Wednesday, September 10, 2014

ತೊಟ್ಟಿಲ ಹಾಡು

ನೀಲಿ ಗಗನದ ತುಂಬ
ಹೊಳೆವ ಚುಕ್ಕಿಯನಾಯ್ದು
ನಿನ್ನ ತೊಟ್ಟಿಲಿಗೆ ಕಟ್ಟುವೆನು
ಮುಗಿಲ ಬಟ್ಟೆಯ ಸುತ್ತಿ’
ನಗುವ ಚಂದ್ರನ ಹತ್ತಿ
ನಗುತ ಮಲಗು ಹಠವೇಕಿನ್ನು?
ಜೋಗುಳವ ಹಾಡುವೆನು
ತೊಟ್ಟಿಲನು ತೂಗುವೆನು
ಮಲಗು ಮುದ್ದಿನ ಹೂಗರಿಯೆ
ಜೋ ಜೋ ಜೋ ಜೋ
ಯಾವ ನದಿಯಂಚಿನಲಿ
ಮಳೆಬಿಲ್ಲು ಮೂಡಿಹುದೋ
ನೋಡಿ ಬಾ ನೀನೊಮ್ಮೆ ಸ್ವಪ್ನದಲ್ಲಿ
ಯಾವ ಸಾಗರದೊಳಗೆ
ಮುತ್ತುಗಳು ಅಡಗಿಹುದೋ
ಹುಡುಕಿ ಆಡಿ ಬಾ ನಿದ್ದೆಯೊಳಗೆ
ಜೋ ಜೋ ಜೋ ಜೋ
ಪುಟ್ಟ ಕಾಲನು ಜೀಕಿ
ಹೊದಿಕೆಯನು ಹೊರ ಹಾಕಿ
ಯಾವ ಕಡೆಗೆ ನಿನ್ನ ಓಟ
ಕುದುರೆ ಹತ್ತಿಹೆಯೇನು
ಮಿಂಚು ಹಿಡಿಯುವೆಯೇನು
ಮಲಗು ಹಾಲ್ದುಟಿಯ ಹೂಮರಿಯೇ

1 comment:

Badarinath Palavalli said...

ಜೋಗುಳದ ಕವನ ಬಲು ಮುದ್ದಾಗಿದೆ.