Thursday, November 13, 2014

ನೌಕೆ


***********
ಈ ದೂರವೆಷ್ಟು ದಿನ, ಕತ್ತಲೊಳಗೀ ಮೌನ?
ಮೂಡಲಾರದೆ ಎದೆಯೊಳಗೆ ಮಣ್ಣಾದ ಚಿನ್ಮನ
ಯಾರ ಮಾತಿಗೂ ಸಿಲುಕಿ ಮೂಕವಾಗುವುದೇಕೆ
ಯಾವ ದ್ವೇಷಕೋ ಸಿಲುಕಿ ಕೊರಗುವುದೇಕೆ
ದೋಣಿಯದು ತೀರಕೆ ಮತ್ತೆ ಸೇರಲು ಬೇಕು
ಮೌನವದು ಮುರಿದುರಿದು ಮಾತು ಹರಿಯಲುಬೇಕು
**********
ಗೋಡೆಯೆಡೆ ಮುಖಮಾಡಿ ಕಣ್ಣೀರ ಸುರಿಸುತಲಿ
ಕಾಯುವುದು ಮಾತಿಗೆ ಎಷ್ಟು ಕಾಲ?
ಹನಿಯೊಡೆದು ಕೆಳಗಿಳಿವ ಮೋಡಗಳ ನೆನಪಿನಲಿ
ಕಾಯುತಲಿ ಸುಮ್ಮನಿಹುದೇ ನೆಲ?
ಒಬ್ಬರಾದರೂ ಮುರಿದು ಮೌನ ಬೇಲಿಯ ದಾಟಿ
ಮಾತಿನರಮನೆಯೊಳಗೆ ಬರಲಾಗದೇ?
ಅಹಮಿಕೆಯ ಸುಳಿಮುರಿದು ಈಜಿ ಸೇರಲು ಬೇಕು
ಪ್ರೇಮನಾವೆಯ ಮಧುರ ಯಾನದೊಳಗೆ
****************
ಇಬ್ಬರೊಡಗೂಡುತಲಿ ಕಟ್ಟಿರಲು ಕನಸುಗಳ
ಯಾವ ಸಿಡಿಲಿಗೊ ಕನಸು ಒಡೆಯಬಹುದೇ?
ದೇಹವೆರಡಾದರೂ ಕನಸೊಂದೇ ಆಗಿರಲು
ಕನಸು ಒಡೆಯುವುದು ಬರಿಯ ಹುಸಿಯು
ಮನಸ ನಡುವಿನ ಗೆರೆಯು ಅಳಿದುಹೋಗಲಿ ಬೇಗ
ತೇಲಿ ಬರಲೊಮ್ಮೆ ಭಾವದೋಣಿ
*****************
ಗಾಳಿಯೊಳಗಿನ ಗಂಧ ಅಹಿತವಾಗುವುದೇಕೆ?
ಪರಿಮಳದ ಸೌರಭವು ಕಾಣದೇಕೆ?
ಇಲ್ಲದರ್ಥವ ಹುಡುಕಿ ಮೌನವಾಗುವುದೇಕೆ?
ನೇರ ಮಾತುಗಳನ್ನು ತೊರೆವುದೇಕೆ?
ಕಣ್ಣುಗಳುರುಳುವುದು ನವಿಲಗರಿಯೊಳಗಿಂದ
ಬಣ್ಣಗಳುರುಳುವುದು ಮಾರಶರದಿಂದ
ಹಿಡಿದಿಡುವುದು ಬಾಳು
ಮರೆಯುವುದೇ ಬಿರುಕು
ಸಾಗಿಬರಲಿ ಶಬ್ದನೌಕೆ

1 comment:

Badarinath Palavalli said...

ಮನಸ ನಡುವಿನ ಗೆರೆಯು ಅಳಿದುಹೋಗಲಿ
ಎಂಬ ಆಶಯವೇ ಅಮಿತವಾಗಿದೆ.