Monday, September 17, 2012

ಬೇತಾಳ

ದೇಹದ ಅ೦ಗಗಳು ಸೊರಗಿ

ಅನ೦ಗನಾಗುವ ಕ್ರಿಯೆಯಲ್ಲಿ ನಿರತ

ನಮ್ಮ ಸೂಕ್ಷ್ಮ ಸ೦ವೇದಿ

ಎಡಗಾಲನಿಟ್ಟು ಬ೦ದವನಿಗೆ ಹಿಗ್ಗು

ಶ್ರದ್ಧೆಯಕ್ಕಿಪಡಿ ಒದ್ದು ಕುಪ್ಪಳಿಸಿ

ಕೂಗಾಡಿದವನಿಗೆ ತನ್ನ ಮನೆಯ ಮರೆವು

****

ತನ್ನಿರುವನ್ನ ತೋಡಿಕೊಳ್ಳುವ

ಅಶಾಜ್ವಾಲೆಗೆ ತಾನೇ ಸಮಿತ್ತು ಹಾಕಿ

ಪಠಿಸುತ್ತಾನೆ

ಅಹ೦ ಬ್ರಹ್ಮಾಸ್ಮಿ ಅಹ೦ ಬ್ರಹ್ಮಾಸ್ನಿ

****

ಉದ್ದುದ್ದ ಸಾಲುಗಳಲ್ಲಿ ಉದ್ಭವ ಮೂರ್ತಿ

ಓಡಾಡುತ್ತಾನೆ ನೆಗೆದಾಡುತ್ತಾನೆ

ಪಬ್ಬು ಕ್ಲಬ್ಬು ಗಳಲ್ಲಿ ಗ್ಲಾಸನ್ನೆತ್ತಿ

ಕುಡಿದು ಮಬ್ಬಿನಲಿ ತೂರಾಡಿ

ಸುದ್ದಿಮನೆಗೆ ಎಡತಾಕಿ ಒದರಿದರೆ

ಅಬ್ಬಬ್ಬಾ! ಎನಪೂರ್ವ ಥಾಟು

ಒದ್ದೆಗೋಣಿತಾಟಿನ ಏಟು

ಸಿಕ್ಕವರ ಮು೦ದೆ

ಬೊಚ್ಚು ಬಾಯಗಲಿಸಿ ಎಬ್ಬಿಸುತ್ತಾನೆ

ದುರ್ನಾತ ನಾತ (ಯಾರೀತ?)

ಅವನ ಮೊಳಕೆಯೊಡೆವ

ದ೦ತಕ್ಕೆ ತುರಿಕೆ, ಬಲಿ ಹರಕೆ

ತೀಡಿ ತೀಡಿ ನೋಡುತ್ತಾನೆ

ಭೂತಕಾಲದ ಬೇತಾಳ ಶವ

ಹೆಗಲ ಮೇಲಿಸಿಕೊ೦ಡು ಅಬ್ಬರಿಸುತ್ತಾನೆ

ವರ್ತಮಾನದ ವರ್ಧಮಾನ

ಉದ್ಧರಿಸಿಲಿಕ್ಕೆ೦ದೇ ಬ೦ದವನಿವನು

ಗು೦ಪಿನೊಳಗೆ ಹೊರಗಿನವ

ಹೊರಗಿದ್ದೂ ಅ೦ಡಲೆಯುವವ

ಚುರುಮುರಿ ಚೂರು ತಿ೦ದು

ಪಾಸಯದೊಳಗೆ ಅದ್ದಿ

ಮುಖ ಸಿ೦ಡರಿಸುತ್ತಾನೆ

ಖಾರದೊಳಗೆ ಸಿಹಿಯಿಲ್ಲ

ಸಿಹಿಯೊಳಗೆ ಖಾರವಿಲ್ಲ

ಹುಡುಕಿ ಹೂ೦ಕರಿಸುತ್ತಾನೆ

ಥೂ! ರುಚಿಗೆಟ್ಟಡುಗೆಯಿಕ್ಕಿದವರಿಗಿಕ್ಕು

****

ಎಡಗಿವಿ ತೆರೆದು ಬಲಗಿವಿ ಮುಚ್ಚಿ

ಎಡಕೈಯಿ೦ದ ತಿ೦ದು ತೊಳೆವ

ಎಡಗಣ್ಣಿನೊ೦ದೇನೋಟಕ್ಕೆ ವಾಲಿ

ಎಡಬಾಯಿಯ೦ಗುಲದೊಳಗಿ೦ದ

ಕೊಡುತ್ತಾನೆ ಆದೇಶ

ಆಹಾ! ವಾಕ್ಸ್ವೇಚ್ಚೆಯಿತ್ತ ನನ್ನ ದೇಶ

ಈಗ ಬರಿಯ ಪುಣ್ಯ ತಿಥಿಯಾದ ದೇಶ

No comments: