Thursday, November 13, 2014

ವ್ರಣ


******
ಕೂಸೊಂದು ಸತ್ತು ಬಿದ್ದಿದೆ
ಉರಿದುರಿದು ಬಿರಿಬಿರಿದು ಸತ್ತವಳಿಗೆ
ಮಹಿಳಾವಾದಿಗಳು ಇನ್ನೂ ಪಟ್ಟಕಟ್ಟಿಲ್ಲ
ತೀರ್ಥಹಳ್ಳಿಗಳು ತೀರ್ಥಕುಡಿದು ಮಲಗಿ
ಅಕ್ಷತೆಗಳ ಬಾಯಲಕ್ಕಿಕಾಳು ತುಂಬಿ
ತುಳುಕಾಡುತ್ತಿದೆ
ಯಾವ ಪರ ಯಾವ ವಿರೋಧ
ಇವುಗಳ ಗೊಡವೆಯಲ್ಲಿ
ಸತ್ತ ಕೂಸಿನ ಅಪ್ಪ ಅಮ್ಮ ಬದುಕಿದ್ದಾರೆ
ದಿನಕ್ಕೊಂದು ವಿಚಾರ, ಹೊರಗೆ ಬಿಸಿ ಚರ್ಚೆ
ಒಂದು ಕಪ್ಪು ಚಾ ಮತ್ತು ಮಂಡಕ್ಕಿ ಮಿರ್ಚಿ,
******************
ಜೈ ಕಾಮ್ರೇಡ್ ಎಂದವರು
ಅದರ ಮೂಲಕ್ಕೆ ಬೆಂಕಿಯಿಟ್ಟು
ಅಹರ್ನಿಶಿ ಹೊತ್ತಿಸುತ್ತಾರೆ
ಜಾತ್ಯಾತೀತತೆಯ ಸೂಡಿ.
ಕಟ್ಟಿಗೆಗೆ ರಬ್ಬರನು ಬಿಗಿದು
ಎಳೆದು ಎಳೆದೂ ಸುತ್ತಿ , ಬೆಂಕಿ ಹೊತ್ತಿ
ಉರಿದಂತೆಲ್ಲಾ ಕರಗುವ
ಗುರಿಯೇ ಇಲ್ಲದೆ ಉರಿಯುವ
ನಾಲಾಯಕ್ಕು ಸೂಡಿಗಳೆಷ್ಟೋ ನೋಡಿದ್ದೇವೆ
ಸಾವಿರಾರು ಉರಿದು ಸತ್ತು ಹೋಗಿವೆ
************
ಬೊಗಳುವ ಮುನ್ನ ನಾಯಿ
ಎದುರು ನೋಡಿ
’ಓ ಇದು ವಿಚಿತ್ರ! ಬೊಗಳಬಹುದು’
ಎನ್ನುತ್ತಾ ಬಿಡುತ್ತದೆ ಬಾಯಿ
ತಪ್ಪಿದ್ದರೆ ತೆಪ್ಪಗಾಗಿ
ಸರಿಯಿದ್ದರೆ ಬೊಗಳಿ
ಅಲ್ಲಿ ಇಲ್ಲಿ ಜೊಲ್ಲು ಸುರಿಸಿ
ಊರಿನ ಇತರ ನಾಯಿಗಳಿಗೂ ಹುಚ್ಚು ಹಿಡಿಸಿ....
ಬರಬೇಕಿದೆ ಮುನ್ಸಿಪಾಲ್ಟಿ ವ್ಯಾನು
**************
ದಮ್ಮವೆನ್ನುವುದು ಎಲ್ಲದಕ್ಕೂ ಅನ್ವಯ!
ಇಲ್ಲ ಹಾಗಿಲ್ಲ!
ಬೇಳೆ ಬೇಯಿಸಲು ದಮ್ಮ ಕೆಲವಕ್ಕೆ ಜಾಸ್ತಿ
ಮಿಕ್ಕವಕ್ಕೆ ಬೇಡ.
******************
ಸತ್ತ ಕೂಸಿನ ಮುಂದೆ ನರ್ತನ,
ಕಣ್ಣೆದುರೇ ಕೊಲೆಗಡುಕ ಕುಡಿದು
ತೂರಾಡಿ ಕೇಕಿಸುತ್ತಾನೆ,
ಅವನ ಹಿಂಬದಿ ನೆಕ್ಕುತ್ತಾ
ಓಡಾಡುತ್ತವೆ ಬುದ್ಧಿಜೀವಿಗಳು
ನೊಂದವರ ಪರದ ಬೋರ್ಡುಗಳು
ಮೌನವಾಗಿ ’ಹ್ಮ್, ಇರಬಹ್ಹುದು’ ಎನ್ನುತ್ತವೆ
ಅಲ್ಲಿಗೆ..
ಲಾಲ್ ಸಲಾಮ್ ಉದ್ಧಾರ..

No comments: