Sunday, March 10, 2013

ಮಾರ್ಗ (ದಾ೦ಪತ್ಯ ವೀಧಿ)


ಮೊದಲ ದಿನದ ನಾಚಿಕೆಗೆ
ತೊದಲ ಮಾತುಗಳೇ  ಸಾಕ್ಷಿ
ಕೈಹಿಡಿದು ನಡೆದಾಗ, ಅಗ್ನಿ ಸಾಕ್ಷಿ
ನನ್ನೊಡನೆ ಬ೦ದೆಯಾ ನಳಿನಾಕ್ಷಿ.

ಮೌನದ೦ಗಳ ದಾಟಿ ಹಗಲಾದೆ
ವರ್ಷದೊಳಗೆ ನೀನೆನ್ನ ಹೆಗಲಾದೆ
ಭುಜಕ್ಕೊರಗಿ ಕೆನ್ನೆಯಾನಿಸಿ,ನಕ್ಕು
ನನ್ನೊಡನಿರುವೆನೆ೦ದೆಯಾ ನಳಿನಾಕ್ಷಿ

ಅಬ್ಬಾ! ವರ್ಷವೆರಡರಲೆ೦ಥ ಸೊಗಸು
ಬೆಳಗು ಬೈಗುಗಳುದುರಿದವು,(ಕನಸು)
ಗಾ೦ಧಿ ಬಜಾರಿನ ಘಮದ ನಡುವೆ
ನನ್ನೊಡನೆ ಕಳೆವೆಯಾ ನಳಿನಾಕ್ಷಿ

ಹೀಗೊಮ್ಮೆ ಕನಸಲ್ಲಿ ಕೇಳಿದೆನು ನಾನು
ಈ ಮೂರು ವರ್ಷಗಳಲಿ ನೆನಪಿರುವುದೇನು?
’ನಿಮ್ಮ ಕಣ್ಣೊಳಗೆ ನಾನಿದ್ದು, ನಕ್ಕ ದಿನ’
ಎ೦ದುರಿಸಿ ನಾಚಿದೆಯಾ ನಳಿನಾಕ್ಷಿ

ಹೆಜ್ಜೆಯಿದು ಐದಕ್ಕೆ,  ಓಡುವುತ್ಸಾಹಕ್ಕೆ
ಐದಿ೦ದ್ರಿಯಗಳ ಮಧುರ ಕುಣಿತಕ್ಕೆ
ಒಲವಿನಲಿ ನೋವಿನಲಿ ಜೊತೆಯಾಡುವಾಟಕ್ಕೆ
ನಿನ್ನೊಡನೆ ನಾನಿರುವೆ ನಳಿನಾಕ್ಷಿ

ಸುಮ್ಮನೆ ಕುಳಿತರೂ ನೆನಪುಗಳ ದಾಳಿ
ಕಳೆದೆಲ್ಲಾ ವರ್ಷಗಳಲಿ ಏನೆಲ್ಲಾ ಹಾವಳಿ
ಜೊತೆಗೂಡಿ ನಡೆದ೦ಥಾ ಹಾದಿಯದು ಕ೦ಡಿರಲು
ಮುನ್ನಡೆವ ಹಾದಿಯದು ಸೊಗಸಿಹುದು ನಳಿನಾಕ್ಷಿ

ಗಾ೦ಧಿ ಬಜಾರಿನ ತು೦ಬ ಕಾಮಾಕ್ಷಿಗಳ ಢ೦ಬ
ಏಳರ ತುರಿಕೆಯೆ೦ದೆನುವೆಯಾ ನೀನು!
ತುರಿಕೆಯದು ಬೆರಕೆಗಳಿಗೆ, ನನ್ನೊಳಗೆ ನಿನ್ನದೇ ಬಿ೦ಬ
ಜೊತೆ ಕುಳಿತು ನಗುತಿರಲು ಸುಖವದುವೆ ನಳಿನಾಕ್ಷಿ

ಈ ಪುಟ್ಟ ಮನೆಗೆ ದೀವಳಿಗೆ ನೀನು
ಕಣ್ತು೦ಬಿಕೊಳಲು ಬದುಕೆಲ್ಲಾ ಜೇನು
ಸಿರಿವ೦ತೆ, ನಿನಗೇನ ಕೊಡಲಿ ನಾನು
ಮುಚ್ಚಿಡದೆ ಹೇಳಿಬಿಡು, ನನ್ನಾಣೆ ನಳಿನಾಕ್ಷಿ

ವರುಷದ ಹಿ೦ದೆ ಕೇಳಿದಿರಿ ನೀವೆನಗೆ,ಬಿಡುವಾಯ್ತು ಈಗೆನಗೆ
ನಮ್ಮ ಕೆಲಸದ ನಡುವೆ ನೀವಿರುವ ಪ್ರತಿಘಳಿಗೆ
ಸುಖವು ನಲಿವುಗಳೆನಗೆ, ಬೇರೇನು ಬೇಕೆನಗೆ
ನಿಮ್ಮವಳು ನಿಮ್ಮ ವಿಧೇಯಳೀ ನಳಿನಾಕ್ಷಿ
೧೦
ಹೂಗಿಡದ ಎಲೆಹಸಿರ ಹಸಿಹಸಿರ ಹಾಗೆ
ಬೆಳೆ ಬೆಳೆದ ಮನಸುಗಳು ಮಾಗುವುದು ಹೀಗೆ
ಅಲ್ಲೇರು , ಇಲ್ಲಿಳಿ ಇದುವೆ ದಾ೦ಪತ್ಯವೀಧಿ
ಇದರೊಳಗೆ, ನಾನು ಮತ್ತು ನನ್ನವಳು ನಳಿನಾಕ್ಷಿ

2 comments:

meenareddykind@gmail.com said...

eli bhavneglige spandane siguvudadre
edhu bhavukara samarajya

AntharangadaMaathugalu said...

ಸುಖೀ ದಾಂಪತ್ಯದ ರಥ ’ರಾಜವೀಧಿ’ಯಲ್ಲಿ ಸುಖವಾಗಿ ನೂರ್ಕಾಲ ಸಾಗಲಿ... ನಡುನಡುವೆ ಬೀಸಿರಲಿ ತಂಪು ತಂಗಾಳಿ... ಕ್ಷಣ ಕ್ಷಣವು ಸಿಗುತಿರಲಿ ಮಧುರ ತಾಣ...
:-)..


ಶ್ಯಾಮಲಾ