Thursday, November 13, 2014

ನೀ ಗುರುವು


*************
ನೀ ಗುರುವು ನೀ ಗುರಿಯು
ನೀನೆ ಪರಮಾತ್ಮನು
ನೀ ತನುವು ನೀ ಮನವು
ನೀನೆ ನಿಜಬ್ರಹ್ಮನು
ನಿನ್ನೊಳಿದೆ ಸಕಲಜಲ
ನಿನ್ನೊಳಿದೆ ಜೀವಕುಲ
ನಿನ್ನಿರುವೆ ಪ್ರಾಣಕಣ
ನನ್ನಾತ್ಮ ನಿನ್ನಋಣ
ನೀ ಗುರುವು ನೀ ಗುರಿಯು

ನೀನಿತ್ತ ಬದುಕಲ್ಲಿ
ಸ್ವರವಿಹುದು ದನಿಯಲ್ಲಿ
ಹಾಡುವೆವು ನಮ್ಮಂತೆ
ಲಯ ಮಾತ್ರ ನಿನ್ನದು
ಮೂಲಭೂತದ ಮೂಲ
ಯಾವ ಭೂತದ ಕೋಲ
ಎಂತಿರಲಿ ಹೇಗಿರಲಿ
ನಿನ್ನ ಲೀಲೆಯ ಕಾಣ್ಕೆ
ನೀ ಗುರುವು ನೀ ಗುರಿಯು
ಕೂಡಿಕೊಳುವೆನು ಇನ್ನು
ತರೆಸಬಾರದೆ ಕಣ್ಣು
ನಿನ್ನಡಿಗೆ ಶಿರ ಬಾಗಿ
ಓಂ ಎನುವೆನಿನ್ನು
ಚೇತನವಚೇತನವು
ನೀನಿಲ್ಲದೆಡೆಯಿನ್ನು
ಉದಯಾಸ್ತಮಾನಗಳು
ನಿನ್ನೊಡಲ ಸವಿಗಣ್ಣು
ಕೈಯ ಮುಗಿವೆನು ಬಾರ
ಹಾರು ಹಕ್ಕಿಯ ತೋರ
ನೀ ಗುರುವು ನೀ ಗುರಿಯು
ಅಡಿಗೆರೆವೆ ಶಿರಬಾಗಿ
ಗುಡಿಯ ಹಣತೆಯ ತೆರದಿ
ನೀನಿತ್ತ ಪ್ರಣತಿಯೊಳು
ನಿನ್ನೊಲವ ತೈಲದೊಳು
ಆತ್ಮದಾರದ ಕರುಣೆ
ಹರಿಸುತಿದೆ ಕಣ್ಬೆಳಕು
ಉರಿಯುವಷ್ಟು ಹೊತ್ತೂ
ಬೆಳಕ ನೀಡಲು ಸಾಕು
ಭಾಳು ಭವ್ಯತೆಯೊಳು
ಬೆಳಗುವುದೆ ಬೆಳಕು
ನೀ ಗುರುವು ನೀ ಗುರಿಯು
ನೀನೆ ಮಂಗಳತಮ
ನೀನೆ ಜಗದಾತ್ಮ
ನೀನೆ ಜೀವದ ಮೂಲ
ನೀನೆ ಸೃಷ್ಟಿಯ ಕಾಲ
ನೀ ಗುರುವು ನೀ ಗುರಿಯು

No comments: