Sunday, June 15, 2014

ವೃತ್ತ ಮತ್ತು ಕೋನ



ಬುದ್ಧಿಯೊಳಗೆ ಒಂದಷ್ಟು ಚಿಂತನೆ
ಅವನಿಗೊಂದಿಷ್ಟು ಕಾಲ ಬೇಕಿದೆ
ಕಿಡಿ ಹಚ್ಚಿ, ಸೂಜಿ ಚುಚ್ಚಿ, ಉಬ್ಬಿಸಿ
ಮೇಲೆಬ್ಬಿಸಿ ಜಡತ್ವವನ್ನು ಒಕ್ಕಲೆಬ್ಬಿಸಿ
ಓಡಲೇ ಬೇಕಿದೆ, ಕಾಡಲೇಬೇಕಿದೆ
ಕಾಡಬೇಕಿದೆ ಕಾಲವನ್ನು.
ನನ್ನೊಳಗಿನ ನಾನನ್ನು ಬಡಿದೆಬ್ಬಿಸಿ
ಹೊರ ನೂಕಿ ಕತ್ತು ಹಿಸುಕಿ, ಹಾ!
ಈಗ ಎದ್ದಿದ್ದೇನೆ ಎಲ್ಲಿಗೋ ಮತ್ತೆಲ್ಲಿಗೋ
ಓಡಿ ಹೋಗಬೇಕಿದೆ.
***
ಮರದ ತುದಿಯೊಳಗೆ ಹಾಡಿ
ಆಗಸದೆತ್ತರ ನೋಡಿ ಸುಮ್ಮನಾದ
ಕೋಗಿಲೆಗೆ ಎಂಥದೋ ಪುಳಕ.
ನೀಲಗಗನದ ಅಂಚಿನಲಿ
ತನ್ನ ದನಿಯದೇ ಬಿಂಬ
ಇರುವೆನೇ ತಾನಲ್ಲಿ? ಹ್ಮ್!
***
ಇರುವಿಕೆ ಇಲ್ಲದಿರುವಿಕೆಯೊಳಗೆ
ಸತ್ಯ ಮತ್ತು ಮಿಥ್ಯದ ಗೋಜಲು
ಹಲವಾರು ಮಜಲುಗಳೊಳಗೆ
ಅವನು, ನಾನು, ಅದು, ಇದು
ಚತುಷ್ಕೋನದೊಳಗೆ ವೃತ್ತ.
ಸುತ್ತಿದಷ್ಟೂ ಒತ್ತು ಮತ್ತು ಸುತ್ತು.
ಬಿಂದು ಮಧ್ಯದಲಿ ವೃತ್ತ, ಸಮದೂರ
ಸಮಚಿತ್ತ. ವೄತ್ತ ನಾನೀಗ ಉನ್ಮತ್ತ.
***
ಕಾಣದ ಕೋಕಿಲ ದನಿಯ ಜಾಡು
ಇಲ್ಲದಿರುವಿಕೆಯೊಳಗೆ ಇರುವ ಪಾಡು
ಅದೋ! ಅಲ್ಲಿ , ಇರಬಹುದೇ ಅದು?
ಬಹುದು. ದನಿ ಅಲ್ಲಿದೆಯಲ್ಲ , ಬಹುದು
ಛಾಪಿದೆ, ಹೊಳಪಿದೆ ನುಣುಪಿದೆ
ಅದೆ ನೆರಳು, ಕೊರಳು, ಕೊಳಲು.
ಉದ್ಭವದಂಚನು ಹುಡುಕಲು ಬೇಕು
ಸದ್ಭಾವದಂಚನು ತುಡುಕಲು ಬೇಕು.
***
ನಾಲ್ಕು ಮೂಲೆಯೊಳಗೆ ಒಂದೊಂದು ಭಾವ
ಅವನು, ನಾನು ಅದು ಇದು.
ಯಾವುದಾವುದೋ ಅದು(?)
ನನ್ನೊಳಗಿನ ನರಕಕೊಂದು ಮುಕ್ತಿ
ಉದ್ಭವದಂಚಿನ ಹೊಳಪಿನ ಶಕ್ತಿ
ಹುಡುಕಾಟದೊಳಗಿನ ಭುಕ್ತಿ.
ಆತ್ಮಾಮೇ ಶುದ್ಧ್ಯಂತಾಂ ಜ್ಯೋತಿರಹಂ
ವಿರಜಾ ವಿಪಾತ್ಮಾ ಭೂಯಾಸಂ

1 comment:

Badarinath Palavalli said...

§ಚತುಷ್ಕೋನದೊಳಗೆ ವೃತ್ತ.
ಸುತ್ತಿದಷ್ಟೂ ಒತ್ತು ಮತ್ತು ಸುತ್ತು.§
ದಿಟವಾದ ಮಾತು ಸಾರ್.
ಒಳ್ಳೆಯ ಕವಿತೆ.