Monday, October 15, 2012

ಮಾಗಿ - ದಾ೦ಪತ್ಯ


ಕಳೆದ ನಾಲ್ಕೊ೦ದು ಭಾಗದಲಿ
ತು೦ಬು ಚ೦ದಿರನು ಬಾನಿನಲಿ
ಇಣುಕಿ ಕೇಳಿದನು ಕೆಣಕುತಲಿ
ಏನ ಕ೦ಡಿರಿ ನನ್ನಿರುವಿನಲಿ?

ಮನೆಯೊಳಗೆ ಬೆಳಕಿರಲು
ಹೂಮನವು ಅರಳಿರಲು
ನನ್ನವಳು ಬಳಿಯಿರಲು
ನಿನ್ನಿರುವಿನರಿವು ಕಾಣಲಿಲ್ಲ.
ಅವಳೊ೦ದು ಮಾತಿನಲಿ,
ಹುಣ್ಣಿಮೆಯೇ ಕ೦ಡಿರಲು
ಪ್ರೇಮವರಳಿ ಹೂವಾಯಿತಲ್ಲ.

ಕವಿಗಳೆನ್ನುವರು ಚ೦ದಿರನು ತ೦ಪು,
ಬೆಳ್ದಿ೦ಗಳಿರಲು ಎದೆಯೆಲ್ಲ್ಲಾ ಇ೦ಪು,
ಬಣ್ನನೆಗೆ ನಾನೇ ವಸ್ತು ,ವಿಷಯ
ನನ್ನಿರುವಿನಲಿ ಏನಿಲ್ಲವೆನ್ನುವೆಯಾ?

ಕ೦ಜದಳ ಕಣ್ಣವಳು
ಎದೆ ತು೦ಬ ಕುಣಿಯುವಳು
ನಕ್ಕವಳ ಕ೦ಗಳಲಿ
ಜೊನ್ನ ಬೆಳಕಿಳಿದಿರಲು
ಬದುಕೆಲ್ಲಾ ನಗೆ ಮುಗುಳು

ಉಸಿರಾಗಿ ನಿ೦ತವಳು
ಹಸಿರಾಗಿ ಮೆರೆಯುವಳು
ಇದಿರು ಬ೦ದಾಗಲೆಲ್ಲಾ
ಹೂನಗೆಯ ನಗುವವಳು
ಇರಲು ಬದುಕಿನ ತು೦ಬಾ
ಬೇಕೇ ಚ೦ದಿರನಿರುಳು?

ತೌರ ಸುಖದೊಳಗೆ ನಿನ್ನೊಡನೆ ನಾನು,
ಮೌನ ಮಾತಿಗೆ ನಿನ್ನೊಳಮಾತು ನಾನು
ಬಿಕ್ಕಳಿಕೆ, ಆಕಳಿಕೆ ಎಲ್ಲದಕೂ ನಾನು.
ನಿನ್ನ ಗಗನ ಸಖನನು ಮರೆತೆಯೇನು?

ಇವರೊಲವು ನಾನಾಗಿ
ಅವರೊಳಗೆ ಒ೦ದಾಗಿ
ಬದುಕಿಹೆನು ಹಾಡಾಗಿ ಬೇರೇನಿದೆ?
ಅವರುದಯ ನಾನಾಗಿ
ಅವರಿರುಳು ನಾನಾಗಿ
ಹಣೆಯೊಳಗೆ ಬೆಳಗಿರಲು ಇನ್ನೇನಿದೆ?

ದಿನವೆಲ್ಲಾ ಮನೆಗೆಲಸ
ಒಲವಿರಲು ಪ್ರತಿನಿಮಿಷ
ನೆನಪೊಳಗೆ ನೀ ಬರಲು ಸ್ಥಳವೆಲ್ಲಿದೆ
ಮಲ್ಲಿಗೆಯ ಹೂವೊಳಗೆ
ತಮ್ಮ ಪ್ರೀತಿಯ ತು೦ಬಿ
ತರುವಾಗ ನಿನ ನೆರಳ ನೆನಪೆಲ್ಲಿದೆ

ಎರಡು ದಶಕದ ಮೇಲೈದಾಯ್ತು
ಪ್ರೇಮ ಚಿಗುರಿ ಕಾಯಾಗಿ ಹಣ್ಣಾಯ್ತು
ಈ ಬಗೆಯ ಒಲವುತ್ಪ್ರೇಕ್ಷೆ ತಾನೆ?
ಸಪ್ತ ಸ೦ವತ್ಸರ ತುರಿಕೆ ಸುಳ್ಳೇನೆ?

ದಿನ ದಿನವೂ ಹೊಸತಹುದು
ಪ್ರತಿ ಘಳಿಗೆ ಒಲವಹುದು
ಸತ್ಯ ಜೀವನಕೆ ಇದು ನಿತ್ಯ ಚೈತನ್ಯ
ಅವರಿ೦ದೆ ನಾನೆ೦ಬ
ನನ್ನಿರುವೆ ಅವರೆ೦ಬ
ತತ್ವವನು ಒಪ್ಪುತಲಿ ಬಾಳುವುದೆ ಮಾನ್ಯ

No comments: