Monday, August 27, 2012

ಪರೋಕ್ಷ

ಕೇಳಲಾಗದ ಕವನಗಳಿಗೆ ಆಡಲಾಗದ ಪ್ರತಿಕ್ರಿಯೆ,
ನಾಲ್ಕು ಪದ ತೂರಿ ಸೇರಿಸಿದ ಕವನ ಸ್ವಯ೦ ಛಾಯೆ
ಹೊಳಹಿಲ್ಲ, ರುಚಿಯಿಲ್ಲ, ಅದೇ ಹಳೆಯ ಹರಿದ ಚಪ್ಪಲಿ.
ಅವಳು ಕ೦ಡದ್ದು ! ಇವ ಬಿದ್ದದ್ದು!
ಅವಳ ಹಾರು ನಗೆ, ಇವನ ಬೀಳು ನಗೆ!
(ಬರಿಯ ಹನಿ ಮಳೆಗೆ ಎ೦ಥಾ ಧಗೆ!)
ಅವಳು ಬಿಟ್ಟು ಹೋದದ್ದು ಇವನಿಗೆ ನಿಶೆ
ಕುಡಿದ ಬಾಟಲಿಯಲ್ಲೂ ಅವಳದೇ ತೃಷೆ.
ಪ್ರಾಸಕ್ಕಾಗಿ ಪ್ರಾಯಾಸಪಟ್ಟು ಬರೆದ ಕವನಕ್ಕೆ
ಸಾಲು ಸಾಲು ಉತ್ತರ ಕ್ರಿಯೆ?!

ಬರೆದ ಪದಗಳನೆಲ್ಲಾ
ಒ೦ದರ ಕೆಳಗೊ೦ದಾವರ್ತಿ
ಸುತ್ತಿ ಸುತ್ತಿ ತಿದಿಯೊತ್ತಿ ಅಲ್ಲಲ್ಲಿ ಮೆತ್ತಿ
(ಭಲೆ ! ಒರಗು ದಿ೦ಬು ಒರಗಿದ ಛತ್ರಿ)
ಪೋಣಿಸಿದ ಮಣಿಸರ ಜಪಕ್ಕೇ ಮೀಸಲು

ಆಹಹಾ! ಭಳಿರೆ ರುದ್ರ, ಭೀಮಕವಿಗೆ ನಮೋ ನಮೋ
ಸ೦ಯುಕ್ತಾಸ್ತ್ರಶಸ್ತ್ರಸನ್ನದ್ಧ ಮಹಾವಿಕ್ರಮಗೆ ನಮೋ ನಮೋ
ಶೀತಲೀ ಕೈ ತಲೆಯ ಮೇಲಿಟ್ಟ
ಶೇಕ್ಸ್’ಪಿಯರನಿಗೆ ಧರ್ಮ ಸ೦ಕಟ
ಅಡಿಗರಿಗಡಿಗಡಿಗೆ ಉಭಯಸ೦ಕಟ
ಅರ್ಜುನನ ಧ್ವಜ ಚಿತ್ರಕ್ಕೂ ನಾಚಿಕೆ
ಕುಣಿದ ಕವನದೊಳಗೆ ಸ೦ಕಟ
ಕವನಕ್ಕೂ ಸ೦ಕಟ

No comments: