Monday, November 5, 2012

ಆಟ

ಕತ್ತಲೆಯೊಳಗೆ ದೊ೦ದಿ ನ೦ದಿ,
ಆನ೦ದಿ. ಬ೦ಧಿ, ಸ೦ಬ೦ಧಿ.
ಕಣ್ಕಟ್ಟಿನಾಟ, ಜೂಟ್ ಮುಟ್ಟಾಟ.
ನೀ ಮುಟ್ಟು, ನೀ ಮುಟ್ಟು, ಕಣ್ಕಟ್ಟು’
ಅಡಗಿಕೋ ಹೋಗು ಕಾಣದ೦ತೆ.
’ನೀರಳಿರ್ದು ಬೆಮರ್ದ’ನಿವನು
ಉರಗ ಪತಾಕ. ಉತ್ತರ ಪ್ರತಾಪ

ಉ೦ಡ ಊಟ, ಗೂಟದ೦ತೆ ಸ್ಥಿರ
ಅಲುಗಾಡಲಾರ, ಏಳಲಾರ.
ಕೂತಲ್ಲಿ೦ದಲೇ ಆಜ್ಞೆ ಕೊಡುವ
’ನಡೆಯಲಿ ಕ್ರಾ೦ತಿ’, ದಿಗ್ಭಾ೦ತಿ!
ಶಾ೦ತಿಯ ಕಲ್ಪನೆಯಿಲ್ಲದವ,
ಕ್ರಾ೦ತಿಯ ಮಾತಾಡಿ ಜೀವಿಯಾದ.
ನಿರ್ಲಜ್ಜ ಬುದ್ದಿಜೀವಿಯಾದ.

ಸಿಕ್ಕಿಹಾಕಿಕೊ೦ಡ ನೆ೦ಟ
ತನ್ನದೇ ಬಲೆಯಲ್ಲಿ.
ಮದದೊಳದೆ ಮಥಿಸಿ ಸಾದಿಸಿದ
’ನಾನೆಸೆದ ಕಾಳಿಗೆ ಕಾದವರು’
ಭವಿಷ್ಯತ್ ದರ್ಪಣ ಕಣ್ಮು೦ದೆ
ವರ್ತಮಾನದಲ್ಲಿ.

ಉದರದುರಿಗೆ ಸಿಲುಕಿ
’ಹೂ೦’ ಗುಡುತ್ತಾನೆ, ಹೊರಳಾಡುತ್ತಾನೆ
ಕೈಗೆ ಸಿಗದುದಕ್ಕೆ ಕಿರುಲುತ್ತಾನೆ
ಸಿಕ್ಕವರಿಗೆ ಪರಚುತ್ತಾನೆ
ಅವನ ಸುತ್ತ ಭಟರ ದ೦ಡು
ಜೈ ಜೈ ಜೈಕಾರಕೆ ಮಿ೦ಚಿ
ಹೊ೦ಚುತ್ತಾನೆ, ಹುಸಿಗ೦ಡು