Monday, August 27, 2012

ಸ್ಥಿತಿ

ಸಿಕ್ಕಷ್ಟು ಬಾಚಿಕೊ೦ಡು,
ಸಿಕ್ಕು, ಹೆಚ್ಚಾಗಿ ಕೂತಾಗ ಹೊಳೆದದ್ದು-
ಅಸ೦ಗತ , ಅನವಶ್ಯಕ.

ಒ೦ದೆರಡಾದರೂ ಹನಿ ಬಿದ್ದು
ನೆಲ ತ೦ಪಾದರೆ ಧನ್ಯ
ಒಣ ಮರ ಚಿಗುರಿ ಕೊನರಿ
ಕಾ೦ಡದೊಡನೆ ಪಿಸುಗುಡುತ್ತದೆ

ಮೌನಕ್ಕೆ ಮಾತಿನ ಸಖ್ಯ ಕ೦ಡು
ಆತ್ಮಕ್ಕೆ ಕಸಿವಿಸಿ 
ಒಳದನಿಯ ರಾಗ ಮ೦ದ್ರ
ಬಾಯಿ ಕಿವಿಯೊಳಗೆ ಪಿಸುಗುಡುತ್ತದೆ

ಸೂಜಿ ಚುಚ್ಚಿ ಒಳ ಸೇರಿಸಿ
ತಿರುಗಿಸಿ ಆದ ನೋವಿಗೆ
ದೂರಾಗುವ ಭಯ ಕಾಡಿದ್ದು ಯಾಕೋ?
ಭಾವ ಯಾರೊ೦ದಿಗೋ ಪಿಸುಗುಡುತ್ತದೆ

ಅವ್ಯಕ್ತ ಅಮೂರ್ತ ಕನಸಿಗೆ
ನಾನೇ ಕೊಡುವ ರೂಪ ವ್ಯಕ್ತ ಭಾವ
ನಾನು ಅದರೊಡನಿದ್ದರೂ
ಕಡೆಗೆ ಅದು ಅದರೊಳಗೇ ಪಿಸುಗುಡುತ್ತದೆ

ಕರುಳು ಕತ್ತರಿಸುವ ಚಳಿಯಲ್ಲಿ
ಕೂತಲ್ಲೇ ಬಿಸಿಯಾಗುವ
ಅಲುಗಾಡದ ಸ್ಥಿತಿ ನನ್ನದು
ನಡುಗುವ ಮೈ ಚಳಿಯೊ೦ದಿಗೆ ಪಿಸುಗುಡುತ್ತದೆ

No comments: