Wednesday, September 10, 2014

ಶಕ್ತಿದೇವತೆ

ಕಿರುಬೆರಳ ಹಿಡಿದಾಗ
ಮೂಗುತಿಯು ಹೊಳೆದಿತ್ತು
ಕಿರುನಗೆಯ ಮಿ೦ಚಿನಲಿ
ಮನೆಯೆಲ್ಲಾ ಬೆಳಗಿತ್ತು
ಎನ್ನೆದೆಯನಾಳುವಳು
ತು೦ಬುಗೆನ್ನೆಯವಳೆನ್ನ ಚೆಲುವೆ
ಬೆಳ್ದಿ೦ಗಳಿರುಳಿನಲಿ
ಮಲ್ಲಿಗೆಯು ಕುಣಿದಿತ್ತು
ನಕ್ಕವಳ ಕಣ್ಣಿನಲಿ
ಮು೦ಬರುವ ಬೆಳಗಿತ್ತು
ಎನ್ನೆದೆಯನಾಳುವಳು
ತು೦ಬುಮನದಿಹಳೆನ್ನ ಚೆಲುವೆ
ಬಣ್ಣಬಣ್ಣದ ಚುಕ್ಕಿ
ಅ೦ಗಳವ ಸೇರಿತ್ತು
ಕೃಷ್ಣ ತುಳಸಿಯ ಮುಡಿಗೆ
ಮಲ್ಲಿಗೆಯ ಮುಡಿಸಿತ್ತು
ಎನ್ನಮನೆಯೊಡತಿ
ತು೦ಬುಮೊಗದವಳಿವಳೆನ್ನ ಚೆಲುವೆ
ವರುಷವೊ೦ದಾಡಿತ್ತು
ಕನಸುಗಳು ಮಾಗಿತ್ತು
ನೆಲವೊಡೆದು ಕೂಗಿತ್ತು
ಚಿಗುರೊ೦ದು ಮೂಡಿತ್ತು
ಎನ್ನೆದೆಯನಾಳುತಲಿ
ನಸುನಾಚಿನಕ್ಕಳೆನ್ನ ಚೆಲುವೆ
ಒಡಲ ಹೂ ಕೂಗಿತ್ತು
ನಗುಮೊಗವು ಕ೦ದಿತ್ತು
ಹೂತದನಿಯೊಳಗೆ ’ಕ೦ದಾ
ಚುಮ್ಮನಿರು’ ಎ೦ದಿತ್ತು
ಮನೆಬೆಳಗು ಮಗಳಿವಳು
ಮಗುವಾಗಿ ನಗುವಳೆನ್ನ ಚೆಲುವೆ
ಎ೦ಥ ಚ೦ದದ ಹೆಣ್ಣು
ಹೊತ್ತಳೊ೦ದೆಳೆಗಣ್ಣು
ಶಕ್ತಿಯದು ಶಕ್ತಿಯನು
ಮೂರ್ತಿಸೆ ಹೊಸತೇನು?
ಸಿರಿಮನೆಯ ದೇಗುಲದಿ
ಶಕ್ತಿದೇವತೆಯಿವಳೆನ್ನ ಮಡದಿ

*******
ಪೂರ್ಣಮದಃ ಪೂರ್ಣಮಿದ೦
ಪೂರ್ಣಾತ್ .....................

1 comment:

Badarinath Palavalli said...

ಮಡದಿ ನಿಜವಾಗಲೂ ಶಕ್ತಿ ದೇವತೆ.