Friday, October 24, 2014

ಪ್ರ (ಗತಿ) ವರ


ಶಿವನುಧ್ಬವಿಸಿದ
ನಿಶ್ಶಬ್ಧ ರಾತ್ರಿಯಲಿ.
ಓಂ... ಓಂ
ಕೋಲ ನಡೆದುದ್ದು ಅಲ್ಲಿ,
ಕೋಲಾಹಲ ಅವನಲ್ಲಿ,
ಹಾಲಾಹಲ ಅವರಲ್ಲಿ.
ಉಸಿರುಗಟ್ಟಿ ಅಳುತ್ತಾರೆ ಎಡಬಿಡಂಗಿಗಳು...
ಮುಖ ಮೈ ಎಲ್ಲ ನೀಲಿ ನೀಲಿ
ಯಾರೋ ನೆಟ್ಟ ನುಗ್ಗೇಕಾಯಿ ಮರಕ್ಕೆ
ನೇತು ಹಾಕಿಕೊಳ್ಳುವ ಭೂಪರು,
ಕಟ್ಟು ಹರಿದ ಸೂಡಿ ಹಿಡಿದ ಶುಂಭರು,
ಶಾಂತಿಗಾಗಿ ಕೂಗುವ ಅಶಾಂತರು.
*****
ಬುದ್ಧ ನಗೆಯ ಬೀರುವ
ಕ್ಷುದ್ರ ಮನದ ಪುಂಡರು
ಅವರ ಕೋನದೊಳಗಡೆ
ಉರಿವಿಂಗಾಲ ನಿಲುಗಡೆ.
ಮರುಕವೊಂದು ಬಿಡುಗಡೆ
ಓಂ... ನಂ
ಸಿಗಲಿ ದೂರದ ಮುಳುಗುಹಕ್ಕಿ
ಅದರ ಪಾಡಿಗದು ಹಾರಿದರೆ ಚೆನ್ನು
ಹೋಮಹಕ್ಕಿ ಎಂಬ ಹಣೆಪಟ್ಟಿಯಿಲ್ಲದೆ
ಅಂಟಿಸದ ರೆಕ್ಕೆಗಳಿಲ್ಲದೆ
ಹಾರುವ ಹಕ್ಕಿ ದೂರದ ಮುಳುಗು ಹಕ್ಕಿ
ಅದು ಮುಳುಗದು ......
ಓ! ಗುರಿಕಾರ ಬಂದನದೋ!!
ಗುರಿಯಾಗಿಸಿ ಹಿಡಿದ ಬಾಣಕೆ ತುಕ್ಕು
ಹೇಳಿದ್ದನ್ನೇ ಮತ್ತೆ ಮತ್ತೆ ಮುಕ್ಕು
ಅರಚುತ್ತಾನೆ ಕಿರುಚುತ್ತಾನೆ ಗುರಿಕಾರ
ರುಮು ರುಮು ಶಬ್ದಕ್ಕೆ ಅವನ ರಣಗುಣಿತ
ಮತ್ತೊಂದೆಡೆ ಶಾಂತ ಮುಖ ಮುದ್ರಾ ಬುದ್ಧನಗೆ
ಬುದ್ದನಗೆ ಬುದ್ದನೆನಗೆ, ನೆನೆಗುದಿಗೆ...
ಓಂ ಮಂ
ಮೀರುವ ತವಕದಿ ನೋಂತು
ನಿಂತ ಗುರುವಿಗೆ ಮಂಗಳ
ಅಂಗಳ ಅಂಗಾಲಿನ ಕೆಳಗೊಳ
ವ್ರತಿ ಸುವ್ರತಿಗೆ ಮಂಗಳ
ಆ ಈ ಬತ್ತಿ ಹೊಸೆದು ಕೂಡಿಸು
ಊದು ಬತ್ತಿ ಸುಟ್ಟು ಈಬತ್ತಿ ಹಣೆಗೆ ಹಚ್ಚು
ಕ್ರೀಂ ಕ್ರೀಂ ಕೀಚಲಿಗೆ ಈಚಲಿನ ವಾಸನೆ
ಅಂಗಾರಕನ ನೆಲದೊಳಗೆ ಮಂಗಳ
ಓಹೋ! ಶುಚಿರ್ಭೂತ ಪ್ರತಿಭೆಗೆ(?) ಅದಮಂಗಳ
ಎಡಗಡೆ ಕುಜ ಮೇಲೆ ಅಂಗಾರಕ
ಹುಟ್ಟಿದ್ದಕ್ಕೆ ಹೊಟ್ಟಿದ್ದಕ್ಕೆ ಉರಿ ಗೋಲಕ
ಅಕ್ಷತೆಯಕ್ಕಿಕಾಳಾದದ್ದು ಹೀಗೆ
ಓಂ ಶಂ...
ಬೇಂದ್ರೆ ಕುಣಿದರೆ ಅಡಿಗ ನಕ್ಕರೆ
ಉಲ್ಕಾಪಾತ, ಅದರ ಉರಿಗೆ ಉರಿದು ಮತ್ತೆ ಶಮನಕ್ಕೆ
ಅಯುಸಕ್ರೀಮು ಆಯಿಂಟಮೆಂಟು ಹಚ್ಚಿ, ನೆಲಕಚ್ಚಿ
ಚೇತನವಚೇತನವಾಗುಳಿದದ್ದು ಭೂತಕಾಲ.
ಓಂ ವಂ...
ಗಣಪತಿಯ ದಂತಕ್ಕೆ ಏಕಾಂತ
ಒಂದೇ ದಂತಿ ವಂದೇ ದಂತಿ
ವ್ಯಾಸನನುಪಮಕ್ಕೆ ಉಪಮೆ ದಂತಿ
ಈಗ ಅನುಪಮೆ ಹೀನೋಪಮೆ
ಸೂಜಿಗೆ ಕೊಡಲಿ, ಕೊಡಲಿಗೆ ಕಾವು
ವಂದೇ ಶಾಂತಿ, ವಂದೇ ದಂತಿಂ...
ಕೃತಕ ಕವಚಕ್ಕೆ ರೆಕ್ಕೆ ಪುಕ್ಕ
ಹಾರಿ ಬರೆದು , ಛಂಗನೆ ನೆಗೆದು,
ರಾಡಿಯೆಬ್ಬಿಸಿ ಹೊರಟ ಮಂದಿ , ಇಳಾ ಮಹತ್ತು
ಸಾರಿ ಎಬ್ಬಿಸಿದ್ದು ಬಡಕಲು ನರಿ.
ಓಂ ಯಂ...
ಕ್ರಾಂತಿ..... ಹುಯ್ಯಲೆದ್ದು ಕುಣಿದು
ಇಳಿವ ನವ ನವೀನ ಸೂಡಿಗಳು
ಯಮನ ಪ್ರಶ್ನೆಗೆ ಉತ್ತರಿಸ ಹೊರಟವರು
ಸಾವು.... ಕ್ರಾಂತಿ ಯಾವುದು?.. ಯಾರದು?
ವಿಚಾರಿ ... ಅತ್ಯಾಚಾರಿ.. ವಿಕಾರಿ
ಹೆಸರೆತ್ತಿ ಸಿರಿಯಾದದ್ದು ವಿಚಾರ ವಿಕಾರಿ
ಉಂಗುಷ್ಟ ಹರಿದ ಮೆಟ್ಟು ಮೆಟ್ಟಿ
ಕಾಲೆಳೆದು ಎಳೆದೂ ಹೊರಟ ಸವಾರಿ
ಅಂಡಲೆವ ಕೂಗುಮಾರಿ

1 comment:

Badarinath Palavalli said...

ವಿಚಾರಿ ... ಅತ್ಯಾಚಾರಿ.. ವಿಕಾರಿ
ಅದೇ ಅದೇ ಅದೇ...