Friday, October 24, 2014

ಉತ್ತರ


----------
ನಾನಿರುವೆನಿಲ್ಲಿ ನಿಮ್ಮದೇ ನೆನಪಲ್ಲಿ
ಮಾತಿರದ ಮೌನದ ತಿಳಿ ನೀಲಿ ಕೊಳದಲ್ಲಿ
ನಿಮ್ಮನಗಲುವುದು ಬಿಸಿಲಬೇಗೆಯವೊಲ್
ಬೇಯುತಿದೆ ಮನವಿಲ್ಲಿ, ಅಗಲಿಕೆಯ ವಿರಹದಲಿ.
ನೋಡುವೆನು ದಾರಿಯೆಡೆ, ಹೊಸಕೆರೆಯ ನೆರಳಿನೆಡೆ.
ಕಂದನೊಳಮನೆಯಲ್ಲಿ ಕೂಗುವನು ರಾಗದಲಿ
ಮಮತೆಯದುಕ್ಕಿರಲು ಓಡುವೆನು ಮರಳಿ.
ನಾನಿರುವೆನಿಲ್ಲಿ ನಿಮ್ಮದೇ ನೆನಪಲ್ಲಿ
ಮಾತಿರದ ಮೌನದ ತಿಳಿ ನೀಲಿ ಕೊಳದಲ್ಲಿ
ಯಾವ ದೇವನ ಕೃಪೆಯೋ ನನ್ನ ನಿಮ್ಮಯ ಭೇಟಿ
ನಮ್ಮ ಒಲವಿನರ್ಣವಕಿದೆಯೇನು ಸಾಟಿ?
ಇರಬಹುದು ಪ್ರೇಮ ಕಥೆಗಳು ಸಾವಿರಾರು
ನಮ್ಮೊಲವು ಮಕುಟ ಮಣಿ ಚಂದಿರನ ಊರು
ನಾನಿರುವೆನಿಲ್ಲಿ ನಿಮ್ಮದೇ ನೆನಪಲ್ಲಿ
ಮಾತಿರದ ಮೌನದ ತಿಳಿ ನೀಲಿ ಕೊಳದಲ್ಲಿ
ಕಿರುಬೆರಳು ಹಿಡಿದೆನ್ನ ನಡೆಸಿದಿರಿ ನೀವು
ಸ್ವಪ್ನವದು ಇಂದಿಗೂ, ನಾನಂದು ವಧುವು
ನಾಚಿಕೆಯಲಿ ನಗುತಿತ್ತು ಮುಡಿದ ಮಲ್ಲಿಗೆಯು
ಹರಸಿದರು ಹಿರಿಯರು ಇನ್ನೆಲ್ಲಾ ಶುಭವು
ವರ್ಷವದು ಸಂದುದು ಗೊತ್ತಾಗದಂತೆ
ಒಲವಿನಲಿ ಬದುಕೆಲ್ಲ ಜೇನಾಯಿತಂತೆ
ನಾನಿರುವೆನಿಲ್ಲಿ ನಿಮ್ಮದೇ ನೆನಪಲ್ಲಿ
ಮಾತಿರದ ಮೌನದ ತಿಳಿ ನೀಲಿ ಕೊಳದಲ್ಲಿ
ಮನದ ಪರದೆಯ ಹಿಂದೆ ಕಾಣುತಿದೆ ಎಲ್ಲವೂ
ಹೇಳಿಕೊಳುವೆನು ಬನ್ನಿ ನೋವೊಳಗಿನೊಲವು
ಚುಚ್ಚು ಮಾತುಗಳಿಗೆ ಕಿವಿ ಪೂರ್ತಿ ಕೆಪ್ಪೆ
ನೀವಿರಲು ಜೊತೆಯಲ್ಲಿ ಚಂದಿರನು ಕಪ್ಪೆ?
ನಾನಿರುವೆನಿಲ್ಲಿ ನಿಮ್ಮದೇ ನೆನಪಲ್ಲಿ
ಮಾತಿರದ ಮೌನದ ತಿಳಿ ನೀಲಿ ಕೊಳದಲ್ಲಿ
ಒಡಲಲ್ಲಿ ಕುಡಿಯೊಂದು ಆಡಿ ನಗುತಿತ್ತು
ಅತ್ತೆ ಮಾವನ ನಲಿವು ಮೇರೆ ಮೀರಿತ್ತು
ತೌರ ಮನೆಗೆ ನಾ ಸಂತಸದಿ ಹೊರಟೆ
ಮೊಗ್ಗಾದ ನೋವನ್ನು ಮನದಲ್ಲಿ ಮರೆತೆ
ಮೊಗ್ಗರಳಿ ಹೂವಾಗಿ ಕಾಡುತಿದೆ ಈಗ
ಮೌನದಲಿ ಹೇಳುತಿದೆ ಬಂದುಬಿಡುವೆನು ಬೇಗ
ನಾನಿರುವೆನಿಲ್ಲಿ ನಿಮ್ಮದೇ ನೆನಪಲ್ಲಿ
ಮಾತಿರದ ಮೌನದ ತಿಳಿ ನೀಲಿ ಕೊಳದಲ್ಲಿ

No comments: