Wednesday, September 10, 2014

ವಾದಿ - ವಿವಾದಿ

ನೀನೊಮ್ಮೆ ಇಲ್ಲವಾಗಿಬಿಡು
ಎಲ್ಲರಲ್ಲಿಯೂ ಸೇರದ ಎಲ್ಲಿಯೂ ಇರದ ನೀನು
ನೀನೊಮ್ಮೆ ಇಲ್ಲವಾಗಿಬಿಡು
ಯಾರಿಂದಲೋ ಕಿತ್ತು ತಂದ
ಬಳ್ಳಿ ನೆಟ್ಟು ಅದು ಮರವಾಗುವುದನ್ನು
ನೀನು ನೋಡುವ ಮೊದಲು,
ನೀನೊಮ್ಮೆ ಇಲ್ಲವಾಗಿಬಿಡು
ಆ ಗಿಡಕ್ಕೆ ಗೊಂದಲದ ನೀರೆರೆದು
ವಿಚಾರದ ಬೇರನ್ನು ಕಿತ್ತು ಅಲ್ಲೊಂದಿಷ್ಟು
ಹುಸಿ ಪ್ರಗತಿಯ ಗಬ್ಬುನಾರುವ
ಗೊಬ್ಬರವ ಹಾಕಿ ಬೆಳೆಸಿ
(ಕಾಂಗ್ರೆಸ್ ಗಿಡ ಬೆಳೆಯಿತೇ ಗೆಳೆಯ?)
ಒಳ್ಳೆ ಫಸಲನ್ನು ನಿರುಕಿಸು
******************
ತೀಟೆಗೆಂದು ಗೋಡೆಗೆ ತುರಿಸು
ತುರಿಸಿದಷ್ಟು ನಿನಗೆ ಹಿತ ,
ಗಟ್ಟಿ ಗೋಡೆಗೆ ಬಿದ್ದ ಗೆರೆಗಳೇ ನಿನ್ನ ಇರುವು
ದಿನಗಳೆದಂತೆ ಗೋಡೆಗೆ ಸುಣ್ಣ ಬಣ್ಣ
ಪಾಪ! ತುರಿಕೆ ನೀಗದೆ
ಅಲ್ಲಿ ಇಲ್ಲಿ ಸುತ್ತುತ್ತದೆ ಎಡಬಿಡಂಗಿ ಕತ್ತೆ
ಪತ್ರಿಕೆಗಳ ಮೇಯ್ದು ಅದರಲ್ಲೇ ಹೊರಳಾಡಿ
ಒಂದಷ್ಟೂ ವೃತ್ತಿ ಒಳಹೋಗದೆ
ಕತ್ತೆಯುಚ್ಚೆಯುಗುಳುತ್ತಾ ನಿಂತಿದೆ
***********************
ಯುಗ ಧರ್ಮ ಜಗ ಧರ್ಮ,
ನಾಲ್ಕು ಸಾಲು ಗೀಚಿ ಒಗೆದು
ಕವಿ ಪಟ್ಟ ಗಿಟ್ಟಿಸಿ ಲಬೋ
ಎಂದರಚಿದವ ಸಾಹಿತಿ... ಹಿತಿ... ತಿ...
ವಾರಕ್ಕೆ ನಾಲ್ಕೈದು ಬುಕ್ಕು
ಎಲ್ಲಿಂದಲೋ ಬರುವ ಚೆಕ್ಕು ಬುಕ್ಕು
ಪುಂಡ ಕವಿತೆಗೆಳ ಬರೆದ ಪುಂಡ
ಈಗ ವಿಮರ್ಶಕ, ಬಲು ಆಕರ್ಶಕ.
ಅವನು ದಾದಾ, ಇವಳು ದೀದಿ
ಹೊರಳಾಡಿ ಹಾದಿ ಬೀದಿ
ಜ್ಞಾನ, ವಿಜ್ಞಾನ, ಸುವಿಜ್ಞಾನ, ಬೇಜ್ಞಾನ
ಹೊಂದಿಸಿ ಬರೆದದ್ದು ಅದೇ ಹಾಳೆಗಳಲ್ಲಿ
********************
ಅಗೋ! ಅಲ್ಲಿ ಮೆರವಣಿಗೆಗಳ ಸಾಲು
ಕಟ್ಟು ಹರಿದ ಪಂಜುಗಳ ಭೂತ ನರ್ತನ
ಧಿಗ್ಗಿ ಧಿಮಿ ಧಿಮಿ ಧಿಗ್ಗಿ ಧಿಮಿ ಧಿಮಿ
ಇವರುಗಳ ಕುಣಿತಕ್ಕೆ ಪಕ್ಕ ವಾದ್ಯಕ್ಕೊಬ್ಬ
ಪಕ್ಕೆ ಹಿಡಿದು ವಾದಿಸಲೊಬ್ಬ
ಎಷ್ಟೇ ಸರಿಯಿದ್ದರೂ ಅದು ಬೇಸರಿ
ಬೇಸರಿಯ ಎಡಮುರಿ ತಿನ್ನು
ಎಡಗೈ ಎಡಗಣ್ಣು, ಹಸಿ ಹುಣ್ಣು
*********************
ಚಿತ್ರದೊಳಗಿಂದ ಲಂಕೇಶನೂ ನಗುತ್ತಾನೆ
ಅವನಪ್ಪನೂ ನಗುತ್ತಾನೆ.....
ಕೇಕಸಿಯಂತೂ ಕೇಳಲೇ ಬೇಡಿ
ಹೋದ ಕಡೆಯಲ್ಲೆಲ್ಲಾ ಬೇಡುತ್ತಾಳೆ
ಹುಡುಕಿಕೊಡಿ ನನ್ನ ಮಗನ ದೊರಕಿಸಿಕೊಡಿ
ವಿರಾಮಕ್ಕೆಂದು ಕೂತ ರಾಮನಿಗೂ ಇಲ್ಲ ಆರಾಮ
ಕೃಷ್ಣನಿಗಂತೂ ಇನ್ನೂ ನಿಂತೇ ಇಲ್ಲ
ಬಾಣ ತಾಕಿದ ಕಾಲಿನ ರಕ್ತ

1 comment:

Badarinath Palavalli said...

ಅ). ಗೊಂದಲನದ ನೀರೆರೆದು, ನಿರುಕಿಸುವ ಗಿಡಗಳು ಅವು ಕಳೆಯೇ ಕಡೆಗೆ!
ಆ). ಗೋಡೆಯು ಸಹೃದಯಿ. ಕೆರೆತಕ್ಕೆ ಕೊಡುತ್ತದು ಅವಕಾಶ.
ಇ). ನನಗೂ ಇದೇ ಅಚ್ಚರಿ, ಇವರು ಅದು ಹೇಗೆ ಬರೆಯ ಬಲ್ಲರಪ್ಪ ಮಣಗಟ್ಟಲೇ?
ಈ). ಬಲಕ್ಕೆ ಎಡಗಡೆ ಮಿಕ್ಕಿದ್ದು ಇದಕ್ಕೆ ಉಲ್ಟಾ ಆಲೋಚನೆ. ಮೆರವಣಿಗೆಯು ಅಭಾದಿತ.
ಉ). ಈ ಕಿರು ಕವನದ ಹಿಂದೆ ಯಾವುದೋ ತಾಯಿಯ ಅಳಲು ಇದ್ದಂತಿದೆ.