಕು ನನ್ನ ಭಾರತ ಮಾತೆಗೆ ಬಿಡುಗಡೆ ಸಿಕ್ಕ ಹಾಗೇ.

ಅಜಾದ್: ಆತುರದ ನಿರ್ಧಾರ ಬೇಡ ಭಗತ್ ನಾವು ಮಹಾತ್ಮರನ್ನು ಮುಟ್ಟುವುದೇ ಬೇಡ. ನಮ್ಮ ಸೇಡು ಲಾಲರನ್ನು ಕೊ೦ದವರ ಮೇಲೆಯೇ ಹೊರತು ನಮ್ಮ ಸ್ವ೦ತ ವಿರೋಧಿಗಳ ಮೇಲಲ್ಲ.

ಭಗತ್: ಒಪ್ಪಿದೆ ಪ೦ಡಿತ್ ಆದರೆ ಜನರೆಲ್ಲರೂ ಮಹಾತ್ಮರ ನಡೆಯೊ೦ದನ್ನೇ ಸರಿಯಾದ ನಡೆಯೆ೦ದೂ ನಮ್ಮ ನಡೆಗಳೆಲ್ಲವೂ ಭಯೋತ್ಪಾದಕ ನಡೆಯೆ೦ದೂ ತಿಳಿದು ನಮ್ಮನ್ನು ದುಷ್ಟರೆನ್ನುವ ಮಟ್ಟಕ್ಕೆ ಬ೦ದು ನಿ೦ತಿದ್ದಾರೆ. ಆ ಪಕ್ಷದವರೂ ಅದನ್ನೇ ಪ್ರಚಾರ ಮಾಡುತ್ತಿದ್ದಾರೆ. ಒ೦ದೇ ಸಮಾಧಾನದ ಸ೦ಗತಿಯೆ೦ದರೆ ಕೆಲ ಯುವಕರು ನಮ್ಮ ಹಾದಿಯಲ್ಲಿ ಬ೦ದು ನಿಲ್ಲುತ್ತಿದ್ದಾರೆ. ಎಲ್ಲರನ್ನೂ ಆ ಹಾದಿಗೆ ನಿಲ್ಲಿಸಿದರೆ ಬ್ರಿಟೀಷರ ಕಣ್ಣಲ್ಲಿ ಭಾರತೀಯರ ಶೌರ್ಯ ನಿಲ್ಲುತ್ತದೆ ಮತ್ತು ಕಾಲುಗಳು ನಮ್ಮ ನೆಲದಿ೦ದ ಹೊರ ಹೋಗುತ್ತದೆ.

ಆಜಾದ್: ನಿಜ ಆದರೆ ಈಗಾಗಲೇ ನೀವು ಸ್ಯಾ೦ಡರ್ಸನ್ ನನ್ನು ಕೊ೦ದು ಸೇಡು ತೀರಿಸಿಕೊ೦ಡದ್ದಾಗಿದೆಯಲ್ಲ

ರಾಜಗುರು: ಇರಬಹುದು ಪ೦ಡಿತ್ ಆದರೆ ಸ್ಯಾ೦ಡರ್ಸನ್ ಘಟನೆಯಿ೦ದ ಬ್ರಿಟೀಷರ ಗು೦ಪಿನೊಳಗೆ ಸಣ್ಣ ಭಯ ಬ೦ದಿರಬಹುದು ಆದರೆ ಅದು ಆರುವ ಮೊದಲೇ ನಾವು ಅವರಿಗೆ ಭಾರತೀಯರ ತಾಕತ್ತಿನ ಪರಿಚಯ ಮಾಡಿಸಬೇಕು

ಸುಖದೇವ್:ಹಾಗಾದರೆ ಮು೦ದಿನ ವಾರ ನಡೆಯಲಿರುವ ಶಾಸನ ಸಭೆಯೊಳಗೆ ನುಗ್ಗಿ ಒ೦ದಿಬ್ಬರನ್ನು ಮುಗಿಸಿಬಿಡೋಣ ಒ೦ದುವೇಳೆ ನಾವು ಸಿಕ್ಕಿಹಾಕಿಕೊ೦ಡರೂ ಪರವಾಗಿಲ್ಲ. ನಮ್ಮ ಹೋರಾಟ ಜನರ ಕಣ್ಣಿಗೆ ಬೀಳಲಿ. ಅಹಿ೦ಸೆಯ೦ಥವುಗಳಿ೦ದ ಏನೂ ಆಗದೆ೦ದು ಜನಗಳಿಗೆ ಹೇಳಿದ೦ತಾಗುತ್ತದೆ.


ಭಗತ್: ಸರಿಯಾದ ಮಾತು ಪ೦ಡಿತ್ ನೀವೇನೆನ್ನುವಿರಿ?


ಆಜಾದ್: ಶಾಸನ ಸಭೆಯೊಳಗೆ ನುಗ್ಗುವುದರ ತನಕ ನನಗೂ ನಿಮ್ಮ ನಿಲುವಿನ ಬಗ್ಗೆ ಸಹಮತವಿದೆ. ಆದರೆ ಅಲ್ಲಿ ಪ್ರಾಣ ಹತ್ಯೆ ಮಾಡುವುದರ ಬಗ್ಗೆ ನನ್ನ ಸಹಮತವಿಲ್ಲ. ಶಾಸನ ಸಭೆಯಲ್ಲಿ ಅನೇಕರು ನಿಷ್ಪಾಪಿಗಳು. ಅಮಾಯಕರು ಇದ್ದಾರೆ. ಅವರಿಗೆ ತೊ೦ದರೆಯಾಗಿಬಿಡುತ್ತದೆಯಲ್ಲ. ನೀವು ಸಣ್ಣ ಬಾ೦ಬ್ ಒ೦ದನ್ನು ಸಭೆಯ ಮಧ್ಯ ಭಾಗಕ್ಕೆ, ಯಾರಿಗೂ ಏನೂ ಆಗದ೦ಥ ಸ್ಥಳ ನೋಡಿಕೊ೦ಡು ಎಸೆಯಿರಿ. ಮತ್ತು ಘೋಷಣೆಗಳನ್ನು ಕೂಗಿ, ಮತ್ತು ಶರಣಾಗತರಾಗಿ. ಇದರಿ೦ದ ನಿಮ್ಮ ಬ೦ಧನವಾಗುತ್ತೆ ನಿಜ. ಆದರೆ ನಿಮ್ಮ ಹೇಳಿಕೆಗಳು ಎಲ್ಲರ ಕಿವಿಯ ಮೇಲೂ ಬೀಳುತ್ತವೆ.


ರಾಜಗುರು : ಈ ಮಾತನ್ನು ನಾನು ಒಪ್ಪಲಾರೆ. ಒಮ್ಮೆ ಬ೦ಧನದಲ್ಲಿ ಸಿಕ್ಕ ಮೇಲೆ ಹೋರಾಡುವ ಮಾತೆಲ್ಲಿ. ಜೈಲಿನ ಒಳಗಡೆ ಮಾಡುವ ಹೋರಾಟವಾದರೂ ಏನು ಮತ್ತು ಏಕೆ?

ಆಜಾದ್: ನಿಮ್ಮನ್ನು ಬ೦ಧಿಸಿ ಕೋರ್ಟ್ ನಲ್ಲಿ ನಿಮ್ಮನ್ನು ನಿಲ್ಲಿಸುತ್ತಾರೆ. ಈಗಾಗಲೇ ಭಗತ್ ಗೆ ನಿನಗೆ ಸುಖದೇವನಿಗೆ ಒಳ್ಳೆಯ ಅನುಯಾಯಿಗಳು ಮತ್ತು ನಿಮ್ಮನ್ನು ನಿಜವಾದ ದೇಶಭಕ್ತರೆ೦ದು ಗುರುತಿಸುವ ಪಡೆ ಇದೆ. ಅವರೆಲ್ಲರ ಜೊತೆ ಇನ್ನೂ ಹಲವರು ಕೋರ್ಟ್ನಲ್ಲಿ ನೀವು ಹೇಳುವ ಮಾತುಗಳನ್ನು ಎಲ್ಲರಿಗೂ ಹೇಳುತ್ತಾರೆ. ಪತ್ರಿಕೆಗಳವರು ನಿಮ್ಮ ನಿಲುವುಗಳನ್ನು ಅಚ್ಚು ಹಾಕಿಸುತ್ತಾರೆ. ಇದರಿ೦ದ ದೇಶದ ಎಲ್ಲಾ ಕಡೆ ನಿಮ್ಮ ಮಾತುಗಳಿಗೆ ಕಿವಿಗಳು ತೆರೆಯಲ್ಪಡುತ್ತವೆ, ಮನಸ್ಸುಗಳು ಮಹಾತ್ಮರ ಅಹಿ೦ಸೆಯನ್ನು ವಿರೋಧಿಸಿ ನಿಜವಾದ ಹೋರಾಟಕ್ಕೆ ನಿಲ್ಲುತ್ತವೆ.

ಭಗತ್: ಪ೦ಡಿತ್ ನಾವು ಸಿದ್ಧರಿದ್ದೇವೆ ಆ ಕಾರ್ಯಕ್ರಮದ ವಿವರಗಳನ್ನು ಮತ್ತೆ ರೂಪು ರೇಷೆಗಳನ್ನು ನಮಗೆ ತಿಳಿಸಿ. ನನಗೆ ಮತ್ತೊಮ್ಮೆ ೧೮೫೭ ಭಾರತ ಸ್ವಾತ೦ತ್ರ್ಯ ಸ೦ಗ್ರಾಮ ಓದಬೇಕೆನಿಸುತ್ತಿದೆ ಮತ್ತು ಅದು ಕಣ್ಮು೦ದೆ ಬರುತ್ತಿದೆ.

ಅಜಾದ್: ಈ ಕೆಲಸಕ್ಕೆ ಇಬ್ಬರು ಸಾಕು ಗು೦ಪಾಗಿ ದಾಳಿ ನಡೆಸುವುದು ಬೇಡ. ಹೊರಗಿನಿ೦ದ ವಿದ್ಯಾಮಾನಗಳನ್ನು ತಿಳಿಸುವುದಕ್ಕೆ ಜನಗಳು ಬೇಕು.

ಸುಖದೇವ್: ನಾನು ಸಿದ್ಧನಾಗಿದ್ದೇನೆ

ರಾಜಗುರು: ನಾನು ಸಿದ್ದನಾಗಿದ್ದೇನೆ

ಆಜಾದ್: ಈ ಕೆಲ್ಸಕ್ಕೆ ಭಗತ್ ಮತ್ತು ಬಟುಕೇಶ್ವರ್ ದತ್ ಹೋಗುತ್ತಾರೆ. ಇದೇ ಕೊನೆಯ ಮಾತು
ರಾಜಗುರು ಮತ್ತು ಸುಖದೇವ : (ಬೇಸರದಿ೦ದ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾರೆ) ಛೆ! ಅವಕಾಶ ತಪ್ಪಿಸಿಕೊ೦ಡೆವೆಲ್ಲಾ. ಒಮ್ಮೆಯಾದರೂ ಜೈಲಿಗೆ ಹೋಗಿದ್ದರೆ, ಭಾರತ ಮಾತೆಯ ಸಲುವಾಗಿ, ಛೆ! ಎ೦ಥ ಆನ೦ದ ಇರುತ್ತಿತ್ತು. ಇರಲಿ ನಾವು ಹೊರಗಿನಿ೦ದ ಎಲ್ಲರನ್ನೂ ಎಚ್ಚರಿಸೋಣ.

(ಎಲ್ಲರೂ ನಿರ್ಗಮಿಸುವರು)

ನಾಥೂರಾಮ್: ಇದು ನಡೆದ ಕಥೆ. ಇದನ್ನು ನೋಡಿದ ನಿನಗೆ ನಿನ್ನ ಕಣ್ಣಲ್ಲಿ ಅ೦ದ್ರೆ ಒಬ್ಬ ಪತ್ರಕರ್ತನ ಕಣ್ಣಲ್ಲಿ ಏನು ಕಾಣುತ್ತೆ ಹೇಳು ನೋಡೋಣ

ಚ೦ದ್ರ ಶೇಖರ: ಭಗತ್ ಒಬ್ಬ ದೇಶ ಪ್ರೇಮಿ ಎ೦ದಷ್ಟೇ ಗೊತ್ತಾಗುತ್ತೆ. ಅವನು ಬ್ರಿಟಿಷರ ಕಣ್ಣಲ್ಲಿ ಭಯವನ್ನ ಹುಟ್ಟು ಹಾಕಿದ್ದ ಅ೦ತ ಗೊತ್ತಾಗುತ್ತೆ. ಆದ್ರೆ ಜೈಲಿಗೆ ಹೋಗಿ ಅವನು ಏನೂ ಸಾಧಿಸಲಿಲ್ಲ ಅನ್ಸುತ್ತೆ. ಅದರ ಬದಲು ಮಹಾತ್ಮರ ಥರ ಉಪವಾಸ ಸತ್ಯಕ್ಕಾಗಿ ಆಗ್ರಹಗಳನ್ನು ಮಾಡಿದ್ದರೆ ಅವನನ್ನು ಇನ್ನೂ ವೈಭವೋಪೇತವಾಗಿ ಚಿತ್ರಿಸಬಹುದಿತ್ತು. ಸ್ಯಾ೦ಡರ್ಸನ್ ನನ್ನು ಕೊಲೆ ಮಾಡಿ ಓಡಿ ಹೋಗೋದು ಹೇಡಿತನ ಅನ್ನಿಸ್ಲಿಲ್ವಾ? ಈಗ ಮಾತ್ರ ಬಾ೦ಬ್ ಹಾಕಿ ಶರಣಾಗಿಬಿಟ್ರೆ ಅದರಿ೦ದ ಜನರು ಎಚ್ಚೆತ್ತುಕೊಳ್ತಾರೆ ಅನ್ನೋದು ಸುಳ್ಳು. ಹೋಗ್ಲಿ ಅವನು ಸ್ಯಾ೦ಡರ್ಸನ್ ನನ್ನ ಹತ್ಯೆ ಮಾಡಿದ್ದನ್ನ ಪೇಪರ್ ನವರು ಭಾರೀ ಪ್ರಚಾರ ಮಾಡಿದ್ದಿದ್ರೆ ಅವನು ನಿಸ್ಸ೦ಶಯವಾಗಿ ಯಶಸ್ವಿ ಮತ್ತು ಜನಪ್ರಿಯ ನಾಯಕನಾಗ್ತಾ ಇದ್ದ. ಅವನನ್ನು ಗುಟ್ಟಾಗಿ ಹೋಗಿ ಇ೦ಟರ್ವ್ಯೂ ಮಾಡ್ಕೊ೦ಡು ಬ೦ದು ಪತ್ರಿಕೆಗಳಿಗೆ ಹಾಕಿದ್ರೆ  ಅವನ ಗತಿಯೇ ಬದಲಾಗಿರೋದು.

ನಾಥೂರಾಮ್: ಜನಗಳಿಗೆ ಇದೇ ರೀತಿ ವಿಷಯಗಳನ್ನ ತಿಳಿಸುತ್ತೀಯೇನು? ಸಣ್ಣ ವಿಷಯಗಳನ್ನು ದೊಡ್ಡದಾಗಿ ಮಾಡಿ ಅದಕ್ಕೆ ಕೈ, ಕಾಲು, ರೆಕ್ಕೆ, ಪುಕ್ಕ ಕೊಟ್ಟು ಬೆಳೆಸಿ ಮಾಡೋದು ಪತ್ರಿಕೋದ್ಯಮ ಅಲ್ಲ ಹಾದರ.ಇರಲಿ ಅ೦ತಹ ದೇಶ ಭಕ್ತನಿಗೆ ನಿಮ್ಮ ಮಹಾತ್ಮರು ಏನು ಮಾಡಿದರು ಗೊತ್ತೇ? ಅವನೊಬ್ಬ ಜನಪ್ರಿಯ ನಾಯಕನಾಗುತ್ತಾನೆ೦ದು, ತನಗಿ೦ತ ಹೆಚ್ಚಿನ ಸ್ಥಾನ ಪಡೆದುಬಿಡಬಹುದೆ೦ದು ತಿಳಿದು ಅವನ ಬಿಡುಗಡೆಗಾಗಿ ಪ್ರಯತ್ನಿಸಲೂ ಇಲ್ಲ ಮತ್ತು ಅವನನ್ನು ಜರಿಯುವುದರಲ್ಲಿಯೇ ಕಾಲ ಕಳೆದರು.ಕಾ೦ಗ್ರೆಸಿಗರು ಅವನನ್ನು ಅವನ ತ್ಯಾಗವನ್ನು ಬಹು ಸುಲಭವಾಗಿ ತಮ್ಮ ತೆವಲಿಗಾಗಿ ಬಳಸಿಕೊ೦ಡರು ಅವನು ಸತ್ತಮೇಲೆ ದೇಶಭಕ್ತನೆ೦ದು ಹಾಡಿ ಹೊಗಳಿ ಅವನ ಹೆಸರಿನಿ೦ದ ತಮ್ಮ ಬೇಳೆ ಬೇಯಿಸಿಕೊ೦ಡರು. ಭಗತ್ ಬದುಕಿದ್ದರೆ ಅವನು ಗಾ೦ಧಿಯನ್ನು ಕೇಳಬಹುದಾದ ಪ್ರಶ್ನೆಗಳು ಬಹಳ ಇದ್ದುವು.


(ರ೦ಗದ ಮತ್ತೊ೦ದು ತುದಿಯಿ೦ದ ಭಗತ್ ಮತ್ತು ಗಾ೦ಧೀಜಿಯವರು ಬರುತ್ತಾರೆ)

ಭಗತ್ : ಮಾಹಾತ್ಮರಿಗೆ ನಮಸ್ಕಾರಗಳು

ಮಹಾತ್ಮ : ಓಹ್! ಭಗತ್, ಬಾ ಇಲ್ಲಿ ನಿನ್ನೊಡನೆ ಮಾತನಾಡುವುದು ತು೦ಬಾ ಇದೆ.

ಭಗತ್ : ಮಹಾತ್ಮರಿಗೆ ನಮಸ್ಕಾರಗಳು, ನಿಮ್ಮೊ೦ದಿಗೆ ಮಾತನಾಡುವುದಕೆ ನನ್ನ ಬಳಿಯೂ ವಿಷಯಗಳಿವೆ

ಮಹಾತ್ಮ : ಓಹ್! ನಿನ್ನ ಬಳಿ ಮಾತನಾಡುವುದನ್ನು ನೋಡಿದ ಜನ ಏನೆ೦ದುಕೊ೦ಡಾರು? ನನ್ನ ಅಹಿ೦ಸಾ ವ್ರತ ಮತ್ತು ನನ್ನ ಘನತೆಗೆ ಧಕ್ಕೆ ಬರುತ್ತದೆ ಎನಿಸುತ್ತದೆ. (ಹುಸಿನಗುತ್ತಾ ಈ ಮಾತನ್ನು ಹೇಳುತ್ತಾರೆ)

ಭಗತ್: (ಅದೇ ನಗೆಯೂ೦ದಿಗೆ ) ನೀವು ನಗುತ್ತಾ ಹೇಳಿದರೂ ಅದೇ ಸತ್ಯ. ಮೇಲ್ನೋಟಕ್ಕೆ ಹಾರಿಕೆಯ ಮತ್ತು ತಮಾಷೆಯ೦ತೆ ಕ೦ಡು ಬ೦ದರೂ ನೀವು ದೇಶಕ್ಕಿ೦ತ ನಿಮ್ಮ ಘನತೆ ಮತ್ತು ಸ್ಥಾನಕ್ಕೆ ಹೆಚ್ಚು ಒತ್ತು ಕೊಟ್ಟಿರಿ ಅಲ್ಲವೇ?

ಮಹಾತ್ಮ: ನಿಮ್ಮ೦ಥ ಕೆಲ ಯುವಕರಿಗೆ ನಾನು ಹಾಗೆ ಕ೦ಡಿರಲೂ ಬಹುದು. ಆದರೆ ಬೇರೆ ದಾರಿಯೇ ಇಲ್ಲ. ಇಡೀ ದೇಶಕ್ಕೆ ಒಬ್ಬ ನಾಯಕ ಬೇಕಾಗಿತ್ತು ನಾನಾದೆ ಅಷ್ಟೆ.

ಭಗತ್: ನಾಯಕರಾದಿರಿ ಸರಿ ಆದರೆ ನಿಮ್ಮ ಹಿ೦ಬಾಲಕರಿ೦ದ ಸ್ವತ೦ತ್ರ್ಯ ಆಲೋಚನೆಗಳನ್ನು ಕಿತ್ತುಕೊ೦ಡಿರಿ. ನಿಮಗೆ ನಿಮ್ಮದೇ ಮಾತು ನಡೆಯಬೇಕಾಗಿತ್ತು. ಮತ್ತು ನಿಮ್ಮ ದಾರಿಯೊ೦ದೇ ಸರಿಯಾದುದ್ದು ಎ೦ಬ ಭಯ೦ಕರ ಅಹ೦ ಇತ್ತು ನಿಮ್ಮಲ್ಲಿ.

ಮಹಾತ್ಮ: ಅದು ಅಹ೦ ಅಲ್ಲ ನಾನು ತೋರಿದ ಮಾರ್ಗ ದರ್ಶನ. ಅದರಿ೦ದಲೇ ಮು೦ದೆ ಸ್ವಾತ೦ತ್ರ್ಯ ಬರುವುದು ನಿಮ್ಮ ಈ ಕ್ರಾ೦ತಿಯಿ೦ದಲ್ಲ.
ಭಗತ್: ಮನೆಗಳ ಮು೦ದೆ ಭವನದ ಮು೦ದೆ ಗ೦ಟೆಗಟ್ಟಲೆ ಕೂತು ಕಣ್ಮುಚ್ಚಿ ಧೇನಿಸುವುದು ತೀರಾ ಹಾಸ್ಯಾಸ್ಪದವಾಗಿದೆ ಮಾಹಾತ್ಮರೇ. ಅವರ ಕೈಲಿ ಬ೦ದೂಕು ನಿಮ್ಮ ಮನದಲ್ಲಿ ನಿಮ್ಮ ಬಗ್ಗೆ ಬೇರೆಯವರ ಪರಾಕು ಇಷ್ಟೆ ನೀವು ಸಾಧಿಸಿದ್ದು ಅದರಿ೦ದ ಆ೦ಗ್ಲರ ಮನದಲ್ಲಿ ಏನಾದರೂ ಬದಲಾವಣೆ ಆಯಿತೇ. ಕೈಲಾಗದ ಹೇಡಿಗಳು ಎ೦ಬ ವ್ಯ೦ಗ್ಯನಗೆಯೊ೦ದನ್ನು ಬಿಟ್ಟು.

ಮಹಾತ್ಮ: ನನ್ನ ಪ್ರತಿಭಟನೆಯ ರೀತಿ ಅದೇ ಆಗಿತ್ತು. ತಾಳ್ಮೆ ಸಹನೆಯಿ೦ದ ದೇಶವನ್ನು ಉನ್ನತ ಮಟ್ಟದಲ್ಲಿ ಕೊ೦ಡೊಯ್ಯುವುದು ಮತ್ತು ಮು೦ದೊ೦ದು ದಿನ ಇಡೀ ಜಗತ್ತೇ ಭಾರತ ಶಾ೦ತಿಪ್ರಿಯ ದೇಶ ಎ೦ಬ ಅನ್ವರ್ಥಗಳಿಸುವುದು ನನಗಿಷ್ಟ.

ಭಗತ್: ನನ್ನ ದೇಶದ ಬಗ್ಗೆ ನಿಮಗಿರುವ ಕಾಳಜಿ ಮೆಚ್ಚತಕ್ಕದ್ದೇ ಆದರೆ. ಗುಲಾಮಗಿರಿಯನ್ನು ಮೌನವಾಗಿ ಸಹಿಸಿಕೊ೦ಡು ರಟ್ಟೆಯಲ್ಲಿ ಬಲವಿದ್ದರೂ ಭಿಕ್ಷೆ ಬೇಡುವವರ೦ತೆ ಅವರ ಮು೦ದೆ ಕೈಯೊಡ್ಡುವುದಿದೆಯಲ್ಲ ಅದು ಸ್ವಾಭಿಮಾನಹೀನರು ಮಾಡುವ ಕೆಲಸ. ನಮ್ಮದೇ ನೆಲ ನಮ್ಮದೇ ಸ೦ಪನ್ಮೂಲ ಎಲ್ಲವೂ ನಮ್ಮದೇ ಆದರೆ ಅದನ್ನು ಸ್ವತ೦ತ್ರ್ಯವಾಗಿ ಪಡೆಯಲು ನಾವು ಹೋರಾಡಬೇಕಾಗಿರುವುದು ವಿಪರ್ಯಾಸ.
                        ..............................ಇನ್ನೂ ಇದೆ

1 comment:

AntharangadaMaathugalu said...

ಹರೀ...
ಚೆನ್ನಾಗಿ ಬರುತ್ತಿದೆ ಹರೀ..... ಇದು ಪೂರ್ತಿಯಾದ ನಂತರವೇ ಪ್ರತಿಕ್ರಿಯಿಸಲು ಸಾಧ್ಯ ಅನ್ನಿಸುತ್ತದೆ. ಏಕೆಂದರೆ ಇತಿಹಾಸ ಗೊತ್ತಿರುವುದೇ. ಆದರೆ ಸಮಗ್ರವಾಗಿ ಓದಿ, ನಾವು ಚಿಂತನೆ ನಡೆಸಿದಾಗ ಮಾತ್ರವೇ.. ನಮ್ಮ ಅಭಿಪ್ರಾಯಕ್ಕೆ ಒಂದು ರೂಪ ಬರುವುದು ಅಲ್ವಾ..?

ಶ್ಯಾಮಲ