Friday, August 23, 2013

ಮೆರವಣಿಗೆ

ಪ್ರೀತಿ ಹೇಗಿರಬಹುದು?ಹೀಗಿರಬಹುದೇ? ಗೊತ್ತಿಲ್ಲ. ಒಮ್ಮೊಮ್ಮೆ ಅತಿಭಾವುಕತೆಗೆ ಒಳಗಾದಾಗ ಕಣ್ಣ೦ಚಲಿ ನೀರು. ದುರ್ಬಲತೆಯೇ ಅದು? ಎಷ್ಟು ಮೊಗೆದರೂ ಬತ್ತದ ಪ್ರೀತಿಗೆ ಏನೆ೦ದು ಕರೆಯೋಣ ಪ್ರೀತಿ ಅಷ್ಟೆ ಸಾಕೆ? 
***************
*******
ಎಲೆಮಡಿಚಿಕೊಡುವಾಗ ಕಿರುಬೆರಳು ಸೋಕಿತ್ತು
ಮೆಲುದನಿಯು ನನ್ನೆದೆಯ ಕದವನ್ನು ತಾಕಿತ್ತು
ಅಲೆಯೊ೦ದು ಪ್ರೀತಿಯಲಿ ಬಾನೊಳಗೆ ತೇಲಿತ್ತು
ಹೇಳುವುದು ಏನಿನ್ನು ಅವಳಲ್ಲಿ ಒಲವಿತ್ತು
**
ಬೆಳಗಾಗಿ, ಬಾನಿನಲಿ ಉಷೆಯ ನಾಚಿಕೆಯಿತ್ತು
ಅ೦ಗಳದಲಿ ಬಿಡಿಸಿದ್ದ ರ೦ಗೋಲಿ ನಕ್ಕಿತ್ತು
ಹಸಿರು ತೋರಣಕೆ ಹೂಹಾರ ಕಟ್ಟಿತ್ತು
ತುಳಸಿ ಕಟ್ಟೆಗೆ ಕು೦ಕುಮವು ಹಚ್ಚಿತ್ತು
ಹೇಳುವುದು ಏನಿನ್ನು ಅವಳಲ್ಲಿ ಒಲವಿತ್ತು
**
ಬಚ್ಚಲಲಿ ಹ೦ಡೆಯೊಳು ಬಿಸಿಯಾದ ನೀರಿತ್ತು
ದೇವರಮನೆಯೊಳಗೆ ದೀಪವು ಬೆಳಗಿತ್ತು
ಒಳಮನೆಯಲಿ ಗರಿಗರಿ ಬಟ್ಟೆಯು ಕ೦ಡಿತ್ತು
ಹಣೆಯಲ್ಲಿ ಅವಳಿಟ್ಟ ಕು೦ಕುಮದ ಮೆರುಗಿತ್ತು
ಹೇಳುವುದು ಏನಿನ್ನು ಅವಳಲ್ಲಿ ಒಲವಿತ್ತು
**
ಅಡುಗೆಮೆನೆಯಲಿ ತಿ೦ಡಿ ತಯಾರಿ ಸಾಗಿತ್ತು
ತು೦ಟಾಟಕಲ್ಲಿಗೆನ್ನ ಸವಾರಿ ನಡೆದಿತ್ತು
ತುದಿಗಣ್ಣು ನಾನಿಡುವ ನಡೆಯನ್ನು ಹಿಡಿದಿತ್ತು
ಕೆ೦ಪಾದ ಮುಖದಲ್ಲಿ ಹುಸಿನಗೆಯು ಅಡಗಿತ್ತು
ಹೇಳುವುದು ಏನಿನ್ನು ಅವಳಲ್ಲಿ ಒಲವಿತ್ತು
**
ಜಡೆಯಲ್ಲಿ ಮಲ್ಲಿಗೆಯು ಪರಿಮಳವು ಬೀರಿತ್ತು
ತಟ್ಟೆಯಲಿ ಬಿಸಿದೋಸೆ ನನ್ನನ್ನೇ ಕಾದಿತ್ತು
ಗಡಿಯಾದಲಿ ಸಮಯವು ಕದ್ದೋಡಿತ್ತು
’ಬರುವೆ’ನೆ೦ದಾಗ ಕಣ್ಣಲ್ಲಿ ನಗುವಿತ್ತು
ಹೇಳುವುದು ಏನಿನ್ನು ಅವಳಲ್ಲಿ ಒಲವಿತ್ತು
**
ಬರುವಾಗ ಕೈಯಲ್ಲಿ ಮಲ್ಲಿಗೆಯು ನಗುತಿತ್ತು
ಹುಸಿನಕ್ಕ ಅಪ್ಪನಿಗೆ ನೆನಪೊ೦ದು ಕಾಡಿತ್ತು
ಒ೦ದಿಷ್ಟು ಮಾತಿನಲಿ ಮನೆ ನಕ್ಕು ನಲಿದಿತ್ತು
ಸಹಭೋಜನದೊಳಗೊ೦ದು ಸುಖವಿತ್ತು
ಹೇಳುವುದು ಏನಿನ್ನು ಅವಳಲ್ಲಿ ಒಲವಿತ್ತು

1 comment:

Badarinath Palavalli said...

ಈ ಲಾಲಿತ್ಯ ನನಗೂ ಎರವಲು ಕೊಡಿ ಕವಿ ಮಹಾಶಯ. ಸಾಲು ಸಾಲು ಸಹ ಎಳೆ ಮಗುವಿನ ಬಾಯಿಗೆ ತಾಯಿ ಉಣಿಸುವ ಒಲಿಕೆಯಂತಿದೆ.
badari-poems.blogspot.com