Wednesday, September 10, 2014

ದೂರಾಗದಿರು ರಾಮ

ದೂರಾಗದಿರು ರಾಮ ಕಾಲ ಚಕ್ರದ ಜೊತೆಗೆ
ನಿನ್ನಡಿಗೆರಗುವೆನು ನೀಡು ಶಕ್ತಿಯನೆನಗೆ

ಸ್ವಾರ್ಥ ಬುದ್ಧಿಯು ತಾನು ಮೆರೆದಾಡಿ ಕುಣಿದಿಹುದು
ಅರ್ಥವದರ್ಥವನು ಕಳೆದುಕೊಳ್ಳುತಲಿಹುದು
ಮೂರ್ತಿಯನು ಕಡೆದಿರುವೆ ಜಗದೊಳಗೆ ಬಿಟ್ಟಿರುವೆ
ಕೀರ್ತಿಯಾಸೆಗೆ ಮೂರ್ತಿ ಸ್ವಾರ್ಥವನೆ ಬಿತ್ತಿರಲು

ನಾನಿಲ್ಲದಿರುತಿಹೆನು ನಾನಿರುವೀಯುಗದಿ
ನಾನತ್ವವೆಲ್ಲರಲಿ ತೊಡೆಯುವೆಯ ನೀನು?
ರಾಮನಾಮವ ಹಾಡಿ ನಾನತ್ವವನು ಕಳೆಯೆ
ಜಗವೆಲ್ಲ ಮುಡಿಬಾಗಿ ನಿನ್ನಡಿಗೆ ಬಾಗಿರಲು

ರಾಮನಾಮದ ದನಿಯು ಪಾಪವನು ಕಳೆದಿರಲು
ಯಾವಸತ್ಯದ ರೂಪ ನನ್ನೆಡೆಗೆ ನಡೆದಿರಲು
ಶಾಪರೂಪದ ಪಾಪಕೆ ನಿನ್ನ ನಾಮವೆ ಸಾಕು
ರಾಮ ರಾಮ ನಿನ್ನ ಗುಣಗಳೆ ಕಂಡಿರಲು

ನಿನ್ನ ಕೀರ್ತಿಯ ಭಜಿಸಿ ಏನ ಕಾಣುತಲಿಹರು
ನಿನ್ನ ನಾಮವ ಹಾಡಿ ಏನ ಕಲಿತಿಹರಯ್ಯ
ಗುಣನಿಧಿಯೆ ನಿನ್ನಡಿಯ ಅಣುಕಣವು ಸೋಕದಿರೆ
ಮನುಜಗೆಲ್ಲಿಯ ಮನವು ಎಲ್ಲಿಯಾ ಗುಣವು

ಬಾರಯ್ಯ ಶ್ರೀರಾಮ ನೀನಾಳಿದೀ ಧರೆಗೆ
ತೋರಯ್ಯ ಲೀಲೆಯನು ಇಳಿಯಳಿಯುವ ಮುನ್ನ
ನೀನಿರುವ ಕಡೆಯೆಲ್ಲಾ ಸತ್ಯವೇ ಆಡಿರಲು
ಮನೆಯೆಲ್ಲ ದೇಗುಲವು ನಿನ್ನಡಿಯು ಸೋಕಿರಲು

ಗುರು ನೀನೆ ಶ್ರೀರಾಮ ಗುರಿ ನೀನೇ ಗುಣಧಾಮ
ಗುರು ನೀನೆ ಓ ಶ್ರೀಮಾತೆ ಗುರಿ ನೀನೆ ಓ ಹನುಮ

1 comment:

Badarinath Palavalli said...

ಮನೆಯನ್ನು ಮಂದಿರವನ್ನಾಗಿಸುವ ಕೀರ್ತನೆಯ ಹೂರಣವು ನೆಚ್ಚಿಗೆಯಾಯಿತು.