Friday, October 24, 2014

ಪಯಣಿಗ

ತೆಲುಗಿನ ಮಹಾಕವಿ ಶ್ರೀ ಶ್ರೀ ರವರ ಮಹಾಪ್ರಸ್ಥಾನಂ ಕವನ ಸಂಕಲನದೊಳಗಿನ ’ಬಾಟಸಾರಿ’ ಕವನದ ಭಾವಾನುವಾದ (ಪ್ರಯತ್ನವಷ್ಟೆ)
ಪಯಣಿಗ
*********
ಕೂಲಿಗಾಗಿ ಹೊಟ್ಟೆಪಾಡಿಗೆ
ಪೇಟೆಯಲ್ಲಿ ಬದುಕನರಸಿ...
ತಾಯಮಮತೆಯ ದೂರವಿಟ್ಟು
ದಿನಗಳುರುಳಲು ಕಾಲು ನೋಯಲು
ದಿಕ್ಕು ತೋಚದೆ ನಡೆದು ಹೊರಟ,
ಜಲಧಿ ನಡುವಿನ ದೋಣಿಯಂತೆ
ತೇಲುತಿದ್ದರೂ ದಾರಿ ಸೇರದೆ
ಮುಳುಗದಿದ್ದರೂ ಭಯದೊಳಿರುವ
ಸುಳಿಯಥರದಿ ತಿರುಗುತಿರುವ.....
ಪ್ರಚಂಡ ತಾಪದಿ ದೇಹ ಸುಡಲು
ಭಯದ ನಡುವೆ ಅಳುತಲಿರಲು
ನಿಶೆಗೆ ಸಿಕ್ಕು, ಗಾಳಿಗೊರಗಿ
ಮಳೆಗೆ ನೆನೆಯುತ,ಪ್ರಳಯದೊಳಗೆ
ಕಾರ್ಗತ್ತಲು ಹಬ್ಬುತಿರಲು
ದಾರಿತಪ್ಪಿದ ಪಯಣಿಗನಿಗೆ
ಎಷ್ಟು ಕಷ್ಟ;
ಹಳ್ಳಿಯಲ್ಲಿ ತಾಯಿಯೊಬ್ಬಳು
ಕಣ್ಣುಕೀಲಿಸಿ ಕಾಯುತಿರಲಾ
ಮೂರ್ತಿಯೆದುರಿಗೆ ಹೋಗಿ ನಿಲಲು
ಶೂನ್ಯಮಾತುಗಳೆದ್ದುಬರಲು...
ದೇಹದೊಳಗೆ ಸೂಜಿಯಿಳಿಯಲು
ತಲೆಗೆ ಬಡಿಯುವ ಶೂಲೆಯಂತೆ.
ಚಿಂತೆಯಗ್ನಿಯು ಕಣ್ಣೊಳಿರಲು
ಉರಿಯುತಿರುವ ಹಸಿವೆಯದುವೆ,
ನಟ್ಟನಡುವಿನ ರಾತ್ರಿಯೊಳಗೆ
ಕೆಟ್ಟ ಕನಸೊಳು ತಾಯಿಕೂಗಲು,
ತಟ್ಟಿ ಎಬ್ಬಿಸಿ ನೋಡು ಎನುವ
ಕಿವಿಗೆ ಸೋಕದ ಕೂಗು ಕೇಳುತ
ನೆನೆಸಿಕೊಳ್ಳುತ, ಕನಸನೊಡೆಯುತ....
ನೋವನುಣುವ..
ಹಿಂಸೆಪಡುವ..
ಬದುಕ ನಡೆಸುವ ಪಯಣಿಗನಿಗೆ
ಎಷ್ಟು ಕಷ್ಟ;
ಕತ್ತಲಲ್ಲಿ ಗೂಬೆ ಕೂಗಲು
ಅವನಬದುಕಿಗೆ ಕೊನೆಯ ಇರುಳಿದು;
ರುದ್ರವರ್ಷದಿ ಮಿಂಚು ಮಿಂಚಲು
ಹಗಲದೋರಲು ಕೋಳಿಕೂಗಲು
ಇರುಳಹರಿಯುವ ಕತ್ತಲೊಳಗೆ
ಶುಕ್ರಗ್ರಹವು ವಕ್ರನಗೆಯೊಳು
ಪಯಣಿಗನ ಮೃತ ದೇಹದೋರಲು
ಶವವದಾಡಿತು ಶೀತಗಾಳಿಗೆ;
ಕೆಟ್ಟ ಸ್ವಪ್ನದಿ ತಾಯಿಯೆದ್ದಳು
ಕರುಳು ಕದಲಿತು ಹಳ್ಳಿಯೊಳಗೆ

2 comments:

Badarinath Palavalli said...

ನನಗೆ ಶ್ರೀ ಶ್ರೀ ಮೆಚ್ಚಿನ ಕವಿ ಅವರ ಕವನವನ್ನು ಕನ್ನಡೀಕರಿಸಿದ ತಾವೇ ನನಗೆ ಮಾನಯರು.

Harish Athreya said...

ಧನ್ಯವಾದಗಳು, ಶ್ರೀ ಶ್ರೀ ವಿಪ್ಲವ ಕವಿ ಆತನ ಕವಿತೆಗಳಲ್ಲಿ ಆವೇಶವೊಂದೇ ಅಲ್ಲ ಹತಾಶೆ ನಿರಾಸೆ ಕಂಡುಬರುತ್ತದೆ . ವ್ಯವಸ್ತೆಯ ವಿರುದ್ಧ ಬಂಡೇಳುವ ಮನೋಭಾವವಿದೆ. ಅದೆಲ್ಲಕ್ಕೂ ಮೀರಿ ಕವಿತೆಗಳು ಲಯಬದ್ಧವಾಗಿಯೂ ಶುದ್ಧವಾಗಿಯೂ ಪದಸಂಪದ್ಭರಿತವಾಗಿಯೂ ಇವೆ, ಇದೇ ಕಾರಣ ಶ್ರೀ ಶ್ರೀ ನನಗೆ ಇನ್ನೂ ಹೆಚ್ಚು ಇಷ್ಟವಾಗುತ್ತಾರೆ
ಹರಿ