Tuesday, October 7, 2014

ಏಕ


ಸ್ಥಿತಿ
ಯಾವುದೋ ಮಾಯೆಯೊಳಗೆ
ಕೈ ಕಟ್ಟಿ ಕೂತಿದ್ದೆ
ಸಾಲುಗಳ ಹೆಕ್ಕಿ ಜೋಡಿಸಲು
ಹೆಣಗಾಡಿದ್ದೆ.
ಇರಬಹುದೇ ನನ್ನೊಳಗೂ ಒಬ್ಬಳು
ಅಂಧಕಾಸುರಿ
ಕತ್ತಲ ಗವಿಯೊಳಗೆ ಅವಿತ ನಾರಿ
ಮೈ ಕೊಡವಿ ಎದ್ದ ಮೇಲೆ ತಿಳಿದದ್ದು
ಕುದುರೆ ಸಾರೋಟು ಸೂಟು ಬೂಟು
ಎಲ್ಲವೂ ಕಥೆಯೊಳಗಿನ ಮಾಯೆ
ನಿಜದಿ ಎದುರಾದಾಗ
ಹಗಲು ವೇಷದ ನೆಂಟ
**********
ಗತಿ
ತೂಕಡಿಸುತ್ತಾ ಕುಳಿತಿದ್ದೇನೆ
ಆಕಳಿಕೆಗೂ ಅಲಸಿಕೆ ಬಂದು
ರಾಮಾಯಣವೋ ಭಾರತವೂ
ತನ್ನಂತೆ ತಾನೆ ನಡೆದು ಹೋಗುತ್ತಿರುತ್ತದೆ
ನನಗ್ಯಾವ ಚಿಂತೆಯಿಲ್ಲ
ಉರಿವ ಕೊಳ್ಳಿಯ ಹೊತ್ತು
ಹೊರ ನಡೆದ ಅವಳಿಗೆ
ನಾನೇನು ಹೇಳಲಿ?
ಹುಟ್ಟಿದ್ದಾಳೆ ನಿನ್ನೆ ಮೊನ್ನೆ
ಬೆಳೆಯಹತ್ತಿದ್ದಾಳೆ ತನಗೆ ತಾನೆ
*********
ಲಯ
ತೊದಲು ಮಾತಿನ ಮಲ್ಲಿಯ
ತಲೆಯ ಮೇಲೆ ಮಲ್ಲಿಗೆ ದಂಡೆ
ಮುಡಿಸದಿದ್ದರೆ ಚೀರುತ್ತಾಳೆ
ಈಗಲೇ ತಯಾರಿ ಗಂಧ ಹೊರುವುದಕ್ಕೆ
ಅದೊಂದು ಯಾನ
ಆಕರ್ಷಣೆಯನ್ನು ಮೀರಿ ನಿಂತ ಪಯಣ

1 comment:

Badarinath Palavalli said...

ಸ್ಥಿತಿ - ಗತಿ - ಲಯಗಳೆಲ್ಲವೂ ಬಹು ಮಾರ್ಮಿಕವಾಗಿ ಚಿತ್ರಿತವಾಗಿದೆ.
ಅಂಧಕಾಸುರನ ಸ್ತ್ರೀರೂಪ ಪ್ರಯೋಗ ಮನಸೆಳೆಯಿತು.