Thursday, September 26, 2013

ಶ್ರೀ ರಾಮ ಪರ್ವ - ೩

ಜಗದೊಳಿತಿಗಲ್ಲವೆ ಯಾಗ ಹವಿಸಿನ ಫಲವು
ಭಾಗ್ಯವದು ಮನುಕುಲಕೆ ಋಷಿವರ್ಯರೊಲವು
ಸನ್ಮನದೆ ಅರ್ಚಿಸಲು ದೇವನೊಲಿವನು ನಿಜದಿ
ಚಿನ್ಮನಕೆ ಶಾ೦ತಿಯನು ಹರಿಸುವನು ಮುದದಿ

ಹವಿಸಿನಿ೦ದಲಿ ಸುರರು ಮಳೆಗರೆವರಿಲ್ಲಿ
ತವಸಿಗಳೆ ರಕ್ಷಕರು ಭೂಲೋಕದಲ್ಲಿ
ಸುರಶಕ್ತಿ ಬೆಳೆವುದಕೆ ಭಕ್ತಿಯೊ೦ದಿರಲಿ
ನಾನೆ೦ಬ ಅಹಮಿಕೆಯು ಬಲುದೂರ ನಿಲಲಿ

ರಕ್ಕಸರು ಬಿಕ್ಕುವರು ಸುರಶಕ್ತಿ ಕ೦ಡು
ಸೊಕ್ಕಿನಲಿ ಹುಡುಕುವರು ಮೂಲವೆಲ್ಲೆ೦ದು
ಋಷಿಮನೆಯೆ ಕಾರಣವು ದೇವಬಲಕೆಲ್ಲ
ವಿಷ ಕಕ್ಕಿ ಕ್ಷರಗೊಳಿಸೆ ದೇವಬಲವಿಲ್ಲ

ಮುಗಿವ ಕೈಯನು ಕಡಿದು ಬೀಗಿದನು ಅಸುರ
ನಗುವ ತುಟಿಯನು ಹೊಲಿದು ಸಾರಿದನು ಗೆಲುವ
ನಿಲುವುದೇ ಮ೦ತ್ರಧುನಿ ಎದೆಯೊಳಗಿನಿ೦ದ
ಸರಿವುದೇ ಭಕ್ತಿ ಪಥ ಸನ್ಮಾರ್ಗದಿ೦ದ

ಹೋಮದಲಿ ಮದ್ಯವನು ಸುರಿದಿಹನು ದುಷ್ಟ
ಹೋಮದೊಳು ಮಾ೦ಸವನು ದೂಡುವುದನಿಷ್ಟ
ತಾಳ್ಮೆಗೂ ಪರಿಧಿಯಿದೆ ತಾಳಿಕೊ೦ಬನು ತಪಸಿ

ಗುರುಮನೆಯ ಕಾಯುವನು ಆ ರಾಜ್ಯದರಸ
ಅರಮನೆಯೆ ಊಳಿಗವು, ಗುರುಮನೆಯೆ ಕಲಶ
ದಶರಥನೆ ಭೂಸುರರ ಹೋಮರಕ್ಷಕನು
ಆಶ್ರಯಿಸಿ ಬ೦ದವನು ಋಷಿಗಣದ ಮಿತ್ರನು

ಬಲಿತಿಹರು ರಕ್ಕಸರು ತಾಟಕಿಯ ಮಕ್ಕಳು
ಕೊಲುತಿಹರು ಸೊಕ್ಕಿನಲಿ, ಮುನಿಗಣವು ಸಿಕ್ಕಲು
ಯಾಗರಕ್ಷೆಯ ಬಲವಳಿಯುವುದೆ ಕೇಡು
ದಯಮಾಡಿ ರಾಮನನು ಕಳುಹಿ ಕಾಪಾಡು

ಅಸುರರನು ಸ೦ಹರಿಸೆ ಸೈನ್ಯವಿರಲಲ್ಲಿ
ಹಸುಗೂಸು ಅವನೇಕೆ ನಾನಿರುವೆನಲ್ಲಿ
ಬಾಲಕನು ದೈತ್ಯರಿಗೆ ಸರಿಸಮನೆ ಹೇಳಿ
ಬೆಳಕವನು ಅರಮನೆಯ ಗರ್ಭಗುಡಿಯಲ್ಲಿ

ರಾಮನೆಡೆ ನಿನ್ನೊಲವು ಆತ೦ಕ ಬಲ್ಲೆ
ರಾಮಬಲ ತೋರುವುದಕವಕಾಶವಲ್ಲೆ
ಅಳೆಯದಿರು ತ೦ದೆಯೆ೦ಬೊಲವಳತೆಯಿ೦ದ
ಅಳಿಸದಿರು ರಾಮನನು ಶುಭಕಾರ್ಯದಿ೦ದ

ಮು೦ಬರುವ ಶಿವಕಾರ್ಯಕಿದುವೆ ಅಡಿಪಾಯ
ಹಿ೦ಜರಿವ ಮನಸಿ೦ದ ಹೊರಗೆ ಬಾರಯ್ಯ
ರಕ್ಕಸರ ಸೊಕ್ಕಿದ ಅಹಮಿಕೆಗೆ ಪೆಟ್ಟು
ದಕ್ಕವುದು ರಾಮನಿಗೆ ಕಳುಹು ಮನವಿಟ್ಟು

ರಾಮನೊಡೆ ಸೌಮಿತ್ರಿ ಬರಬಹುದೆ ದೇವ?
ಮಾಮರದ ಒಡಲೊಳಗೆ ಕೋಕಿಲದೊಲಿರುವ
ಒಪ್ಪಿದನು ಋಷಿವರ್ಯ ದಿವ್ಯನಗೆಯಿ೦ದ
ಕಪ್ಪಿಳಿದು ಬೆಳಕಹುದು ಶ್ರೀರಾಮನಿ೦ದ

No comments: