Wednesday, March 28, 2012

ಮಾತಾಡು ಗೆಳೆಯ


ಮಾತನಾಡು ಗೆಳೆಯ
ನಿನ್ನ ದನಿ ಕಿವಿಯೊಳಗೆ ತೇಲಿ ಬರಲಿ
ಎದೆಯೊಳಗೆ ಇಳಿದುಬಿಡಲಿ
ಭೋರ್ಗರೆವ ನದಿಯ೦ತಲ್ಲ
ಶಾ೦ತ ಸಾಗರದ೦ತಲ್ಲ
ಧುಮ್ಮಿಕ್ಕುವ ಜಲಧಾರೆಯ೦ತಲ್ಲ
ಹೂವುೊಳಗಿನ ಸ್ನಿಗ್ಧ ಬಣ್ಣದ೦ತೆ
ಮೀಟಿ ನಿ೦ತ ವೀಣೆ ನಾದದ೦ತೆ
ಮಗುವಿನ ಕಣ್ಣಿನ ನಗುವಿನ೦ತೆ

ಮಾತನಾಡು ಗೆಳೆಯ
ನಾ ನಿನ್ನವಳಾಗುವ ಮುನ್ನ
ನೀ ಅಪರಿಚಿತನಾಗುವ ಮುನ್ನ
ನೀನಾಡುವ ಪ್ರತಿ ಶಬ್ಧ
ಕಣ್ಮುಚ್ಚಿ ಕೇಳುತ್ತೇನೆ
ಆತ್ಮದೊಳಗೆ ದೇವನುಡಿ ಇಳಿಸಿಕೊಳ್ವ೦ತೆ
ದೇಗುಲದ ಘ೦ಟೆನಾದಕೆ
ಕಿವಿ ಅರಳಿ ನಿ೦ತ ಹಾಗೆ ನಿ೦ತಿದ್ದೇನೆ
ಆಕಾಶಕೆ ಮೊರೆಯಿಟ್ಟೇನುಪಯೋಗ
ಕಾಣ್ವುದೆಲ್ಲಾ ಅವಕಾಶ
ನಿನ್ನ ರೂಪು ಕಾಣಬೇಕಿದೆ
ದನಿಗೆ ನಾ ದನಿಯಾಗಬೇಕಿದೆ
ಎರಡೇ ಮಾತನಾಡು ಗೆಳೆಯ
ಮಾತು ನಿ೦ತು ಹೋಗುವ ಮುನ್ನ

No comments: