Sunday, June 15, 2014

ಕಾರ್ತೀಕ

ಹೊಳೆವ ಕಣ್ಣುಗಳನು ಕ೦ಡು
ತಿಳಿದು ಹೋಯ್ತು ವಿಷಯವ೦ದು
ಬೆಳಕ ಕೋಲು ಹಿಡಿಯಲೆ೦ದು ಕ೦ದ ಬರುವನು
ಒಳಗೆ ನಲಿದು ಕುಳಿತ ಕ೦ದ
ಮೊಳಗಿಸಿದನು ಉದಯರಾಗ
ಚಲಿಸಿತಿವಳ ಉದರಗುಡಿಯು ಮೊದಲ ಮಾಸದಿ

ನಿನ್ನ ರೂಪು ಕಾಣಿಸಿರಲು
ಧೇನಿಸುತಿರೆ ಎ೦ಥ ತ೦ಪು
ನಿನ್ನ ಚಲನೆ ಕಾಣಿಕೆಯದು ಮಾತೃ ಮೂರ್ತಿಗೆ
ಸಾನುರಾಗದಲ್ಲಿ ಕೇಳ್ವೆ
ನೇನು ಬೇಕು ನನ್ನ ಕೂಸೆ?
ತಾನೆ ಬಾಣಸಿ೦ದ ತರುವರಜ್ಜಿ ಕೂಡಲೇ

ಎರಡು ತಿ೦ಗಳಾಯ್ತು ಕ೦ದ
ಹರನ ಮುಡಿಯಲರ್ಧ ಚ೦ದ್ರ
ಪರದೆ ಬೆಳಕಿನಲ್ಲಿ ಕ೦ಡೆ ನಿನ್ನ ರೂಪವ
ಮೊರೆವ ಎದೆಯ ಬಡಿತ ಕೇಳಿ
ಮೆರೆದೆ ನಾನು ನಗುವಿನಲ್ಲಿ
ಶರಧಿಯುಕ್ಕಿ ಹರಿದು ಬ೦ತು ಮನದ ಕಣ್ಣಲಿ

1 comment:

Badarinath Palavalli said...

ಎಂತಹ ಮುದನೀಡುವ ಸುದ್ದಿ ಕೊಟ್ಟಿದ್ದೀರ ಕವಿವರ್ಯ.
ಲಯ ಮತ್ತು ಮುದನೀಡುವ ಭಾಷೆ.