Tuesday, October 7, 2014

ಚತ್ವಾರಿ


ನನಗ್ಯಾವ ವ್ಯಾಧಿಯೂ ಇಲ್ಲ
ನಾನು ದಾಹಿಯೂ ಅಲ್ಲ
ಯಾವುದೋ ಲೋಕದ ಸಾಲುಗಳನ್ನು
ತಲೆಯೊಳಗೆ ತುಂಬಿಸಿಕೊಂಡು
ಬಗಲಿಗೆ ಚೀಲ ಹಾಕಿಕೊಳುವ
ಕೊಳಕು ಮನಸಿನವಳಲ್ಲ.
ಬದುಕು ಸರಳ ಮತ್ತು ಸುಲಭ
ನಿಜ, ಟಿವಿಯಲ್ಲಿ ಬಂದಾಕೆಗೆ
ಕಾಮುಕನ ಕೈಲಿ ಸತ್ತ ಕೂಸಿಗೆ
ಅನ್ಯಾಯವಾಗಿದೆ.
ಧಿಕ್ಕರಿಸುತ್ತೇನೆ ಆ ರಕ್ಕಸತ್ವಕ್ಕೆ
ಎಲ್ಲರೂ ಹಾಗೆಯೇ?.......
ಇರಲಾರರೇ ನನ್ನ ಅಪ್ಪನಂಥವರು
ಹೆಗಲ ಮೇಲೆ ಕೂರಿಸಿ
ಸಾಗರದ ಜಾತ್ರೆಯುದ್ದಕ್ಕೂ
ಹೊತ್ತವರು
ಇರಲಾರರೇ ನನ್ನ ಅಣ್ಣನಂಥವರು
ಓದಲು ಹೇಳಿ ರಾಶಿ ಹೊತ್ತಗೆಗಳ
ತಂದಿತ್ತು, ನನ್ನ ಗೆಲುವಲ್ಲಿ ಕುಣಿದವರು
ಇರಲಾರರೇ ನನ್ನ ತಮ್ಮನಂಥವರು
ನನ್ನ ಬುದ್ಧಿಯನ್ನು ಹೀರಿ
 ನನಗಿಂತ ಎತ್ತರದಲ್ಲಿ ನಿಂತವರು
ಅವರೂ ಇದೇ ಲೋಕದಲ್ಲಿದ್ದಾರಷ್ಟೆ.
ನೋಡುವ ಕಣ್ಣುಗಳಲ್ಲಿದೆ ಜೀವಂತಿಕೆ
********
ಮಹಿಳಾವಾದ, ಸಮಾನತೆಯ ವಾದ
ಯಾವ ಪುರುಷಾರ್ಥಕ್ಕೆ?
ನಮ್ಮೊಳಗನ್ನು ತಿಳಿಯದನಕ
ಕಿರುಚಾಟವೆಲ್ಲವೂ ಹೋರಾಟವೆಂದರೆ
ಮಂಗಾಟವೂ ಹೋರಾಟವೇ
ಅದು ಹೊಟ್ಟೆಗಾಗಿ
ಇದು ಹೊಟ್ಟೆ ಮತ್ತು ಹೆಸರಿಗಾಗಿ
ನಾನು ಅಲ್ಲೆಲ್ಲೋ ನಿಂತು ಕ್ಯಾಂಡಲ್ ಉರಿಸುವುದಿಲ್ಲ
ಗಾರೆ ಕೆಲಸವಳಿಗೆ ನನ್ನ ಬಟ್ಟೆ ನೀಡುತ್ತೇನಷ್ಟೆ
ನಾನು ಮತ್ತೆಲ್ಲೋ ನನ್ನ ಸ್ಟೇಟಸ್ ಹಾಕುವುದಿಲ್ಲ
ಕಸ ಕೊಂಡೊಯ್ಯುವಜ್ಜಿಗೆ ಊಟವಿಡುತ್ತೇನಷ್ಟೆ
ಭೋರ್ಗರೆದು ಜಗಳವಾಡಿ
ಇನ್ಯಾರನ್ನೋ ತಿವಿದು ಕೀರ್ತಿಗಿಟ್ಟಿಸುವುದಿಲ್ಲ
ಮಕ್ಕಳ ಜೊತೆ ಮಾತನಾಡುತ್ತೇನಷ್ಟೆ
ಮತ್ತು ,ನಾನೇ ಇಲ್ಲದ ಅವಳಾಗಿರುತ್ತೇನೆ
ಇವನಕಾಲಂದಿಗೆಯಾಗಿದ್ದೇನೆ
ಶಾಂತಸಾಗರದವರು
ಮೌನವಾಹಿನಿ ನಾವಾಗಿದ್ದೇವೆ

No comments: