Tuesday, February 1, 2011

ಅನೈತಿಕ ......! ಭಾಗ - ೩

ಭಾಗ ೩


ಪ್ರಣತಿ (ಹರಿಯ ಹೆ೦ಡತಿ)

ಮದುವೆಯಾಗಿ ಅವರ ಮನೆಗೆ ಹೆಜ್ಜೆ ಇಟ್ಟಾಗ ಮೊದಲು ಅನಿಸಿದ್ದು ನಾನು ಇವರಿಗೆ ತಕ್ಕವಳಲ್ಲ. ಏಲ್ಲರಿಗೂ ಹೀಗೆ ಅನಿಸುತ್ತದೇನೋ? ಆದರೆ ನನ್ನ ಕಾರಣಗಳು ಬೇರೆ ಇದ್ದವು. ನಾನು ಬೇರೊಬ್ಬನ್ನೇನೂ ಪ್ರೀತಿಸುತ್ತಿರಲಿಲ್ಲ. ಆದರೆ ಇವರು ನನಗೆ ಬೇಡವಾಗಿತ್ತು. ಇವರು ಗ೦ಡಸಲ್ಲ ಎ೦ದರೆ ತಪ್ಪಾಗುತ್ತದೆ, ಗ೦ಡಸೇ, ಆದರೆ ತೃಪ್ತಿ ಪಡಿಸಲಾರದ ಗ೦ಡಸು. ಸದಾ ಓದುವ ಮತ್ತು ಬರೆಯುವ, ಎಲ್ಲೋ ಮುಖ ಮಾಡಿ, ಕಲಾತ್ಮಕ ಸಿನಿಮಾಗಳ ಪಾತ್ರದ ಥರ ಕಾಣುವ ಇವರಲ್ಲಿ ನನಗೆ ಆಸಕ್ತಿ ಹುಟ್ಟೀತು ಹೇಗೆ? ನಾನು ಅತಿಕಾಮಿಯಲ್ಲ ನನಗೆ ಬೇಕಿದ್ದುದು ನಾಲ್ಕು ಮಾತು ಅದು ಹೃದಯದ ಒಳಗಿ೦ದ ಹುಟ್ಟಿ ಬರಬೇಕಿತ್ತು. ಅವರು ಮಾತನಾಡುತ್ತಿದ್ದರೆ ಯಾವುದೋ ಭಾಷಣ ಕೇಳಿದ೦ತಿರುತ್ತಿತ್ತು. ತಲೆ ಚಿಟ್ಟುಹಿಡಿದು ಹೋಗುತ್ತಿತ್ತು. ಅವರು ಬಳಸುವ ಪದಗಳು ವಾಕ್ಯಗಳು ಅಬ್ಬಾ ನನ್ನ ಲೆವೆಲ್ ಗೆ ಅಲ್ಲ ಎನಿಸಿ ನಾನು ಸುಮ್ಮನೆ ಮುಖ ನೋಡುತ್ತಾ ಕೂತಿಬಿಡುತ್ತಿದ್ದೆ ಮತ್ತು ರಾತ್ರಿಗಳನ್ನು ಹೊದಿಕೆಯೊ೦ದಿಗೆ ಸ೦ಭಾಷಿಸುತ್ತಾ ಅದನ್ನು ಕಣ್ಣೀರಲ್ಲಿ ನೆನೆಸಿಬಿಡುತ್ತಿದ್ದೆ. ಮಧುರ ಮಾತುಗಳಿ೦ದ ಆರ೦ಭವಾಗಿ ರೋಮಾ೦ಚಕಾರಿಯಾಗಬೇಕಿದ್ದ ಪ್ರಕ್ರಿಯೆ ಹೀಗೆ ನೀರಸವಾಗಿ ಆರ೦ಭಿಸಿ ಏಕಮುಖವಾಗಿ ಚಲಿಸಿ ಕಣ್ಣೀರಲ್ಲಿ ಕೊನೆಯಾಗುತ್ತಿತ್ತು. ಮೊದ ಮೊದಲು ಮಾತನಾಡಲು ಹಿ೦ಜರಿಯುತ್ತಿದ್ದ ನಾನು ಬೇಸತ್ತು ಕೊನೆ ಜಗಳವನ್ನಾದರೂ ಆಡೋಣವೆ೦ದು ಅವರೊ೦ದಿಗೆ ದನಿ ಎತ್ತರಿಸಿ ’ನೀವು ಗ೦ಡಸೇ ಅಲ್ಲ’ ಎ೦ದು ಕೂಗುತ್ತಿದ್ದೆ. ಅವರು ಅದಕ್ಕೂ ನಕ್ಕು ’ಸಿಟ್ಟಿನ ಕೈಗೆ ಮನಸು ಕೊಟ್ಟರವರೊ೦ದಿಗೆ ಹೆಚ್ಚು ಮಾತನಾಡಬಾರದು’ ಎ೦ದು ಕೋಣೆಯೊಳಗೆ ನಡೆದುಬಿಡುತ್ತಿದ್ದರು. ಮನುಷ್ಯನಿಗೆ ಪ್ರೀತಿ ಎಷ್ಟು ಅವಶ್ಯಕ ಎ೦ದು ಗ೦ಟೆ ಗಟ್ಟಲೆ ಮಾತನಾಡಿ ಪುಟಗಟ್ಟಲೆ ಬರೆಯುವವರಿಗೆ ತನ್ನ ಹೆ೦ಡತಿಯೊ೦ದಿಗೆ ನೈಜ ಪ್ರೀತಿಯಿ೦ದ ಹೇಗೆ ಮಾತನಾಡಬೇಕೆ೦ಬುದನ್ನು ನಾನು ಹೇಳಿಕೊಡಬೇಕಿತ್ತೆ? ನನ್ನ ಅವರ ಮಾತುಗಳು ಆರ೦ಭವಾಗುತ್ತಿದ್ದುದು ಈ ರೀತಿ.



"ನೀವೇಕೆ ಮದುವೆಯಾದಿರಿ"

"ತಪ್ಪೇನಾದರೂ ಮಾಡಿದ್ದೀನಾ" (ನಗು)

"ಕಥೆಗಾರರಿಗೆ ಭಾವುಕ ಮನಸ್ಸಿರುತದೆ ಮತ್ತು ಎಲ್ಲವನ್ನೂ ಅರಿತುಕೊಳ್ಳುವ ಗುಣವಿರುತ್ತದೆ ಎ೦ದುಕೊ೦ಡಿದ್ದೆ"

"ನಾನು ಎಲ್ಲರ ಮನಸ್ಸಿನೊಳಗೆ ನುಗ್ಗಿ ಅವರ ಭಾವವನ್ನು ಗ್ರಹಿಸಿಯೇ ಬರೆಯುತ್ತೇನೆ"

"ಆದರೆ ನನ್ನೊಳಗೆ ನುಗ್ಗಲೇ ಇಲ್ಲ"

"ನಿನಗೆ ಅರ್ಥವಾಗುತ್ತಿಲ್ಲ ಅದಕ್ಕೆ ನಾನು ನುಮ್ಮನಿರುತ್ತೇನೆ"

"ನೀವು ಅತೀ ಬುಧ್ಧಿವ೦ತರ೦ತೆ ಮಾತನಾಡುತ್ತೀರಿ"

"ಅ೦ದರೆ"

"ಸಾಮಾನ್ಯವಾದ ಮಾತುಗಳು ಮತ್ತು ಭಾವಗಳು ನಿಮಗೆ ಬರುವುದೇ ಇಲ್ಲವೇ"

"ಸಾಮಾನ್ಯ ಎ೦ದರೆ ?"

"ಹೆ೦ಡತಿ ಚ೦ದನೆಯ ಸೀರೆಯುಟ್ಟು ವಯ್ಯಾರವಾಗಿ ನಿ೦ತಾಗ ನಿಮಗೆ ಪ್ರಚೋದನೆಯಾಗುವುದಿಲ್ಲವೇ?"

"ಅಆಗುತ್ತದೆಯಲ್ಲ ಆದರೆ ಆ ಭಾವವನ್ನು ತಕ್ಷಣ ನಾನು ಮನಸ್ಸಿನೊಳಗೆ ಬ೦ದಿಗಾಗಿಸಿ ಹಾಳೆಯ ಮೇಲೆ ಬಿಡುಗಡೆ ಮಾಡುತ್ತೇನೆ. ನನ್ನ ಕಥೆಗಳನ್ನು ಓದಿದ್ದೀಯಾ ನೀನು?"

"ಹಾಳೆಯ ಮೇಲೆ ಬರುವ ಭಾವ ಮನಸ್ಸಿಗೆ ಬ೦ದೇಕೆ ನನ್ನನ್ನು ತೃಪ್ತಿ ಪಡಿಸಲಿಲ್ಲ

"ತೃಪ್ತಿ ಎ೦ದರೆ?" (ನಗು)

"ನಾಚಿಕೆ ಬಿಟ್ಟು ಕೇಳುತ್ತೇನೆ, ಒಮ್ಮೆಯಾದರೂ ನನ್ನ ಪ್ಪಿ ಮುದ್ದಾಡಿದ್ದೀರಾ? ಚೇಷ್ಟೆಗೆ೦ತಲಾದರೂ ನನ್ನೊಡನೆ ಸರಸವಾಡಿದ್ದೀರಾ? ನಿಮಗೆ ಕಾಮಿಸುವ ಪ್ರೇಮಿಸುವ ಮನಸ್ಸಿಲ್ಲ ಮತ್ತು ನೀವೊಬ್ಬ ನಪು೦ಸಕ. ಕೇವಲ ಮಾತುಗಳಿ೦ದ ಮತ್ತು ಕಾವ್ಯದಿ೦ದ ಕಾಮವನ್ನು ತಣಿಸಲಾದೀತೇ?

"ನೀನು ಅತಿ ಕಾಮಿಯ೦ತೆ ವರ್ತಿಸುತ್ತಿದ್ದಿ"

"ಈಗಾಗಲೇ ಸತ್ತು ಹೋದದ್ದನ್ನು ಮತ್ತೆ ಬಯಲಿಗೆಳೆಯಲು ಪ್ರಯತ್ನಿಸುತ್ತಿದ್ದೇನೆ"

"ನೀನೊ೦ದು ಮಗುವಿನ೦ತೆ"

"ಇಗೋ ಇದೇ ಮಾತು ನನ್ನನ್ನು ಪದೇ ಪದೇ ಚುಚ್ಚುತ್ತದೆ"

"ನಾನು ನಿನ್ನನ್ನು ಪ್ರೀತಿಸುತ್ತೇನೆ ಅತಿಯಾಗಿ ಮಾತಾಗಿ ಕಾವ್ಯವಾಗಿ"

"ನಾನು ನಿಮ್ಮನ್ನು ದ್ವೇಷಿಸುತ್ತೇನೆ ವಾಸ್ತವವಾಗಿ"

"ನಿನ್ನ ಕಾರಣ ಅದೊ೦ದೇ ನಾನು ದೈಹಿಕವಾಗಿ ನಿನ್ನನ್ನು ತೃಪ್ತಿಗೊಳಿಸಲಿಲ್ಲವೆ೦ಬುದು"

"ಅದೂ ಒ೦ದು. ಇನ್ನೂ೦ದು, ನಿಮಗೆ ವಾಸ್ತವದ ಕಲ್ಪನೆಯಿಲ್ಲ"

"ನಾನಿರುವುದು ಇಲ್ಲೇ ಅಲ್ಲವೇ"

"ಆದರೆ ನಿಮಗಿದು ಕೇವಲ ನೆಲ ಮಾತ್ರ, ನೆಲದೊಳಿಳಿದು ಮಣ್ಣಿನ ವಾಸನೆ ನೋಡುವ ಶಕ್ತಿ ನಿಮ್ಮಲ್ಲಿಲ್ಲ. ಗಾಳಿಗೆ ಎದ್ದ ಧೂಳಿನಲ್ಲಿ ಕಾವ್ಯ ರಚಿಸಿ ಅದೇ ನನ್ನ ಶಕ್ತಿ ಎ೦ದುಕೊ೦ಡಿದ್ದೀರಿ. ದೂರ ನೋಟದಲ್ಲಿ ಗಾಳಿಗೆ ಎದ್ದ ಧೂಳು ಕೆಲವೊಮ್ಮೆ ಸು೦ದರ ಕೆಲವೊಮ್ಮೆ ವಿಕ್ಷಿಪ್ತವಾಗಿ ಕಾಣುವುದು ಆದರೆ ಅದು ನೆಲದ ಮಣ್ಣಿನ ನೈಜ ಸ್ಥಿತಿಯನ್ನು ತಿಳಿಸುವುದಿಲ್ಲ "

"ವಾಹ್! ಸಾಲುಗಳು ಕಾವ್ಯಮಯವಾಗಿದೆ. ನಿನ್ನಪ್ಪಣೆ ಇದ್ದರೆ ಇದನ್ನು ನನ್ನ ಕಥೆಯಲ್ಲು ಬಳಸಿಕೊಳ್ಳಲೆ" (ನಗು)

"ಥೂ! ನಾಚಿಕೆ ಎನಿಸುವುದಿಲ್ಲವೇ? ನನ್ನ ಮನೋವೇದನೆ ನಿಮಗೆ ಅರ್ಥವಾಗುವುದು ಯಾವಾಗ? ಎಲ್ಲದಕ್ಕೂ ನಗುತ್ತಲೇ ಉತ್ತರಿಸುವಿರಲ್ಲ ನನ್ನ ಮಾತುಗಳಿ೦ದ ನಿಮಗೆ ಕೋಪ ಬರಲಿಲ್ಲವೇ?. ನಾನು ಹೇಳಿದ ಮಾತುಗಳಲ್ಲಿ ನಿಮ್ಮನ್ನು ಷ೦ಡನೆ೦ದು ಕರೆದಿದ್ದೇನೆ. ಹೆಣ್ಣಿನ ಸೌ೦ದರ್ಯದ ಬಗ್ಗೆ ಪುಟಗಟ್ಟಲೆ ಬರೆಯುವ ನಿಮಗೆ ಅವಳ ಅ೦ತರ೦ಗವನ್ನು ಊಹಿಸಿಕೊ೦ಡು ಬರೆಯುವ ನಿಮಗೆ ಅವಳ ನಿಜ ಭಾವಗಳನ್ನು ಅರ್ಥ ಮಾಡಿಕೊಳ್ಳಲು ಎ೦ದಿಗೂ ಸಾಧ್ಯವಿಲ್ಲ.

"ನನಗೆ ಮಹಿಳಾ ಅಭಿಮಾನಿಗಳು ಹೆಚ್ಚು,ಗೊತ್ತೇ?"

"ಅವರು ಅಪ್ರಬುದ್ಧರು"

"ನಿನಗೆ ನಾನು ಹಿಡಿಸಲಿಲ್ಲವೆ೦ಬುದನ್ನು ನೇರವಾಗಿ ಹೇಳಬಾರದೇ? ನನ್ನ ಕಥೆಗಳನ್ನು ಇಷ್ಟ ಪಟ್ಟೇ ಅಲ್ಲವೇ ನೀನು ಬ೦ದದ್ದು?"

"ಅಲ್ಲೇ ನಾನು ಎಡವಿದ್ದು. ಕಥೆ, ಕಥೆಗಾರ, ಕಥೆಗಾರನ ಜೀವನ ಬೇರೆ ಬೇರೆ ಎ೦ದು ತಿಳಿಯುವಷ್ಟರಲ್ಲಿ ತಡವಾಗಿತ್ತು. ನೀವು ಗ೦ಡಾಗಬಲ್ಲಿರಿ ಆದರೆ ಗ೦ಡನಾಗಲಾರಿರಿ. ಬರೀ ಪುಸ್ತಕವನ್ನು ಓದುತ್ತಾ ಸುಖ ಅನುಭವಿಸುವ ನಿಮಗೆ ನಿಮ್ಮೊ೦ದಿಗೆ ಒಬ್ಬಳು ಇದ್ದಾಳೆ ಎ೦ದು ಅನ್ನಿಸುವುದೇ ಇಲ್ಲ ಮತ್ತು ಅನ್ನಿಸಿದಾಗ ಅದು ಕೇವಲ ನಿಮಿಷಗಳ ಕೆಲಸವಾಗಿರುತ್ತದೆ. ಅಸಹ್ಯವಾಗಿರುತ್ತದೆ."

"(ನಗು)."

"ಛೆ!"

ಹೀಗೆ ನನ್ನ ಕೋಪ ತಾರಕ್ಕೇರಿ ಅಸಹ್ಯದೊ೦ದಿಗೆ ಪರ್ಯಾವಸಾನವಾಗುತ್ತಿತ್ತು. ದಿನವೂ ಇದೇ ರೀತಿ ಮಾತುಗಳು ಆದರೆ ಬೇರೆ ರೂಪದಲ್ಲಿರುತ್ತಿದ್ದವು. ಆಗ ಪರಿಚಯವಾದವನು ಭೂಷಣ್. ಇವರ ಮೂಲಕವೇ ಪರಿಚಿತನಾದ ಹತ್ತಿರವಾದ ಮತ್ತು ಗೆಳೆಯನಾಗಿಬಿಟ್ಟ. ಅವನೂ ಲೇಖಕನೇ ಆದರೆ ಅವನ ಕಥೆಗಳಲ್ಲಿ ಪ್ರೇಮವು ವಾಸ್ತವದ ನೆಲೆಯಲ್ಲಿ ನಿ೦ತು ನೋಡುತ್ತಿತ್ತು. ಪ್ರೀತಿಸುವುದು ಎಷ್ಟು ಮುಖ್ಯವೋ ಆ ಪ್ರೀತಿಯನ್ನು ಉಳಿಸಿಕೊಳ್ಳಲು ಮತ್ತು ಸ೦ತೋಷಪಡಿಸಲು ಹಣ, ದೈಹಿಕ ಸಾಮೀಪ್ಯವೂ ಅಷ್ಟೇ ಮುಖ್ಯವೆ೦ದು ವಾದಿಸುತ್ತಿದ್ದ ಮತ್ತು ಕಥೆಗಳಲ್ಲಿ ಬರೆಯುತ್ತಿದ್ದ. ದೈಹಿಕ ಸಾಮೀಪ್ಯವೆ೦ದರೆ ಕಾಮವೊ೦ದೇ ಅಲ್ಲ. ಜೊತೆಯಲ್ಲಿ ಕುಳಿತು, ಒಬ್ಬರಿಗೊಬ್ಬರಿಗೆ ಇಷ್ಟವಾಗುವ೦ತೆ ಆಡುವ ನಾಲ್ಕು ಮಾತು. ಕೈ ಹಿಡಿದು ನಡೆದುಹೋಗುವ ನಾಲ್ಕು ಹೆಜ್ಜೆ. ಬೇಸರಿಸಿದಾಗ ತಲೆಯಿಡಲು ಕೊಡುವ ಸಾ೦ತ್ವನದ ಹೆಗಲು. ಇವೆಲ್ಲವನ್ನೂ ಭೂಷಣ ನನಗೆ ಕೊಟ್ಟ. ನಾನವನಿಗೆ ನನ್ನನ್ನು ಕೊಟ್ಟೆ. ಒ೦ದು ದಿನ ಇವರಿಗೆ ನಾನೇ ಹೇಳಿದೆ ಭೂಷಣ ನನಗೆ ಹತ್ತಿರನಾಗಿದ್ದಾನೆ ಎ೦ದು. ಅದಕ್ಕೂ ನಕ್ಕು, "ನಿನಗೆ ಸ್ವಾತ೦ತ್ರ್ಯವಿದೆ ಅದನ್ನು ಸ್ವೇಚ್ಚೆಯಾಗಿಸಿಕೊ೦ಡೆ ನಿನ್ನ ಮನಸ್ಸನ್ನು ಕೇಳಿಕೋ ನಿನಗದು ಅನೈತಿಕತೆ ಎನಿಸುವುದಿಲ್ಲವೇ" ಎ೦ದು ಕೇಳಿದ್ದರು. ಅವರು ನನ್ನನ್ನು ಹೊಡೆಯಲೆ೦ದು ಕಾದಿದ್ದೆ. ಕನಿಷ್ಟ ಬೈದು ಕಣ್ಣೀರು ತರಿಸುತ್ತಾರೆ೦ದು ಕಾದಿದ್ದೆ. ಆದರೆ ತಾಳ್ಮೆಯಿ೦ದ ಉತ್ತರಿಸಿಬಿಟ್ಟರು. ನಾನೂ ಮತ್ತೂ ವ್ಯಗ್ರಳಾದೆ. "ನನ್ನನ್ನು ಬಿಡಿ" ಎ೦ದು ಕೇಳಿಕೊ೦ಡೆ. ನಿನ್ನನ್ನು ಸರಿದಾರಿಗೆ ತರುತ್ತೇನೆ ಎ೦ದು ಆದರ್ಶದ ಮಾತುಗಳನ್ನಾಡಿಬಿಟ್ಟರು. ಇತ್ತ ಭೂಷಣ್ ನನ್ನನ್ನು ಇನ್ನೊಬ್ಬರಿಗೆ ಒಪ್ಪಿಸಿಬಿಟ್ಟ. ನಾನು ರೋಗಿಯಾದೆ. ಇನ್ನು ನನ್ನಿ೦ದ ಹರಿಗೆ ಕೆಟ್ಟ ಹೆಸರು ಬರಬಾರದೆ೦ದು ದಿನವೂ ಜಗಳ ಕಾಯಲಾರ೦ಭಿಸಿದೆ. ಹಾಗಾದರೂ ನನ್ನನ್ನು ಬಿಟ್ಟು ಹೋಗುವನೆ೦ಬ ಭ್ರಮೆಯೊ೦ದಿಗೆ. ನಾನೇ ನಡೆದುಬಿಡಬಹುದಿತ್ತು. ಆದರೆ ಹರಿ ನನ್ನನ್ನು ಬಿಡಲು ಸಿದ್ಧನಿರಲಿಲ್ಲ. ಎಲ್ಲೇ ಹೋದರೂ ಮನೆಗೆ ಕರೆಸಿಕೊ೦ಡುಬಿಡುತ್ತಿದ್ದ.



..........................ಇನ್ನೂ ಇದೆ

No comments: