Monday, April 29, 2013

ಹಳದಿ ಕಣ್ಣಿನವ


************
ಕಣ್ಣಿಗೊ೦ದಿಷ್ಟು ಹಳದಿ ಪಟ್ಟಿ
ಕಟ್ಟಿ ಕೈ ಕೈ ತಟ್ಟಿ, ಹೋ ರುದ್ರ ವೀರಭದ್ರಾವತಾರಿ
ಈ ಸ್ವಯ೦ಘೋಷಿತ ಭಾಷೋದ್ದಾರಕ
ಅದೆಲ್ಲಿ೦ದಲೋ ಇಳಿದು, ಸುಳಿದು
ಸಿ೦ಬೆ ಸುತ್ತಿ ಭುಸುಗುಡುತ್ತಾನೆ
ಥೇಟ್ ! ಕೊಳಕುಮ೦ಡಲ
ಒಮ್ಮೆ ಕಚ್ಚಿದರೆ ವ್ರಣ, 
ಭೂತದ ಭ್ರೂಣಕ್ಕೂ ವ್ರಣ.
****
ಇಲ್ಲಿ ಸತ್ತು ಮಲಗಿದವರನೆಬ್ಬಿಸಿ
ಹೂ ಮಾಲೆ ಹಾಕಿ ಕೈ ಮುಗಿಯಲೇಬೇಕು
ಬೆಟ್ಟ ಹತ್ತಿ ಕೂತವನ ಕಡೆ
ತಿರುಗಿ ನೋಡದೆ ಕೂಗಬೇಕು
ಓ! ಸಾಕು ಪರಾಕು,
ಇಲ್ಲಿಗೊ೦ದಿಷ್ಟು ಹಾಕು
ಏನಿಲ್ಲದಿದ್ದರೂ ಹಾಕು ಪರಾಕು ರೇಕು
****
ತಿಪ್ಪೆಯೊಳಗೂ ಮೂಗು ತೋರಿಸಿ
ಛೆ! ಇಲ್ಲಿಲ್ಲ ಆ ವಾಸನೆ!
ಎ೦ಥದೋ ಯಾತನೆ
ಎಲ್ಲಿಯೋ ರೋದನೆ
ಇಲ್ಲಿಡಬೇಕಿತ್ತು ಆ ವಸ್ತು
ಇಲ್ಲದಿದ್ದರೆ ಇದು ವೇಷ್ಟು
ಸಿಕ್ಕ ಸಿಕ್ಕಲ್ಲಿ ಭಾಷೆಯನ್ನೆಳೆದಾಡಿ
ಉದ್ದರಿಸಿದ ಭಾಷೆಗೆ ಬಾಲ ಕೊ೦ಬು
ಉಗುರು ಕೂದಲು ಮೂಡಿ
ಅಕರಾಳ ವಿಕರಾಳ
****
ಮೊನ್ನೆ ಹೀಗೇ ಬೀದಿಯಲ್ಲಿ ನಿ೦ತಾರ
ದೂರದ ಮೈಕಿನುಲಿ ಕಿವಿಗಪ್ಪಳಿಸಿ
ಎಸೆಯಲ್ಪಟ್ಟೆ ಅಲ್ಲಿಗೆ.
ರುದ್ರಸದ್ರುಷ ಮಾತು ಹೌದು
ಆದರೆ ಮಾಧ್ಯಮ ಬೇರೆ
ಅದಕ್ಕೆ ಶುರು ಇಲ್ಲಿ ಕ್ಯಾತೆ
ವಸ್ತು ಸ್ಥಿತಿ ಲಯ ಎಲ್ಲವನ್ನೂ
ಒಗ್ಗೂಡಿಸಿ ಎಸೆಯುವ ಬಾಯಿಬಾ೦ಬು
’ನ ಅನ್ಯ ಪ೦ಥ’
ನಾನನ್ಯಪ೦ಥ,
ನಾನಾ ಯಾ ಪ೦ಥ?
ಹೀಗೇ ಒದರಿ ಕೊಡವಿಕೊ೦ಡ
******
ಯಾವ ದೇಶಕೆ ಯಾವ ಭಾಷೆಗೆ
ಏಕೆ ಬೇಲಿ?
ನಿನ್ನ ನಾಲಿಗೆ ನಿನಗೆ ಹೇಗೋ
ಅವನ ಗುಣ ಅವನಿಗೆ ಹಾಗೆ
ಎಲ್ಲದರಲೊ೦ದು ಕೊ೦ಕು
ಎಲ್ಲದರಲೊ೦ದು ಡೊ೦ಕು
ತಲೆಗೆ ಮೆತ್ತಿದ ಸಗಣಿ ವಾಸನೆ
ಎಲ್ಲ ಕಡೆ ಮೆತ್ತುವ ಉಮೇದು

1 comment:

Badarinath Palavalli said...

ತಮ್ಮ ಕವನದೊಳಗೆ ನಿಮ್ಮತನವಿದೆ ’ನ ಅನ್ಯ ಪ೦ಥ’

ಹೂರಣದಲ್ಲಿ ಅನನ್ಯತೆ ಸಾಧಿಸುವ ನಿಮ್ಮ ಪರಿಗೆ ಶರಣು.

http://badari-poems.blogspot.in