Sunday, April 19, 2015

ಸೈಬರ್ ಕಾಯ್ದೆ ದುರ್ಬಳಕೆಯಾಗುತ್ತಿದೆಯೇ

ಸೈಬರ್ ಕಾಯ್ದೆ ದುರ್ಬಳಕೆಯಾಗುತ್ತಿದೆಯೇ?

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಭಾರತದ ಸಂವಿಧಾನ ನಮಗೆ ಕೊಟ್ಟಿದೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಮಾತುಗಳನ್ನು ನಿರ್ಭೀತಿಯಿಂದ ಹೇಳಬಹುದಾಗಿದೆ. ಹಳ್ಳಿ ಕಟ್ಟೆಯಲ್ಲಿ ಕುಳಿತ ವ್ಯಕ್ತಿಯೊಬ್ಬ ದೇಶದ ಉನ್ನತ ಸ್ಥಾನದಲ್ಲಿರುವವರನ್ನು ಏಕವಚನದಲ್ಲಿ ಸಂಬೋಧಿಸಿ ಅವನು ಹೀಗೆ ಮಾಡಬಹುದಿತ್ತು ಎಂದು ಹೇಳುವ ಮಟ್ಟಿಗೆ ನಮಗೆ ಸ್ವತಂತ್ರ್ಯವಿದೆ. ಆದರೂ ಅದಕ್ಕೊಂದು ರೀತಿಯಿದೆ. ಇಬ್ಬರು ವಕ್ತಿಗಳು ಮನೆಯಲ್ಲಿ ಕುಳಿತು ದೇಶದ ಬಗ್ಗೆ ಮಾತನಾಡುವಾಗ ಆಡುವ ಮಾತುಗಳಿಗೂ ಸಾಮಾಜಿಕ ತಾಣಗಳಲ್ಲಿ (ಸಾರ್ವಜನಿಕ ಭಾಷಣಗಳನ್ನೂ ಸೇರಿಸಿಕೊಂಡು) ಆಡುವ ಮಾತುಗಳಿಗೂ ವ್ಯತ್ಯಾಸವಿದೆ. ಇಬ್ಬರ ನಡುವಿನ ಮಾತುಗಳು ಅಲ್ಲಿಗೇ ನಿಲ್ಲುತ್ತವೆ ಆದರೆ ಸಾರ್ವಜನಿಕವಾದದ್ದು ಸುದ್ದಿಯಾಗುತ್ತದೆ. ಪ್ರಚೋದನಕಾರಿ ಭಾಷಣಗಳು ನಿಂದನಾತ್ಮಕ (ಟೀಕೆಯಲ್ಲದ್ದು) ಭಾಷಣಗಳು ಹೆಚ್ಚು ಸುದ್ದಿಯಾಗುತ್ತದೆ ಮತ್ತು ಆಡಿದ ವ್ಯಕ್ತಿಯ ಮೇಲೆ ಕೇಸ್ ದಾಖಲಾಗುತ್ತದೆ. ಈ ಸುದ್ದಿಗಳು ಪತ್ರಿಕೆಗಳಲ್ಲಿ ಬರಲೆಂದೇ ಕೆಲವರು ಮಾತನಾಡುವುದುಂಟು.
ಆ ವ್ಯಕ್ತಿಯನ್ನೇ ಗುರಿಯಾಗಿರಿಸಿಕೊಂಡು ಅಧಿಕಾರದಲ್ಲಿರುವವರು ಆತನನ್ನು ಹಣಿಯುವುದಕ್ಕೆ ಆತನ ಮೇಲೆ ರೌಡಿ ಶೀಟರ್ ಹಾಕಿದ ಉದಾಹರಣೆಗಳಿವೆ. ಈಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರೆಕ್ಕೆಗಳಿವೆ. ಅದು ಆಕಾಶದಲ್ಲಿ ಹಾರಾಡುತ್ತದೆ. ಫೇಸ್ ಬುಕ್ ಟ್ವಿಟರ್ ಗಳಲ್ಲಿ ನಮ್ಮ ನಿಲುವನ್ನು ಸ್ವತಂತ್ರ್ಯವಾಗಿ ಹೇಳಬಹುದು (ಸೀಮಿತ ಪರಿಧಿಯೊಳಗೆ).
ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಮನಸ್ಸಿಗೆ ಬಂದ ಹಾಗೆ ಬರೆಯುವುದಲ್ಲ.  ಆಧಾರ ಸಮೇತವಾಗಿ ನಿರೂಪಿಸುವುದು ಮತ್ತು ನಮ್ಮ ನಿಲುವನ್ನು ತರ್ಕಬದ್ದವಾಗಿ ಹೇಳುವುದು. ಸಾಮಾಜಿಕ ತಾಣಗಳಲ್ಲಿ ನೇರವಾದ ವಿಷಯಗಳು ಎಷ್ಟೋ ಬಾರಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಕಾರಣ ಪೂರ್ವಾಗ್ರಹ ಪೀಡನೆಯಷ್ಟೆ. ಇಡೀ ಪ್ರಪಂಚ ತಮ್ಮೊಬ್ಬರನ್ನೇ ನೋಡುತ್ತಿದೆ ಎಂಬ ಮನೋವ್ಯಾಧಿಯಿಂದ ಬಳಲುವವರು ಈ ಬಗೆಯವರು.ಇನ್ನು ಜನಾಂಗದ ನಿಂದನೆ ಮತ್ತು ಧರ್ಮದ ನಿಂದನೆ, ಯಾವುದೋ ಆಮಿಷಕ್ಕೆ ಒಳಗಾಗಿ (ಹಣದಾಸೆಗೆ ಅಧಿಕಾರದ ಆಸೆಗೆ ಹೆಸರಿನಾಸೆಗೆ) ಮೊಂಡುವಾದವನ್ನು ಮಾಡುತ್ತಾ ಮತ್ತೊಬ್ಬರನ್ನು ಪ್ರಚೋದಿಸುವುದು ಮತ್ತೊಂದು ಗುಂಪು, ಇತ್ತೀಚಿಗೆ ಈ ಗುಂಪು ಹೆಚ್ಚು ಕಾರ್ಯಮುಖವಾಗಿದೆ. ಅವರಲ್ಲಿ ಯಾವುದೇ ನಿಶ್ಚಿತ ಸಿದ್ದಾಂತವಿರುವುದಿಲ್ಲ. ಅಥವಾ ಅವರ ಸಿದ್ಧಾಂತ (ಅವರ ಪ್ರಕಾರ ಅದೇ ಸರಿಯಾದದ್ದು ಅಥವಾ ಅವರಿಗೆ ಅದು ಸರಿ)ವೇ ಪರಮ ಸತ್ಯವೆಂದು ವಾದಿಸುವುದು. ತರ್ಕಬದ್ದವಾಗಿ ಮಾತನಾಡಲಾಗದ ವಾದಿಸಲು ಬಾರದ ಗುಂಪು ಸೋಲುತ್ತೇವೆ ಎನಿಸಿದಾಗ ವಕ್ತಿಗತ ದಾಳಿಗೆ ಇಳಿದುದನ್ನು ನೋಡಿದ್ದೇವೆ, ನೋಡುತ್ತಿದ್ದೇವೆ. ಪ್ರಚಾರಕ್ಕಾಗಿ ಹಪಹಪಿಸುವ ಮಂದಿ ಮಹಿಳಪರ ಪ್ರಗತಿಪರ ಸಮಾನತೆಯಪರ ಎನ್ನುವ ಅಸ್ತ್ರಗಳನ್ನು ಹಿಡಿದುಕೊಂಡು ಎಲ್ಲಿ ಯಾರನ್ನು ಪ್ರಚೋದಿಸಿದರೆ ಅವರು ಉಗ್ರವಾಗುತ್ತಾರೆ ಎಂಬುದನ್ನು  ಹಿಡಿದು ಅಂಥವರನ್ನು ಪ್ರಚೋದಿಸುತ್ತಾರೆ , ತನ್ನ ಮನೆಯನ್ನು ಕಾಡುವ ಮಂದಿಯ ಮಾತಿಗೆ ಯಾವ ಯಜಮಾನ ಸುಮ್ಮನಿದ್ದಾನು? ಅವನೂ ಪ್ರತಿಕ್ರಿಯಿಸುತ್ತಾನೆ ಮಾತಿಗೆ ಮಾತು ಬೆಳೆದು (ಬೆಳೆಯಲೆಂದೇ ಬೆಳೆಸಿ) ಅವನನ್ನು ಸಿಕ್ಕಿಸುತ್ತಾರೆ. ನ್ಯಾಯಾಂಗದ ಕೆಲವು ಕಾಯ್ದೆಗಳು ಹೇಗೆ ದುರ್ಬಳಕೆಯಾಗುತ್ತವೋ ಅದೇ ರೀತಿಯ ಕೆಲವನ್ನು ಅವನ ಮೇಲೆ ಹೇರಿ ತಮ್ಮ ವಿಜಯ(?)ದ ಪತಾಕೆಯನ್ನು ಹಾರಿಸುವುದಲ್ಲಿ ಅವರ ಬೌದ್ಧಿಕ ದಾರಿದ್ರ್ಯದ ಅನಾವರಣವಾಗುತ್ತದೆ.
ಜನಾಂಗ ನಿಂದನೆ ಮತ್ತು ಧರ್ಮ ನಿಂದನೆಗಳು- ಪ್ರಪಂಚದ ಯಾವುದೇ ಜನಾಂಗವನ್ನಾಗಲಿ ಅಥವ ಧರ್ಮವನ್ನಾಗಲಿ ಅದರ ತತ್ವಗಳನ್ನು ಕುರಿತು ಚರ್ಚಿಸಬಹುದು. ಚರ್ಚೆಯು ವಿಷಯಾಸಕ್ತಿಯಿಂದ ಕೂಡಿದ್ದರೆ ಒಳಿತು. (ವಾಕ್ಯಾರ್ಥಗಳಂತೆ) ಸಾಮಾಜಿಕ ಜಾಲತಾಣಗಳಲ್ಲಿ ಧರ್ಮನಿಂದನೆ ಮತ್ತು ಜನಾಂಗ ನಿಂದನೆ ವ್ಯಾಪಕವಾಗಿ ಆಗುತ್ತಿದೆ. ಸರಿಯಾದ ದಾರಿಯಲ್ಲಿ ಚರ್ಚೆಯು ಸಾಗದೆ ನಿಂದನೆಗಳಲ್ಲಿ ಪರ್ಯಾವಸಾನವಾಗುತ್ತಿದೆ. ಯಾವುದಾದರೂ ಧರ್ಮದ ಬಗ್ಗೆ ಗೊಂದಲಗಳಿದ್ದರೆ ಅಥವಾ ತಿಳಿದುಕೊಳ್ಲಬೇಕೆಂಬ ಆಸಕ್ತಿಯಿದ್ದರೆ ಅದನ್ನು ಸಾತ್ವಿಕವಾಗಿ ಕೇಳಬಹುದು. ಕುಚೋದ್ಯದಿಂದ ಮತ್ತು ನಿಂದನೆಗಳಿಂದೊಡಗೂಡಿದ ಲೇಖನದಿಂದ ಆ ಧರ್ಮವನ್ನು ದೂರುವುದು ಮತ್ತು ಹಳಿಯುವುದು ಸರ್ವಥಾ ಒಪ್ಪತಕ್ಕ ವಿಷಯವಲ್ಲ. ಒಬ್ಬ ವ್ಯಕ್ತಿ ಗೌರವಿಸುವ ವ್ಯಕ್ತಿ ಮತ್ತು ನಂಬಿಕೆಯನ್ನು ಕೀಳಾಗಿ ಕಂಡು ಅದನ್ನು ಸಮಾಜಿಕವಾಗಿ ಪ್ರಚಾರಪಡಿಸುವುದರಿಂದ ಆ ನಂಬಿಕೆಗೆ ಆಗುವ ಅವಮಾನ ಮತ್ತು ಅದನ್ನು ನಂಬಿದ ವ್ಯಕ್ತಿಗೆ ಆಗುವ ಮಾನಸಿಕಹಿಂಸೆ ಅತಿಯಾದದ್ದು. ಒಂದು ನಂಬಿಕೆಯನ್ನು ಅಥವ ವ್ಯಕ್ತಿಯನ್ನು ನಿಂದಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಮತ್ತು ಆ ನಂಬಿಕೆಯ ಹಿಂದಿರುವ ವೈಜ್ಞಾನಿಕ ಕಾರಣಗಳು ತಿಳಿದುಕೊಳ್ಳುವ ಅವಶ್ಯಕತೆಯಿದೆ, ಇನ್ನು ಗೌರವಕ್ಕೆ ಪಾತ್ರನಾದ ವ್ಯಕ್ತಿಯ ಮೇಲಿನ ಅವಹೇಳನಕಾರಿ ಹೇಳಿಕೆಗಳು ಮತ್ತು ತುಚ್ಚೀಕರಿಸುವಂತ ಮಾತುಗಳು ಎಂಥ ಪರಿಣಾಮವನ್ನು ಬೀರಬಹುದು ಎಂಬುದರ ಪರಿಜ್ಞಾನವಿದ್ದವರು ಆ ಬಗೆಯ ಹೇಳಿಕೆಗಳನ್ನು ಮತ್ತು ಲೇಖನಗಳನ್ನು ಹಾಕುವುದಿಲ್ಲ. ಇಡೀ ದೇಶಕ್ಕೆ ದೇಶವೇ ವಿವೇಕಾನಂದರನ್ನು ಉನ್ನತಸ್ಥಾನದಲ್ಲಿ ಕೂರಿಸಿದ್ದಾರೆ ಅಷ್ಟೇಕೆ ವಿದೇಶದವರೂ ಸಹ ಆತನ ಭವ್ಯ ವಕ್ತಿತ್ವಕ್ಕೆ ಮನಸೋತಿದ್ದಾರೆ ಅಂತಹವರ ಸಾಧನೆಯನ್ನು ಮತ್ತು ಔನ್ನತ್ಯವನ್ನು ಇನ್ನೂ ಪ್ರಖರವಾಗಿ ಹೇಳುವ ಬದಲು ಅವರ ವಕ್ತಿಗತ ವಿಷಯಗಳನ್ನು ಹೇಳುತ್ತಾ ಹೋಗುವುದು (ಅದು ಸರಿಯಿರಬಹುದು ಇಲ್ಲದಿರಬಹುದು) ಅಷ್ಟು ಸೂಕ್ತ.
ತಾವು ನಂಬಿದ ದೇವರು ದೆವ್ವ ಯಾವುದಾದರೂ ಸರಿ ತಮ್ಮ ಮಟ್ಟಿಗೆ ಅದು ಗೌರವವೇ. ಅದನ್ನು ಸಮರ್ಥಿಸಿಕೊಳ್ಳುವುದು ಸ್ವಾಭಾವಿಕ. ಸಮರ್ಥನೆಯ ಭರದಲ್ಲಿ ನಿಂದನೆ ಮಾಡುವುದು ತಪ್ಪು. ಆದರೆ ಅಗೌರವ ತೋರಿಸುವ ವ್ಯಕ್ತಿ ಪದೇ ಪದೇ ಚುಚ್ಚು ನುಡಿಗಳಿಂದಲೋ ಅಥವಾ ವಿಕೃತಿಯಿಂದಲೋ ಅಸಹ್ಯವಾಗಿ ಮಾತನಾಡುತ್ತಿದ್ದಾಗ ಕೋಪಿಸಿಕೊಳ್ಳುವುದೂ ಸ್ವಾಭಾವಿಕವೇ? ವಾದಿ ಮತ್ತು ಪ್ರತಿವಾದಿ ಇಬ್ಬರೂ ಶಾಂತಚಿತ್ತರಾಗಿ ವಿಷಯವನ್ನು ಚರ್ಚೆಗೆ ಹಚ್ಚಬೇಕೆ ಹೊರತು ನಿಂದನೆಗಳನ್ನಲ್ಲ. ಕೆಲವೊಮ್ಮೆ ಹೀಗೂ ಆಗುವುದುಂಟು ಪೋಸ್ಟ್ ಹಾಕಿದವನು ಶಾಂತವಾಗಿದ್ದರೂ ಅವನ ಶಾಂತತೆಯನ್ನು ಕದಡಲು ಅವನನ್ನು ಷಂಡನೆಂದು ಕರೆಯುವ ಮನಸ್ಥಿತಿಯವರುಂಟು. ಅದು ಅವರ ಸಂಸ್ಕಾರಕ್ಕೆ ಸಂಬಂಧಿಸಿದ್ದು. ಏನಾದರೂ ಮಾಡಿ ಸಿಕ್ಕಿಸಲೇಬೇಕೆಂಬ ಹಪಹಪಿಗೆ ಬಿದ್ದು , ತಮ್ಮ ಪ್ರಚಾರಕ್ಕಾಗಿ ಎಲ್ಲಿಯವರೆಗೂ ಹೋಗುವ ಮಂದಿಗೆ ಏನೆನ್ನಬೇಕು?
ತಪ್ಪುಗಳನ್ನೇ ಹುಡುಕುವವನಿಗೆ ಸರಿದಾರಿ ಎಂದಿಗೂ ಕಾಣದು ಎನ್ನುವಂತೆ ಹಣಿಯಲೇಬೇಕು ಎನ್ನುವವರಿಗೆ ಸರಿದಾರಿ ಎಂದಿಗೂ ಕಾಣದು. ಸೈಬರ್ ಕಾಯ್ದೆಯು ಅಂತರ್ಜಾಲದ ಮೂಲಕ ನಡೆಸುವ ಮೋಸಗಳನ್ನು , ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡುವುದನ್ನು, ಕಂಪ್ಯೂಟರಿನಲ್ಲಿನ ಮಾಹಿತಿಯನ್ನು ಅಂತರ್ಜಾಲದ ಮೂಲಕ ನಾಶಪಡಿಸುವುದನ್ನು, ವೈರಸ್ ಗಳನ್ನು ಹರಡುವುದನ್ನು, ಭಯೋತ್ಪಾದನೆಯನ್ನು, ಪೈರಸಿ ಮಾಡಿರುವ ಸಾಫ್ಟ್ ವೇರ್/ ಸಿನಿಮಾ ಗಳನ್ನು ತಡೆಯುವುದಕ್ಕೆ, ಲೈಂಗಿಕ ಪ್ರಚೊದನಕಾರಿ ಮಾಹಿತಿಗಳನ್ನು ಮಕ್ಕಳಿಗೆ ತಲುಪಿಸುವುದನ್ನು, ಇತರರಿಗೆ ಅಸಭ್ಯ ಮೆಸೇಜ್ ಅಥವಾ ಮೈಲ್ ಗಳನ್ನು ಕಳುಸುವುದನ್ನು ಹೀಗೆ ಹಲವಾರು ವಿಷಯಗಳಲ್ಲಿ ನಡೆಯುವ ಹಿಂಸೆಯನ್ನು ತಡೆಗಟ್ಟಲು ಮಾಡಲಾಗಿದೆ. ಆದರೆ ಈ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ. ತಮಗೆ ಬೇಕಾದವರು ಯಾವ ತಪ್ಪು ಮಾಡಿದ್ದರೂ ಅವರನ್ನು ಓಲೈಸಿ ಇತರರನ್ನು ಕಾಯ್ದೆಯಡಿ ಬಂಧಿಸುವ ಅಥವಾ ಅವಮಾನಿಸುವ ವ್ಯವಸ್ಥಿತ(ಹೀಗೂ ಹೇಳಬಹುದೇನೋ?)) ಕೆಲಸ ನಡೆಯುತ್ತಿದೆ. ಸಂಘಪರಿದಾವರು ಎಂಬುದು ಕೆಲವರ ಕೆಂಗಣ್ಣಿಗೆ ಗುರಿಯಾಗುವ ಅಂಶ. ಆತ ಎಷ್ಟೇ ಸಭ್ಯನಾಗಿರಲಿ ಮತ್ತು ವಿಷಯಜ್ಞಾನಿಯಾಗಿರಲಿ ಆತನು ಸಂಘದವನಾಗಿದ್ದರೆ ಸಾಕು ತಮ್ಮ ಕಾಮಾಲೆ ಕಣ್ಣುಗಳನ್ನು ಹರಿಯಬಿಡುವುದು ಎಂತಹ ಬೌದ್ಧಿಕತೆ / ಸಾಕ್ಷಿಪ್ರಜ್ಞೆ?. ಈಗ ನಡೆಯುತ್ತಿರುವ ಕೇಸಿನಲ್ಲಿ ಅ ವ್ಯಕ್ತಿ ತನ್ನ ಗೋಡೆಯ ಮೇಲೆ ಬರೆದುಕೊಂಡಂತೆ ’ಸಂಘದವರು’ ಹಾಗಾಗಿ ಅಪಾಯ. ಎಂಬರ್ಥದಲ್ಲಿ ತಮ್ಮ ಪೂರ್ವಪೀಡಿತ ಮನಸ್ಸನ್ನು ತೆರೆದಿಟ್ಟಿದ್ದಾರೆ. ಗುಂಪು ಪ್ರಕಟಿಸುವ ಪೊಸ್ಟ್ ಗಳಿಗೂ ಸಂಘಕ್ಕೂ ಯಾವ ಸಂಬಂಧವಿದೆ ಎಂಬುದು ಆ ಭಗವಂತನಿಗೇ ಗೊತ್ತು. ಅದೇ ರೀತಿಯ ಮನಸ್ಥಿಯ ಹಲವು ಆ ಈ ವಾದಿಗಳು ತಮಗೆ ಆಗದವರ ಮೇಲೆ ಮತ್ತು ವಾದಿಸಲಾಗದೆ ಸುಸ್ತಾಗಿ ಈ ಕಾಯ್ದೆಯ ಉಪಯೋಗ ಪಡೆದುಕೊಳ್ಳುತ್ತಿರುವುದು ವಿಷಾದನೀಯ.

No comments: