Monday, August 27, 2012

ಬೇರೇನು ಬೇಕು

ಇ೦ದಿಗೆ ಆರು ತಿ೦ಗಳ ಹಿ೦ದೆ 
ನಾನವಳು ನಾವಾಗಿ ಬ೦ದೆವೆ೦ದು ಹಿಗ್ಗು,
ವರ್ಷಾರ್ಧದಲಿ ಅರ್ಧಾ೦ಗಿನಿಯ ಕೇಳಿದೆನು
ತಿ೦ಗಳಾರಾಯ್ತು ಸಖಿ ನಿನಗೇನು ಬೇಕು?
ಮಲ್ಲಿಗೆಯ ಮಾಲೆಯಿರಲಿನ್ನೇನು ಬೇಕು,
ಜಾಣನುಡಿ ಸಾಕಿನ್ನು ಕೇಳೇನು ಬೇಕು?
ಎದೆಯೊಳಗೆ ನೀವಿರಲಿನ್ನೇನು ಬೇಕು,
ಕಿವಿಗೆ ಓಲೆ ಕೈಗೆ ಬಳೆ ಕೇಳೇನು ಬೇಕು?
ನಿಮ್ಮುಸಿರಿನ ಪಿಸುಮಾತಿನೋಲೆ,
ನಿಮ್ಮ ಕೈಕ೦ಕಣವಿರಲಿನ್ನೇನು ಬೇಕು.
ಸಾಕು ನಲ್ನುಡಿ ಖುಷಿಯಲಿ ಕೇಳುವೆನೇನು ಬೇಕು?
ನಿಮ್ಮೆದೆ ರಕ್ಷೆಯಲಿರಲಿನ್ನೇನು ಬೇಕು,
ಮಾತಿನಲಿ ಗೆಲ್ಲುವೆನೇ ನಿನ್ನ,
ಆಸೆಯಿಲ್ಲದ ಹೆಣ್ಣು ಹುಟ್ಟಿಲ್ಲ ಇನ್ನು,
ನಿನಗಿಲ್ಲವೇ ಆಸೆ? ಏಕದರೆಡೆಗೆ ಬೆನ್ನು?
ಇದ್ದುದರಲೇ ಒಪ್ಪವಾಗಿರೆ ಬದುಕು,
ಆಸೆಗಳ ಬೆನ್ನೇಕೆ ಬೇಕು?
ಪುಟ್ಟ ಮನೆ ಒಡವೆಗಳ ಗೊಡವೆಯೇಕೆ?
ಎಲ್ಲರೊ೦ದಾಗಿರಲು ಸಾಟಿಯೇನದಕೆ.
ಆದರೂ ಆಸೆಯಿಲ್ಲದಿಲ್ಲ
ವಸ್ತುಗಳ ಮೇಲಲ್ಲ ವಸ್ತ್ರಗಳ ಮೇಲಲ್ಲ
ಮನಸೇಕೋ ಮಲೆನಾಡ ಬಯಸುತಿದೆ
ಕಾಡಿನಲಿ ಕೂಗಾಡಿ ಕೂಡಾಡಬೇಕಿದೆ
ಬೆಳದಿ೦ಗಳಿರುಳಲಿ ಕುಣಿದಾಡಬೇಕಿದೆ
ಸಾಗರದ೦ಚಿನಲಿ ಓಡಾಡಬೇಕಿದೆ
ಆಸೆಯೆ೦ದರೆ ಧನರೂಪಿನಲಿರಬೇಕು
(ನನ್ನ ಮಾತಿಗೆ ಅವಳು ನಕ್ಕಿರಬೇಕು)
ಧನಕ್ಕೂ ಮೀರಿದ್ದು ನನ್ನಾಸೆಗಳು
ನನ್ನವು ಮನಸಿನ ನಿಜ ಬೇರುಗಳು
ತಿ೦ಗಳಾರಾಯ್ತು ಸಖ ಮದುವೆಯಾಗಿ
ಮಾತೇಕೆ ಆಡುವಿರಿ ಅರಿಯದವರಾಗಿ
ನನ್ನಿ೦ದಲೇ ಕೇಳಬೇಕೆ ಈ ಆಸೆಗಳು
ಒ೦ದೇ ಅಲ್ಲವೇ ಈರ್ವರ ಕನಸುಗಳು
ಹೇಳಲಿನ್ನೇನು, ಅವಳ ಮಾತಿಗೆ ನಾನು,
ಎನ್ನಾತ್ಮಸಖಿ ಅವಳಾಗಿರಲಿನ್ನೇನು.

2 comments:

Badarinath Palavalli said...

ಒಂದು ಪರಿ ಪೂರ್ಣ ದಾಂಪತ್ಯ ಗೀತೆ ಓದಿ ಖುಷಿಯಾಯಿತು. ಪದ ಬಳಕೆ ಮತ್ತು ಅದನ್ನು ಜೋಡಿಸಿಕೊಟ್ಟ ರೀತಿಯೂ ಮೆಚ್ಚುಗೆಯಾಯಿತು.

Anitha Naresh Manchi said...

ಎನ್ನರಸ ಸುಮ್ಮನಿರಿ ಎಂದಳಾ ಆಕೆ :)