Tuesday, October 7, 2014

ದ್ವಿ


ನಾನು ಮತ್ತು ಅವಳು
ಆಡಿದ್ದು ಇಲ್ಲೇ ಎಂಬಷ್ಟು ಹತ್ತಿರದ ಶಬ್ದ
ಜಡೆ ಎಳೆದು ಕೂಡಿಸಿ
ಅವಳೆಂದಿದ್ದು,
 ದಿನಾ ಭಾಗಿಸಿ ಕಳೆದು ಕೂಡಿಸಿ
ಸಾಕಾಗಿದೆ, ಹಾರಿಬಿಡುವ...
ಎಲ್ಲೂ ಕಾಣದ ಊರಿಗೆ ಹಾರಿಬಿಡುವ
*****
ಹೊಸ ಲಂಗ, ಬೆನ್ನಿಗೆ ಚೀಲ
ಪ್ರೀತಿಸುವ ಅಪ್ಪ ಅಮ್ಮ ಮತ್ತು ಕಾಲ
ಎಲ್ಲವೂ ಕೈಗೆ ಸಿಗುವಂಥದ್ದು...
ಐಸ್ ಕ್ರೀಮು, ಹೊಸ ಚಪ್ಪಲಿ
ಇಂಟರ್ನೆಟ್ಟು......ಚಕ್ಕುಲಿ
ಇರಬಹುದಾ ಇದಕ್ಕೂ ಹೊರತಾದ ಲೋಕ
ಕೈಗೆ ಏನೂ ಸಿಗದೆ ಹಪಹಪಿಸುವ
ಅಥವಾ..... ಕತೆಗಳಲ್ಲಿ ಬರುವ
ಹುಣಸೆ ಕಾಯಿ, ಬಾವಿ ನೀರು
ತಲೆಯ ಮೇಲೆ ಮಣ್ಣು ಸುರಿದು
ಮೂಗಲ್ಲಿ ಸಿಂಬಳ ಸುರಿಸುವ
ಮತ್ತೆ ಮುಂಗೈಯಿಂದ ತೀಡುವ ನಿರ್ಮಲ ಲೋಕ
*************
ಇರುವುದು ಇದು ಮತ್ತು ಅದು
ಇದಿದ್ದರೆ ಅದಕ್ಕೆ ಹಾರು
ಅದಿದ್ದರೆ ಇದಕ್ಕೆ...
ಏಕತಾನತೆಯ ಸಂಗೀತಕ್ಕೆ
ಒಂದಷ್ಟು ಫ್ಯೂಷನ್ನು ...
ಅಂದುಕೊಳ್ಳುವುದಷ್ಟೇ.
ಟಿವಿಯೊಳಗಿನ ಭೀಮ...
ಡೋರೆಮೆನ್ ಗಳ ಜೊತೆ ಮತ್ತದೇ
 ಗುದ್ದಾಟ...
ಅದು ಸಾಕೆನಿಸುವ ಹಾಗಿಲ್ಲ
************
 ಸ್ಕೂಲಿನ ಗುಂಪಿನೊಳಗೆ ನಾನು ಮತ್ತು ಅವಳು
ಎಲ್ಲರೊಡನೆ ನಾನು
ನನ್ನೊಳಗೆ ಅವಳು
ನಾನು ನಗುತ್ತೇನೆ, ಕಾರ್ಟೂನುಗಳ ಬಗ್ಗೆ
ಕೊಚ್ಚುತ್ತೇನೆ,
ಅವಳು ಒಳಸರಿದು
ನಿಜವಾಗುತ್ತಾಳೆ,
ಗೊತ್ತು ಅವಳು ನಿಜ
ನಾನು ಲೌಕಿಕ
ನಾನಿಲ್ಲದಿದ್ದರೆ ಇಲ್ಲಿ
ಒಬ್ಬಂಟಿ ಅವಳು.
ಅವಳಿದ್ದರೆ ಇಲ್ಲಿ
ಒಬ್ಬಂಟಿ ನಾನು

1 comment:

Badarinath Palavalli said...

ಒಮ್ಮೆಲೆ time machineನಲ್ಲಿ ನಮ್ಮನ್ನು ಕೂರಿಸಿ ಬಾಲ್ಯಕ್ಕೆ ಹೊತ್ತೊಯ್ದ ತಮಗಿದೋ ನಮ್ಮ ನಮನಗಳು.