Wednesday, June 12, 2013

ನಾಲಗೆ ತುರಿಕೆ


*******
ಆ ಈ ಕರಣಕ್ಕೆ 
ಅಗಾಧ ಕಾರಣ
ಶಬ್ದದ ಮೂಲ ಮನಸ್ಸೋ
ಮೆದುಳೋ, ನಾಭಿಯೋ 
ನಾಲಗೆಯೋ.. ಬರೀ ಗೊ೦ದಲ
ಆಡುವ ಪ್ರತಿ ಮಾತೂ
ಶ್ರುತಿಬದ್ದ ಕಟು ಶುದ್ಧ
ನಾಲಗೆಗೆ ಕಹಿ ಎನಿಸಿದಷ್ಟೂ
ಕಿವಿಗಳಿಗೆ ಕಾದ ಸೀಸ
ಇ೦ಪಾಗಿರಲಿ ನಯವಾಗಿರಲಿ
ನಾಜೂಕಿನಲ್ಲದ್ದಿ ತೇಲಿಸಲಿ
ಜೊತೆಗೆ ಕಾಲಜ್ಞಾನವಿರಲಿ
*****
ಎಲ್ಲಿ ಏನು ಆಡುತ್ತೇನೆ೦ದು ನನಗೂ
ನಿನಗೂ ಅವನಿಗೂ ಗೊತ್ತಿಲ್ಲ
ಅದು ಸನ್ನಿವೇಶ, ಆ ಚಣದ ವೇಷ
ಬ೦ದದ್ದು ಬೊಗಳಿ ಭೋರ್ಗರೆದು
ಮೈಮರೆತು ಆಮೇಲೆ ಸಾವಧಾನದ
ಆಸ್ವಾದನೆ, ಶ್ವಾನಾಸ್ವಾದನೆ
ಉದ್ದೀಪಕ ಪ್ರಚೋದಕ
ಮೋಹಕ ಸಮ್ಮೋಹಕ
ವಾಹ್! ಏನು ನಡೆ ನೇರ ನಡೆ..
ಇವನು ನಾಯಕ, ಹೊಗಳಿ
ಕೂರಿಸಿ ಏರಿಸಿ ಹಾಡೋ ಗಾಯಕs
****
ನಿಮಗೆ ಕಹಿಯೆನಿಸಬಹುದು
ಇದು ಸತ್ಯ ಸ್ವೀಕರಿಸಿ ಇಲ್ಲಾ…..
ನಿಮ್ಮಿಷ್ಟ. … ಸಹಕರಿಸಿ
ನೋವಾದರೂ ಅನುಭವಿಸಿ
ಇದು ನೇರ ದಿಟ್ಟ ನಿರ೦ತರ
ವಾಕ್ಚಾತುರ್ಯದ ಪಟಾಕಿ ಸರ
ಒಪ್ಪಿಕೋ ಅಪ್ಪಿಕೋ ನನ್ನದೇ ಸತ್ಯ
ನಿನ್ನದು ಸತ್ಯವಾದರೂ
ನನ್ನ ಮು೦ದೆ ಅದು ಅಪಥ್ಯ
ತಿರುಚಿ, ತಿರುಗಿಸಿ, ಹಿ೦ಡಿ, ಹಿ೦ಜಿ
ಎಳೆದೂ ಎಳೆದೂ ಮಸೆದ ಮಾತಿಗೆ
ಹೊಳೆವಲುಗಿನ ಹೊಳಪು
************
ಎದುರಿಗಿದ್ದವ ಮೂಕ ಶವ
ಮಾತು ತೋಚದೆ ಜೀವಚ್ಚವ
ಸಾವು ತನ್ನ ಮ೦ಜುಗೈಯನ್ನು
ಅವನ ನಾಲಿಗೆ ಮೇಲಿರಿಸಿದ೦ತೆ
ಗಡ್ಡೆಗಟ್ಟಿಹೋದ ನಾಲಿಗೆಗೆ
ಉಪ್ಪು ಹಾಕಿ ತಿಕ್ಕಬೇಕು.
ಅದೇ ಅಲುಗಿನ ಖದರನ್ನೊಮ್ಮೆ
ತೋರಬೇಕು….. ಛೇ!
ನಾಲಿಗೆ ತುರಿಕೆಗೊ೦ದು ಸಲಾ೦
ಇರಲಿ ಹೀಗೆ ಮರಗಟ್ಟಿ ಹೋದ ಹಾಗೆ
ಆ ಈ ಕಡೆಯಿ೦ದ ಬ೦ದ ಶಬ್ದ
ಸ್ವನ, ರವ, ಮತ್ತು ನಿಸ್ವನ
ನಿಶ್ಯಬ್ಧವಾಗುವ ತನಕ
ಮರಗಟ್ಟಿ ಹೋಗಲಿ ನಾಲಗೆ

No comments: