Sunday, April 19, 2015

ಸಿರಾ ದಿಮರ ವಿನೋದ ಪ್ರಸಂಗಗಳು 1

ಸಿರಾ ದಿಮರ ವಿನೋದ ಪ್ರಸಂಗಗಳು

ಸಿರಾನು ಕರಾಳ ನಾಡಿನ ರಾಜನಾಗಿ ಅಧಿಕಾರ ವಹಿಸಿಕೊಂಡು ಬುದ್ಧಿವಂತ ದಿಮನನ್ನು ಸಲಹೆಗಾರನನ್ನಾಗಿ ನೇಮಿಸಿಕೊಂಡ ಕತೆ ನಿಮಗೀಗಾಲೇ ಗೊತ್ತಿದೆ. ದಿಮನ ಪೂರ್ವಾಶ್ರಮವು ಸುದ್ದಿಗಳನ್ನು ಮಾಡುವುದರಲ್ಲಿತ್ತು. ಒಂದು ಊರಿನ ಸುದ್ದಿಯನ್ನು ಮತ್ತೊಂದು ಊರಿಗೆ ದಾಟಿಸುವುದು ಒಂದು ಮನೆಯ ಕತೆಯನ್ನು ಮತ್ತೊಂದು ಮನೆಗೆ ಊದುವುದು ಅವನ ಕಾರ್ಯವಾಗಿತ್ತು, ಆದರೆ ಆ ಸುದ್ದಿಯನ್ನು ಯಾರೂ ಗಮನಿಸುತ್ತಿರಲಿಲ್ಲ. ಕಾರಣ ಆ ಸುದ್ದಿಯು ಹೆಚ್ಚು ಜನರನ್ನು ತಲುಪುತ್ತಿರಲಿಲ್ಲ. ಹೀಗಿರಲಾಗಿ ದಿಮನ ವಿಷಯ ಹಲವಾರು ಜನರಿಗೆ ತಿಳಿಯದೆ ಹೋಯಿತು, ಇದರ ಬಗ್ಗೆ ತುಂಬಾ ತಲೆ ಕೆಡೆಸಿಕೊಂಡ ದಿಮನು, ಹೇಗಾದರೂ ಸರಿ ನಾನು ಜನರ ಕಣ್ಣಲ್ಲಿ ಬೀಳಲೇ ಬೇಕೆಂದು ಹಠ ತೊಟ್ಟು ಸುದ್ದಿಯನ್ನು ಗುದ್ದತೊಡಗಿದನು, ಆ ಮನೆಯ ಯಜಮಾನನ ವಿಷಯಕ್ಕೆ ಪಕ್ಕದವರ ಸಂಬಂಧವನ್ನು ಕಲ್ಪಿಸುವುದು, ಬೇಡದ ವಿಷಯಗಳನ್ನು ಹಳ್ಳಿಯೊಳಕ್ಕೆ ತಂದು ಜನರಲ್ಲಿ ಗದ್ದಲವೆಬ್ಬಿಸಲು ಪ್ರಯತ್ನಿಸುವುದು, ಇತ್ಯಾದಿ. ಊರಿನ ಧಾರ್ಮಿಕ ಮುಖಂಡನ ಆರೋಗ್ಯದ ವಿಷಯವನ್ನು ಗುಲ್ಲು ಮಾಡುವುದು ಅದರ ಒಂದು ಭಾಗವಾಗಿತ್ತು. ಹೀಗಿರುವಾಗ ಒಮ್ಮೆ ಊರಿನ ಧಾರ್ಮಿಕ ಮುಖಂಡ ದೇಗುಲದ ಹೊರಗೆ ನಿಂತು ಮುಖಮಾರ್ಜನ ಮಾಡುತ್ತಿದ್ದನು ಇದನ್ನು ಗಮನಿಸಿದ ದಿಮನು ಇಡೀ ದಿನ ಅವನ ಚರ್ಯೆಯನ್ನು ಸೂಕ್ಷ್ಮವಾಗಿ ನೋಡಬೇಕೆಂದು ನಿರ್ಧರಿಸಿದನು, ಮುಖಂಡನು ದಂತ ಮಾರ್ಜನ ,ಮುಖಮಾರ್ಜನ ಮಲ ವಿಸರ್ಜನ ಸ್ನಾನ ಆಹ್ನಿಕಗಳನ್ನು ಮುಗಿಸಿ ಲಘು ಉಪಹಾರವನ್ನು ಸೇವಿಸುತ್ತಿರುವಾಗ ಉಪಹಾರದಲ್ಲಿದ್ದ ಕೊತ್ತಂಬರಿ ಸೊಪ್ಪೊಂದು ಗಂಟಲಲ್ಲಿ ಒಮ್ಮೆಲೆ ಇಳಿದು ಕಿರಿಕಿರಿಯಾಗಿ ನಾಲ್ಕು ಬಾರಿ ಕೆಮ್ಮಿಬಿಟ್ಟನು, ನಂತರ ಕೈತೊಳೆದು ತಟ್ಟೆ ಲೋಟಗಳನ್ನು ಶುಭ್ರವಾಗಿ ತೊಳೆದು ಊರಿನ ಜನರೊಡನೆ ಮಾತಿಗೆ ಸಲಹೆಗಳಿಗೆ ಕೆಲಸಗಳಿಗೆ ಹೊರಟನು, ದಾರಿಯಲ್ಲಿ ಸಿಕ್ಕ ಗಂಡಸು ಅವರಿಗೆ ನಮಸ್ಕರಿಸಿದನು ಅವರು ಪ್ರತಿನಮಸ್ಕರಿಸಲು ಕೈಯೆತ್ತುವಷ್ಟರಲ್ಲಿ ಆ ವ್ಯಕ್ತಿ ಅಲ್ಲಿಂದ ಹೊರಟುಬಿಟ್ಟಿದ್ದನು, ಮುಖಂಡನು ನಸುನಗುತ್ತಾ ತನ್ನ ಹಾದಿ ಹಿಡಿದನು, ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿರಲು ಮುಖಂಡನು ಅವರ ಬಿಡುವಿನ ವೇಳೆಯಲ್ಲಿ ದೇವರ ಬಗ್ಗೆ ಹೇಳುತ್ತಾ ಅವರ ಆಯಾಸವನ್ನು ಮತ್ತು ಅವರ ಶ್ರಮವು ದೇವರನ್ನು ಸೇರುವುದರ ಬಗ್ಗೆ ಹೇಳಿ ಅವರನ್ನು ಅತ್ಮೀಯತೆಯಿಂದ ಅಪ್ಪಿಕೊಳ್ಳುತ್ತಿದ್ದನು. ಅವರೊಡನೆ ತಾನೂ ಕೆಲಸದಲ್ಲಿ ತೊಡಗುತ್ತಾ ಅವರ ನೆರವಾಗುತ್ತಿದ್ದನು, ಸೂರ್ಯ ನೆತ್ತಿಯ ಮೇಲೆ ಬರಲು ಮುಖಂಡನ ಮುಖದ ಬಣ್ಣವು ಎಲ್ಲರಂತೆ ಕಂದು ತಿರುಗಲಾರಂಭಿಸಿತು. ಅವನು ಎಲ್ಲರಂತೆ ನೀರಿನಲ್ಲಿ ಮುಖ ತೊಳೆದನು. ಸಂಜೆಯಾಗುತ್ತಿದ್ದಂತೆ ಎಲ್ಲರೂ ಮನೆಗೆ ತೆರಳುವಂತೆ ಅವನೂ ದೇವಸ್ಥಾನದ ಜಗಲಿಗೆ ತೆರಳಿದನು, ಸ್ವಲ್ಪ ಸಮಯದ ನಂತರ ಊರಿನ ಜನರು ಅಲ್ಲಿ ನೆರೆದು ಆತನ ಪ್ರವಚನ ಕೇಳುತ್ತಾ ತಲೆದೂಗುತ್ತಾ ಆನಂದಿಸುತ್ತಿದ್ದರು. ರಾತ್ರಿಯ ಊಟ ಮುಗಿಸಿ ಪಾತ್ರೆಗಳನ್ನು ತೊಳೆದು ಮುಖಂಡನು ಮಲಗಿದನು, ನಿದ್ದೆಯಲ್ಲಿ ಅವನು ಜೊರಾಗಿ ಗೊರಕೆ ಹೊಡೆಯುತ್ತಿದ್ದನು. ದಿಮನು ಮುಖಂಡನ ಈ ದಿನಚರಿಯನ್ನು ನೋಡಿ ಜನರಲ್ಲಿ ತನ್ನ ಸುದ್ದಿಯನ್ನು ಹೇಳತೊಡಗಿದನು. ಅದು ಹೀಗಿತ್ತು
ಮರುಳ ಜನರೇ ಮುಖಂಡನು ನಮ್ಮ ನಿಮ್ಮಂತೆಯೇ ಮನುಷ್ಯನು ಅವನನ್ನೇಕೆ ಅಷ್ಟು ಗೌರವಿಸುತ್ತೀರಿ? ಅವನು ಕೆಮ್ಮುತ್ತಾನೆ , ಅವನಿಗೆ ಗೂರಲು ರೋಗವಿದೆ, ಅವನ ಮುಖ ಬಿಸಿಲಿನಲ್ಲಿ ಕಂದುತ್ತದೆ ಅವನಿಗೆ ಚರ್ಮವ್ಯಾಧಿಯಿದೆ, ಅವನು ಗೊರಕೆ ಹೊಡೆಯುತ್ತಾನೆ ಅವನಿಗೆ ಅಸ್ತಮಾ ಇದೆ, ಅವನಿಗೆ ೩೧ ಬಗೆಯ ರೋಗಗಳಿವೆ, ಅವನನ್ನೇಕೆ ಗೌರವಿಸುತ್ತೀರಿ? ಆದರೂ ಅವ ದೊಡ್ಡವನು ಎಂದನು, ಜನರು ದಿಮನ ಮಾತಿಗೆ ಬಲಿ ಬೀಳದೆ ಅವನಿಗೆ ಉತ್ತರಿಸಿದರು.
ನಾವು ಅವನ ಗೊರಕೆ ಕೇಳುವುದಕ್ಕೆ ಹೋಗುವುದಿಲ್ಲ ಅವನ ಕೆಮ್ಮು ನಮಗೆ ಕೇಳಿಸದು ಅವನ ಮುಖದ ಬಣ್ಣ ನಮಗೆ ಅನವಶ್ಯಕ ಆದರೆ ಅತನ ಮಾತುಗಳು ನಮ್ಮಲ್ಲಿ ಚೈತನ್ಯವನ್ನುಂಟು ಮಾಡುತ್ತವೆ ಆದಕ್ಕೆ ಹೋಗುತ್ತೇವೆ ಎಂದರು.
ದಿಮನು ಮತ್ತೆ ಪೆಚ್ಚಾದನು. ಈ ಬಾರಿ ದಿಮನು ಯಾರಿಗೂ ಅರ್ಥವಾಗದ ಭಾಷೆಯನ್ನು ಕಲಿತುಕೊಳ್ಳ ತೊಡಗಿದನು, ಅವು ಹೀಗಿರುತ್ತಿತ್ತು.
ವ್ಯಕ್ತಿಯೊಬ್ಬ ಬಂದಾಗ " ನೀನು ಸರಿಯಲ್ಲ ಮತ್ತು ತಪ್ಪಲ್ಲ ನಿನ್ನದು ಆತ್ಮವಲ್ಲ ನೀನು ದೇಹ ಮಾತ್ರ, ಸೋಗಂ ಬಾವಂ ವಂಬಾಂ ಸಿಂದುಂ ದುಂಗಡಿ, ಮಾಸಿ ಕೋಶಿ ಬೀಸಿ ಹಾಸಿ ಓಸಿ ಚಂದರಿ, ಬಲ್ಲೆ ಕಲ್ಲೆ ಚಳ್ಳೆ ಹೊಳ್ಳೆ ಆಹಾ ಅದು ಇದಾದು ನಂತರ ಅದಾದು ಓದೋ ಅದು ಅನಾವರಣ ವರಣ ರಣ ಣ ಣ ಣ ಣ,"
ಇಬ್ಬರು ಜಗಳವಾಡುತ್ತಿದ್ದಾಗ " ಹಗ್ಗ ಮಗ್ಗ ಕುಗ್ಗ ಲಾಡಿ ಸೂಡಿ ಪೂಡಿ ನಾಡಿ ಡಿ , ಅಹಾ ಅದೆಂಥದೋ ಗಲ ಜಗಳ ಗಂಜಲ, ಜಲ ಜಲ ಇದು ಅದು ಅದು ಇದು ಸತ್ತ ಸತ್ಯ ಮಿತ್ ಥತ್ ಬಾ ಕುಶಿತ್ "
ಈ ಮಾತುಗಳು ಯಾರಿಗೂ ಅರ್ಥವಾಗದೆ ಎದುರಾಗುವುದನ್ನು ನಿಲ್ಲಿಸತೊಡಗಿದರು ಮತ್ತು ಜಗಳವನ್ನು ನಿಲ್ಲಿಸತೊಡಗಿದರು, ಮತ್ತು ಮೊಳಕೆ ಕೊಂಬಿನ ತುರಿಕೆಯವರು ಇದರ ಬಗ್ಗೆ ಮಾತನಾಡಿಕೊಳ್ಳತೊಡಗಿದರು. ಹೀಗೆ ದಿಮನು ಎಲ್ಲರಿಂದ ದೂರಾದ ಮತ್ತು ಮಾತಾದ.
ಇದೇ ಸಂದರ್ಭದಲ್ಲಿ ಅರಾಜಕತೆ , ಆನೆ , ಮಾಲೆ ಮತ್ತು ಸಲಹೆಗಾರನಾದದ್ದು.
ದಿಮನು ಸಲಹೆಗಾರನಾದಮೇಲೆ ಅವನ ಮೊಳೆವ ಕೊಂಬಿನ ತುರಿಕೆಯವರು ದಿಮನನ್ನು ಮಿಸ್ ಮಾಡಿಕೊಳ್ಲತೊಡಗಿದರು, ಅರ್ಥವಾಗದ ಪದಗಳನ್ನು ಹೇಳಿ ರಂಜಿಸುತ್ತಿದ್ದ ವ್ಯಕ್ತಿಯ ಹುದ್ದೆ ಅವರನ್ನು ಆಕರ್ಶಿಸಿಬಿಟ್ಟಿತು, ಅವನ ಸ್ಥಾನವನ್ನು ತಾವು ತುಂಬಬೇಕೆಂದು ಹಪಹಪಿಸತೊಡಗಿದರು. ಸರಿ ಮತ್ತೆ ಸುದ್ದಿಗಳು ಹರಿದಾಡತೊಡಗಿದವು, ಈ ಬಾರಿ ದಿಮನು ಹಾಕಿಕೊಟ್ಟ ಹಾದಿಯಲ್ಲಿ ಕೊಂಬುಗಳು ಓಡಾಡತೊಡಗಿದವು, ಸಿಕ್ಕ ಸಿಕ್ಕಲ್ಲಿ ಚುಚ್ಚು ಗಾರು ಗಾರು ಮಾಡಿ ಹಳ್ಳಿಯನ್ನು ಚಚ್ಚ ಬೇಕೆಂದು ಕೂಗಾಡತೊಡಗಿದವು. ಮತ್ತು ಅದರಿಂದ ದಿಮನ ಗಮನ ಸೆಳೆಯುವುದು ಅವರ ಉದ್ದೇಶವಾಗಿತ್ತು, ಮತ್ತೂ ಮುಂದುವರೆದು ಅವನ ಸ್ಥಾನದ ಆಸುಪಾಸಿನಲ್ಲಿ ತಮಗೊಂದು ಜಾಗ ಬೇಕೆಂದು ಅವು ಇನ್ನೂ ಇರಿಯತೊಡಗಿದ್ದು ಸೋಜಿಗವಾಗಿರಲಿಲ್ಲ. ಆ ಗುಂಪಿನಲ್ಲಿ ಸೊಂಚ, ಮೊಂಡ, ವೆಂಗ, ಯದ್ದ ರು ಪ್ರಮುಖರು, ದಿಮನ ಮೂರು ಕಾಲಿನ ಕೋಳಿಯನ್ನು ಎಲ್ಲೆಡೆ ತಲುಪಿಸುವ ಹೊಣೆ ಹೊತ್ತುಕೊಂಡವರು ಅವರಾಗಿದ್ದರು. ಆ ಕತೆ ಹೀಗಿತ್ತು
ಕೋಳಿಯೊಂದು ದಿಮನ ಬಳಿಯಿತ್ತು, (ರಾಜನು ಗೋದಿ ಕಾಳನ್ನು ಚೆಲ್ಲಿದಾಗ ತಿಂದ ಕೋಳಿಯೇ ಆ ಕೋಳಿ) ದಿಮನಿಗೆ ಬೇಸರವಾದಾಗ ಆ ಕೋಳಿಯ ಕಡೆ ನೋಡಿ ನೀನು ಒಬ್ಬನೇ ಇದ್ದಿ, ನೀನು ಹಲವಾಗುವುದು ಹೇಗೆ ಎನ್ನುತ್ತಿದ್ದ ಮತ್ತು ಆಆಆಬ್ ಎಂದು ತೇಗುತ್ತಿದ್ದ, ಕೋಳಿಯು ಕೊಕೊಕೊಕ್ಕೊ ಎನ್ನುತ್ತಿತ್ತು, ಮತ್ತೆ ಹುಟ್ಟಿದೆ ಈ ಕೋಳಿ ಎನ್ನುತ್ತಿದ್ದ. ಆ ಕೋಳಿಯು ಇತರ ಕೋಳಿಗಳೊಂದಿಗೆ ಸೇರದೆ ತನ್ನದೇ ವಂಶವನ್ನು ಬೆಳೆಸಬೇಕೆಂದು ಮತ್ತು ಇಡೀ ರಾಜ್ಯವನ್ನು ದಿಮನ ಕೋಳಿ ರಾಜ್ಯವನ್ನಾಗಿ ಮಾಡಬೇಕೆಂಬ ಮಹದಾಸೆಯನ್ನು ಹೊತ್ತಿತ್ತು. ದಿಮನೂ ಸಹ ಕೋಳಿಗೆ ತನ್ನ ಹಿಂಬಾಲಕರ ಕೊಂಬಿನ ತುರಿಕೆಯ ಪುಡಿಯಿಂದ ಉಂಡೆಗಳನ್ನು ಮಾಡಿ ತಿನ್ನಿಸುತ್ತಿದ್ದ, ಅವನ ಕೋಳಿಗೆ ತಮ್ಮ ಕೊಂಬಿನ ಪುಡಿಯನ್ನು ಸೊಂಚ ಮೊಂಡ ಇತ್ಯಾದಿಗಳು ಆನಂದವಾಗಿ ಕೆರೆದು ಕೊಡುತ್ತಿದ್ದರು. ಆ ಪುಡಿಯನ್ನು ತಿಂದ ಕೋಳಿಗೆ ಕೊಬ್ಬು ಹೆಚ್ಚಾಗಿ ಸಿಕ್ಕ ಸಿಕ್ಕಾಗಲೆಲ್ಲಾ ಸಿಕ್ಕ ಸಿಕ್ಕಲ್ಲೆಲ್ಲಾ ಗಲೀಜು ಮಾಡಿ ಕೊ ಕೊ ಕ್ಕೋ ಎನ್ನುತ್ತಿತ್ತು, ಜನರು ಅದನ್ನು ಮುಟ್ಟುವಂತಿರಲಿಲ್ಲ, ಕಾರಣ ಅದು ದಿಮನದು, ದಿಮನಿಗೆ ತನ್ನ ಕೋಳಿ ಬುಡಂಗನೆ ನೆಗೆಯುವುದನ್ನು ನೋಡುವುದು ಆನಂದದಾಯಕವಾಗಿತ್ತು, ಅದೇಕೋ ಒಂದು ದಿನ ಕೋಳಿ ಬುಡಂಗನೆ ನೆಗೆಯುವುದರ ಬದಲು ಕೊಬ್ಬು ಹೆಚ್ಚಿ ಬುಡಬುಡಂಗೆಂದು ನೆಗೆಯಿತು , ಅತ್ಯಾಶ್ಚರ್ಯ ಹೊಂದಿದ ದಿಮನು ತನ್ನ ಕೋಳಿಗೆ ಮೂರು ಕಾಲಿದೆ ಎಂದುಬಿಟ್ಟ, ಅವನ ಮಾತಗೆ ಜೋತುಬಿದ್ದ ಸೊಂಸ ಮೊಂಡ ವೆಂಗರು ಮೂರು ಕಾಲಿನ ಕೋಳಿಯ ಕತೆಯನ್ನು ಎಲ್ಲೆಡೆ ಹರಡಲು ಆರಂಭಿಸಿದರು, ರೈತಾಪಿ ವರ್ಗದವರು ನಕ್ಕು ಸುಮ್ಮನಾದರೆ ಮಧ್ಯಮವರ್ಗದವರು ಅವರಿಗೆ ತಿಳಿ ಹೇಳಲು ಹೊರಟರು, ಆದರೆ ಅವರು ಸರಿಯಾಗುತ್ತಾರಾ? ಉತ್ತರ ಗೊತ್ತಿದ್ದರೂ ಹೇಳದಿದ್ದರೆ ನಿನ್ನ ತಲೆಯ ಮೇಲೆ ಕೊಂಬೊಂದು ಬೆಳೆದುಬಿಡುತ್ತದೆ ಎಂದು ಪ್ರೇತಾಳವು ಖಾಲಿ ಶಿಲುಬೆಯನ್ನು ಹತ್ತಿಬಿಟ್ಟಿತು

No comments: