Tuesday, October 14, 2014

ಗೆ...

ಹೂವಿನ ಸುಬ್ಬಜ್ಜಿ ಕೇಳಿದಳು ನಿನ್ನೆ
’ಬರುವಳೆಂದು ಮನೆಗೆ, ನಿಮ್ಮ ಮನದನ್ನೆ?’
ಬೇಸರದಿ ನಾ ನುಡಿದೆ ’ತಿಂಗಳ ಕೊನೆಗೆ’
ನಕ್ಕು ನುಡಿದಳು ಅಜ್ಜಿ,’ ಬೇಸರವೆ ನಿಮಗೆ?
ಕೂಸೊಡನೆ ಬರುತಿಹಳು ಬೆಳಕಹುದು ಮನೆಗೆ
ಇರಬಹುದು ಅವಳಲ್ಲಿ ಸಾಗರದ ಜೊತೆಯಲ್ಲಿ
ನಾನಿಲ್ಲಿ ಒಬ್ಬಂಟಿ, ಬೇಯುವೆನು ಮನದಲ್ಲಿ
ನಿಮ್ಮನಗಲಿ ಸುಖದಲಿರಲು ಸಾಧ್ಯವೇ ಸ್ವಾಮಿ
ಅವಸರದಿ ನಡೆಯಲಹುದೆ ಲೋಕದೊಳು ಭೂಮಿ
’ಹೋಗಿ ತಿಂಗಳುಗಳಾಯ್ತು ಮಾತಿಲ್ಲ ಕತೆಯಿಲ್ಲ,
ಪತ್ರವೊಂದರ ದಾರಿ ಕಾಯುತಿಹೆನಲ್ಲ’
’ಹಸಿಮೈಯ ಬಾಣಂತಿ ಬರೆಯುವುದು ತರವೇ?,
ಬೆನ್ನು ನೋವಹುದೇನೋ ದೂರುವುದು ತರವೇ?/
’ಮರೆತಿಹಳೆ ನನ್ನನು ಮಲ್ಲಿಗೆಯ ಬಳ್ಳಿ?,
ಹೇಳಲಾರಳೆ ಮಾತ ಒಂದೆರಡು ಸಾಲಲ್ಲಿ?’
’ದಿನರಾತ್ರಿ ಎದ್ದಿರುವ ನಿಮ್ಮ ಮಗರಾಯ,
ಬಿಡುವನೆ ಆಕೆಗೆ ಅರೆಘಳಿಗೆ ಸಮಯ
ಅವನ ರಾಗಗೆ ತಾನು ಹಾಡುವಳು ಮಿಥಿಲೆ,
ತಪ್ಪಿಯೂ ನುಡಿಯದಿರಿ ಮರೆತಿಹಳು ನಲ್ಲೆ’
’ಮಲ್ಲಿಗೆಯ ದಂಡೆಯಿದು ಅವಳ ಮನದಂತೆ
ಕೊಳ್ಳಿರಿದ, ತಲುಪಿಸಿ ಸಂದೇಶದಂತೆ’
’ಹೋಗಿ ಬರುವೆನು ಸ್ವಾಮಿ ಕೊರಗದಿರು ಇನ್ನು,
ಕೂಸೊಂದು ಬರುತಿಹದು ಮಿಂಚಿರಲಿ ಕಣ್ಣು’

2 comments:

Badarinath Palavalli said...

ಕಾಯುವಿಕೆ ಬಲು ಕಷ್ಟವಲ್ಲವೇ?

Badarinath Palavalli said...

ತೌರ ಸುಖದಲೆನ್ನ ಮರೆತೇನು ಎನ್ನದಿರಿ ಕವಿಯೇ, ಪುಟ್ಟ ಕಂದನ ಕಿಲಕಿಲ ನಗುಗೆ ಸಜ್ಜಾಗಿ.